ಕನ್ನಡ ಸುದ್ದಿ  /  Karnataka  /  Dakshina Kannada News Cyber Crime Called And Threatened In The Of Delhi Police Puttur Doctor Lost 16 Lakh Rupees Hsm

Dakshina Kannada News: ದೆಹಲಿ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ; 16 ಲಕ್ಷ ರೂಪಾಯಿ ಕಳೆದುಕೊಂಡ ಪುತ್ತೂರಿನ ವೈದ್ಯ

ಸೈಬರ್ ವಂಚಕರ ಕರೆಗೆ ಭಯಪಟ್ಟು ಪುತ್ತೂರಿನ ವೈದ್ಯರೊಬ್ಬರು ಬರೋಬ್ಬರಿ 16 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವೈದ್ಯನನ್ನ ಹೇಗೆ ವಂಚಿಸಿದ್ದಾರೆ ಅನ್ನೋದರ ವಿವರದ ಜೊತೆಗೆ ಜಿಲ್ಲೆಯ ಇತರೆ ಪ್ರಕರಣಗಳ ಸುದ್ದಿಯನ್ನೂ ಓದಿ. (ವರದಿ: ಹರೀಶ ಮಾಂಬಾಡಿ)

ಪೊಲೀಸರ ಹೆಸರಿನಲ್ಲಿ ಬಂದ ಕರೆಗೆ ಹೆದರಿ ವೈದ್ಯರೊಬ್ಬರು 16 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಪೊಲೀಸರ ಹೆಸರಿನಲ್ಲಿ ಬಂದ ಕರೆಗೆ ಹೆದರಿ ವೈದ್ಯರೊಬ್ಬರು 16 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಮಂಗಳೂರು: ಪುತ್ತೂರಿನ ವೈದ್ಯರೊಬ್ಬರು ಬೆದರಿಕೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬನ ಮಾತಿಗೆ ಕಟ್ಟುಬಿದ್ದು, 16 ಲಕ್ಷ ರೂಗಳನ್ನು ಕಳೆದುಕೊಂಡ ಘಟನೆ ನಡೆದಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೊಳುವಾರು ನಿವಾಸಿ ಡಾ. ಚಿದಂಬರ ಅಡಿಗ (69) ಹಣ ಕಳೆದುಕೊಂಡಿರುವ ಹಿರಿಯ ವೈದ್ಯರಾಗಿದ್ದಾರೆ. ಇವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡಾ. ಚಿದಂಬರ ಅಡಿಗ ಅವರ ದೂರವಾಣಿಗೆ ಮಾರ್ಚ್ 28ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದ್ದು, ಕರೆ ಸ್ವೀಕರಿಸಿ ಮಾತನಾಡಿದಾಗ, ಕರೆ ಮಾಡಿದ ವ್ಯಕ್ತಿಯು ನಾನು ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿ ತಿಳಿಸಿ, ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿ, ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಆಗಿದೆ ಎಂದುಹೇಳಿದ್ದಾನೆ.

ನೀವು ದೆಹಲಿಯ ಸಿಬಿಐ ಕೋರ್ಟ್‌ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್‌ಲೈನ್ ಮೂಲಕ ಕೋರ್ಟ್‌ನ ಕೇಸ್ ನಡೆಸುತ್ತೇವೆ. ನೀವು ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್‌ಗೆ ವರ್ಗಾವಣೆ ಮಾಡಬೇಕು. ನಿಮ್ಮ ಕೋರ್ಟ್ ಕೇಸ್ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ತಿಳಿಸಿ, ವೈದ್ಯರ ವಿರುದ್ದ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅವರ ಮೊಬೈಲ್ ಫೋನ್‌ನ ವಾಟ್ಸ್ ಆಪ್ ಗೆ ಕಳುಹಿಸಿದ್ದಾರೆ.

ಅಪರಿಚಿತನ ಮಾತನ್ನು ನಂಬಿ, ಗಾಬರಿಗೊಂಡು, ಬ್ಯಾಂಕ್ ಖಾತೆಯಿಂದ, RTGS ಮೂಲಕ ಅಪರಿಚಿತ ತಿಳಿಸಿದ ಬ್ಯಾಂಕ್ ಖಾತೆಗೆ 16,50,000 ರೂಪಾಯಿ ಹಣವನ್ನು ವೈದ್ಯರು ವರ್ಗಾವಣೆ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅದೇ ವ್ಯಕ್ತಿಯು ಕರೆಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ಅನುಮಾನ ಬಂದು ದೂರವಾಣಿ ಕರೆ ಕಡಿತಗೊಳಿಸಿದ್ದು, ತನ್ನ ಗೆಳೆಯರೊಂದಿಗೆ ಈ ಬಗ್ಗೆ ತಿಳಿಸಿದಾಗ ಆನ್‌ಲೈನ್ ಮೋಸದ ಕೃತ್ಯದ ಬಗ್ಗೆ ತಿಳಿದುಬಂದಿದೆ. ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಅ ಕ್ರ ನಂ :32-2024 ಕಲಂ:406,419, 420 ಐ ಪಿ ಸಿ ಮತ್ತು 66 ( C) ,66 ( D ) I T ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವುದು ಪೊಲೀಸ್ ತಪಾಸಣೆ ವೇಳೆ ಗೊತ್ತಾಗಿದೆ. ವೇಣೂರು- ನೈನಾಡು ಸಾರ್ವಜನಿಕ ರಸ್ತೆಯಲ್ಲಿ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಶೈಲ ಡಿ ಮುಗೋಡು ಹಾಗೂ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಗೂಡ್ಸ್‌ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ವಾಹನ ಚಾಲಕನು ವಾಹನವನ್ನು ನಿಲ್ಲಿಸದೆ ವೇಣೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದಾನೆ.

ಕೂಡಲೇ ಸಿಬ್ಬಂದಿಯೊಂದಿಗೆ ಜೀಪಿನಲ್ಲಿ ಹಿಂಬಾಲಿಸಿಕೊಂಡು ಸುಮಾರು ಅರ್ಧ ಕಿ.ಮೀ ದೂರ ಶಾಂತಿರೊಟ್ಟು ಎಂಬಲ್ಲಿಗೆ ತಲುಪಿದಾಗ, ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ವಾಹನದಿಂದ ಇಳಿದು ಗೇರುಗಿಡಗಳ ನಡುತೋಪಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ. ವಾಹನವನ್ನು ಪರಿಶೀಲಿಸಲಾಗಿ 4 ಜಾನುವಾರುಗಳನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಗಬೆಳ್ಳೂರು: ಪರವಾನಗಿ ಇಲ್ಲದೆ ಮರಳು ಸಾಗಾಟ ಪತ್ತೆ

ಬಂಟ್ವಾಳ ಬಡಗಬೆಳ್ಳೂರು ಗ್ರಾಮದ ಮಾಯಿಪಡ್ಕ ಎಂಬಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಶಿವಕುಮಾರ್ ಬಿ ಹಾಗೂ ಸಿಬ್ಬಂದಿ ಟಿಪ್ಪರ್ ಲಾರಿಯನ್ನು ತಪಾಸಣೆಗಾಗಿ ತಡೆದು ಪರಿಶೀಲಿಸಿದಾಗ, ಲಾರಿಯಲ್ಲಿ ಮರಳು ತುಂಬಿಸಿರುವುದು ಕಂಡುಬಂದಿದ್ದು, ಇದು ಪರವಾನಗಿರಹಿತ ಸಾಗಾಟವಾಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಲಾರಿ ಚಾಲಕ, ಮಾಲೀಕನಾಗಿರುವ ಶಶಿಧರ ಶೆಟ್ಟಿ ಎಂಬಾತನಲ್ಲಿ ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಸರಕಾರದ ಸೊತ್ತಾದ ಮರಳನ್ನು ಅಡ್ಡೂರು ಎಂಬಲ್ಲಿ ಹೊಳೆಯಿಂದ ಕಳವು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ‌ ಲಾರಿಯನ್ನು ಮರಳಿನೊಂದಿಗೆ ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

ಆಕಸ್ಮಿಕ ಬೆಂಕಿ ಕೂಲಿ ಕಾರ್ಮಿಕ ಮಹಿಳೆ ಮನೆ ಸಂಪೂರ್ಣ ಭಸ್ಮ

ಆಕಸ್ಮಿಕವಾಗಿ ಬೆಂಕಿ ತಗುಲಿ ಕೂಲಿ ಕಾರ್ಮಿಕ ಮಹಿಳೆಯೋರ್ವರ ಮನೆ ಸಂಪೂರ್ಣವಾಗಿ ಭಸ್ಮವಾದ ಘಟನೆ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲಿಯನಡುಗೋಡು ಎಂಬಲ್ಲಿ ನಡೆದಿದೆ. ಎಲಿಯನಡುಗೋಡು ಗ್ರಾಮದ ಉಪ್ಪಿರ ನಿವಾಸಿ ಮೋನಮ್ಮ ಎಂಬುವರ ಮನೆಗೆ ಬೆಂಕಿ ತಗುಲಿದ್ದು ಲಕ್ಷಾಂತರ ರೂ ಮೌಲ್ಯದ ಮನೆ ಸಂಪೂರ್ಣ ಭಸ್ಮವಾಗಿದೆ. ಅವರು ಇಬ್ಬರು ಮಕ್ಕಳ ಜೊತೆ ಗ್ರಾಮ ದೇವಸ್ಥಾನವಾದ ಪೂಂಜಾ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆಗೆ ತೆರಳಿದ್ದರು.

ಜಾತ್ರೆಯಿಂದ ವಾಪಸು ಮನೆಗೆ ಬಂದಾಗ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ರಾತ್ರಿ ವೇಳೆ ಹೊಗೆಯನ್ನು ಕಂಡ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನ ಮಾಡಿದ್ದಾರೆ. ಅದಾಗಲೇ ಬೆಂಕಿ ಮನೆಯನ್ನು ಆವರಿಸಿಕೊಂಡಿತ್ತು. ಮೋನಮ್ಮ ಅವರು ಬಡ ಕುಟುಂಬದ ಮಹಿಳೆಯಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ತಗಡಿನ ಮನೆಯಲ್ಲಿ ‌ವಾಸವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬಾಕೆ ಪದವಿ ವ್ಯಾಸಂಗ ಮಾಡುತ್ತಿದ್ದರೆ, ಇನ್ನೊಬ್ಬಳು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾದ ಪರಿಣಾಮ ಮನೆಯೊಳಗಿನ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿದೆ. ಪದವಿ ಕಾಲೇಜಿನ ವಿದ್ಯಾರ್ಥಿನಿಯ ಪರೀಕ್ಷೆ ಪ್ರವೇಶ ಪತ್ರ ಕೂಡ ಬೆಂಕಿಯಲ್ಲಿ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ. (ವರದಿ: ಹರೀಶ ಮಾಂಬಾಡಿ)

IPL_Entry_Point