ಕನ್ನಡ ಸುದ್ದಿ  /  ಕರ್ನಾಟಕ  /  Ai Call Scam: ನಿಮ್ಮ ಮಗ ರೇಪ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾನೆ ಎಂಬ ಕರೆ, ಪೋಷಕರು ಕಂಗಾಲು; ಮಂಗಳೂರಿಗೂ ಕಾಲಿಟ್ಟ ಎಐ ಅಪರಾಧ

AI call scam: ನಿಮ್ಮ ಮಗ ರೇಪ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾನೆ ಎಂಬ ಕರೆ, ಪೋಷಕರು ಕಂಗಾಲು; ಮಂಗಳೂರಿಗೂ ಕಾಲಿಟ್ಟ ಎಐ ಅಪರಾಧ

AI call scam in Mangaluru: ನಿಮ್ಮ ಮಗ ರೇಪ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾನೆ ಎಂಬ ಕರೆಯೊಂದು ಮಂಗಳೂರು ಪೋಷಕರಿಗೆ ಬಂದಿದ್ದು, ಮಗನ ಅಳುವ ಮಿಮಿಕ್ರಿ ಎಐ ಧ್ವನಿ ಬಳಸಿ ವಂಚನೆ ಮಾಡುವ ಪ್ರಯತ್ನ ಮಾಡಲಾಗಿದೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ವಂಚನೆ ಕುರಿತು ಎಚ್ಚರಿಕೆಯಿಂದ ಇರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ. (ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

ಮಂಗಳೂರಿಗೂ ಕಾಲಿಟ್ಟ ಎಐ ಅಪರಾಧ
ಮಂಗಳೂರಿಗೂ ಕಾಲಿಟ್ಟ ಎಐ ಅಪರಾಧ

ಮಂಗಳೂರು: ‘ನಿಮ್ಮ ಮಗ ರೇಪ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾನೆ’ ಹೀಗೊಂದು ಫೋನ್ ಕರೆ ವಿದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವ್ಯಕ್ತಿಗೆ ಬಂದಾಗ ಹೇಗಾಗಬೇಡ? ಮಂಗಳೂರಿನಲ್ಲಿ ಕಲಿಯುತ್ತಿರುವ ಮಗನ ಕುರಿತ ಆತಂಕ ಒಂದೆಡೆ, ಈ ರೀತಿಯ ಮುಜುಗರ ತರುವಂಥ ಫೋನ್ ಕರೆ ಇನ್ನೊಂದೆಡೆ. ಈ ದಂಪತಿಯ ಮಗ ಮಂಗಳೂರಿನಲ್ಲಿ ಕಾಲೇಜ್ ಒಂದರಲ್ಲಿ ಓದುತ್ತಿದ್ದಾನೆ. ಜೂನ್ 11ರ ಬೆಳಗ್ಗೆ ಸುಮಾರು 10.30ರ ಹೊತ್ತಿಗೆ ಅವನ ಪೋಷಕರಿಗೆ ವಿದೇಶಿ ನಂಬರ್ ನಿಂದ ವಾಟ್ಸಾಪ್ ಕರೆ ಬಂದಿದೆ. ಕಾಲ್ ನಲ್ಲಿ ಮಾತನಾಡಿದ ವ್ಯಕ್ತಿ ಹೀಗೆ ಹೇಳಿದ್ದಾನೆ. ‘’ನಿಮ್ಮ ಮಗ ರೇಪ್ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದಾನೆ. ಕಾಂಪ್ರಮೈಸ್ ಗೆ ಬರ್ತಿರಾ?’’

ಫೇಕ್‌ ಕಾಲ್‌ ಮೂಲಕ ಸುಲಿಗೆ ಪ್ರಯತ್ನ

ಒಮ್ಮೆಗೆ ಶಾಕ್ ಆದ ಪೋಷಕರು ಮತ್ತೆ ಸಾವರಿಸಿಕೊಂಡಿದ್ದಾರೆ. ಕರೆಮಾಡಿದವರನ್ನು ಸರಿಯಾಗಿ ವಿಚಾರಿಸುವ ಪ್ರಯತ್ನ ಮಾಡಿದ್ದಾರೆ. ಅವರು ಹಿಂದಿಯಲ್ಲಿ ಮಾತನಾಡಿದ್ದ ಕಾರಣ ದಂಪತಿಗಳು ಇದು ಫ್ರಾಡ್ ಕಾಲ್ ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ಪೊಲೀಸ್ ಕಾಲ್ ನ್ನೇ ಪ್ರಾಡ್ ಅಂತ ಹೇಳೋಕೆ ಧೈರ್ಯವಿದೆಯೇ ನಿಮಗೆ ಎಂದು ಬೆದರಿಸಿದ್ದಾನೆ. ಮಗ ಅರೆಸ್ಟ್ ಆಗಿದ್ದು ನಿಜವೇ ಎಂದು ನೋಡಲು ಮಗನಿಗೆ ಕಾಲ್ ಕೊಡಿ ಎಂದು ಪೋಷಕರು ಆತನಲ್ಲಿ ತಿಳಿಸಿದ್ದಾರೆ ಆಗ ಮಗನ ಧ್ವನಿಯಂತೆಯೇ ಇರುವ ಅಳುವ ಧ್ವನಿ ಕೇಳಿಸಿತು. ಕೂಡಲೇ ಕಾಲೇಜಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಇದು ಫ್ರಾಡ್ ಕರೆ ಎಂದು ಮನದಟ್ಟಾಯಿತು.

ಪೊಲೀಸರೇ ಕಾಲ್ ಮಾಡಿದ್ದು ಅಂತ ಸಾಕ್ಷಿಯಾಗಿ ತಿಳಿಸೋದಿಕ್ಕೆ ಈ ನಂಬರ್ ಗೆ ಪೊಲೀಸ್ ವ್ಯಕ್ತಿಯೊಬ್ಬರ ಡಿ.ಪಿ ಬೇರೆ ಹಾಕಿದ್ದಾರೆ. ಆದರೂ ದಂಪತಿ ಧೃತಿಗೆಡದೆ ಮಗ ಸೇಫ್ ಆಗಿರೋ ವಿಚಾರವನ್ನು ಕಾಲೇಜ್ ಕರೆ ಮಾಡಿ ತಿಳಿದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಳೆದ ಜೂನ್ 11 ಮತ್ತು 12 ರಂದು ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಮಂಗಳೂರು ನಗರದ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಹಲವಾರು ವಿದ್ಯಾರ್ಥಿಗಳ ಪೋಷಕರಿಗೆ ಈ ರೀತಿಯ ಬೆದರಿಕೆಯ ಕರೆಗಳು ಬಂದಿವೆ. ಇದರಲ್ಲಿ ಹೆಚ್ಚಾಗಿ ಪೋಲೆಂಡ್ ಮತ್ತು ಪಾಕಿಸ್ತಾನದಂಥ ವಿದೇಶಿ ಸಂಖ್ಯೆಗಳನ್ನು ಹೊಂದಿದ್ದವು.

ಹಣ ವಸೂಲಿ ದಂಧೆ ಇದು, ಗಾಬರಿಯಾಗಬೇಡಿ – ಕಮೀಷನರ್

ಇದೊಂದು ಪಕ್ಕಾ ಹಣ ವಸೂಲಿ ದಂಧೆ, ನಾವು ಪೊಲೀಸರು ಯಾರೂ ಇಂಥ ಕರೆ ಮಾಡೋದಿಲ್ಲ, ಗಾಬರಿಯಾಗಬೇಡಿ, ಅಂಥದ್ದೇನಾದರೂ ಕರೆ ಬಂದರೆ ಪೊಲೀಸರಿಗೆ ದೂರು ಕೊಡಿ ಎಂದು ಮಂಗಳೂರು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ. ಪೋಷಕರನ್ನು ಬೆದರಿಸಿ ಹಣ ವಸೂಲಿ ಮಾಡಲಾಗಿದ್ದು ಪೋಷಕರು ಮತ್ತು ಸಂಸ್ಥೆಗಳು ಇಂತಹ ಕರೆಗಳಿಗೆ ಭಯಪಡಬೇಡಿ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್ ಹೇಳಿದ್ದಾರೆ.

ನಾವು ಪೊಲೀಸ್ ಅಧಿಕಾರಿಗಳು. ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆ. ನಿಮ್ಮ ಮಕ್ಕಳನ್ನು ಬಿಡುಗಡೆ ಮಾಡಲು ಹಣ ಕೊಡಿ ಎಂದು ಪೊಲೀಸರ ಹೆಸರಿನಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ಕರೆಗಳು ಬರುತ್ತಿರುವ ಬಗ್ಗೆ ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೂ ಬಹಳಷ್ಟು ದೂರುಗಳು ದಾಖಲಾಗುತ್ತಿವೆ ಎಂದವರು ತಿಳಿಸಿದ್ದಾರೆ. ಜೂನ್ 11 ಮತ್ತು 12ರಂದು ಮಂಗಳೂರು ನಗರದ ಹಲವು ಶಾಲೆಗಳಲ್ಲಿ ಕಲಿಯುತ್ತಿರುವ ಹಲವಾರು ವಿದ್ಯಾರ್ಥಿಗಳ ಪೋಷಕರಿಗೆ ಬೆದರಿಕೆ ಕರೆಗಳು ಬಂದಿವೆ. ಈ ಕರೆಗಳನ್ನು ವಾಟ್ಸಾಪ್ ಮೂಲಕ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಮನಾರ್ಹ ಅಂಶವೆಂದರೆ, ಇದರಲ್ಲಿ ಹೆಚ್ಚಾಗಿ ಪೋಲೆಂಡ್ ಮತ್ತು ಪಾಕಿಸ್ತಾನದಂಥ ವಿದೇಶಿ ಸಂಖ್ಯೆಗಳು ಇದ್ದವು. ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿದ್ದಾನೆ ಮತ್ತು ಹಿಂದಿಯಲ್ಲಿ ಮಾತನಾಡುತ್ತಾ, ಆಯಾ ಪೋಷಕರಿಗೆ ಅವರು ತಮ್ಮ ಮಗ / ಮಗಳನ್ನು ಬಂಧಿಸಿದ್ದಾರೆ ಮತ್ತು ಅವರನ್ನು ಬಿಡುಗಡೆ ಮಾಡಲು ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ತಕ್ಷಣದ ಪರಿಶೀಲನೆಯಲ್ಲಿ, ಕರೆಗಳು ಎಲ್ಲಾ ನಕಲಿಯಾಗಿದೆ ಮತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಕಂಡುಬಂದಿದೆ. ಈ ಕರೆಗಳನ್ನು ಶಾಲಾ ಅವಧಿಯಲ್ಲಿ ಮಾಡಲಾಗಿದ್ದು, ಪೋಷಕರಿಂದ ಬೆದರಿಸಿ ಹಣ ವಸೂಲಿ ಮಾಡುವ ಸಂಚು ಹೂಡಲಾಗಿತ್ತು.ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಲ್ಲಾ ಪೋಷಕರು ಮತ್ತು ಸಂಸ್ಥೆಗಳಿಗೆ ಇಂತಹ ಕರೆಗಳಿಗೆ ಭಯಪಡಬೇಡಿ .ಅಪರಿಚಿತ ವಿದೇಶಿ ಸಂಖ್ಯೆಗಳಿಂದ ವಾಟ್ಸಾಪ್ನಲ್ಲಿ ಬರುವ ಯಾವುದೇ ಕರೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಅವರು ಅಂತಹ ಯಾವುದೇ ಕರೆಯನ್ನು ಸ್ವೀಕರಿಸಿದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಅವರು ತಿಳಿಸಿದ್ದಾರೆ.

‘ನಿಮ್ಮ ಮಕ್ಕಳನ್ನು ಅರೆಸ್ಟ್ ಮಾಡಿ, ಠಾಣೆಗೆ ಕರೆದೊಯ್ಯುತ್ತಿದ್ದೇವೆ. ಬಿಡುಗಡೆ ಮಾಡಬೇಕು ಎಂದಿದ್ದರೆ, 5 ಲಕ್ಷ ರೂ ನೀಡಿ. ನಿಮ್ಮ ಮಕ್ಕಳು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದಾರೆ. ಅವರನ್ನು ಅದರಿಂದ ರಕ್ಷಿಸಲು ಸಹಾಯ ಮಾಡುತ್ತೇವೆ’’ ಈ ರೀತಿಯ ಕರೆಗಳು ಬಂದಿವೆ. ಇವರೆಲ್ಲರೂ ಪ್ರಥಮ ಪಿಯುಸಿ ಮಕ್ಕಳು. ಮಂಗಳೂರಿನ ಕಾಲೇಜುಗಳಲ್ಲಿ ಕಲಿಯುತ್ತಿರುವ ಪ್ರಥಮ ಪಿಯುಸಿ ಹುಡುಗರ ಪೋಷಕರಿಗೆ ಈ ಕರೆಗಳು ಬಂದಿವೆ. ವಿಶೇಷವಾಗಿ ಸುರತ್ಕಲ್ ಮತ್ತು ಮಂಗಳೂರಿನ ಕಾಲೇಜುಗಳಲ್ಲಿ ಸೇರ್ಪಡೆಯಾದ ಮಕ್ಕಳ ಪೋಷಕರಿಗೆ ಕರೆಗಳು ಬಂದಿದ್ದು, ಟ್ರೂ ಕಾಲರ್ ನಲ್ಲಿ ಸಿಬಿಐ ಎಂದು ತೋರಿಸುತ್ತಿದೆ ಎಂದು ಪೋಷಕರೊಬ್ಬರು ಮಾಹಿತಿ ನೀಡಿದ್ದಾರೆ.

ಹಿಂದಿ ಭಾಷೆಯಲ್ಲಿ ಇವರು ಮಾತನಾಡಿ, ನಾನು ಪೊಲೀಸ್ ಅಧಿಕಾರಿ ಎಂದು ಹೇಳಿ, ಮಕ್ಕಳ ಪೋಷಕರು ಹೌದೇ ಎಂದು ಖಚಿತಪಡಿಸಿ ಮತ್ತೆ ಡೀಲ್ ಗೆ ಇಳಿಯುತ್ತಾರೆ. ಇದೀಗ ಮಕ್ಕಳ ಪೋಷಕರ ಸಂಖ್ಯೆ ಹೇಗೆ ಸೋರಿಕೆಯಾಯಿತು ಎಂಬ ತನಿಖೆ ನಡೆಯಬೇಕಿದೆ.

ಹೆಚ್ಚಾಗಿದೆ ಎಐ ವಂಚನೆ

ಎಐ ಧ್ವನಿ ಆಧರಿತವಾಗಿ ವಂಚನೆ ಮಾಡುವ ಕರೆ ಬೆಂಗಳೂರಿನಲ್ಲೂ ವರದಿಯಾಗಿತ್ತು. ಇದೀಗ ಮಂಗಳೂರಿನಲ್ಲೂ ಇಂತಹ ಘಟನೆ ನಡೆದಿದೆ. ಎಐ ವಂಚನೆಯಿಂದ ಪಾರಾಗಲು ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

ನಿಮ್ಮ ಮಕ್ಕಳು/ಸಂಬಂಧಿಗಳ ಮೊಬೈಲ್‌ ಸಂಖ್ಯೆಯನ್ನು ಹೋಲುವ ಸಂಖ್ಯೆಯಿಂದಲೇ ಕರೆ ಬರಬಹುದು. ಕಿವಿಯಾರೆ ಕೇಳಿದರೂ, ಕಣ್ಣಾರೆ ಕಂಡರೂ ಹಲವು ಬಾರಿ ಪರಾಂಬರಿಸಿ ನೋಡಿ. ಈ ರೀತಿ ಕಾಲ್‌ ಬಂದರೆ ಪದಗಳ ಉಚ್ಛಾರ, ಪದಗಳ ನಡುವೆ ಅಂತರ ಇತ್ಯಾದಿಗಳನ್ನು ಎಚ್ಚರಿಕೆಯಿಂದ ಗಮನಿಸಿ. ಇದರಿಂದ ಕೃತಕ ಕರೆಯೋ, ನಿಜವಾದ ಕರೆಯೋ ಎಂದು ತಿಳಿದುಕೊಳ್ಳಬಹುದು. ಈಗ ಇಂಗ್ಲಿಷ್‌, ಹಿಂದಿ ಇತ್ಯಾದಿ ಭಾಷೆಗಳಲ್ಲಿ ಇಂತಹ ಕರೆ ಬರಬಹುದು. ಮುಂದೆ ಕನ್ನಡ ತುಳು ಭಾಷೆಯಲ್ಲೂ ಬಂದರೂ ಅಚ್ಚರಿಯಿಲ್ಲ. ಎಐ ವಂಚಕರು ವ್ಯಕ್ತಿಗಳ ಧ್ವನಿ ದತ್ತಾಂಶಗಳನ್ನು ಸಂಗ್ರಹಿಸಿ ಎಐ ತಂತ್ರಜ್ಞಾನದ ಮೂಲಕ ಇಂತಹ ಕೃತಕ ಕರೆ ಮಾಡಿ ಮೋಸ ಮಾಡಲು ಪ್ರಯತ್ನಿಸುತ್ತಾರೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ವರದಿ: ಹರೀಶ್‌ ಮಾಂಬಾಡಿ, ಮಂಗಳೂರು