ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಮಂಗಳೂರಿನಲ್ಲಿ ಅಪರೂಪದ ಘಟನೆ, ತಾಯಿ-ಮಕ್ಕಳು ಆರೋಗ್ಯ
ಮಂಗಳೂರಿನಲ್ಲಿ ಅಪರೂಪದ ಘಟನೆ ನಡೆದಿದೆ. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೆಲಂಗಾಣ ಮೂಲದ ಮಹಿಳೆಯೊಬ್ಬರು ಒಟ್ಟು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಜಗತ್ತು ಕೆಲವೊಮ್ಮೆ ವಿಸ್ಮಯಗಳಿಗೆ ಸಾಕ್ಷಿಯಾಗುತ್ತದೆ. ವೈದ್ಯಕೀಯ ಲೋಕದಲ್ಲೂ ನಂಬಲು ಕಷ್ಟವಾಗುವಂತಹ ಘಟನೆಗಳು ಘಟಿಸುತ್ತವೆ. ಕರಾವಳಿ ನಗರದಲ್ಲಿಯೂ ಇಂತಹದೇ ಒಂದು ಅಚ್ಚರಿಯ ವಿದ್ಯಮಾನ ನಡೆದಿದೆ. ನಗರದ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಒಂದಲ್ಲಾ ಎರಡಲ್ಲ, ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಕಂದಮ್ಮಗಳಿಗೆ ಜನನ ನೀಡಿದ ಮಹಾತಾಯಿ. ವಿಶೇಷವೆಂದರೆ ಈ ನಾಲ್ವರು ಮಕ್ಕಳಲ್ಲಿ ಎರಡು ಗಂಡು ಹಾಗೂ ಇನ್ನೆರಡು ಹೆಣ್ಣು ಮಕ್ಕಳು. ತಾಯಿ ಮಾತ್ರವಲ್ಲದೆ, ಶಸ್ತ್ರಚಿಕಿತ್ಸೆ ಮೂಲಕ ಜನನವಾದ ನಾಲ್ಕು ಮಕ್ಕಳು ಕೂಡಾ ಆರೋಗ್ಯವಾಗಿದ್ದಾರೆ.
ಮಕ್ಕಳ ತೂಕವು ಕ್ರಮವಾಗಿ 1.1 ಕೆಜಿ, 1.2 ಕೆಜಿ, 800 ಗ್ರಾಂ, 900 ಗ್ರಾಂ ತೂಕ ಇದೆ. ನಾಲ್ಕು ಮಕ್ಕಳು ಆಗಿರುವ ಕಾರಣದಿಂದ ಮಕ್ಕಳ ತೂಕ ಕಡಿಮೆ ಇದೆ. ಇದು 30 ವಾರಗಳ (ಏಳೂವರೆ ತಿಂಗಳು) ಹೆರಿಗೆಯಾಗಿದ್ದು, ಪ್ರಸವ ಪೂರ್ವ ಜನನವಾದ್ದರಿಂದ ಸದ್ಯ ಮಕ್ಕಳಿಗೆ ಎನ್ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
7 ಲಕ್ಷ ಗರ್ಭಿಣಿಯರಲ್ಲಿ ಒಬ್ಬರು ಮಾತ್ರ
ಅವಳಿ ಮಕ್ಕಳು ಅಥವಾ ತ್ರಿವಳಿ ಮಕ್ಕಳ ಜನನ ಸಾಮಾನ್ಯ. ಆದರೆ, ನಾಲ್ಕು ಮಕ್ಕಳ ಜನನ ಬಹಳ ಅಪರೂಪ. ಇದು 7 ಲಕ್ಷ ಗರ್ಭಧಾರಣೆ ಪ್ರಕರಣಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತವೆ.
ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯ ಆರೈಕೆ
ಸ್ತ್ರೀರೋಗ ತಜ್ಞೆಯಾಗಿರುವ ಡಾ. ಜೋಯ್ಲೀನ್ ಡಿ ಅಲ್ಮೇಡಾ ಗರ್ಭಿಣಿಯ ಪ್ರಸವಪೂರ್ವ ಆರೈಕೆ ಮಾಡಿದ್ದರು. ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಿಭಾಗದ ವೈದ್ಯಕೀಯ ತಂಡ ಮುತುವರ್ಜಿಯಿಂದ ಕಾರ್ಯನಿರ್ವಹಿಸಿ ತಾಯಿ ಹಾಗೂ ಮಕ್ಕಳ ಆರೈಕೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೊಂದು ಅಪರೂಪದ ಹೆರಿಗೆ ಪ್ರಕರಣವಾಗಿದೆ.
ಭಾರತದಲ್ಲಿ ಇಂತಹ ಪ್ರಕರಣಗಳು ಅಪರೂಪ. ಅದರಲ್ಲೂ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀರಾ ಅಪರೂಪದ ಪ್ರಕರಣವಿದು. ಏಷ್ಯಾದಲ್ಲಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಮೂಲಕ ಇಂತಹ ಪ್ರಕರಣ ಸಾಮಾನ್ಯ. ಆದರೆ ನೈಸರ್ಗಿಕ ಕ್ವಾಡ್ರುಪ್ಲೆಟ್ ಗರ್ಭಧಾರಣೆಗಳು ಅಪರೂಪ. ಮಂಗಳೂರಿನಲ್ಲಿ ಈ ಪ್ರಕರಣವು ಗಮನಾರ್ಹವಾಗಿದೆ. ಹೆಚ್ಚು ಮುಂಜಾಗ್ರತೆ, ಆರೈಕೆಯಿಂದ ಮಾತ್ರ ಇದು ಸಾಧ್ಯವಾಗುತ್ತದೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)