Veerendra Heggade: ಧರ್ಮಸ್ಥಳದ ಮೇಲೆ ದ್ವೇಷವೇಕೆ; ನಮಗಂತೂ ಭಯವಿಲ್ಲ, ಸಿಬಿಐ ತನಿಖೆಯಾಗಲಿ: ಮೌನ ಮುರಿದ ವೀರೇಂದ್ರ ಹೆಗ್ಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  Veerendra Heggade: ಧರ್ಮಸ್ಥಳದ ಮೇಲೆ ದ್ವೇಷವೇಕೆ; ನಮಗಂತೂ ಭಯವಿಲ್ಲ, ಸಿಬಿಐ ತನಿಖೆಯಾಗಲಿ: ಮೌನ ಮುರಿದ ವೀರೇಂದ್ರ ಹೆಗ್ಗಡೆ

Veerendra Heggade: ಧರ್ಮಸ್ಥಳದ ಮೇಲೆ ದ್ವೇಷವೇಕೆ; ನಮಗಂತೂ ಭಯವಿಲ್ಲ, ಸಿಬಿಐ ತನಿಖೆಯಾಗಲಿ: ಮೌನ ಮುರಿದ ವೀರೇಂದ್ರ ಹೆಗ್ಗಡೆ

soujayna murder case ಸೌಜನ್ಯ ಹತ್ಯೆ ಪ್ರಕರಣದ ತೀರ್ಪಿನ ನಂತರ ಧರ್ಮಸ್ಥಳ( Dharmastala) ಕ್ಷೇತ್ರವನ್ನೂ ಎಳೆದು ತರುತ್ತಿರುವ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಯಾವುದೇ ತನಿಖೆಯಾಗಲಿ ಎಂದು ಹೇಳಿದ್ದಾರೆ. ಅವರು ಹೇಳಿದ್ದೇನು. ಇಲ್ಲಿದೆ ವಿವರ..

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ಕುರಿತಾದ ಅಪಪ್ರಚಾರಗಳ ಬಗ್ಗೆ ಮಾತನಾಡಿದ್ದಾರೆ.
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ಕುರಿತಾದ ಅಪಪ್ರಚಾರಗಳ ಬಗ್ಗೆ ಮಾತನಾಡಿದ್ದಾರೆ.

ಧರ್ಮಸ್ಥಳ: ಧರ್ಮಸ್ಥಳ ಕ್ಷೇತ್ರದ ಸಾಧನೆ ಕಂಡು ದ್ವೇಷ ಮಾಡುತ್ತಿರುವ ಕೆಲವರು ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ನಮಗಂತೂ ಯಾವುದೇ ಭಯವಿಲ್ಲ.ನೈತಿಕವಾಗಿ ಗಟ್ಟಿಯಾಗಿದ್ದೇವೆ. ಸಿಬಿಐ ಸಹಿತ ಯಾವುದೇ ತನಿಖೆಯನ್ನಾದರೂ ಮಾಡಿದರೂ ಅದನ್ನು ಸ್ವಾಗತಿಸುತ್ತೇವೆ.

ಇದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸ್ಪಷ್ಟ ಮಾತು. ಧರ್ಮಸ್ಥಳ ಸಮೀಪದಲ್ಲೇ ಯುವತಿ ಸೌಜನ್ಯ ಪ್ರಕರಣದಲ್ಲಿ ಶ್ರೀ ಕ್ಷೇತ್ರದ ಹೆಸರು ಥಳುಕು ಹಾಕಿಕೊಂಡಿರುವ ಜತೆಗೆ ಹೋರಾಟಗಳೂ ನಡೆಯುತ್ತಿರುವುದರಿಂದ ಅವರು ಬುಧವಾರ ಧರ್ಮಸ್ಥಳದ ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ಮುಕ್ತವಾಗಿಯೇ ಮಾತನಾಡಿದರು. ನೀವು ಇನ್ನು ಮೌನವಾಗಿರಬೇಡಿ. ನಿಮ್ಮ ಜತೆಗಿನ ಸಿಬ್ಬಂದಿಗಳು ಮುಕ್ತವಾಗಿ ಸತ್ಯವನ್ನು ಮಾತನಾಡಲು ಹೇಳಿ ಎಂದೂ ಹೆಗ್ಗಡೆ ಅವರು ಸಲಹೆ ನೀಡಿದರು.

ಕೆಲವರು ನಮ್ಮ ಮೌನವನ್ನೇ ದೌರ್ಬಲ್ಯ ಎಂದು ತಿಳಿದುಕೊಂಡು ಏನೇನೋ ಮಾತನಾಡುತ್ತಿದ್ಧಾರೆ. ಕ್ಷೇತ್ರದ ಬಗ್ಗೆ ಪುಕಾರುಗಳನ್ನು ಹಬ್ಬಿಸುತ್ತಿದ್ದಾರೆ. ನಾವು ಸುಮ್ಮನಿದ್ದೇವೆ ಎಂದರೆ ತಪ್ಪು ಮಾಡಿದ್ದೇವೆ ಎಂಬರ್ಥವಲ್ಲ. ನೈತಿಕವಾಗಿ ಗಟ್ಟಿಯಾಗಿದ್ದೇವೆ. ಸಂಭಾಷಣೆಗೆ ಅವಕಾಶ ಮಾಡಿಕೊಟ್ಟು ಅನಾಹುತಕ್ಕೆ ದಾರಿ ಮಾಡಿಕೊಡಬಾರದು ಎನ್ನುವುದು ನಮ್ಮ ಉದ್ದೇಶ. ನಮ್ಮ ಅಭಿಮಾನಿಗಳು ಏನನ್ನಾದರೂ ಮಾಡಲು ಸಿದ್ದರಿದ್ದಾರೆ. ಅದನ್ನು ಬೇಡ ಎಂದು ಹೇಳಿದ್ದೇವೆ ಎಂದು ಎದುರಾಳಿಗಳಿಗೆ ಮಾತಿನ ಚಾಟಿ ಬೀಸಿದರು.

ಧರ್ಮಸ್ಥಳ ಶ್ರೀಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಕ್ಷೇತ್ರದಲ್ಲಿ ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಒಳ್ಳೆಯ ಕೆಲಸ ಅನ್ನೋದು ಎರಡು ರೀತಿಯ ಕತ್ತಿ ಇದ್ದ ಹಾಗೆ. ಅದು ಎರಡೂ ಕಡೆಯಿಂದ ಕೊಯ್ತದೆ, ಪ್ರಚಾರದ ದೃಷ್ಟಿಯಲ್ಲಿ ಒಳ್ಳೆಯದು ಹಾಗೂ ದ್ವೇಷ ಕೂಡ ಉಂಟು ಮಾಡ್ತಾದೆ. ಈ ರೀತಿ ನಮ್ಮ ಒಳ್ಳೆಯ ಕೆಲಸಗಳೇ ನಮಗೆ ತೊಂದರೆ ಕೊಡುತ್ತಿವೆ.

ನಮಗೆ ಕೋಟ್ಯಂತರ ಅಭಿಮಾನಿಗಳ ಬಳಗ ಇದೆ. ಇದರಲ್ಲಿ ಕೆಲವರಿಗೆ ನಮ್ಮ ಸಾಧನೆ ನೋಡಿ ದ್ವೇಷ ಆಗಿದೆ. ಧರ್ಮಸ್ಥಳದ ಹೆಸರಲ್ಲಿ ಒಳ್ಳೆಯ ಕೆಲಸ ಆಗ್ತಿದೆ. ಯಾವುದನ್ನೇ ಮಾಡಿದರೂ ಇವರು ಯಶಸ್ವಿಯಾಗುತ್ತಾರಲ್ಲ ಎನ್ನುವ ದ್ವೇಷ, ಅಸೂಯೆ ಹಲವರಲ್ಲಿ ಹುಟ್ಟುಕೊಂಡಿದೆ. ಇದನ್ನೇ ಅಪಪ್ರಚಾರಕ್ಕೆ ಕೆಲವರು ಬಳಸುತ್ತಿದ್ಧಾರೆ ಎಂದು ಕಟು ಮಾತುಗಳಲ್ಲಿಯೇ ಟೀಕಿಸಿದರು.

ಈಗ ಕೆಲವರು ಮಾತನಾಡುವ ವಿಷಯಗಳು ನಮಗೆ ಸಂಬಂಧವೇ ಇಲ್ಲ. ಈ ವಿಚಾರದಲ್ಲಿ ತನಿಖೆ ಮಾಡಲು ಮೊದಲು ಸರ್ಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು. ಸಿಬಿಐಗೆ ಒಪ್ಪಿಸಿ ಅಂತ ಮುಖ್ಯಮಂತ್ರಿಗಳಿಗೆ ಹೇಳಿದ್ದು ನಾನೇ. ಅವರು ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ. ಅದರಿಂದ ನಮಗೆ ತೊಂದರೆ ಇಲ್ಲ. ಇದರ ಹಿಂದೆ ಅಮಾಯಕ ಹುಡುಗಿಯ ಸಾವಿನ ವಿಚಾರ ಇಲ್ಲ, ಕ್ಷೇತ್ರದ ವಿಚಾರ ಇದೆ ಎಂದು ಬೇಸರ ಹೊರ ಹಾಕಿದರು.

ನನಗೆ ಯಾವುದೇ ಭಯ, ಸಂಕೋಚ ಹಾಗೂ ಸಂದೇಹ ಇಲ್ಲ, ಶತೃತ್ವಕ್ಕೆ ಕಾರಣ ಏನು ಅನ್ನೋದೇ ನಮಗೆ ಇರೋ ಸಮಸ್ಯೆ. ಹಾಗಾಗಿ ನಮ್ಮ ಸಿಬ್ಬಂದಿಗಳಿಗೆ ಈ ಸತ್ಯ ಗೊತ್ತಿರಬಹುದು, ನಾವು ಯಾಕೆ ಸುಮ್ಮನಿದ್ದೇವೆ ಅಂತ ಅನಿಸಬಾರದು. ನಾವು ಸುಮ್ಮನಿರೋದು ಸಂಭಾಷಣೆ ಆರಂಭವಾಗಬಾರದು ಅಂತ ಎನ್ನುವುದನ್ನು ತಪ್ಪು ಅಭಿಪ್ರಾಯ ಮೂಡಿಸುವವರು ಅರಿಯಬೇಕು ಎಂದು ಹೆಗ್ಗಡೆ ಅಭಿಪ್ರಾಯಪಟ್ಟರು.

ನಮ್ಮ ಒಳ್ಳೆಯ ಕಾರ್ಯಗಳು‌ ನಡೆಯುತ್ತೆ, ಇದು ಮಧ್ಯದಲ್ಲಿ ಬಂದ ಮೋಡವಷ್ಟೇ. ಧರ್ಮಸ್ಥಳದ ಸಿಬ್ಬಂದಿ ಕಾರಣಕ್ಕೆ ಇಲ್ಲಿ ಎಲ್ಲವೂ ಚೆನ್ನಾಗಿದೆ. ಈ ಪರದೆ ತೆಗೀಬೇಕು, ಅದನ್ನ ದೇವರು ತೆಗೀತಾನೆ. ನಿಮ್ಮ ಶಿಸ್ತು ಮತ್ತು ನಿಯಮ ಬಿಡಬೇಡಿ, ನನಗೆ ಯಾವ ಭಯವೂ ಇಲ್ಲ. ನಾವು ಯಾರಿಗೂ ಯಾವ ಅನ್ಯಾಯಕ್ಕೂ ಸಹಕಾರ ಕೊಡಲ್ಲ. ವೈಯಕ್ತಿತ ಅವಮಾನ ಮತ್ತು ವೈಯಕ್ತಿಕ ಸಂಭಾಷಣೆ ಸರಿಯಲ್ಲ, ನಿಲ್ಲಿಸಬೇಕು. ನೀವೆಲ್ಲಾ ನಿಮ್ಮ ಸಿಬ್ಬಂದಿ ಕರೆದು ಈ ಬಗ್ಗೆ ಗಟ್ಟಿಯಾಗಿ ಹೇಳಿ ಎಂದು ಸಿಬ್ಬಂದಿಗಳಿಗೆ ಸಲಹೆ ನೀಡಿದರು.

ಅನೇಕರು ಬಂದು ಕಣ್ಣೀರು ಹಾಕ್ತಾ ಇದಾರೆ, ನಿಮಗೆ ಹೀಗಾದರೆ ಹೇಗೆ ತಡೆಯೋದು ಅಂತ. ಆದರೆ ಈಗ ಪ್ರೀತಿ ಮತ್ತು ದ್ವೇಷ ಯಾರಿಗಿದೆ ಅಂತ ಗೊತ್ತಾಗ್ತಿದೆ. ನಮ್ಮ ಆತ್ಮ ಮತ್ತು ವ್ಯವಹಾರ ಎಲ್ಲವೂ ಸ್ವಚ್ಛವಾಗಿದೆ. ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯವೇ ಇಲ್ಲ. ನಮ್ಮ ಅಭಿಮಾನಿಗಳು ಏನಾದ್ರೂ ಮಾಡಲಿಕ್ಕೆ ರೆಡಿ ಇದ್ದಾರೆ. ಆದರೆ ನಾನು ಏನೂ ಮಾಡಬೇಡಿ ಅಂದಿದ್ದೇನೆ, ನೈತಿಕ ಶಕ್ತಿ ದೊಡ್ಡದು ಅಂದಿದ್ದೇನೆ ಎಂದು ಮಾತು ಮುಗಿಸಿದರು.

Whats_app_banner