ಕಂಡ ಕನಸು ನಿಜವಾಯ್ತು; ತೆಕ್ಕಾರು ಗ್ರಾಮದಲ್ಲಿ ಎದ್ದು ನಿಲ್ಲುತ್ತಿದೆ ಗೋಪಾಲಕೃಷ್ಣ ದೇವಸ್ಥಾನ, ಬ್ರಹ್ಮಕಲಶೋತ್ಸವಕ್ಕೆ ಅಂತಿಮ ಸಿದ್ಧತೆ
ಕನ್ನಡ ಸುದ್ದಿ  /  ಕರ್ನಾಟಕ  /  ಕಂಡ ಕನಸು ನಿಜವಾಯ್ತು; ತೆಕ್ಕಾರು ಗ್ರಾಮದಲ್ಲಿ ಎದ್ದು ನಿಲ್ಲುತ್ತಿದೆ ಗೋಪಾಲಕೃಷ್ಣ ದೇವಸ್ಥಾನ, ಬ್ರಹ್ಮಕಲಶೋತ್ಸವಕ್ಕೆ ಅಂತಿಮ ಸಿದ್ಧತೆ

ಕಂಡ ಕನಸು ನಿಜವಾಯ್ತು; ತೆಕ್ಕಾರು ಗ್ರಾಮದಲ್ಲಿ ಎದ್ದು ನಿಲ್ಲುತ್ತಿದೆ ಗೋಪಾಲಕೃಷ್ಣ ದೇವಸ್ಥಾನ, ಬ್ರಹ್ಮಕಲಶೋತ್ಸವಕ್ಕೆ ಅಂತಿಮ ಸಿದ್ಧತೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ಹೊಸ ದೇವಸ್ಥಾನವೊಂದು ನಿರ್ಮಾಣ ಹಂತದಲ್ಲಿದೆ. ದೇವರಗುಡ್ಡೆಯಲ್ಲಿ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ ಹಿಂದಿನ ಇತಿಹಾಸ ರೋಚಕವಾಗಿದೆ. ಕನಸು ನನಸಾದ ನೈಜ ಕಥೆ ಇಲ್ಲಿದೆ.

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಗೋಪಾಲಕೃಷ್ಣ ದೇವಸ್ಥಾನ
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಗೋಪಾಲಕೃಷ್ಣ ದೇವಸ್ಥಾನ

ಮಂಗಳೂರು: ಪರಶುರಾಮ ಸೃಷ್ಟಿಯ ತುಳುನಾಡು, ದೈವ-ದೇವರುಗಳ ನೆಲೆ. ನೂರಾರು ದೇಗುಲಗಳು, ದೈವಸ್ಥಾನಗಳು, ನಾಗಾರಾಧನೆ ಸೇರಿದಂತೆ ಹತ್ತಾರು ಧಾರ್ಮಿಕ ಕೇಂದ್ರಗಳು ಈ ನೆಲದ ಅಸ್ಮಿತೆ. ಕರಾವಳಿ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಗೆ ಇಲ್ಲಿನ ಧಾರ್ಮಿಕ ಶ್ರದ್ಧಾಕೇಂದ್ರಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇಂತಹ ಪಟ್ಟಿಗೆ ಹೊಸ ಸೇರ್ಪಡೆಯೇ ಭಟ್ರಬೈಲು-ದೇವರಗುಡ್ಡೆಯಲ್ಲಿ ಎದ್ದುನಿಲ್ಲುತ್ತಿರುವ ಗೋಪಾಲಕೃಷ್ಣ ದೇವಸ್ಥಾನ. ಈ ಸುಂದರ ದೇಗುಲದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಗ್ರಾಮದಲ್ಲಿ ಹಬ್ಬದ ವಾತಾವರಣ ಅದಾಗಲೇ ಶುರುವಾಗಿದ್ದು, ಗೋಪಾಲಕೃಷ್ಣನ ಪ್ರತಿಷ್ಠಾಪಿಸಿ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ವಿಸ್ತೀರ್ಣದ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ತಾಲೂಕು ಆಗಿರುವ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಒಂದು ಹಳ್ಳಿ ಪ್ರದೇಶದ ಹೆಸರೇ ಭಟ್ರಬೈಲು. ಇಲ್ಲಿನ ದೇವರಗುಡ್ಡೆ ಎಂಬ ಧಾರ್ಮಿಕ ಐತಿಹ್ಯವುಳ್ಳ ಸ್ಥಳದಲ್ಲಿ ಸುಮಾರು 12ನೇ ಶತಮಾನದ ಹಿಂದೆಯೇ ವಿಷ್ಣು ಸಾನಿಧ್ಯ ಸ್ಥಾಪನೆಗೊಂಡಿದ್ದ ಬಗ್ಗೆ ಇತಿಹಾಸ ಹೇಳುತ್ತದೆ. ಒಮ್ಮೆ ಹಳೆಯ ಇತಿಹಾಸವನ್ನು ಮೆಲುಕು ಹಾಕೋಣ.

ಬಳ್ಳಾಲ ಅರಸರ ಆಳ್ವಿಕೆಯ ಸಮಯದಲ್ಲೇ ಇಲ್ಲಿ ವಿಷ್ಣು ಸಾನಿಧ್ಯ ಸ್ಥಾಪನೆಗೊಂಡಿತ್ತು. ಸುಮಾರು 300 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ವಿವಾಹ, ಸಂತಾನಭಾಗ್ಯ, ಚರ್ಮರೋಗ ಸೇರಿದಂತೆ ಕಷ್ಟಗಳ ಕುರಿತು ಪ್ರಾರ್ಥನೆಗಳು ಸಲ್ಲಿಸಿದಲ್ಲಿ ಸಕಲ ಇಷ್ಟಾರ್ಥಗಳು ಸಿದ್ದಿಸುತ್ತಿದ್ದವು. ಆದರೆ, ಕ್ರಮೇಣ ದೇಗುಲವಿದ್ದ ಪ್ರದೇಶವು ಅನ್ಯರ ದಾಳಿಗೆ ಒಳಗಾಗಿ ದೇವಸ್ಥಾನವು ಕಾಲಗರ್ಭದಲ್ಲಿ ಸೇರಿಹೋಯಿತು ಎನ್ನುತ್ತಾರೆ ಊರಿನ ಜನರು.

ದೇವಸ್ಥಾನವು ಕಾಲಗರ್ಭ ಸೇರಿದ ನಂತರ, ಊರಿನಲ್ಲಿ ರೋಗ-ರುಜಿನಗಳು ತಾಂಡವವಾಡುತ್ತಿತ್ತಂತೆ. ದೇವಸ್ಥಾನವಿದ್ದ ಜಮೀನು ಹಾಗೂ ಸುತ್ತಮುತ್ತಲಿನ ಪ್ರದೇಶವು ಖಾಸಗಿ ವ್ಯಕ್ತಿಗಳ ಪಾಲಾಯ್ತು. ದೇವರಿಗೆ ಸಲ್ಲಬೇಕಿದ್ದ ಪೂಜಾಕಾರ್ಯ ಸಂಪೂರ್ಣ ನಿಂತು ಹೋಯ್ತು. ಖಾಸಗಿ ವ್ಯಕ್ತಿಗಳ ಸುಪರ್ದಿಯಲ್ಲಿದ್ದ ಜಮೀನಿಗೆ ದೇವರ ಆರಾಧಕರ ಪ್ರವೇಶ ಅಸಾಧ್ಯವಾಯಿತು. ಹೀಗಾಗಿ ಎಲ್ಲಾ ವರ್ಗದ ಜನರ ಮಧ್ಯೆ ನಿತ್ಯ ಕಲಹಗಳು ಸಾಮಾನ್ಯ ಎಂಬಂತಾಯ್ತು. ಮನೆ-ಮನಗಳಲ್ಲಿ ನೆಮ್ಮದಿ ಇಲ್ಲದಂತಾಯ್ತು. ಕೃಷಿ ಜಮೀನು ಕೂಡಾ ಯಾವುದೇ ಅಭಿವೃದ್ಧಿ ಕಾಣದಾಗಿ, ಜಮೀನು ಮಾರಾಟ ಮಾಡಬೇಕಾದ ಅನಿವಾರ್ಯ ಸಂದರ್ಭ ಎದುರಾಯ್ತು. ಈ ಬಗ್ಗೆ ಊರಿನ ಹಿರಿಯರು ಪ್ರಶ್ನೆಯಿಟ್ಟಾಗ ಸುಮಾರು 300 ವರ್ಷಗಳ ಹಿಂದಿನಿಂದ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಮತ್ತು ಉತ್ಸವಾದಿಗಳು ನಡೆಯುತ್ತಿದ್ದ ಬಗ್ಗೆ ತಿಳಿದುಬಂತು. ದೇವರ ಕಾರ್ಯಗಳನ್ನು ನಿಲ್ಲಿಸಿರುವುದರಿಂದ ಊರಿನ ಜನರಲ್ಲಿ ಮಾನಸಿಕ ಸಮಸ್ಯೆಗಳು ಸೇರಿದಂತೆ ಹತ್ತು ಹಲವು ತೊಂದರೆಗಳು ಕಂಡುಬರುವುದೆಂದು ಹಿರಿಯರು ಅಭಿಪ್ರಾಯಪಟ್ಟರು.

ಮತ್ತೆ ಗತವೈಭವಕ್ಕೆ ಮುನ್ನುಡಿಯಾದ ಜಮೀನು ಖರೀದಿ

ಬೆಂಗಳೂರಿನ ಉದ್ಯಮಿಯಾದ 'ಲಕ್ಷ್ಮಣ' ಎಂಬವರು ಬೆಳ್ತಂಗಡಿ ತಾಲೂಕಿನಲ್ಲಿ ಕೃಷಿ ಜಮೀನನ್ನು ಹುಡುಕುತ್ತಿದ್ದಾಗ, ಸಂಬಂಧಿಕರೊಬ್ಬರ ಸಲಹೆಯಂತೆ ಹಿಂದೆ ದೇವಸ್ಥಾನವಿದ್ದ ಜಮೀನಿನ ಪಕ್ಕದ ಜಮೀನನ್ನು ಖರೀದಿಸಲು ಮುಂದಾದರು. ಭಟ್ರಬೈಲಿಗೆ ಬಂದ ಬೆನ್ನಲ್ಲೇ, ಅದುವರೆಗೂ ಯಾರಿಗೂ ಬೇಡವಾಗಿದ್ದ ಪಾಳುಬಿದ್ದ ಭೂಮಿಯನ್ನು ಖರೀದಿಸಲು ಲಕ್ಷ್ಮಣ ಅವರಿಗೆ ದೈವವೇ ಪ್ರೇರಣೆಯಾಯಿತು ಎನ್ನುತ್ತಾರೆ ಗ್ರಾಮಸ್ಥರು. ವಿಶೇಷವೆಂದರೆ, ಆ ಜಮೀನು ಮಾರಾಟ ಮಾಡಲೆಂದು ಭೂಮಿ ಮಾಲಿಕ ಕಳೆದ ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರಂತೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ವಿಷಯವನ್ನು ಖುದ್ದು ಲಕ್ಷ್ಮಣ ಅವರ ಬಳಿ ಮಾರಾಟ ಮಾಡಿದ ಜಮೀನು ಮಾಲೀಕ ಹೇಳಿದ್ದರು. "ಇದುವರೆಗೂ ಯಾರೂ ಖರೀದಿಸಲು ಮುಂದೆ ಬಾರದ ಜಮೀನು ಖರೀದಿ ಮಾಡಿ, ತನ್ನನ್ನು ಸಂಕಷ್ಟದಿಂದ ಪಾರು ಮಾಡಿದ್ದೀರಿ" ಎಂದು ಧನ್ಯತೆ ವ್ಯಕ್ತಪಡಿಸಿದರು. ಅಂದಿಗೆ, ದೇವರಗುಡ್ಡೆಯಲ್ಲಿ ಮತ್ತೆ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣವಾಗುವ ಆಸೆ ಚಿಗುರೊಡೆಯಿತು.

ಶ್ರೀರಾಮನವಮಿ ದಿನದಂದು ಲಕ್ಷ್ಮಣರು ಜಮೀನನ್ನು ಕ್ರಯಚೀಟಿ ಮಾಡಿಸಿದರು. ಆ ದಿನ ರಾತ್ರಿ ತಮ್ಮ ಮನೆಯ ಸುತ್ತ ಶ್ವೇತವಸ್ತ್ರಧಾರಿಯಾದ ಇಳಿವಯಸ್ಸಿನ ಒಬ್ಬ ವ್ಯಕ್ತಿ ಮನೆಗೆ ಮೂರು ಸುತ್ತು ಬಂದಂತಾಯ್ತು. ಈ ಕುರಿತು ಮರುದಿನವೇ ಬೆಳಗ್ಗೆ ಭೂಮಾಲಿಕರು ಊರಿನ ಹಿರಿಯರಲ್ಲಿ ಹೇಳಿಕೊಂಡು ಚಿಂತನೆ ಮಾಡಿದರು. ಜಮೀನಿನ ಪಕ್ಕದಲ್ಲಿ ಗೋಪಾಲಕೃಷ್ಣನ ಸಾನಿಧ್ಯವಿತ್ತು ಎಂಬುದು ಲಕ್ಷ್ಮಣ ಅವರಿಗೆ ಆಗ ತಿಳಿದುಬಂತು. ಈ ಕುರಿತು 2011ರ ಮೇ 29ರಂದು ಊರ ಹಾಗೂ ಪರವೂರಿನ ಜನರನ್ನು ಕರೆದು ಸಮಾಲೋಚನಾ ಸಭೆ ನಡೆಸಲಾಯ್ತು. ಸಭೆಯಲ್ಲಿ ಚರ್ಚಿಸಿ ದೇವಸ್ಥಾನವಿದ್ದ ಜಮೀನಿಗೆ ಭೇಟಿ ನೀಡಲಾಯಿತು. ಅಚ್ಚರಿ ಎಂಬಂತೆ ದೇಗುಲವಿದ್ದ ಸ್ಥಳದಲ್ಲಿ ಗರ್ಭಗುಡಿಯ ಪಂಚಾಂಗ, ತೀರ್ಥಬಾವಿ ಸೇರಿದಂತೆ ಇತರ ಕುರುಹುಗಳು ಕಂಡುಬಂದವು.

ಊರಿನ ಭಕ್ತರಲ್ಲಿ ಮುಂದೇನು ಎಂಬ ಪ್ರಶ್ನೆ ಮೂಡಿತು. ಈ ವೇಳೆ ದೈವಾನುಗ್ರಹದಂತೆ ದೈವಜ್ಞರಾದ ವಳಕ್ಕುಂಜ ವೆಂಕಟ್ರಮಣ ಜೋಯಿಸರ ಬಳಿ ದೇವಸ್ಥಾನದ ಬಗ್ಗೆ ಪ್ರಶ್ನೆ ಚಿಂತನೆಗೆ ಮಾಡಲಾಯ್ತು. ಈ ಸಂದರ್ಭದಲ್ಲಿ , ದೇವರಗುಡ್ಡೆಯಲ್ಲಿ ವಿಷ್ಣುಸಾನಿಧ್ಯ ಇರುವುದು ಹಾಗೂ ಅದರ ಕಾರಣಿಕದ ಬಗ್ಗೆ ವಿವರಿಸಿದರು. ದೇವಸ್ಥಾನವಿದ್ದ ಜಮೀನನ್ನು ಸ್ವಾಧೀನಪಡಿಸಿಕೊಂಡ ನಂತರ, ಸ್ಥಳದಲೇ ಅಷ್ಟಮಂಗಲ ಚಿಂತನೆ ಮಾಡಬಹುದು ಎಂದು ಸಲಹೆ ನೀಡಿದರು. ಅಲ್ಲಿಂದಾಚೆಗೆ, ಭೂ ಸ್ವಾಧೀನತೆ ಬಗ್ಗೆ ಸಮಾಲೋಚನೆ ಮತ್ತು ಕಾನೂನು ಹೋರಾಟಗಳು ನಡೆಯುತ್ತಾ ಬಂದವು.

ಕನಸಿನಲ್ಲಿ ಕಂಡ ಶ್ರೀಮನ್ನಾರಾಯಣ

ಮುಂದಕ್ಕೆ ಸುಮಾರು 10 ವರ್ಷಗಳ ನಂತರ, ದೇವಸ್ಥಾನದ ಕುರುಹು ಪತ್ತೆಯಾಗಿದ್ದ ಜಮೀನಿನ ಪಕ್ಕದ ಭೂಮಾಲೀಕರಾದ ಲಕ್ಷ್ಮಣ ಅವರ ಮನೆಗೆ ಬೆಂಗಳೂರಿನಿಂದ ಗೆಳೆಯರು ಬಂದಾಗ ಮಹತ್ವದ ಬೆಳವಣಿಗೆಯೊಂದು ನಡೆಯುತ್ತದೆ. ಗೆಳೆಯರೊಂದಿಗೆ ತೋಟವನ್ನೆಲ್ಲಾ ಸುತ್ತಿ ರಾತ್ರಿ ಹೊತ್ತು ಮಲಗಿದ್ದ ಸಂದರ್ಭದಲ್ಲಿ ಲಕ್ಷ್ಮಣರಿಗೆ ಅಚ್ಚರಿಯ ಕನಸೊಂದು ಬಿತ್ತಂತೆ. ಪಕ್ಕದಲ್ಲೇ ಮಲಗಿದ್ದ ಸ್ನೇಹಿತ ತೋಟಕ್ಕೆ ಹೋಗಿ ತೋಟದ ಕೆರೆಗೆ ಇಳಿದು ಮುಳುಗಿದಂತೆ ಕನಸು ಕಂಡರು. ಮುಳುಗಿದವರನ್ನು ಮೇಲೆತ್ತಲು ಕೆರೆಗೆ ಇಳಿದಾಗ, ಶ್ರೀಮನ್ನಾರಾಯಣ ದೇವರು ನೀರಿನ ಒಳಗೆ ವಿರಾಜಮಾನನಾಗಿ ಮಲಗಿರುವಂತೆ ಕಂಡು ಲಕ್ಷ್ಮಣರು ದಿಗ್ಧಮೆಗೊಂಡರು. ಕನಸಿನಿಂದ ದಿಢೀರ್‌ ಎಚ್ಚರಗೊಂಡಾಗ ಸ್ನೇಹಿತ ಪಕ್ಕದಲ್ಲೆ ಮಲಗಿದ್ದರು. ಕಂಡ ಕನಸಿನ ಬಗ್ಗೆ ಚಿಂತಿತರಾಗಿ ರಾತ್ರಿಯಿಡೀ ನಿದ್ರೆ ಬಾರದೆ ಎದ್ದು ಕುಳಿತೇ ರಾತ್ರಿ ಕಳೆದರು. ಮರುದಿನ ಕನಸಿನ ಬಗ್ಗೆ ಊರಿನ ಜನರನ್ನು ಕರೆದು ವಿಷಯ ತಿಳಿಸಿದಾಗ, ಊರಿನ ಜನರೆಲ್ಲಾ ಸೇರಿ ದೈವಜ್ಞರಾದ ಕರಾಯ ಹರಿಪ್ರಸಾದ್ ವೈಲಾಯರನ್ನು ಭೇಟಿಯಾಗಿ ಪ್ರಶ್ನೆಚಿಂತನೆಯಿಡುವ ಸಂಕಲ್ಪ ಮಾಡಿದರು. ಲಕ್ಷ್ಮಣರ ಜಮೀನಿನಲ್ಲಿ ತಾಂಬೂಲ ಪ್ರಶ್ನಾಚಿಂತನೆ ನಡೆಸಿದಾಗ, ಅತಿಕ್ರಮಣವಾದ ದೇವಸ್ಥಾನವಿದ್ದ ಸ್ಥಳದಲ್ಲೇ ಚಿಂತನೆ ನಡೆಸಬೇಕು ಎಂದು ವೈಲಾಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಟ್ರಸ್ಟ್‌ ರಚನೆ, ಜಮೀನು ನೋಂದಣಿ

ಸ್ಥಳದಲ್ಲೇ ಪ್ರಶ್ನೆಚಿಂತನೆ ನಡೆಸಲು ತಿಳಿಸಿದ ಬೆನ್ನಲ್ಲೇ, ದೇವಸ್ಥಾನ ನಿರ್ಮಾಣ ಮಾಡಿಯೇ ಸಿದ್ಧ ಎಂಬ ಸಂಕಲ್ಪಕ್ಕೆ ಗ್ರಾಮಸ್ಥರು ಬಂದರು. ಅದರಂತೆ, ದಿನಾಂಕ 10-05-2022ರಂದು ಬಾಗ್ಲೋಡಿ ನಾಗಭೂಷಣ ರಾವ್‌ರವರ ಅಧ್ಯಕ್ಷತೆಯಲ್ಲಿ ಶ್ರೀ ಗೋಪಾಲಕೃಷ್ಣ ಭಟ್ರಬೈಲು ದೇವರಗುಡ್ಡೆ ಸೇವಾ ಟ್ರಸ್ಟ್ ಎಂಬ ಹೆಸರಿನಿಂದ 16 ಜನರ ಟ್ರಸ್ಟ್ ರಚಿಸಿ ನೋಂದಣಿ ಮಾಡಿಸಲಾಯ್ತು. ಇದರೊಂದಿಗೆ ದೇವಸ್ಥಾನವಿದ್ದ 0.25 ಎಕರೆ ಸರಕಾರಿ ಜಮೀನನ್ನು ಜಿಲ್ಲಾಧಿಕಾರಿಯವರಿಂದ ಧಾರ್ಮಿಕ ದತ್ತಿ ಇಲಾಖೆಯ ಹೆಸರಿಗೆ ಮಂಜೂರು ಮಾಡಿಸಿಕೊಳ್ಳಲಾಯಿತು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರವರ ನೇತೃತ್ವದಲ್ಲಿ ಆಸ್ತಿಕರು ಜಾಗವನ್ನು ಸ್ವಾಧೀನಪಡಿಸಿಕೊಂಡು ಸಾನಿಧ್ಯ ಸಂಕಲ್ಪವನ್ನು ಮಾಡಿ ಸ್ಥಳದಲ್ಲಿ ಭಜನಾ ಕಾರ್ಯಕ್ರಮ ನಡೆಸಿದರು. ಶಾಂತಿಯುತವಾಗಿ ನಡೆಸಿದ ಭಜನೆಯನ್ನು, ಜಾಗದ ಅತಿಕ್ರಮಣ ಮಾಡಿದ ವ್ಯಕ್ತಿ ನೋಡಿ ಮನಪರಿವರ್ತನೆಗೊಂಡರು. ಉಳಿದ ಜಮೀನನ್ನು ದೇವಸ್ಥಾನದ ಸಮಿತಿಗೆ ನೀಡಲು ಒಪ್ಪಿಕೊಂಡರು. ಯಾರ ಮನಸ್ಸಿಗೂ ಅಸಮಾಧಾನ ಉಳಿಯದಂತೆ ಸರ್ವಧರ್ಮೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಾಯ್ತು. ಶಾಸಕರ ಬಳಿ ಮಾತುಕತೆ ನಡೆಸಿ ಮನೆ ಮತ್ತು ಸಂಪೂರ್ಣ ವರ್ಗ ಜಾಗವನ್ನು ಶಾಸಕರು ನಿಗದಿಪಡಿಸಿದ ಹಣ 35 ಲಕ್ಷ ರೂ.ಗೆ ನೀಡಲು ಆ ಭೂಮಾಲೀಕ ಒಪ್ಪಿಕೊಂಡರು. ಇದು ಗೋಪಾಲಕೃಷ್ಣ ದೇವರ ಕೃಪೆ ಎಂದು ಊರಿನ ಆಸ್ತಿಕ ಭಕ್ತರು ಸಂತಸ ವ್ಯಕ್ತಪಡಿಸಿದರು.

ಬಾವಿ ಅಗೆದಾಗ ಗೋಪಾಲನಕೃಷ್ಣನ ವಿಗ್ರಹ ಪತ್ತೆ

2023ರ ಅಕ್ಟೋಬರ್ 30ರಂದು ಮಾಡಾವು ವೆಂಕಟ್ರಮಣ ದೈವಜ್ಞರ ನಿರ್ದೇಶನದಂತೆ ಕರಾಯ ಹರಿಪ್ರಸಾದ್ ವೈಲಾಯರ ನೇತೃತ್ವದಲ್ಲಿ ದೇವಸ್ಥಾನದ ಜಮೀನಿನಲ್ಲಿ ದೈವ ದೇವರುಗಳ ಕೋಪವನ್ನು ತಣಿಸಲು ಪ್ರಾಯಶ್ಚಿತ್ತವಾಗಿ ಗಣಪತಿ ಹವನ, ಭೂಮಿಪೂಜೆ, ಭೂವರಾಹ ಪೂಜೆ, ದುರ್ಗಾಪೂಜೆಯನ್ನು ನೆರವೇರಿಸಲಾಯಿತು. ನವೆಂಬರ್ 05ರಂದು ಭೂಮಿಪೂಜೆ ನೆರವೇರಿಸಿ ಉತ್ಖನನ ಮಾಡಿದಾಗ ಬಾವಿ ಇದ್ದಂತೆ ಕಂಡ ಜಾಗದಲ್ಲಿ ಬೆಳಗ್ಗೆ 9:40ಕ್ಕೆ ಸುಮಾರಿಗೆ 15 ಅಡಿ ಆಳದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಭಗ್ನವಾದ ಮೂರ್ತಿ ಹಾಗೂ ದೇವಸ್ಥಾನದ ಅವಶೇಷಗಳು ಸಿಕ್ಕವು. ಲಕ್ಷ್ಮಣ ಅವರ ಕನಸಿನಲ್ಲಿ ಕಂಡಂತೆ ದೇವರ ಮೂರ್ತಿ ಸಿಕ್ಕಿದ್ದು ಊರ ಹಾಗೂ ಪರವೂರ ಜನರ ಅಚ್ಚರಿಗೆ ಕಾರಣವಾಯ್ತು. ಈ ಬಗ್ಗೆ ರಾಜ್ಯ, ದೇಶ, ವಿದೇಶಗಳ ಮಾಧ್ಯಮಗಳಲ್ಲಿ ಸುದ್ದಿ, ವಿಶೇಷ ವರದಿ ಪ್ರಸಾರಗೊಂಡಿತು.

ದೇವರ ಮೂರ್ತಿ ಸಿಕ್ಕಿದ ತಕ್ಷಣ ವಾಸ್ತುತಜ್ಞರಾದ ಪುತ್ತೂರಿನ ಜಗನ್ನಿವಾಸ ರಾವ್‌ರವರು ಸ್ಥಳಕ್ಕೆ ಆಗಮಿಸಿ ದೇವರ ಮೂರ್ತಿಯನ್ನು ಪರೀಕ್ಷಿಸಿ ಇದು ಸುಮಾರು 12ನೇ ಶತಮಾನದ ಬಿಂಬವೆಂದು ತಿಳಿಸಿದರು. 900 ವರ್ಷಗಳ ಹಿಂದಿನ ದೇವರ ಮತ್ತು ಪಾಣಿಪೀಠದ ಭಾಗ, ಸೋಮಸೂತ್ರದ ಕಲ್ಲುಗಳು ಮತ್ತು ಗರ್ಭಗುಡಿ ದಾರಂದದ ಅಡಿಪಡಿ ಇನ್ನಿತರ ವಸ್ತುಗಳನ್ನು ಗುರುತಿಸಿದರು. ದೈವಜ್ಞರಾದ ಮಾಡಾವು ವೆಂಕಟ್ರಮಣ ಜೋಯಿಸರ ಮುಖೇನ ತಾಂಬೂಲ ಪ್ರಶ್ನೆ ಇರಿಸಿ ಮತ್ತೆ ಚಿಂತನೆ ನಡೆಸಲಾಯಿತು. ಅದರಂತೆ, ಶ್ರೀ ನೀಲೇಶ್ವರ ಉಚ್ಚಿಲತ್ತಾಯ ವೇದಮೂರ್ತಿ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನದ ರೂಪುರೇಷೆಗಳನ್ನು ಸಿದ್ಧಪಡಿಸಿ ಜೀರ್ಣೋದ್ಧಾರ ನಡೆಸಬೇಕೆಂದು ತಿಳಿಸಿದರು.

2023ರ ಡಿಸೆಂಬರ್ 07ರಂದು ತಂತ್ರಿಗಳು ದೇವಸ್ಥಾನದ ಜಮೀನಿಗೆ ಆಗಮಿಸಿ ಬಿಂಬ ಹಾಗೂ ಕುರುಹುಗಳನ್ನು ಪರೀಕ್ಷಿಸಿ ಅದಕ್ಕೆ ಸೂಕ್ತವಾಗುವಂತೆ ವೃತ್ತಾಕಾರದ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿ, ತೀರ್ಥಬಾವಿಗಳನ್ನು ರಚಿಸಲು ವಾಸ್ತುತಜ್ಞರಾದ ಶ್ರೀ ಜಗನ್ನಿವಾಸ ರಾವ್ ಪುತ್ತೂರು ಇವರಲ್ಲಿ ಚರ್ಚಿಸಿ ನೀಲನಕ್ಷೆಯನ್ನು ತಯಾರಿಸುವಂತೆ ಆದೇಶಿಸಿದರು. ಅದರಂತೆ ದೇವಸ್ಥಾನ ನಿರ್ಮಾಣ ಕಾರ್ಯವು ತ್ವರಿತ ಗತಿಯಲ್ಲಿ ಆರಂಭಗೊಂಡು, ಶರವೇಗದಲ್ಲಿ ಸಾಗಿದೆ.

ಏಪ್ರಿಲ್‌ 30ರಂದು ಗೋಪಾಲಕೃಷ್ಣನ ಪ್ರತಿಷ್ಠಾಪನೆ, ಮೇ 3ರಂದು ಬ್ರಹ್ಮಕಲಶೋತ್ಸವ

ದೇಗುಲ ನಿರ್ಮಾಣಕ್ಕೆ ಬೇಕಾಗಿದ್ದ ಸುಮಾರು ಒಂದು ಎಕರೆ ಜಮೀನನ್ನು ಖರೀದಿಸಿ, ಶ್ರೀ ಗೋಪಾಲಕೃಷ್ಣ ಭಟ್ಟಬೈಲು ದೇವರಗುಡ್ಡೆ ಸೇವಾ ಟ್ರಸ್ಟ್‌ (ರಿ.), ತೆಕ್ಕಾರು ಇದರ ಹೆಸರಿನಲ್ಲಿ ಕೂನೂನು ಪ್ರಕಾರವಾಗಿ ಆರ್‌ಟಿಸಿ ದಾಖಲೆ ರಚಿಸಲಾಗಿದೆ. ಇದೀಗ ಕನಿಷ್ಠ 2.5 ಕೋಟಿ ರೂಪಾಯಿ ವೆಚ್ಚದ ಸುಂದರ ದೇಗುಲ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. 2025ರ ಏಪ್ರಿಲ್‌ 30ರಂದು ದೇವಸ್ಥಾನ ಗರ್ಭಗುಡಿಯಲ್ಲಿ ಗೋಪಾಲಕೃಷ್ಣನ ಪ್ರತಿಷ್ಠಾಪನೆ ನೆರವೇರಲಿದ್ದು, ಮೇ 3ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಹೀಗಾಗಿ ತ್ವರಿತವಾಗಿ ದೇಗುಲ ಎದ್ದುನಿಲ್ಲಬೇಕಿದೆ. ಗ್ರಾಮದಲ್ಲಿ ದೇಗುಲ ನಿರ್ಮಾಣಕ್ಕೆ ಊರಿನ ಸರ್ವಧರ್ಮೀಯರ ಸಹಕಾರ ಸಿಗುತ್ತಿರುವುದು ಈ ಮಣ್ಣಿನ ಜನರ ಸೌಹಾರ್ಧ ಮತ್ತು ಪ್ರೌಢಿಮೆಗೆ ಸಾಕ್ಷಿ.

ದೇವಸ್ಥಾನದ ವಿಳಾಸ: ಶ್ರೀ ಗೋಪಾಲಕೃಷ್ಣ ದೇವಸ್ಥಾನ, ದೇವರಗುಡ್ಡೆ, ಭಟ್ರಬೈಲು, ತೆಕ್ಕಾರು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ. 574241 (ಸಂಪರ್ಕ ಸಂಖ್ಯೆ: 9739325521, 9740690993)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner