ಹಗ್ಗ ಬಳಸದೆ, ಗಂಟು ಬಿಗಿಯದೆ ರಥ ನಿರ್ಮಾಣ; ಕುಕ್ಕೆ ಸುಬ್ರಹ್ಮಣ್ಯದ ಸುಂದರ ರಥಗಳ ಹಿಂದಿದೆ ಆದಿವಾಸಿ ಮಲೆಕುಡಿಯ ಅದ್ಭುತ ಕೈಚಳಕ
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ‘ನಮ್ಮ ಸುಬ್ರಹ್ಮಣ್ಯ’ ಎಂಬ ಖಾತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಸುಂದರ ರಥಗಳ ಹಿಂದಿನ ಕೈಚಳಕದ ಬಗ್ಗೆ ಬರೆಯಲಾಗಿದೆ.
ದಕ್ಷಿಣ ಕನ್ನಡ: ಹೂವಿನಂತೆ ಬೆತ್ತ ಸುರಿದು, ಯಾವುದೇ ಗಂಟುಗಳಿಲ್ಲದೆ, ಹಗ್ಗ ಬಳಸದೆ ಬೆತ್ತದಿಂದ ರಥ ರಚಿಸುವುದನ್ನು ನೋಡುವುದೇ ಒಂದು ಆನಂದ. ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ವೇಳೆ ಸುಬ್ರಹ್ಮಣ್ಯ ಕ್ಷೇತ್ರದ ಮೂಲ ನಿವಾಸಿಗಳ ಕೈಚಳಕದಲ್ಲಿ ಬೆತ್ತದ ತೇರು ಸುಂದರ ಕಲಾಕೃತಿಯಂತೆ ನಿರ್ಮಾಣಗೊಳ್ಳುತ್ತಿದೆ.
ನಾಗರಾಧನೆಗೆ ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ ಕುಕ್ಕೆಯಲ್ಲಿ (Kukke Subrahmanya Temple) ಚಂಪಾಷಷ್ಠಿಗೆ ಚಾಲನೆ ದೊರಕಿದೆ. ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರಿಂದ ಬೆತ್ತದ ರಥ ನಿರ್ಮಾಣ ನಡೆಯುತ್ತಿದೆ. ಲಕ್ಷದೀಪೋತ್ಸವದಂದು ಕಾಶಿಕಟ್ಟೆ ದೇಗುಲದ ಮುಂದೆ ಜನಪದೀಯ ಶೈಲಿಯಲ್ಲಿ ರಚಿಸುವ ಚಲಿಸಲಾಗದ ಗುರ್ಜಿ ರಥದಿಂದ ಹಿಡಿದು ಪಂಚಮಿ, ಬ್ರಹ್ಮರಥಗಳು ಮನಸೂರೆಗೊಳಿಸುತ್ತವೆ. ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಶುಭಮುಹೂರ್ತದಲ್ಲಿ ಬ್ರಹ್ಮರಥ ನಿರ್ಮಾಣಕ್ಕೆ ಚಾಲನೆ ನೀಡುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯ ರಥದ ವಿಶೇಷ ಏನು?
ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತ ಸಂಗ್ರಹಿಸಿ, ಬ್ರಹ್ಮರಥವನ್ನು ಕಟ್ಟಲು ಆರಂಭಿಸುತ್ತಾರೆ. ನಾಡಿನ ಇತರೆ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಬಳಸಿ ಕೌಶಲಭರಿತವಾಗಿ ನಿರ್ಮಿಸುವುದು ವಿಶೇಷ.
ಭಾರಿ ಗಾತ್ರದ ಬೆತ್ತವನ್ನು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು, ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ರಚಿಸುತ್ತಾರೆ. ಇಲ್ಲಿ ಯಾವುದೇ ಗಂಟುಗಳನ್ನು ಹಾಕುವುದಿಲ್ಲ. ಬೆತ್ತವನ್ನು ಹೂವಿನಂತೆ ಪೋಣಿಸಿ ರಥವನ್ನು ಗಟ್ಟಿ ಮಾಡಲಾಗುತ್ತದೆ. ತೇರನ್ನೇರುವ ವೇಳೆ ರಥದ ಸುತ್ತ ಪತಾಕೆಗಳಿಂದ ಅಲಂಕರಿಸುತ್ತಾರೆ. ರಥ ನಿಮಾಣ ಕಾರ್ಯದಲ್ಲಿ ಮಲೆಕುಡಿಯ ಜನಾಂಗದ ಯುವಕರು, ವೃದ್ಧರು ಉತ್ಸಾಹದಿಂದ ಭಾಗವಹಿಸುತ್ತಾರೆ.