ಕನ್ನಡ ಸುದ್ದಿ  /  ಕರ್ನಾಟಕ  /  Dakshina Kannada Result: ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಬ್ರಿಜೇಶ್‌ ಚೌಟ ಗೆಲುವು; ಕಾಂಗ್ರೆಸ್‌ನ ಪದ್ಮರಾಜ್‌ಗೆ ಸೋಲು

Dakshina Kannada Result: ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಬ್ರಿಜೇಶ್‌ ಚೌಟ ಗೆಲುವು; ಕಾಂಗ್ರೆಸ್‌ನ ಪದ್ಮರಾಜ್‌ಗೆ ಸೋಲು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಬಿಜೆಪಿಯ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಆರ್‌ ಪದ್ಮರಾಜ್‌ ಸೋಲು ಕಂಡಿದ್ದಾರೆ. Dakshina Kannada Lok Sabha Elections Result

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024

ಕರಾವಳಿ ಕರ್ನಾಟಕದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಭರ್ಜರಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಆರ್ ಪದ್ಮರಾಜ್ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಈಗಾಗಲೇ ಚೌಟ ಗೆಲುವಿನ ಸಂಭ್ರಮದಲ್ಲಿ ತೊಡಗಿದ್ದು, ಬಿಜೆಪಿ ಕಾರ್ಯಕರ್ತರು ಮಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಚೌಟ ಅವರು 764132 ಮತಗಳನ್ನು ಪಡೆದಿದ್ದು, 149208 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ವಿಶೇಷವೆಂದರೆ, ಕರಾವಳಿ ಜಿಲ್ಲೆಯಲ್ಲಿ ನೋಟಾಗೆ 23576 ಮತಗಳು ಚಲಾವಣೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಕಳೆದ 3 ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ, ಪ್ರತಿಬಾರಿಯಂತೆ ಈ ಬಾರಿಯೂ ರಾಷ್ಟ್ರ ರಾಜಕಾರಣದ ಗಮನ ಸೆಳೆದಿತ್ತು. ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಕ್ಷೇತ್ರದಲ್ಲಿ, ಈ ಬಾರಿ ಎರಡೂ ಪಕ್ಷಗಳು ಹೊಸ ಮುಖಗಳಿಗೆ ಮಣೆ ಹಾಕಿದವು. ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿ, ಹೊಸ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ (Capt Brijesh Chowta) ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಅತ್ತ ಕಾಂಗ್ರೆಸ್ ಪಕ್ಷವು ಬಿಲ್ಲವ ಮುಖಂಡ ಹಾಗೂ ನ್ಯಾಯವಾದಿ ಆರ್ ಪದ್ಮರಾಜ್ ಅವರಿಗೆ ಟಿಕೆಟ್‌ ನೀಡಿತು.

ಬಿಲ್ಲವ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಕರಾವಳಿ ಕ್ಷೇತ್ರದಲ್ಲಿ ಬಂಟ ಸಮುದಾಯದ ಜನರ ಮತಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಕಳೆದ ಎರಡು ಅವಧಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಿಸಿರುವ ಲೋಕಸಭಾ ಕ್ಷೇತ್ರದಲ್ಲಿ ಸದ್ದು ಮಾಡಿರುವುದು ಹಿಂದುತ್ವ ಹಾಗೂ ನರೇಂದ್ರ ಮೋದಿ. ಈ ಬಾರಿ ರಾಮಮಂದಿರ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತಬೇಟೆ ನಡೆಸಿದರೆ, ಬಿಜೆಪಿಯ ಒಳಬೇಗುದಿಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ಹಾಕಿತು. ಅಲ್ಲದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರದ ಸಾಧನೆ, ಗ್ಯಾರಂಟಿ ಯೋಜನೆಗಳ ಮೂಲಕ ಅಲ್ಪಸಂಖ್ಯಾತರ ಮತ ಮಾತ್ರವಲ್ಲದೆ, ಮಹಿಳೆಯರ ಮತಗಳನ್ನು ಆಕರ್ಷಿಸುವಲ್ಲಿ ಕಾಂಗ್ರೆಸ್‌ ಪ್ರಯತ್ನ ಹಾಕಿತ್ತು. ಆದರೆ, ಕೈ ಪ್ರಯತ್ನ ವಿಫಲವಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಫಲಿತಾಂಶದತ್ತ ಚಿತ್ತ

ಲೋಕಸಭಾ ಕ್ಷೇತ್ರದ ಹೆಸರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

  • ಕ್ಯಾಪ್ಟನ್ ಬೃಜೇಶ್ ಚೌಟ (ಬಿಜೆಪಿ): 764132 ಮತಗಳು
  • ಆರ್ ಪದ್ಮರಾಜ್ (ಕಾಂಗ್ರೆಸ್‌): 614924 ಮತಗಳು
  • ಗೆಲುವಿನ ಅಂತರ: 149208
  • ನೋಟಾ : 23576 ಮತಗಳು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಬೃಜೇಶ್ ಚೌಟ ಪರಿಚಯ

ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಪಡೆದುಕೊಂಡಿದ್ದ ಕ್ಯಾ. ಬ್ರಿಜೇಶ್‌ ಚೌಟ ಕರ್ನಾಟಕದ ಪ್ರತಿಷ್ಠಿತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಬೀಗಿದ್ದಾರೆ. ಮಂಗಳೂರಿನವರಾದ ಚೌಟ, ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸಂಘದ ಪ್ರೇರಣೆಯಿಂದ ಮುಂದೆ ಭಾರತೀಯ ಸೇನೆಗೆ ಸೇರಿದ್ದರು. ನಿವೃತ್ತಿ ಬಳಿಕ ಮಂಗಳೂರಿಗೆ ಆಗಮಿಸಿ ಆರೆಸ್ಸೆಸ್‌ನ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡು 2013ರಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. 2016-19ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಪರ ಕೆಲಸ ಆರಂಭಿಸಿದರು. 2019ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಚೌಟ, 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪ್ರಭಾರಿಯಾಗಿದ್ದರು. 2015ರಿಂದಲೇ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರ ನಿರಂತರವಾಗಿ ಕೆಲಸ ಮಾಡಿದ್ದರು. 2015ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದಾಗ, ಅದರ ವಿರುದ್ಧ ಹೋರಾಟ ನಡೆಸಿದವರಲ್ಲಿ ಚೌಟ ಪ್ರಮುಖರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪರಿಚಯ

ಮೀನುಗಾರಿಕೆ, ಪ್ರವಾಸೋದ್ಯಮ, ಕಡಲತೀರ, ಆಹಾರ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಹಲವಾರು ಕ್ಷೇತ್ರಗಳ ಮೂಲಕ ದೇಶ-ವಿದೇಶಗಳ ಗಮನ ಸೆಳೆದಿರುವ ಜಿಲ್ಲೆ ದಕ್ಷಿಣ ಕನ್ನಡ. ಸುಶಿಕ್ಷಿತರ ಜಿಲ್ಲೆಯನ್ನೇ ಆವರಿಸಿಕೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 3 ದಶಕಗಳಿಂದ ಬಿಜೆಪಿ ಗಟ್ಟಿಯಾಗಿ ಬೇರೂರಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಹಿಂದೆ ಸೌತ್ ಕೆನರಾ ಕ್ಷೇತ್ರವಾಗಿತ್ತು. ಬಳಿಕ ಅದನ್ನು ಮಂಗಳೂರು ಆಗಿ ಹೆಸರು ಬದಲಾಯಿಸಲಾಯ್ತು. ಕ್ಷೇತ್ರ ಪುನರ್ವಿಂಗಡಣೆ ವೇಳೆ ದಕ್ಷಿಣ ಕನ್ನಡ ಕ್ಷೇತ್ರ ಎಂಬ ಹೆಸರು ಮತ್ತೆ ಬಂತು. ಪುನರ್ವಿಂಗಡಣೆ ಮೊದಲು ಕೊಡಗು ಜಿಲ್ಲೆ ಕೂಡಾ ಮಂಗಳೂರು ಕ್ಷೇತ್ರಕ್ಕೆ ಸೇರಿತ್ತು. 1951ರಿಂದ ಸತತ 40 ವರ್ಷಗಳ ಕಾಲ ದೇಶದಲ್ಲಿ ಸರ್ಕಾರ ಬದಲಾದರೂ ದಕ್ಷಿಣ ಕನ್ನಡ ಕಾಂಗ್ರೆಸ್‌ನ ಭದ್ರಕೋಟೆಯೇ ಆಗಿತ್ತು. ಆದರೆ, ಕಳೆದ ಮೂರು ದಶಕಗಳಿಂದ ಬಿಜೆಪಿ ತನ್ನ ಸುಪರ್ದಿಗೆ ಪಡೆದಿದೆ. ಯಾವಾಗ ಅಯೋಧ್ಯೆ ರಾಮಮಂದಿರ ಚಳವಳಿ ತೀವ್ರವಾಯಿತೋ ಆಗ ಮಂಗಳೂರು ಭಾಗವು ಆರೆಸ್ಸೆಸ್, ವಿಶ್ವ ಹಿಂದು ಪರಿಷತ್ ಶಕ್ತಿಕೇಂದ್ರವಾಗಿ ಬದಲಾಯಿತು. ದೇಶದೆಲ್ಲೆಡೆ ಕಾಂಗ್ರೆಸ್ ಪರ ಅಲೆ ಇದ್ದ 1991ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಧನಂಜಯ ಕುಮಾರ್ ಸತತ ನಾಲ್ಕು ಅವಧಿಗೆ ಸಂಸದರಾಗಿ ಆಯ್ಕೆಯಾದರು. ಅಲ್ಲಿಂದ ಇಲ್ಲಿವರೆಗೆ ಮತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೇಳೆ ಬೆಂದಿಲ್ಲ.

1977ರಿಂದ 1989ರವರೆಗೆ ಸತತ ನಾಲ್ಕು ಅವಧಿಗೆ ಬಿ ಜನಾರ್ದನ ಪೂಜಾರಿ ಅವರು ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾದವರು. 1991ರಲ್ಲಿ ಪೂಜಾರಿ ಅಜೇಯ ಯಾತ್ರೆಗೆ ಧನಂಜಯ ಕುಮಾರ್ ಬ್ರೇಕ್‌ ಹಾಕಿದರು. 2004ರಲ್ಲಿ ಬಿಜೆಪಿಯಿಂದ ಡಿವಿ ಸದಾನಂದ ಗೌಡರ ಪಾಲಾದ ಕ್ಷೇತ್ರದಲ್ಲಿ, 2009ರ ವೇಳೆಗೆ ನಳಿನ್‌ ಕುಮಾರ್‌ ಕಟೀಲ್‌ ಹವಾ ಶುರುವಾಯ್ತು. ದೇಶದೆಲ್ಲೆಡೆ ನರೇಂದ್ರ ಮೋದಿ ಹವಾ ಹೆಚ್ಚುತ್ತಿದ್ದ ಸಮಯದಲ್ಲಿ 2014 ಹಾಗೂ 2019ರಲ್ಲಿಯೂ ಸತತ ಮೂರು ಅವಧಿಗೆ ನಳಿನ್ ಕುಮಾರ್ ಕಟೀಲ್ ಗೆಲ್ಲುತ್ತಾ ಬಂದರು. ದಕ್ಷಿಣ ಕನ್ನಡದಲ್ಲಿ ಧನಂಜಯ ಕುಮಾರ್ ಮತ್ತು ಜನಾರ್ದನ ಪೂಜಾರಿ 4 ಬಾರಿ ಗೆಲುವು ಸಾಧಿಸಿದರೆ, ನಳಿನ್ ಕುಮಾರ್ ಕಟೀಲ್ 3 ಬಾರಿ ಸಂಸದರಾದ ದಾಖಲೆ ಹೊಂದಿದ್ದಾರೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವು ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಅವರನ್ನು 1999 ಮತ್ತು 2004ರಲ್ಲಿ ಕಣಕ್ಕಿಳಿಸಿದರೂ ಅವರು ಸೋಲು ಕಂಡರು.

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಲೋಕಸಭಾ ಚುನಾವಣೆ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಟಿ20 ವರ್ಲ್ಡ್‌ಕಪ್ 2024