Mangaluru Crime: ಹಲಸಿನ ಹಣ್ಣು ಕೀಳುವಾಗ ಹಲ್ಲೆ, ಕತ್ತಿ ತೋರಿಸಿ, ಬೆದರಿಕೆ ಆರೋಪ; ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಕಳವು
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Crime: ಹಲಸಿನ ಹಣ್ಣು ಕೀಳುವಾಗ ಹಲ್ಲೆ, ಕತ್ತಿ ತೋರಿಸಿ, ಬೆದರಿಕೆ ಆರೋಪ; ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಕಳವು

Mangaluru Crime: ಹಲಸಿನ ಹಣ್ಣು ಕೀಳುವಾಗ ಹಲ್ಲೆ, ಕತ್ತಿ ತೋರಿಸಿ, ಬೆದರಿಕೆ ಆರೋಪ; ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಕಳವು

ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳ ವಿವರ ಇಲ್ಲಿದೆ. (ವರದಿ: ಹರೀಶ್ ಮಾಂಬಾಡಿ)

ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳ ವಿವರ ಇಲ್ಲಿದೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳ ವಿವರ ಇಲ್ಲಿದೆ.

ಮಂಗಳೂರು: ಜಾಗದ ತಕಲಾರು ಮನಸ್ತಾಪ ಇರುವ ಹಿನ್ನೆಲೆಯಲ್ಲಿ ಹಲಸಿನ ಹಣ್ಣು ಕೀಳುವ ಸಂದರ್ಭ, ಹಲ್ಲೆ ನಡೆಸಿ, ಕತ್ತಿ ತೋರಿಸಿ ಬೆದರಿಕೆ ಒಡ್ಡಿರುವುದಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರಿಯಡ್ಕ ಗ್ರಾಮದ ಅರುಣ್ ಕುಮಾರ್ (37) ಹಲ್ಲೆಗೊಳಗಾಗಿ ದೂರು ನೀಡಿದವರು. ಕೃಷಿ ಕೆಲಸ ಮಾಡುತ್ತಿರುವ ಅವರಿಗೆ ಹಾಗೂ ಮನೆಯ ನೆರೆಯ ಸಂಬಂಧಿಕರಾದ ನಾಗೇಶ್ ಮಣಿಯಾಣಿ ಮಧ್ಯೆ ಜಾಗದ ವಿಚಾರದಲ್ಲಿ ಮನಸ್ತಾಪವಿದೆ. ಅರುಣ್ ಅವರು ಸೇರಿದ ಜಾಗದಲ್ಲಿ ಹಲಸಿನ ಹಣ್ಣು ತೆಗೆಯುತ್ತಿದ್ದ ವೇಳೆ ಆರೋಪಿಗಳಾದ ನಾಗೇಶ್ ಮತ್ತು ಆತನ ಹೆಂಡತಿ ಯಶೋಧರಾ ಆಗಮಿಸಿ, ಅರುಣ್ ಮತ್ತು ಅವರ ತಾಯಿ ಜಯಲಕ್ಷ್ಮೀ ಅವರನ್ನು ಉದ್ದೇಶಿಸಿ ನಿಂದಿಸಿದ್ದಾಗಿ ದೂರಲಾಗಿದೆ.

ಈ ಸಂದರ್ಭ ಪ್ರಶ್ನಿಸಿದಾಗ ಅರುಣ್ ಅವರಿಗೆ ಆರೋಪಿಗಳು ಹಲ್ಲೆ ನಡೆಸಿದ್ದು, ಆ ಸಂದರ್ಭ, ಅರುಣ್ ತಾಯಿ, ಗಲಾಟೆಯನ್ನು ಬಿಡಿಸಿದ್ದಾರೆ. ಆರೋಪಿ ನಾಗೇಶ್, ಅರುಣ್ ಅವರನ್ನು ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದ್ದು, ಹಲ್ಲೆಯಿಂದ ಉಂಟಾದ ಗಾಯದ ಚಿಕಿತ್ಸೆಗಾಗಿ ಅರುಣ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಆತ್ಮಹತ್ಯೆಗೆಂದು ಬಿಗಿದ ಹಗ್ಗವೇ ತುಂಡಾಯಿತು, ಆಸ್ಪತ್ರೆಯಲ್ಲಿ ಗಾಯಾಳು ಸಾವು

ಆತ್ಮಹತ್ಯೆ ಮಾಡಲೆಂದು ನೇಣು ಬಿಗಿದಾಗ ಹಗ್ಗ ತುಂಡಾಗಿ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕುಂಬಳೆಯ ಮಹಿಳೆ, ಮಂಗಳೂರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಬಂದ್ಯೋಡ್ ನಿವಾಸಿ ಆಯಿಷತ್ ರಿಯಾನಾ (24) ಮೃತಪಟ್ಟವರು. ಜುಲೈ 23ರಂದು ಬಾತ್ ರೂಮ್‌ನಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಹಗ್ಗ ತುಂಡಾಗಿತ್ತು. ನೆಲಕ್ಕೆ ಬಿದ್ದ ರಿಯಾನಾ ತಲೆಗೆ ಗಂಭೀರ ಏಟಾಗಿತ್ತು.

ಕುಡಿತದ ಅಮಲಿನಲ್ಲಿ ಮೋರಿಗೆ ಬಿದ್ದದ್ದೇ ಗೊತ್ತಾಗಲಿಲ್ಲ

ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ವ್ಯಕ್ತಿಯೊಬ್ಬನನ್ನು ಸಂಚಾರಿ ಠಾಣಾ ಪೊಲೀಸರಿಬ್ಬರು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮಂಗಳೂರಿನ ಪಂಪ್‌ವೆಲ್ ಬಳಿ ನಡೆದಿದೆ. ಮದ್ಯದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ದಾರಿ ಕಾಣದೆ ರಸ್ತೆ ಬಿಟ್ಟು ಮೋರಿಗೆ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆರೇಳು ಅಡಿ ಆಳವಿದ್ದ ಈ ಮೋರಿಯಲ್ಲಿ ಮಳೆಯ ಕಾರಣ ನೀರು ರಭಸವಾಗಿ ಹರಿಯುತ್ತಿದೆ. ಹೆಚ್ಚು ಕಡಿಮೆಯಾದರೂ ಮೋರಿಗೆ ಬಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆಯಿತ್ತು. ಇದನ್ನು ಗಮನಿಸಿದ ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿಲ್ಸನ್ ಫೆರ್ನಾಂಡಿಸ್ ಅವರು ಸ್ವತಃ ಮೋರಿಗಿಳಿದು ಹರಸಾಹಪಟ್ಟು ಮೇಲಕ್ಕೆತ್ತಿದ್ದಾರೆ.

ಈ ಸಂದರ್ಭ ಅಲ್ಲಿಯೇ ಇದ್ದ ಸಾರ್ವಜನಿಕರು ಸಹಕರಿಸಿದ್ದಾರೆ. ಈ ಸಂದರ್ಭದ ದೃಶ್ಯವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಸದ್ಯ 58 ಸೆಕೆಂಡ್‌ನ ಈ ವೀಡಿಯೋ ವೈರಲ್ ಆಗುತ್ತಿದೆ. ಪೊಲೀಸರಿಬ್ಬರ ಈ ಕಾರ್ಯಕ್ಕೆ ಎಲ್ಲರೂ ಹ್ಯಾಟ್ಸ್ಆಫ್ ಅನ್ನುತ್ತಿದ್ದಾರೆ.

ವಿವಾಹಿತನಿಂದ ಅತ್ಯಾಚಾರ: ಠಾಣೆಗೆ ದೂರು

ವಿವಾಹಿತನೋರ್ವ ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಮಾಡಿ ಗರ್ಭವತಿ ಮಾಡಿದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮ್ಮಾಡಿ ಗ್ರಾಮ ನಿವಾಸಿ ಪ್ರಕರಣ ಆರೋಪಿ ಯಾಗಿದ್ದು, ಆತ ಒಂದು ವರ್ಷದಿಂದ ಎರಡು ಬಾರಿ ಯುವತಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ

ಪತಿಗೆ ಮೆಸೇಜ್ ಮಾಡಿ ಮಗುವನ್ನೂ ಬಿಟ್ಟು ಮಹಿಳೆ ನಾಪತ್ತೆ

ಮಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಂಗಳಾದೇವಿ ನಿವಾಸಿ ಮಹಿಳೆಯೋರ್ವಳು ತನ್ನ ಪತಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ಬಳಿಕ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಿಯಾ ರಂಜಿತ್ (25) ನಾಪತ್ತೆಯಾದವರು. ಕಾಲೇಜೊಂದರಲ್ಲಿ ಅಂತಿಮ ವರ್ಷದ ಫಿಸಿಯೋಥೆರಪಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಜುಲೈ 17ರಂದು ಬೆಳಗ್ಗೆ 7.45ಕ್ಕೆ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದರು. ಸಂಜೆ 5ಕ್ಕೆ ಪತಿಗೆ ವಾಟ್ ಆ್ಯಪ್ ಮೂಲಕ ಮೆಸೇಜ್ ಮಾಡಿ 'ತಾನು ಅಮಿತ್ ಎಂಬವನೊಂದಿಗೆ ಹೋಗುತ್ತಿದ್ದು, ತಾಯಿ ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ತಿಳಿಸಿದ್ದಾರೆ.

ಆ ಬಳಿಕ ಅವರ ಮೊಬೈಲ್ ಸ್ವಿಚ್‌ ಆಫ್ ಆಗಿದೆ. 5.1 ಅಡಿ ಎತ್ತರ, ಬಿಳಿ ಮೈಬಣ್ಣ ಹೊಂದಿದ್ದು, ಮಲಯಾಳಂ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸುರು ಬಣ್ಣದ ಚೂಡಿದಾರ ಧರಿಸಿದ್ದರು. ಎಡಕೈಯಲ್ಲಿ ರಂಜಿತ್ ಎಂಬ ಹೆಸರಿನ ಟ್ಯಾಟೋ, ಬಲಕೈಯಲ್ಲಿ ಬಟರ್ ಫೈ ಟ್ಯಾಟೋ, ಮೂಗಿನ ಕೆಳಗೆ ಕಪ್ಪು ಮಚ್ಚೆ ಇದೆ. ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ರಸ್ತೆಗೆ ಉರುಳಿದ ಮರ, ತೆರವು ಕಾರ್ಯಾಚರಣೆ

ಬಿ.ಸಿ.ರೋಡ್ ನಿಂದ ಗೂಡಿನಬಳಿ ಕಡೆಗೆ ತೆರಳುವ ರಸ್ತೆಯ ಪಕ್ಕವಿದ್ದ ಬೃಹತ್ ಮರವೊಂದು ಶುಕ್ರವಾರ ನಸುಕಿನ ವೇಳೆ ಉರುಳಿ ಬಿದ್ದ ಘಟನೆ ನಡೆದಿದೆ. ಘಟನೆಯಿಂದ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಕಂದಾಯ, ಅಗ್ನಿಶಾಮಕ, ಪೊಲೀಸ್, ಕೆಎಸ್‌ಆರ್‌ಪಿ ಹಾಗೂ ಸಾರ್ವಜನಿಕರ ಸಹಕಾರದಿಂದ ತೆರವುಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ನಿಲ್ಲಿಸಿದ್ದ ಕ್ರೇನ್‌ಗಳ ಬ್ಯಾಟರಿ ಕಳವು

ಬಂಟ್ವಾಳ ಪೊಲೀಸ್ ಕ್ವಾರ್ಟಸ್‌ನ ಅನತಿದೂರದಲ್ಲೇ ಕೈಕುಂಜ ಎಂಬಲ್ಲಿ ಕನ್ನಡ ಭವನದ ಬಳಿ ನಿಲ್ಲಿಸಲಾಗಿದ್ದ ಮೂರು ಕ್ರೇನ್‌ಗಳ ಬ್ಯಾಟರಿಯನ್ನು ಕಳವು ಮಾಡಿದ ಘಟನೆ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಅವಧಿಯಲ್ಲಿ ನಡೆದಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಗಜಲಕ್ಷ್ಮೀ ಕ್ರೇನ್ ಮಾಲೀಕರು ದೂರು ನೀಡಿದ್ದಾರೆ.

ಕಳವಾದ ಬ್ಯಾಟರಿಗಳ ಮೊತ್ತ ಸುಮಾರು ಐವತ್ತು ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ವಿಜಯಲಕ್ಷ್ಮೀ ಗ್ರೂಪ್ ನವರ ಗಜಲಕ್ಷ್ಮೀ ಕ್ರೇನ್ ಗಳನ್ನು ಪ್ರತಿದಿನವೂ ಬಿ.ಸಿ.ರೋಡ್ ನ ಕೈಕುಂಜೆ ರಸ್ತೆಯ ಕನ್ನಡ ಭವನದ ಬಳಿ ಇರಿಸಲಾಗುತ್ತದೆ. ಆದರೆ ಯಾರೋ ಕಳ್ಳರು ಚಾಣಾಕ್ಷತೆಯಿಂದ ಈ ಕೃತ್ಯ ಎಸಗಿದ್ದಾರೆ. ವಸತಿ ಸಂಕೀರ್ಣಗಳು, ಕಚೇರಿಗಳು ಇರುವ ಪ್ರದೇಶಗಳಲ್ಲೇ ಕಳವು ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಮಧ್ಯರಾತ್ರಿ ಪೊಲೀಸ್ ವಾಹನಗಳ ಗಸ್ತು ಹಾಗೂ ಪಹರೆ ಕಾರ್ಯವನ್ನು ಬಲಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Whats_app_banner