Dakshina Kannada: ಕರಾವಳಿ ಭಾಗದ ಹಳ್ಳಿ ಹಳ್ಳಿಗಳ ಗೂಡಂಗಡಿಗಳಲ್ಲಿ ಮಾರಲಾಗುತ್ತಿದೆ ಹೆಸರೇ ಇಲ್ಲದ ನೋವಿನ ಗುಳಿಗೆ: ಆರೋಗ್ಯ ಇಲಾಖೆ ಗಮನಹರಿಸಲಿ
ಕರಾವಳಿ ಭಾಗದಲ್ಲಿ ಹೆಸರೇ ಇಲ್ಲದೇ ಆಯುರ್ವೇದದ ರೂಪದಲ್ಲಿ ಗುಳಿಗೆಗಳ ಮಾರಾಟ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಇಸ್ಮತ್ ಪಜೀರ್ ಹಾಕಿರುವ ಪೋಸ್ಟ್ ವೈರಲ್ ಆಗಿದೆ.

ಮಂಗಳೂರು: ಕರಾವಳಿ ಭಾಗದಲ್ಲಿ ಹೆಸರೇ ಇಲ್ಲದ ಔಷಧಗಳ ಮಾರಾಟ ಎಗ್ಗಿಲ್ಲದೇ ಸಾಗಿದೆ. ಅದೂ ಕೆಲವು ಅಂಗಡಿಗಳಲ್ಲಿ, ಔಷಧದ ಶಾಪ್‌ಗಳಲ್ಲೂ ಈ ಔಷಧಗಳು ಸಿಗುತ್ತವೆ. ನೋವು ಶಮನಕ್ಕೆ ಗುಳಿಗೆ ಕೊಡಿ ಎಂದು ಬಂದರೆ ಅರೆಬರೆ ಕನ್ನಡದಲ್ಲಿ ಬರೆದು ಅಂಟಿಸಿರುವ ಚೀಟಿ ಇರುವ ಈ ಕವರ್‌ಗಳನ್ನು ನೀಡಲಾಗುತ್ತದೆ. ಔಷಧಿ ತೆಗೆದುಕೊಂಡವರು ಆ ಕ್ಷಣಕ್ಕೆ ನೋವು ನಿವಾರಣೆಯಾದರೆ ಸಾಕು ಎಂದುಕೊಳ್ಳುತ್ತಾರೆ. ಗುಳಿಗೆ ಸೇವಿಸಿ ನಿರಾಳರಾಗುತ್ತಾರೆ ಕೂಡ. ಅದರ ಪ್ರಭಾವ ಕೆಲವು ಹೊತ್ತು ಮಾತ್ರ ಇರಬಹುದು. ಆನಂತರ ಮತ್ತೆ ಗುಳಿಗೆ ಬೇಕು ಎನ್ನುವ ಸನ್ನಿವೇಶ ನಿರ್ಮಾಣವಾಗುತ್ತದೆ. ಕೇಳುವವರನ್ನು ನೋಡಿಕೊಂಡು ಇದನ್ನು ಮಾರಾಟ ಮಾಡುತ್ತಿರುವುದು ದಕ್ಷಿಣ ಕನ್ನಡದ ಹಲವು ಕಡೆ ನಡೆದಿದೆ. ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರೇ ಉಸ್ತುವಾರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯವರಿಗೆ ಇದು ಕಾಣುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ.
ಈ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವ ಕುರಿತು ಇಸ್ಮತ್ ಪಜೀರ್ ಎಂಬುವವರು ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಇಸ್ಮತ್ ಪಜೀರ್ ಅವರು ಬರೆದಿರುವ ವಿವರ ಹೀಗಿದೆ.
ಚಿತ್ರದಲ್ಲಿ ಕಾಣುವ ಆಯುರ್ವೇದಿಕ್ ಎನ್ನಲಾಗುವ ಈ ಗುಳಿಗೆಗಳು ಇತ್ತೀಚಿನ ದಿನಗಳಲ್ಲಿ ಹಳ್ಳಿ ಗಲ್ಲಿಗಳ ಗೂಡಂಗಡಿಗಳಲ್ಲಿ ಲಭ್ಯವಿದೆ. ಇದಕ್ಕೆ ನಿರ್ದಿಷ್ಟವಾದ. ಹೆಸರೂ ಇಲ್ಲ. ಇದರ ತಯಾರಕರು ಯಾರೆಂದೋ, ಈ ಗುಳಿಗೆ ತಯಾರಿಕೆಗೆ ಏನೇನನ್ನೆಲ್ಲಾ ಬಳಸಲಾಗಿದೆಯೆಂದೋ ಯಾವ ವಿವರವೂ ಇದರಲ್ಲಿಲ್ಲ. ಆಯುರ್ವೇದಿಕ ಎಂಬ ಒಂದು ಶೀರ್ಷಿಕೆ ಮತ್ತು ತಪ್ಪು ತಪ್ಪು ಕನ್ನಡದಲ್ಲಿ ಯಾವ್ಯಾವ ನೋವಿಗೆ ಇದನ್ನು ಬಳಸಬಹುದೆಂದು ಬೀಡಿ ಲೇಬಲ್‌ನಂತಹ ಒಂದು ಲೇಬಲ್‌ನಲ್ಲಿ ಬರೆದು ಪುಟ್ಟ ಪ್ಲ್ಯಾಸ್ಟಿಕ್ ಕವರ್‌ವೊಂದರಲ್ಲಿ ಹಾಕಿ ಮಾರಾಟ ಮಾಡುತ್ತಾರೆ.ಮುಡಿಪು ಸುತ್ತ ಮುತ್ತಲ ಕೆಲವು ಔಷಧಾಲಯಗಳಲ್ಲೂ ಇದು ಲಭ್ಯವಿದೆ.ಗ್ರಾಹಕರು ಆಯುರ್ವೇದಿಕ್ ನೋವಿನ ಗುಳಿಗೆ ಕೊಡಿ ಎಂದು ಕೇಳಿದರೆ ಅಂಗಡಿಯವರು, ಔಷಧಾಲಯಗಳವರು ಈ ಗುಳಿಗೆಯ ಒಂದು ಪ್ಯಾಕ್ ಕೊಟ್ಟು ಬಿಡುತ್ತಾರೆ.
ಈ ಗುಳಿಗೆಯ ಮುಖ್ಯ ಗ್ರಾಹಕರು ಕೂಲಿ ಕೆಲಸ ಮತ್ತಿತರ ದೈಹಿಕ ಶ್ರಮದ ಕೆಲಸ ಮಾಡುವವರು, ಕ್ರಿಕೆಟ್ ಆಡುವ ಹುಡುಗರು, ಅರ್ಥ್ರೈಟಿಸ್‌ನಂತಹ ಖಾಯಿಲೆಯಿಂದ ಬಳಲುತ್ತಿರುವವರು, ರುಮ್ಯಾಟೈಟಿಸ್, uric acid ಹೆಚ್ಚಳದಿಂದಾಗಿ ಗಂಟು ನೋವಿನಿಂದ ಬಳಲುತ್ತಿರುವವರು.ಈ ಗುಳಿಗೆಯನ್ನು ಸೇವಿಸಿದ ಹದಿನೈದು ನಿಮಿಷಗಳೊಳಗಾಗಿ ಎಂತಹದ್ದೇ ನೋವಿದ್ದರೂ ಮಾಯವಾಗಿ ಬಿಡುತ್ತದೆ. ಮತ್ತೆ ಸುಮಾರು ಹನ್ನೆರಡು ಗಂಟೆಗಳವರೆಗೆ ನೋವಿರುವುದಿಲ್ಲ.ಹನ್ನೆರಡು ಗಂಟೆಗಳ ಬಳಿಕ ಪುನಃ ನೋವು ಮರುಕಳಿಸುತ್ತದೆ.ಈ ಗುಳಿಗೆಗೆ ಅತೀ ಹೆಚ್ಚು ಮಾರುಕಟ್ಟೆಯಿರುವುದು ಗ್ರಾಮೀಣ ಪ್ರದೇಶಗಳಲ್ಲಿ.ಅದರಲ್ಲೂ ಅವಿದ್ಯಾವಂತರು ಮತ್ತು ಬಡವರೇ ಹೆಚ್ಚು.
ಅರ್ಥ್ರೈಟಿಸ್, ರುಮ್ಯಾಟೈಟಿಸ್‌ನಂತಹ ಖಾಯಿಲೆಗಳಿಗೆ ಚಿಕಿತ್ಸೆ ಕೊಡುವ ತಜ್ಞ ವೈದ್ಯರು ಪ್ರತೀ ಎರಡು ತಿಂಗಳಿಗೊಮ್ಮೆ ಕ್ರಿಯಾಟಿನಿನ್ ಎಂಬ ಕಿಡ್ನಿಯ ಕಾರ್ಯಕ್ಷಮತೆಯ ಪರೀಕ್ಷೆ, ಎಸ್.ಜಿ.ಪಿ.ಟಿ. ಎಂಬ ಲಿವರ್ ಕಾರ್ಯಕ್ಷಮತೆ ಅರಿಯುವ ಪರೀಕ್ಷೆ ಮತ್ತು ಪ್ಲೇಟ್‌ಲೆಟ್ಸ್ ಕೌಂಟ್ ಎಂಬ ಪರೀಕ್ಷೆ ಮಾಡಿಸುತ್ತಾರೆ.ಅದರ ರಿಪೋರ್ಟ್‌ನ ಹೊರತಾಗಿ ತಜ್ಞ ವೈದ್ಯರೇ ಚಿಕಿತ್ಸೆ ಮುಂದುವರಿಸುವುದಿಲ್ಲ. ಇದರರ್ಥವೇನು ಎಂದು ನಾವು ಸುಲಭವಾಗಿ ಅರ್ಥೈಸಬಹುದು. ಇಂತಹ ಖಾಯಿಲೆಗಳ ಚಿಕಿತ್ಸೆಗಳಿಗೆ ಬಳಸುವ ಔಷಧಿಗಳು ಕಿಡ್ನಿ, ಲಿವರ್ ಮತ್ತು ಪ್ಲೇಟ್‌ಲೆಟ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.ಆದುದರಿಂದ ಪ್ರತೀ ಬಾರಿಯೂ ಇಂತಹ ಪರೀಕ್ಷೆಗಳನ್ನು ಮಾಡಿಸಿದ ಬಳಿಕವೇ ಔಷಧಿ ಮುಂದುವರೆಸುತ್ತಾರೆ.
ಇಷ್ಟೆಲ್ಲಾ ಪ್ರತಿಕೂಲ ಪರಿಣಾಮಗಳ ಬಗ್ಗೆ ತಜ್ಞ ವೈದ್ಯರೇ ಹೆದರುತ್ತಾರಾದರೆ, ಯಾವೊಂದು ವೈದ್ಯಕೀಯ ಹಿನ್ನೆಲೆಯೂ ಇಲ್ಲದವರಿಂದ, ಗುಳಿಗೆಯ ಅಮ್ಮ ಅಪ್ಪ ಯಾರೆಂಬ ವಿವರವೂ ಇಲ್ಲದ ಗುಳಿಗೆಯನ್ನು ಕಡ್ಲೆ ಕಾಯಿ ಖರೀದಿಸಿ ತಿಂದಂತೆ ಜನ ನುಂಗುತ್ತಾರೆಂದರೆ ಇದು ಸದ್ಯೋ ಭವಿಷ್ಯದಲ್ಲಿ ರೋಗಿಯ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮದ ಬಗ್ಗೆ ಊಹಿಸಿದರೆ ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುವ ನನಗಂತೂ ಎದೆಯಲ್ಲಿ ಚಳಿ ಹಿಡಿಯುತ್ತದೆ.ಈ ಗುಳಿಗೆಯ ಪ್ಲಾಸ್ಟಿಕ್ ಪೊಟ್ಟಣದೊಳಗೆ ಹಾಕಿರುವ ಲೇಬಲ್ ಮೇಲೆ " ಅಪಾಯಕಾರ ಇಲ್ಲ, 100% ಗ್ಯಾರಂಟಿ" ಎಂದು ಹಾಕಿರುವುದನ್ನೇ ಜನ ಮುಗ್ಧವಾಗಿ ನಂಬುತ್ತಿದ್ದಾರೆ ಕೂಡಾ. (ಅದೂ ತೀರಾ ತಪ್ಪಾದ ಕನ್ನಡದಲ್ಲಿ)
ಈ ಕುರಿತಂತೆ ಎಲ್ಲಾ ಸ್ಥಳೀಯ ಸರಕಾರಿ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಾದುದು ಜನಾರೋಗ್ಯದ ದೃಷ್ಟಿಯಿಂದ ಅತೀ ಜರೂರು ಎನ್ನುವುದು ಇಸ್ಮತ್ ಪಜೀರ್ ಅವರು ಮಾಡಿಕೊಂಡಿರುವ ಮನವಿ.
ಹಲವರ ಪ್ರತಿಕ್ರಿಯೆ
ಈ ಕುರಿತ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇಬ್ರಾಹಿಂ ಬ್ಯಾರಿ ಎಂಬವರು ಇದನ್ನು ನಾನು 6 ತಿಂಗಳ ಮೊದಲೊಮ್ಮೆ ಉಪಯೋಗಿಸಿದ್ದೆ.. ಮೊಣಕಾಲು ನೋವು ಹಲವಾರು ಚಿಕಿತ್ಸೆ ಮಾಡಿಸಿ ಎಣ್ಣೆ , ಥೆರಪಿ ಯುನಾನಿ ಆಯುರ್ ಎಲ್ಲವೂ ಮುಗಿಸಿ ಗುಣವಾಗಲಿಲ್ಲ .. ನನ್ನ ಅತ್ತೆ ಹಲವು ಬಾರಿ ಈ ಮಾತ್ರೆಯ ಬಗ್ಗೆ ವಿವರಿಸಿದ್ದರು..
ಸ್ಪೋರ್ಟ್ಸ್ ಇಂಜುರಿ ಯಾಗಿದ್ದ ಗಲ್ಫಲ್ಲಿರುವ ನನ್ನ ಸಾಡು ಗೆ ರವಾನಿಸಿ ಅವರಿಗೆ ಗುಣವಾಗಿತ್ತು..ಹಾಗೆ ನಾನು ಒಂದು ಪ್ಯಾಕೆಟ್ ಉಪಯೋಗಿಸಿ ಸಂಪೂರ್ಣ ಗುಣಮುಖ ನಾಗಿದ್ದೇನೆ..ಕೋಟೆಕಲ್ ಆಯುರ್ವೇದ ಶಾಪ್ ನಲ್ಲಿ ಖರೀದಿಸಿ ಇದರ ಬಗ್ಗೆ ವಿಚಾರಿಸಿ ದಾಗ ಅವರು ಸ್ಟಿರಾಯ್ಡ್ ಖಂಡಿತ ಇದೆ.. ಜನ ಸಿಕ್ಕಬಟ್ಟೆ ಕೊ<ಡು ಹೊಗುತ್ತಾರೆ. ಕಾರವಾರ ಭಾಗದಿಂದ ಇದು ಸಪ್ಲೈ ಯಾಗುವುದೆಂದರು.. ಕೇವಲ 60 ರೂ ಇದರ ಬೆಲೆ..
ಇದು ಎರಡು ಮಾತ್ರೆ ಒಮ್ಮೆ ಉಪಯೋಗಿದರೆ 100 ರೂಪಾಯಿಯ ಫ್ರುಟ್ಸ್ ಸಹ ತಿನ್ನಬೇಕಾಗುತ್ತದೆ.ಅಷ್ಟು ಹೋಟ್/ ಹೀಟ್.
ಇದೇ ರೀತಿ ಅಬ್ದುಲ್ ಖಾದೇರ್ ಎನ್ನುವವರು, ನಮ್ಮ ದೇಶದಲ್ಲ ಔಷಧಿ, ಆಯುರ್ವೇದ ಇತ್ಯಾದಿ ಬಿಲ್ಲೆಗಳನ್ನು ಅಂಟಿಸಿದ ಬಾಟಲಿ ಅಥವಾ ಪಾಕೆಟ್ ಗಳನ್ನು ಯಾರು ಬೇಕಾದರೂ ಎಲ್ಲಿ ಬೇಕಾದರೂ ಮಾರಾಟ ಮಾಡಲು ಯಾವುದೇ ಅನುಮತಿ ಪಡೆಯುವ ಅಗತ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವುಗಳಿಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕುರುಡು ಆಗಿರುವುದು ಮಾತ್ರ ದುರಂತದ ಸಂಗತಿ ಎಂದು ಬೇಸರದಿಂದಲೇ ಹೇಳಿದ್ದಾರೆ.
