Arun Kumar Puthila: ಬಿಜೆಪಿ ರಾಜ್ಯಾಧ್ಯಕ್ಷರನ್ನ ಭೇಟಿಯಾದ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ, ಶುಕ್ರವಾರ ಬಿಜೆಪಿಗೆ ಸೇರ್ಪಡೆ
Arun Kumar Puthila Joins BJP: ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿದ್ದಾರೆ. ಶುಕ್ರವಾರ ಮಂಗಳೂರಿನಲ್ಲಿ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಭೇಟಿಯ ಬಳಿಕ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. (ವರದಿ: ಹರೀಶ್ ಮಾಂಬಾಡಿ)

ಮಂಗಳೂರು: ಗುರುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಬಂಡಾಯದ ಫಲವಾಗಿ ಬಿಜೆಪಿ ಅಧಿಕೃತ ಅಭ್ಯರ್ಥಿಗೆ ಪ್ರತಿಯಾಗಿ ಪಕ್ಷೇತರನಾಗಿ ಸ್ಪರ್ಧೆಗಿಳಿದಿದ್ದ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿದ್ದಾರೆ. ಶುಕ್ರವಾರ ಮಂಗಳೂರಿನಲ್ಲಿ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಭೇಟಿಯ ಬಳಿಕ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಣೆಯಾದ ಬೆನ್ನಲ್ಲೇ ಪುತ್ತಿಲ ಬಿಜೆಪಿ ಸೇರ್ಪಡೆ ಪ್ರಕ್ರಿಯೆ ವೇಗ ಪಡೆಯಿತು. ಕೆಲ ತಿಂಗಳುಗಳಿಂದ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ಹಾಗೂ ಸೂಕ್ತ ಸ್ಥಾನಮಾನದ ಕುರಿತು ಚರ್ಚೆಗಳು ನಡೆದಿದ್ದವು. ಬಿಜೆಪಿಯಲ್ಲಿ ಮಹತ್ವದ ಹುದ್ದೆಯೊಂದು ದೊರಕದಿದ್ದರೆ, ಸೇರ್ಪಡೆ ಬೇಡ ಎಂದು ಅವರ ಬೆಂಬಲಿಗರು ಪಟ್ಟು ಹಿಡಿದಿದ್ದರು. ಒಂದು ಹಂತದಲ್ಲಿ ಲೋಕಸಭಾ ಚುನಾವಣೆಗೆ ಪುತ್ತಿಲ ಸ್ಪರ್ಧೆಗಿಳಿಯುವುದು ಖಚಿತ ಎಂದು ಅವರ ಬೆಂಬಲಿಗರು ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದು, ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ನೀಡಿತ್ತು.
ಒಂದೆಡೆ ಕಳೆದ ಬಾರಿ 60 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಅಧಿಕೃತ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ, ಪುತ್ತೂರಿನಲ್ಲಿ ಬಿಜೆಪಿ ಸೋಲಲು ಕಾರಣವಾದ ಅರುಣ್ ಪುತ್ತಿಲರಿಂದಾಗಿಯೇ ಕಾಂಗ್ರೆಸ್ ಗೆದ್ದಿತು ಎಂದು ಬಿಜೆಪಿ ಹೇಳತೊಡಗಿತು. ಪುತ್ತಿಲ ಸ್ಪರ್ಧೆಗಿಳಿದರೆ, ನಾವು ಈ ಬಾರಿ ಓಟು ಕೊಡೋದಿಲ್ಲ, ನಳಿನ್ ಅವರನ್ನು ಬದಲಾಯಿಸಿ ಎಂದು ಪುತ್ತಿಲ ಬೆಂಬಲಿಗರು ಫೇಸ್ ಬುಕ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡರು. ಕಳೆದ ಬಾರಿ ಪುತ್ತಿಲರ ಬೆನ್ನಿಗೆ ಇದ್ದವರಲ್ಲಿ ಕೆಲವರು ನ್ಯೂಟ್ರಲ್ ಆಗಿದ್ದರು. ಆದರೂ ಈ ಬಾರಿ ನಳಿನ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ, ಸ್ವಪಕ್ಷೀಯರದ್ದೇ ಬಂಡಾಯದ ಮತ್ತೊಂದು ಪ್ರತಿರೂಪವಾಗಿ ಅರುಣ್ ಪುತ್ತಿಲ ಕಣಕ್ಕಿಳಿಯುವ ಸಾಧ್ಯತೆ ಇತ್ತು. ಜೊತೆಗೆ ಸತ್ಯಜಿತ್ ಸುರತ್ಕಲ್ ಸ್ಪರ್ಧೆಗಿಳಿಯುವ ಮಾತಾಡಿದ್ದು ಪಾರ್ಟಿ ಹೈಕಮಾಂಡ್ ಗೆ ತಲೆನೋವು ತಂದಿತು. ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಇವರನ್ನು ಸಮಾಧಾನಪಡಿಸುವ ಕುರಿತು ಯಾರೂ ಬರುತ್ತಿಲ್ಲ ಎಂಬ ಆಕ್ರೋಶವೂ ಬಂದಿತ್ತು. ಆದರೆ ತೆರೆಮರೆಯ ಸಂಧಾನ ಪ್ರಕ್ರಿಯೆಗಳು ಸತೀಶ್ ಕುಂಪಲ ಜಿಲ್ಲಾಧ್ಯಕ್ಷರಾದ ಬೆನ್ನಿಗೆ ವೇಗ ಪಡೆದಿದ್ದವು. ವಿಜಯೇಂದ್ರ ರಾಜ್ಯಾಧ್ಯಕ್ಷರಾಗುವ ಸಂದರ್ಭವೇ ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರ ಗರಿಗೆದರಿತ್ತು.
ಬೃಜೇಶ್ ಚೌಟ ಹಾದಿ ಸುಗಮ
ಕಾರ್ಯಕರ್ತರ ವಿಶ್ವಾಸ ಗಳಿಸಿದರಷ್ಟೇ ಗೆಲ್ಲಲು ಸಾಧ್ಯ ಎಂಬುದನ್ನು ಕೆಲ ವರ್ಷಗಳಿಂದ ನಡೆಯುತ್ತಿರುವ ಬೆಳವಣಿಗೆಯಿಂದ ಮನಗಂಡ ಕ್ಯಾ.ಬೃಜೇಶ್ ಚೌಟ, ತನ್ನ ಅಭ್ಯರ್ಥಿತನ ಘೋಷಣೆಯಾದ ಕೂಡಲೇ ಹಿರಿಯ ನಾಯಕರು, ಎಂಎಲ್ಎ ಗಳನ್ನು ಭೇಟಿಯಾಗಿ, ಬಳಿಕ ಪಕ್ಷದ ಕಚೇರಿಗಳಿಗೆ ಭೇಟಿ ಇತ್ತು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಯಾಗುತ್ತಿರುವುದು ಬೃಜೇಶ್ ಚೌಟ ಅವರ ಹಾದಿ ಸುಗಮವಾದಂತಾಗಿದೆ.
- ವರದಿ: ಹರೀಶ ಮಾಂಬಾಡಿ
