ಕಲ್ಲಡ್ಕದಲ್ಲಿ ಸಾಹಸ ಮೆರೆದ ವಿದ್ಯಾರ್ಥಿನಿ, ಇದು ಕೂಪಿಕಾಸಮತೋಲನ; ಏಕಾಗ್ರತೆಗೆ ಹೇಳಿ ಮಾಡಿಸಿದ ಸಾಹಸ
ದಕ್ಷಿಣ ಕನ್ನಡದ ಕಲ್ಕಡ್ಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಚಟುವಟಿಕೆ ಸದಾ ವಿಭಿನ್ನ. ಈ ಬಾರಿ ಮಕ್ಕಳು ಸಾಹಸಮಯ ಪ್ರದರ್ಶನಗಳನ್ನು ನೀಡಿ ಗಮನ ಸೆಳೆದರು.ವರದಿ: ಹರೀಶ ಮಾಂಬಾಡಿ. ಮಂಗಳೂರು
ಮಂಗಳೂರು: ಸ್ಕೂಲ್ ಡೇ ಎಂದಷ್ಟೇ ಹೇಳಿ ಮುಗಿಸುವ ಶಾಲಾ, ಕಾಲೇಜು ವಾರ್ಷಿಕೋತ್ಸವಗಳಲ್ಲಿ ಹಾಡು, ಕುಣಿತ, ನಾಟ್ಯ ಎಲ್ಲವೂ ಇರುತ್ತದೆ. ಸಿನಿಮಾ ಹಾಡು ಅಥವಾ ಜಾನಪದ ಹಾಡಿಗೆ ಡ್ಯಾನ್ಸ್ ಮಾಡುವ ಮಕ್ಕಳು, ನಾಟಕ, ಪ್ರಹಸನ ಅಥವಾ ಯಾವುದಾದರೂ ಸಿನಿಮಾ ದೃಶ್ಯದ ಮರುಪ್ರದರ್ಶನವೂ ಇರುವುದುಂಟು. ಆದರೆ ಈ ವಿದ್ಯಾಸಂಸ್ಥೆ ಹಾಗಲ್ಲ. ಕಳೆದ ಮೂವತ್ತೈದು ವರ್ಷಗಳಿಂದ ಇಲ್ಲಿ ಸಾಹಸಪ್ರದರ್ಶನವೇ ನೋಡುಗರ ಕಣ್ಮನ ಸೆಳೆಯುತ್ತದೆ. ಇಲ್ಲಿ ಕಲಿತ ಮಕ್ಕಳು ಜೀವನದಲ್ಲಿ ಸೋಲುಣ್ಣುವುದಿಲ್ಲ ಎಂಬ ಆತ್ಮವಿಶ್ವಾಸದೊಂದಿದೆ ಸಾಹಸಪ್ರದರ್ಶನದಲ್ಲಿ ಭಾಗವಹಿಸುವುದು ಹೆತ್ತವರಿಗೂ ಸಮಾಧಾನ ತರುವ ವಿಷಯ.
ಇದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ. ಪ್ರಾಥಮಿಕ ಶಿಕ್ಷಣದಿಂದ ಕಳೆದ ನಲ್ವತ್ತು ವರ್ಷಗಳ ಹಿಂದೆ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಶಾರೀರಿಕ ಕಸರತ್ತುಗಳು, ದೇಶಿಯ ನೃತ್ಯಪ್ರಾಕಾರಗಳನ್ನು ಒಳಗೊಂಡ ಕ್ರೀಡೋತ್ಸವ ಮೂವತ್ತೈದು ವರ್ಷಗಳ ಹಿಂದೆ ಆರಂಭಗೊಂಡಿತು. ಪ್ರತಿ ವರ್ಷವೂ ಹೊಸತೊಂದು ತರಗತಿ ಇಲ್ಲಿ ಸೇರ್ಪಡೆಯಾಗುತ್ತಾ ಹೋಯಿತು. ಈಗ ವಿದ್ಯಾಸಂಸ್ಥೆಯಲ್ಲಿ ಶಿಶುಮಂದಿರದಿಂದ ಪದವಿ ಕಾಲೇಜಿನವರೆಗೆ ಸುಮಾರು 3,500 ವಿದ್ಯಾರ್ಥಿಗಳಿದ್ದಾರೆ. ಮುಂದಿನ ವರ್ಷ ಸಿಬಿಎಸ್ ಸಿ ಪ್ರಕಾರದ ವಿದ್ಯಾಭ್ಯಾಸವನ್ನೂ ನೀಡಲಾಗುತ್ತದೆ.
ಆದರೆ ಎಲ್ಲ ಶಾಲೆ, ಕಾಲೇಜುಗಳಿಗಿಂತ ಭಿನ್ನವಾಗಿ ಈ ವಿದ್ಯಾಸಂಸ್ಥೆಯ ಕ್ರೀಡೋತ್ಸವ ಗಮನ ಸೆಳೆಯುತ್ತದೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸಹಿತ ಹಲವು ರಾಜಕಾರಣಿಗಳು, ಉದ್ಯಮಿಗಳು, ಗಣ್ಯಮಾನ್ಯರು ಪ್ರತಿ ವರ್ಷ ನಡೆಯುವ ಈ ಕ್ರೀಡೋತ್ಸವವನ್ನು ವೀಕ್ಷಿಸಲು ಬಂದು ಹೋಗಿದ್ದಾರೆ. ಇದುವರೆಗೂ ಅಷ್ಟೊಂದು ಪ್ರಚಾರ ಪಡೆಯದ ಕ್ರೀಡೋತ್ಸವ ಸಾಮಾಜಿಕ ಜಾಲತಾಣ ಬಂದ ಮೇಲೆ ಮತ್ತಷ್ಟು ಮೆರುಗು ಪಡೆದಿದೆ. ಲೈವ್ ವೀಕ್ಷಣೆ, ಫೇಸ್ ಬುಕ್, ಇನ್ಸ್ ಸ್ಟಾ, ವಾಟ್ಸಾಪ್ ಗಳಲ್ಲಿ ಕಲ್ಲಡ್ಕ ಮಕ್ಕಳ ಸಾಹಸ ಪ್ರದರ್ಶನ ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿದೆ. ಅವುಗಳಲ್ಲಿ ಒಂದು ಗಾಜಿನ ಬಾಟಲಿಗಳ ಮೇಲೆ ನಿಲ್ಲುವ ಕೂಪಿಕಾಸಮತೋಲನ.
ಮೂರು ದಶಕಗಳಿಂದ ಈ ಸಾಹಸ
ಮೂರು ದಶಕಗಳಿಂದಲೂ ಕಲ್ಲಡ್ಕದ ಮಕ್ಕಳು ಮಲ್ಲಕಂಭ, ನಿಯುದ್ಧ (ಭಾರತೀಯ ನಿಶಸ್ತ್ರ ಯುದ್ಧಕಲೆ), ಬೆಂಕಿಯ ಗೋಲದಲ್ಲಿ ಹಾರುವುದು, ತಿರುಗುವ ಮಲ್ಲಕಂಬ, ಚಕ್ರ ಸಮತೋಲನ, ಕಾಲ್ಚಕ್ರಗಳ ಸಾಹಸ ಪ್ರದರ್ಶನ ನೀಡುತ್ತಾರೆ.
ಕೊನೆಯಲ್ಲಿ ಮಕ್ಕಳು ಕೂಪಿಕಾಸಮತೋಲನ ಮಾಡುತ್ತಾರೆ. ಗಾಜಿನ ಬಾಟಲಿಗಳನ್ನು ಪೇರಿಸಿ, ಅದರ ಮೇಲೆ ಮೇಜು, ಕುರ್ಚಿಗಳನ್ನಿಟ್ಟು, ಅದರ ಮೇಲೆ ಮಕ್ಕಳು ನಿಲ್ಲುವುದು ಒಂದು ಏಕಾಗ್ರತೆಯ ಸಾಹಸವೇ ಸರಿ. ಚಿಕ್ಕ ಅಂಶಗಳಿಗೆ ಸರಿಯಾಗಿ ಗಮನ ಕೊಟ್ಟಾಗ, ದೊಡ್ಡವನ್ನು ಸಾಧಿಸಬಹುದು. ಧೈರ್ಯ ಏಕಾಗ್ರತೆಗಳ ಸಮ್ಮಿಲನ ಈ ಕೂಪಿಕಾಸಮತೋಲನ. ಇದು ಏಕಾಗ್ರತೆಗೊಂದು ನಿದರ್ಶನ.
ಏನಿದು ಕೂಪಿಕಾಸಮತೋಲನ
ಒಂದು ಮೇಜು, ಅದರ ಮೇಲೆ ನಾಲ್ಕು ಬಾಟಲಿಗಳು. ಅದರ ಮೇಲೆ ಒಂದು ಮರದ ಸ್ಟೂಲ್. ಅದರ ಮೇಲೆ ನಾಲ್ಕು ಬಾಟಲಿಗಳು. ಮತ್ತೊಂದು ಸ್ಟೂಲ್. ಅದರ ಮೇಲೆ ನಾಲ್ಕು ಬಾಟಲಿ. ಮತ್ತೊಂದು ಸ್ಟೂಲ್ ಹೀಗೆ ಎತ್ತರದ ಪಿರಮಿಡ್ ರೀತಿಯ ರಚನೆಯಾದ ಬಳಿಕ ಉಳಿದ ಮಕ್ಕಳ ಸಹಾಯದಿಂದ ಬಾಲಕಿಯೊಬ್ಬಳು ಮರದ ತುಂಡಿನ ಮೇಲೆ ಎಲ್ಲದರ ತುದಿಯಲ್ಲಿ ಕುಳಿತು. ಕಾಲನ್ನು ತಲೆಗೆ ಸುತ್ತುವರಿದು ನಮಸ್ಕಾರ ಮಾಡುತ್ತಾಳೆ. ಕಲ್ಲಡ್ಕದ ಮಟ್ಟಿಗೆ ಇದು ಹೊಸ ವಿಚಾರವೇನಲ್ಲ. ಪ್ರತಿ ವರ್ಷವೂ ಮಕ್ಕಳು ಇದನ್ನು ಸಲೀಸಾಗಿ, ಲೀಲಾಜಾಲವಾಗಿ ಮಾಡಿಬಿಡುತ್ತಾರೆ. ನೋಡುಗರ ಕಣ್ಣಿಗೆ ಇದು ವಿಸ್ಮಯದಂತೆ ಕಾಣುತ್ತದೆ.
ಈ ಬ್ಯಾಲೆನ್ಸ್ ಗೆ ವರ್ಷಗಟ್ಟಲೆ ತರಬೇತಿಯನ್ನೇನೂ ಮಾಡಲಾಗುವುದಿಲ್ಲ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳು ಇಲ್ಲಿ ಸಾಮಾನ್ಯ ಸಂಗತಿ. ಭಾರತೀಯ ಮಾದರಿ ಶಿಕ್ಷಣ ಇಲ್ಲಿನ ಹೈಲೈಟ್ಸ್. ಶ್ರೀರಾಮ ವಿದ್ಯಾಕೇಂದ್ರದ ಶಾಲಾ ಶಿಕ್ಷಕರಿಂದ ಒಂದಷ್ಟು ಮಟ್ಟಿನ ತರೆಬೇತಿ ಪಡೆದು, ಇನ್ನೊಂದಷ್ಟು ತನ್ನ ಸ್ವಂತ ಪರಿಶ್ರಮದಿಂದ ಈ ಸಾಹಸ ಮಾಡಿದ್ದಾಳೆ ಬಾಲಕಿ.
ಹಳ್ಳಿಯ ಜನರಿಗೆ ಸ್ವಲ್ಪ ಮಟ್ಟಿನ ತರೆಬೇತಿ ಸಿಕ್ಕರೂ ಕೂಡ ಅವರು ಯಾವ ಮಟ್ಟಕ್ಕೆ ಬೆಳೆಯುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಎಲ್ಲ ಜಾತಿ, ಧರ್ಮಗಳ ವಿದ್ಯಾರ್ಥಿಗಳೂ ಇದ್ದಾರೆ. ರಾಷ್ಟ್ರೀಯತೆಯನ್ನು, ಭಾರತೀಯ ಪರಂಪರೆಯ ಶಿಕ್ಷಣವನ್ನು ಸಮಕಾಲೀನ ವಿಚಾರಗಳೊಂದಿಗೆ ಇಲ್ಲಿ ಬೋಧಿಸಲಾಗುತ್ತದೆ.
ಮಕ್ಕಳು ಕೇವಲ ಪುಸ್ತಕದ ಹುಳಗಳಾಗದೆ, ಧೈರ್ಯ, ಸಾಹಸವಂತರಾಗಬೇಕು ಎಂಬುದಕ್ಕೆ ಕ್ರೀಡಾಕೂಟ ಸ್ಪಷ್ಟ ಉದಾಹರಣೆ.
ವರದಿ: ಹರೀಶ ಮಾಂಬಾಡಿ. ಮಂಗಳೂರು