Karnataka Rains: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೇ ಮಂಗಳೂರಿಗೆ ರಜೆ ಕೊಡೋದಿಲ್ವಾ? ಡಿಸಿ ರಜೆ ಕೊಟ್ರೂ ಕಷ್ಟ, ಕೊಡದಿದ್ರೂ ಕಷ್ಟ
Mangalore Rain ದಕ್ಷಿಣ ಕನ್ನಡದಲ್ಲಿ ಮಳೆ ಮಾತ್ರವಲ್ಲ. ಮಳೆ ರಜೆಯೂ ಸದ್ದು ಮಾಡುತ್ತಿದೆ. ದಕ್ಷಿಣ ಕನ್ನಡ ಡಿಸಿ ಮಂಗಳೂರು ನಗರ ಹೊರತುಪಡಿಸಿ ಇತರೆಡೆ ರಜೆ ನೀಡುರುವುದು ಇದಕ್ಕೆ ಕಾರಣ.ವರದಿ: ಹರೀಶ ಮಾಂಬಾಡಿ, ಮಂಗಳೂರು
ಮಂಗಳೂರು: ಕಳೆದ ಒಂದು ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಂದ ಪಿಯುಸಿವರೆಗೆ ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಕೊಡುತ್ತಿದ್ದಾರೆ. ಹೀಗಾಗಿ ಪ್ರತಿದಿನ ಸಂಜೆಯಾದೊಡನೆ ರಜೆಗಾಗಿ ಜಿಲ್ಲಾಧಿಕಾರಿಯ ಇನ್ಸ್ ಟಾಗ್ರಾಂ, ಟ್ವಿಟ್ಟರ್ ಸಹಿತ ಸೋಶಿಯಲ್ ಮೀಡಿಯಾದ ಅಧಿಕೃತ ಅಕೌಂಟ್ ಗಳಲ್ಲಿ ಸಂದೇಶಗಳ ಸುರಿಮಳೆಯಾಗುತ್ತಿದೆ. ಬುಧವಾರ ರಾತ್ರಿ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡುಬಿದಿರೆ, ಉಳ್ಳಾಲ ಹೊರತುಪಡಿಸಿ ಉಳಿದ ತಾಲೂಕುಗಳಿಗೆ ರಜೆ ಘೋಷಿಸಿದ್ದರು. ಭಾರಿ ಮಳೆ ಮಂಗಳೂರಲ್ಲೂ ಆಗುತ್ತಿದೆಯಲ್ವಾ, ಮಂಗಳೂರಿಗೆ ರಜೆ ಕೊಡೋದಿಲ್ವಾ ಎಂದು ಆಗ್ರಹಗಳ ಸುರಿಮಳೆಯೇ ಬಂತು.
ಹಾಗೆ ನೋಡಿದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಳೆ ಬಂದ ಕೂಡಲೇ ರಜೆ ಘೋಷಿಸುವ ವಿಚಾರದಲ್ಲಿ ಹಿಂದೆಮುಂದೆ ನೋಡುವುದಿಲ್ಲ. ಕಳೆದ ವರ್ಷ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತನಗೆ ಮಕ್ಕಳಿಂದ ಫೋನ್ ಕರೆ ಬರುತ್ತಿರುವುದನ್ನು ಜ್ಞಾಪಿಸಿಕೊಂಡಿದ್ದರು. ಕರಾವಳಿಯಲ್ಲಿ ಕೆಲ ವರ್ಷಗಳಿಂದೀಚೆಗೆ ಭೂಕುಸಿತ ದಂಥ ಸನ್ನಿವೇಶಗಳು ಉದ್ಭವವಾಗುವ ಕಾರಣ ಮಳೆ ಜೋರಾದಾಗ ರಜೆ ಘೋಷಿಸುವ ಪರಿಪಾಠ ಆರಂಭಗೊಂಡಿದ್ದು, ಇದನ್ನು ಹಾಲಿ ಎಂಪಿ ಅಂದಿನ ಡಿಸಿಯಾಗಿದ್ದ ಶಶಿಕಾಂತ ಸೆಂಥಿಲ್ ಆರಂಭಿಸಿದ್ದರು ಎನ್ನುತ್ತಾರೆ ಶಿಕ್ಷಕರು.
ಟ್ರೋಲ್ ಗೆ ಗುರಿಯಾಗುವ ಡಿಸಿ
ರಜೆಯ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯಾರೇ ಜಿಲ್ಲಾಧಿಕಾರಿ ಬರಲಿ, ಅವರನ್ನು ಗುರಿಯಾಗಿಸಿ ಟ್ರೋಲ್ ಮಾಡಲಾಗುತ್ತದೆ. ಹಿಂದೆಲ್ಲಾ ಹವಾಮಾನ ಇಲಾಖೆಯ ಸೂಚನೆಯನ್ನು ಆಕಾಶವಾಣಿ ವಾರ್ತೆಗಳಲ್ಲಿ ‘’ಇಂದು ಸಾಧಾರಣದಿಂದ ಭಾರೀ ಮಳೆ’’ ಎಂದು ಉದ್ಘೋಷಣೆ ಮಾಡಿದ ದಿನ ಮಳೆ ಬಾರದೇ ಇರುವ ಸನ್ನಿವೇಶಗಳಲ್ಲಿ ಹವಾಮಾನ ಇಲಾಖೆಯನ್ನು ತಮಾಷೆ ಮಾಡಲಾಗುತ್ತಿತ್ತು. ಮಳೆ ಎಂದು ಹೇಳಿದರೆ, ಬಿಸಿಲು ಇರುವುದು, ಬಿಸಿಲು ಎನ್ನುವ ದಿನ ಮಳೆ ಬರುವುದು ಹವಾಮಾನ ಇಲಾಖೆ ಮತ್ತು ಪ್ರಕೃತಿಯ ನಡುವಿನ ಪೈಪೋಟಿ ಜನರ ಮಾತಿಗೆ ವಸ್ತುವಾಗುತ್ತಿದ್ದವು. ಈಗ ಹಾಗಿಲ್ಲ. ಹವಾಮಾನ ಇಲಾಖೆಯ ಸೂಚನೆಯೂ ಸರಿಯಾಗುತ್ತಿದೆ. ರೆಡ್ ಅಲರ್ಟ್ ಎಂದು ಘೋಷಿಸಿದ ಸಂದರ್ಭ ಭಾರಿ ಮಳೆಯಾಗುತ್ತಿರುತ್ತದೆ. ಒಮ್ಮೊಮ್ಮೆ ಬಿಸಿಲು, ಸೂರ್ಯನ ಬೆಳಕು ಕಂಡ ತಕ್ಷಣ ಅಗೋ ನೋಡಿ, ಟ್ರೋಲ್ ಆರಂಭಗೊಳ್ಳುತ್ತದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇವತ್ತು ರಾತ್ರಿ ಭಾರಿ ಮಳೆಯಾಗುತ್ತಿದ್ದು, ನಾಳೆ ರೆಡ್ ಅಲರ್ಟ್ ಘೋಷಣೆ ಇದ್ದ ಹಿನ್ನೆಲೆಯಲ್ಲಿ ರಿಸ್ಕ್ ಬೇಡ ಎಂದುಕೊಂಡು ರಜೆ ಘೋಷಿಸಿದರೆ, ಮರುದಿನ ಬಿಸಿಲು ಇದ್ದರೆ, ಫೇಸ್ ಬುಕ್, ವಾಟ್ಸಾಪ್ ಸಹಿತ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆ, ವ್ಯಂಗ್ಯ, ತಮಾಷೆ, ಜೋಕ್ ಗಳ ರೀಲ್ಸ್, ಸಂದೇಶಗಳು ಬರುತ್ತವೆ. ಜಿಲ್ಲಾಧಿಕಾರಿ ಯಾವ ಉದ್ದೇಶದಿಂದ ರಜೆ ಕೊಟ್ಟಿದ್ದಾರೆ ಎಂಬುದನ್ನೂ ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗದೆ ಪಟಪಟನೆ ಮೊಬೈಲ್ ಒತ್ತಿಕೊಂಡು ಸಂದೇಶಗಳನ್ನು ಹರಿಯಬಿಡಲಾಗುತ್ತದೆ. ಇತ್ತೀಚೆಗಷ್ಟೇ ಅಡಕೆ ಬೆಳೆಯುವವರೊಬ್ಬರು ಮದ್ದು ಬಿಡಲು ಆಗುತ್ತಿಲ್ಲ, ಡಿಸಿ ರಜೆ ಕೊಡ್ತೀರಾ ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದರು. ಅಷ್ಟರಮಟ್ಟಿಗೆ ಜಿಲ್ಲಾಧಿಕಾರಿ ಟ್ರೋಲ್ ಗೆ ಗುರಿಯಾದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತ್ರ ಇಂಥದ್ದಕ್ಕೆಲ್ಲಾ ನಕ್ಕು ಸುಮ್ಮನಾಗುತ್ತಾರೆ.
ಫೇಕ್ ಮೆಸೇಜ್ ಗಳ ಹಾವಳಿ
ಆದರೆ ಸದಾ ಹಸನ್ಮುಖಿ ಮುಲ್ಲೈಮುಗಿಲನ್ ಗುರುವಾರ ಗರಂ ಆಗಿದ್ದರು. ರಜೆಯ ಹಪಾಹಪಿ ಇದ್ದ ಕಿಡಿಗೇಡಿಗಳು ರಜೆಯ ಸೂಚನಾಪತ್ರವನ್ನು ಸಂಜೆಯಾಗುತ್ತಿದ್ದ ವೇಳೆ ವಾಟ್ಸಾಪ್ ಗಳಲ್ಲಿ ವೈರಲ್ ಆಗಿದ್ದು ಇದಕ್ಕೆ ಕಾರಣ. ಹೀಗಾಗಿ ನಕಲಿ ರಜೆ ಆದೇಶ ಹರಿಬಿಡುವವರ ವಿರುದ್ಧ ಎಫ್.ಐ.ಆರ್ ದಾಖಲಿಸಲು ಡಿಸಿ ಸೂಚನೆ ನೀಡಿದ ಘಟನೆಯೂ ನಡೆಯಿತು.
‘’ಜುಲೈ 18 ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ನಕಲಿ ಆದೇಶವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಈ ಹಿಂದಿನ ಆದೇಶವನ್ನು ಎಡಿಟ್ ಮಾಡಿ, ಜೂನ್ 18 ಎಂದು ತಿದ್ದಲಾಗಿದೆ. ಇದನ್ನು ಸೃಷ್ಟಿಸಿದವರ ಮೇಲೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚುವವರ ವಿರುದ್ಧ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ’’ ಎಂಬ ಸಂದೇಶವನ್ನು ವಾರ್ತಾ ಇಲಾಖೆ ನೀಡಬೇಕಾಯಿತು. ಆದಾಗ್ಯು ಫೇಕ್ ಮೆಸೇಜ್ ಹರಡಿಸುವವರು ತಮ್ಮ ಚಾಳಿ ಬಿಡಲಿಲ್ಲ.
ಜಿಲ್ಲಾಧಿಕಾರಿ ರಜೆ ಕೊಡುವುದೇಕೆ?
ಗುರುವಾರದವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರತುಪಡಿಸಿ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕುಗಳಿಗೆ 5 ದಿನಗಳು ಮಳೆಯ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ. ಈ ರಜೆ ಕೊಡುವುದರ ಹಿಂದೆ ಬಲವಾದ ಕಾರಣಗಳು ಇರುತ್ತವೆ. ಹಳ್ಳಿ ಪ್ರದೇಶದ ಸರಕಾರಿ ಶಾಲೆಗಳು ಹಳೆಯದಾಗಿದ್ದು, ಮಣ್ಣಿನ ಗೋಡೆಯಿಂದ ಕೂಡಿರುತ್ತವೆ. ಇವುಗಳು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಗಾಳಿ ಮಳೆಗೆ ಕುಸಿದು ಬೀಳುವ ಸಂಭವ ಇರುವುದು, ಹಳ್ಳಿಗಳಲ್ಲಿ ತೋಡು, ಕಾಲುಸಂಕಗಳಲ್ಲಿ ಮಕ್ಕಳು ಬರುವ ಕಾರಣ, ಇವುಗಳಲ್ಲಿ ಬಂದು ಯಾವುದೇ ಅಪಾಯ ಸಂಭವಿಸುವುದು ಬೇಡ ಎಂಬ ಕಾರಣದಿಂದ ರೆಡ್ ಅಲರ್ಟ್ ಬಂದ ಕೂಡಲೇ ರಜೆ ಘೋಷಿಸಲಾಗುತ್ತದೆ. ಮನೆಯ ಬುಡದಲ್ಲೇ ಸ್ಕೂಲ್ ಬಸ್ ಗೆ ಹತ್ತಿ, ಶಾಲೆಯ ಬಾಗಿಲಿನಲ್ಲಿ ಇಳಿಯುವವರಿಗೆ ಇದರ ಸೀರಿಯಸ್ ನೆಸ್ ಅರ್ಥವಾಗುವುದಿಲ್ಲ. ಇನ್ಸ್ ಟಾಗ್ರಾಂ ನಲ್ಲಿ ಮೆಸೇಜ್ ಹಾಕುವವರ ಪೈಕಿ ಇಂಥವರು ಜಾಸ್ತಿ. ಮಳೆ ಬಂದ ಕೂಡಲೇ ರಜೆ ಕೊಡಬೇಕು ಎಂದೇನೂ ಇಲ್ಲ. ಜಿಲ್ಲಾಧಿಕಾರಿಗೂ ಜವಾಬ್ದಾರಿಗಳು ಇರುತ್ತವೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳುವುದಿಲ್ಲ, ಆದರೆ ಪೋಷಕರು, ಶಿಕ್ಷಕರು ಅವರಿಗೆ ಮನವರಿಕೆ ಮಾಡಿಕೊಡಬೇಕು. ವಿಪರ್ಯಾಸವೆಂದರೆ, ಕರೆ ಮಾಡುವವರು, ಕಂಟ್ರೋಲ್ ರೂಂಗೆ ಕರೆ ಮಾಡುವವರು, ಮೆಸೇಜ್ ಮಾಡುವವರ ಪೈಕಿ ಹೆಚ್ಚಿನವರು ಪೋಷಕರು, ಕೆಲವು ಶಿಕ್ಷಕರೇ ಆಗಿರುತ್ತಾರೆ !
ವರದಿ: ಹರೀಶ ಮಾಂಬಾಡಿ, ಮಂಗಳೂರು