Dakshina Kannada News: ದಕ್ಷಿಣ ಕನ್ನಡದಲ್ಲಿ ಮತೀಯ ಹತ್ಯೆ, 4 ಕುಟುಂಬಗಳಿಗೆ ತಲಾ 25 ಲಕ್ಷ ರೂ ಪರಿಹಾರ; ಸಿಕ್ಕ ನೆರವೆಷ್ಟು, ಏನಿದು ಪ್ರಕರಣ?
Compensation for families: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮತೀಯ ಹತ್ಯೆಗಳ ಪೈಕಿ ನಾಲ್ವರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮತೀಯ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ಯೆಗೀಡಾದ ನಾಲ್ಕು ಮಂದಿಯ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ ಗಳ ಪರಿಹಾರ ಘೋಷಿಸಲಾಗಿದೆ.
ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ , ಮಂಗಳೂರಿನ ಸುರತ್ಕಲ್ ನ ಮೊಹಮ್ಮದ್ ಫಾಜಿಲ್, ಅಬ್ದುಲ್ ಜಲೀಲ್ ಮತ್ತು ದೀಪಕ್ ರಾವ್ ಕುಟುಂಬ ಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ ಗಳ ಪರಿಹಾರ ನೀಡಲು ಆದೇಶಿಸಲಾಗಿದೆ.
ಬೆಳ್ಳಾರೆಯ ಮಸೂದ್ ಎಂಬವರನ್ನು 2022 ಜುಲೈ 19 ರಂದು ಹತ್ಯೆಗೈಯ್ಯಲಾಗಿತ್ತು. ಸುರತ್ಕಲ್ ನ ಮೊಹಮ್ಮದ್ ಫಾಜಿಲ್ ರನ್ನು 2022 ಜುಲೈ 28 ರಂದು ಹತ್ಯೆಗೈಯ್ಯಲಾಗಿತ್ತು. ಸುರತ್ಕಲ್ ನ ಅಬ್ದುಲ್ ಜಲೀಲ್ ರನ್ನು 2022 ಡಿಸೆಂಬರ್ 24 ರಂದು ಹತ್ಯೆಗೈಯ್ಯಲಾಗಿತ್ತು. ಸುರತ್ಕಲ್ ನ ದೀಪಕ್ ರಾವ್ ರನ್ನು 2018 ಜನವರಿ 3 ರಂದು ಹತ್ಯೆ ಮಾಡಲಾಗಿತ್ತು. ಇದರಲ್ಲಿ ದೀಪಕ್ ರಾವ್ ಕೊಲೆ ಪ್ರಕರಣ ಸಿದ್ದರಾಮಯ್ಯ ಕಳೆದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ನಡೆದಿತ್ತು. ಆ ಸಂದರ್ಭ ಚುನಾವಣಾ ಪೂರ್ವ ನಡೆದ ಈ ಹತ್ಯೆ ಪ್ರಕರಣ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿ ಚುನಾವಣಾ ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು. ಬೆಳ್ಳಾರೆಯ ಮಸೂದ್ ಹತ್ಯೆ ಬಳಿಕ ಪ್ರತಿಕಾರವಾಗಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು. ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಪ್ರತಿಕಾರವಾಗಿ ಫಾಜಿಲ್ ಹತ್ಯೆ ನಡೆದಿತ್ತು. ಕೆಲ ಸಮಯದ ಬಳಿಕ ಜಲೀಲ್ ಹತ್ಯೆ ನಡೆದಿತ್ತು. ಈ ಹತ್ಯೆ ಗಳು ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಿ ಆತಂಕದ ವಾತವರಣ ನಿರ್ಮಾಣ ಮಾಡಿತ್ತು. ಈ ಎಲ್ಲಾ ಘಟನೆಗಳು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆ ನಡೆದ ಘಟನೆಗಳಾಗಿದ್ದು, ಪ್ರವೀಣ್ ನೆಟ್ಟಾರ್ ಹೊರತುಪಡಿಸಿ ಬೇರೆ ಯಾರಿಗೂ ಪರಿಹಾರ ವಿತರಣೆ ಮಾಡಿರಲಿಲ್ಲ.
ಪ್ರಸ್ತಾವನೆಗೆ ಕೋರಿದ್ದ ಗೃಹಸಚಿವರು
ಇತ್ತೀಚಿಗೆ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ಮತೀಯ ಪ್ರಕರಣಗಳಲ್ಲಿ ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡಲು ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದ್ದರು. ಈ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ ಪರಿಹಾರ ಮಂಜೂರು ಮಾಡಲಾಗಿದೆ. ಈ ಬಗ್ಗೆ ಮಂಗಳೂರು ತಾಲೂಕು ಮತ್ತು ಸುಳ್ಯ ತಾಲೂಕು ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಪತ್ರ ಬರೆದು ಜಿಲ್ಲಾಧಿಕಾರಿ ಕಚೇರಿಯಿಂದ ನೀಡಲಾದ ಚೆಕ್ಕುಗಳನ್ನು ಹಾಗೂ ಕಡತವನ್ನು ಪಡೆದುಕೊಂಡು ಮೃತ ವ್ಯಕ್ತಿಗಳ ವಾರಸುದಾರರೊಂದಿಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ದಲ್ಲಿ ವಿತರಿಸುವ ಕುರಿತು ತಿಳಿಸಿದ್ದರು.
ಮಸೂದ್ ಅವರ ತಾಯಿ ಸಾರಮ್ಮ, ಮೊಹಮ್ಮದ್ ಫಾಜಿಲ್ ತಾಯಿ ಜೈನಾಬ, ಅಬ್ದುಲ್ ಜಲೀಲ್ ಪತ್ನಿ ದಿಲ್ಶಾದ್, ದೀಪಕ್ ರಾವ್ ತಾಯಿ ಪ್ರೇಮಾ ರಾಮಚಂದ್ರ ಅವರಿಗೆ ಪರಿಹಾರ ಹಣ ಮಂಜೂರು ಮಾಡಲಾಗಿದೆ.
ಶರತ್ ಮಡಿವಾಳ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ ಪರಿಹಾರ
ಈ ಮಧ್ಯೆ 2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ನಡೆದ ಬಂಟ್ವಾಳದ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪರಿಹಾರ ಇನ್ನೂ ದೊರಕಿಲ್ಲ ಎಂದು ಅವರ ತಂದೆ ದೂರಿದ್ದಾರೆ. ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದವರ 4 ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಸರಕಾರ ತನ್ನ ಕುಟುಂಬವನ್ನು ಪರಿಗಣಿಸಿಲ್ಲ ಎಂದವರು ಹೇಳಿದ್ದು, 2017 ರ ಜುಲೈ 7 ರಂದು ದುಷ್ಕರ್ಮಿಗಳ ದಾಳಿಗೆ ನನ್ನ ಮಗ ಬಲಿಯಾಗಿದ್ದ. ಬಿ ಸಿ ರೋಡ್ ನಲ್ಲಿರುವ ಉದಯ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿ ಬಾಗಿಲು ಹಾಕುವ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ನಡೆದಿದ್ದ ದಾಳಿಯದು. ಗಂಭೀರವಾಗಿ ಗಾಯಗೊಂಡಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಮಂಗಳೂರಿನ ಚಿಕಿತ್ಸೆಗೆ ದಾಖಲಾಗಿದ್ದ. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದ. ಇಂದಿಗೂ ಮಗನ ಸಾವಿಗೆ ನ್ಯಾಯ ದೊರೆತಿಲ್ಲ ಎಂದು ತಂದೆ ತನಿಯಪ್ಪ ಮಡಿವಾಳ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿಜೆಪಿ ಆಗಲಿ ಕಾಂಗ್ರೆಸ್ ಸರಕಾರ ವಾಗಲಿ ಈ ವರೆಗೂ ಕಟುಂಬಕ್ಕೆ ಒಂದು ಪೈಸೆ ಪರಿಹಾರ ನೀಡಿಲ್ಲ ನಮ್ಮ ಸಮಸ್ಯೆಗಳಿಗೆ ಕಷ್ಟಕ್ಕೆ ಯಾವ ಸರಕಾರವೂ ಸ್ಪಂದಿಸಿಲ್ಲ ನನ್ನ ಮಗನ ಪ್ರಕರಣ ದಲ್ಲಿ ಸರಿಯಾಗಿ ತನಿಖೆ ಆಗಿಲ್ಲ ಈ ಪ್ರಕರಣದ ತನಿಖೆ ಎನ್ ಐ ಎ ಗೆ ಅಥವಾ ಸಿ ಬಿ ಐ ಗೆ ವಹಿಸಬೇಕು. ಸರಕಾರ ಕುಟುಂಬಕ್ಕೆ ಈ ಕೂಡಲೆ ಪರಿಹಾರ ನೀಡಬೇಕು ಎಂದು ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಒತ್ತಾಯ ಮಾಡಿದ್ದಾರೆ.