ಕಲ್ಲಡ್ಕದಲ್ಲಿ ಗಮನ ಸೆಳೆದ ಹೊನಲು ಬೆಳಕಿನ ಕ್ರೀಡೋತ್ಸವ: ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಸಹಿತ ಪ್ರಮುಖರು ಭಾಗಿ
ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿರುವ ಆರ್ ಎಸ್‌ಎಸ್ ಶಾಲೆಯಲ್ಲಿ ನಡೆದ ಚಟುವಟಿಕೆಯಲ್ಲಿ ಆರ್‌ಎಸ್ ಎಸ್ ಮೋಹನ್ ಭಾಗವತ್ ಭಾಗಿಯಾದರು.ಹರೀಶ ಮಾಂಬಾಡಿ, ಮಂಗಳೂರು
ಮಂಗಳೂರು: ಶನಿವಾರ ಸಂಜೆ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರಾಗಿರುವ ಡಾ. ಮೋಹನ್ ಭಾಗವತ್ ವಿದ್ಯಾಸಂಸ್ಥೆಯ ಚಟುವಟಿಕೆಗಳನ್ನು ವೀಕ್ಷಿಸಿದರು. ಪ್ರತಿ ವರ್ಷವೂ ಈ ಸಂಸ್ಥೆಯಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳು ಆಕರ್ಷಕವಾಗಿರುತ್ತವೆ. ಗಣ್ಯರನ್ನು ಆಹ್ವಾನಿಸಿ ಮಕ್ಕಳ ಪ್ರತಿಭೆಯನ್ನು ಅವರ ಮುಂದೆ ಅನಾವರಗಣಗೊಳಿಸಲಾಗುತ್ತದೆ. ಈ ಬಾರಿಯೂ ವಿಶೇಷವಾಗಿ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು.
ಸಂಸ್ಥಾಪಕರೂ ಆಗಿರುವ ಹಿರಿಯ ಆರೆಸ್ಸೆಸ್ ಮುಖಂಡ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ವಿದ್ಯಾಸಂಸ್ಥೆಯ ಬೆಳವಣಿಗೆ ಹಾಗೂ ಸ್ಥಾಪನೆಯ ಉದ್ದೇಶಗಳನ್ನು ವಿವರಿಸಿ, ರಾಷ್ಟ್ರನಿರ್ಮಾಣದ ಕಲ್ಪನೆ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸುವಂತೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಮೂಲಕ ಸಶಕ್ತ ಭಾರತ ನಿರ್ಮಾಣಕ್ಕೆ ಯುವಪೀಳಿಗೆಯನ್ನು ತಯಾರು ಮಾಡುತ್ತಿರುವುದಾಗಿ ಹೇಳಿದರು.
ಮಕ್ಕಳು ದೇಶಭಕ್ತಿಯನ್ನು ಎಳವೆಯಿಂದಲೇ ರೂಢಿಸಿಕೊಳ್ಳಲು ಬೇಕಾದ ವಾತಾವರಣವನ್ನು ಇಲ್ಲಿ ನಿರ್ಮಿಸಿದ್ದೇವೆ. ಇದರ ಪ್ರಯೋಜನ ಸಹಸ್ರಾರು ಮಕ್ಕಳಿಗೆ ಆಗಿದೆ ಎನ್ನುವುದು ಅವರ ವಿವರಣೆ.
ವಿಶೇಷ ಚೇತನರೂ ಭಾಗಿ
ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪದವಿಕಾಲೇಜು, ಸೆಕೆಂಡರಿ ಸ್ಕೂಲ್, ಪದವಿಪೂರ್ವ ಕಾಲೇಜು, ಹೈಸ್ಕೂಲು ಹಾಗೂ ಪ್ರಾಥಮಿಕ ಶಾಲೆ ಹಾಗೂ ಶಿಶುಮಂದಿರಕ್ಕೆ ಸೇರಿದ 3338 ವಿದ್ಯಾರ್ಥಿಗಳು ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಭಾಗಿಯಾಗಿ ನಾನಾ ರೀತಿಯ ಪ್ರದರ್ಶನಗಳನ್ನು ಈ ಸಂದರ್ಭ ನೀಡಿದರು.
ಇವರಲ್ಲಿ 20 ಮಂದಿ ವಿಶೇಷಚೇತನ ಮಕ್ಕಳೂ ಭಾಗವಹಿಸಿದ್ದು, ಇವುಗಳನ್ನು ವೀಕ್ಷಿಸಿದ ಡಾ. ಮೋಹನ್ ಭಾಗವತ್, ಮಕ್ಕಳ ಕ್ರೀಡಾಸ್ಫೂರ್ತಿಯನ್ನು ಶ್ಲಾಘಿಸಿದರು.
ಶಿಶುನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಹಾಡಿನಲ್ಲಿ ಚಿತ್ತಾರ, ನೃತ್ಯಭಜನೆ, ಮಲ್ಲಕಂಭ, ತಿರುಗುವ ಮಲ್ಲಕಂಭ, ಕೇರಳ ಶೈಲಿ ವಾದ್ಯನಾದನ, ನೃತ್ಯವೈವಿಧ್ಯ, ಚಕ್ರ ಸಮತೋಲನ, ಕಾಲ್ಚಕ್ರ, ಕೂಪಿಕಾ ಸಮತೋಲನ ಸಹಿತ ಸುಮಾರು 18 ಪ್ರದರ್ಶನಗಳನ್ನು ಸುಮಾರು 3338 ವಿದ್ಯಾರ್ಥಿಗಳು ಗಣ್ಯರ ಸಮ್ಮುಖ ಪ್ರದರ್ಶಿಸಿದರು.
ಈ ಪ್ರದರ್ಶನಗಳನ್ನು ಕಂಡ ಭಾಗವತ್ ಅವರು ಮೆಚ್ಚುಗೆಯನ್ನು ಸೂಚಿಸಿದರು. ಇದು ಶಾಲೆ ನಡೆಸುತ್ತಿರುವ ಸ್ತುತ್ಯಾರ್ಹ ಕಾರ್ಯ.ಮಾದರಿಯೂ ಹೌದು ಎಂದೂ ಬಣ್ಣಿಸಿದರು.
ಇದನ್ನೂ ಓದಿರಿ: ಬೆಂಗಳೂರಿನ 4 ದಿಕ್ಕುಗಳನ್ನು ಸಂಪರ್ಕಿಸುವ 40 ಕಿಮೀ ಉದ್ದದ ಸುರಂಗ ರಸ್ತೆ ನಿರ್ಮಾಣದ ಯೋಜನೆ; 19,000 ಕೋಟಿ ರೂ ಸಾಲ ಪಡೆಯಲು ಬಿಬಿಎಂಪಿ ನಿರ್ಧಾರ
ಗಮನ ಸೆಳೆದ ಅರ್.ಎಸ್.ಎಸ್ 100
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮೂಹ ಪ್ರದರ್ಶನದಲ್ಲಿ ಆರ್.ಎಸ್.ಎಸ್. 100 ಎಂಬ ರಚನೆ ಮಾಡಿದರು.
ಅಯೋಧ್ಯೆ ಶ್ರೀರಾಮಜನ್ಮಸ್ಥಾನದಲ್ಲಿ ಬಾಲರಾಮ ಸ್ಥಾಪನೆಯ ಮರುದೃಶ್ಯಾವಳಿಯನ್ನು ಮಾಡಲಾಯಿತು. ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ವೇಷಧಾರಿಗಳು ಪ್ರತಿಷ್ಠಾ ಕಾರ್ಯ ನೆರವೇರಿಸುವ ಹಾಗೂ ಶ್ರೀರಾಮನ ಪೂಜೆ ಮಾಡುವ ದೃಶ್ಯ ಪ್ರದರ್ಶಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶ್ರೀರಾಮ ಭಜನೆ ಮಾಡಿ ಗಮನ ಸೆಳೆದರು. ಇಸ್ರೋದಿಂದ ಉಡಾವಣೆಗೊಂಡ ರಾಕೆಟ್ ಪ್ರತಿಕೃತಿಯೊಂದಿಗೆ ಚಂದ್ರಯಾನದ ಪ್ರಾತ್ಯಕ್ಷಿಕೆ, ಬೆಂಕಿಯ ಗೋಲದಲ್ಲಿ ಹಾರುವುದು ಗಮನ ಸೆಳೆಯಿತು.
ವರದಿ: ಹರೀಶ ಮಾಂಬಾಡಿ, ಮಂಗಳೂರು