Ujire Rape-Murder Case: ಉಜಿರೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿ ದೋಷಮುಕ್ತ, ನೆನಪಿದೆಯಾ 11 ವರ್ಷಗಳ ಹಿಂದಿನ ಭೀಕರ ಕೇಸ್
Dharmasthala rape and murder case: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ 2012ರ ಅಕ್ಟೋಬರ್ 9ರಂದು ಕಾಣೆಯಾಗಿದ್ದಳು. ಮರುದಿನ ಮಧ್ಯಾಹ್ನದ ವೇಳೆ ನೇತ್ರಾವತಿ ಸ್ನಾನಘಟ್ಟದಿಂದ ಅನತಿ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಶವ ಸಿಕ್ಕಿತ್ತು.
ಮಂಗಳೂರು: 11 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಉಜಿರೆ ಸಮೀಪ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು (Ujire student rape and murder case). ಅದಾದ ಬಳಿಕ ಇಡೀ ಜಿಲ್ಲೆಯಲ್ಲಿ ಪ್ರತಿಭಟನೆಯ ಕಿಚ್ಚು ಹಬ್ಬಿತ್ತು. ಆರೋಪಿಗಳನ್ನು ನಿಷ್ಠುರವಾಗಿ ದಂಡಿಸಬೇಕು ಎಂಬ ಹಕ್ಕೊತ್ತಾಯವನ್ನು ಮಾಡಲಾಗಿತ್ತು. ಆ ಸಂದರ್ಭ ಪ್ರಕರಣಕ್ಕೆ ಸಂಬಂಧಿಸಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸಿಬಿಐ ತನಿಖೆ ನಡೆಯಿತು. ಇದೀಗ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪನ್ನು ಇಂದು (ಜೂನ್ 16, ಶುಕ್ರವಾರ) ರಂದು ಪ್ರಕಟಿಸಿದೆ. ಆರೋಪಿ ಸಂತೋಷ್ ರಾವ್ನನ್ನು ದೋಷಮುಕ್ತಗೊಳಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಪಿಬಿ ಇಂದು ತೀರ್ಪು ಪ್ರಕಟಿಸಿದ್ದಾರೆ. ಆರೋಪಿ ಎಂಬ ಶಂಕೆಯಲ್ಲಿ ಬಂಧಿಸಲಾಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿ ಸಂತೋಷ್ ರಾವ್ ವಿರುದ್ಧ ಸಲ್ಲಿಕೆಯಾದ ಸಾಕ್ಷಿ, ಆಧಾರಗಳಲ್ಲಿ ಕೊರತೆ ಇದೆ ಎಂಬ ಕಾರಣಕ್ಕೆ ಆತನನ್ನು ದೋಷಮುಕ್ತ ಮಾಡುವುದಾಗಿ ನ್ಯಾಯಮೂರ್ತಿ ಹೇಳಿದ್ದಾರೆ.
ಏನಿದು ಪ್ರಕರಣ?
ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ 2012ರ ಅಕ್ಟೋಬರ್ 9ರಂದು ಕಾಣೆಯಾಗಿದ್ದಳು. ಈ ಕುರಿತು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಕಾಲೇಜಿನಿಂದ ಮನೆಗೆ ಹೊರಟ ಧರ್ಮಸ್ಥಳ ಕ್ಷೇತ್ರ ಬಳಿಯ ಪಾಂಗಾಳದ ದಂಪತಿಯ ಪುತ್ರಿಗೆ ಆಗ 17 ವರ್ಷ. ರಾತ್ರಿಯಾದರೂ ಮನೆಗೆ ಬಾರದ ಮಗಳನ್ನು ಮನೆಯವರು ಇಡೀ ರಾತ್ರಿ ಹುಡುಕಿದರೂ ಸಿಗಲಿಲ್ಲ. ಮರುದಿನ ಬೆಳಗ್ಗೆಯೂ ಹುಡುಕಾಟ ಮುಂದುವರಿಸಿದರು. ಮಧ್ಯಾಹ್ನದ ವೇಳೆ ನೇತ್ರಾವತಿ ಸ್ನಾನಘಟ್ಟದಿಂದ ಅನತಿ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಶವ ಸಿಕ್ಕಿತು. ಮನೆಯಲ್ಲಿ ಹೊಸಅಕ್ಕಿ ಊಟವನ್ನು ನೆನೆದುಕೊಂಡು ಹೊರಟಿದ್ದ ಬಾಲೆ ದುರುಳರ ಕಾಮಪಿಪಾಸೆಗೆ ಬಲಿಯಾಗಿದ್ದಳು. ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.
ಈ ಸಂದರ್ಭ ಊರಿಗೆ ಊರೇ ರೊಚ್ಚಿಗೇಳಲು ಆರಂಭಿಸಿತು. ಅದೇ ಹೊತ್ತಿನಲ್ಲಿ ಬಾಹುಬಲಿ ಬೆಟ್ಟದ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಒಬ್ಬನನ್ನು ಹಿಡಿದು ಊರಿನವರು ಪೊಲೀಸರಿಗೆ ಒಪ್ಪಿಸಿದರು. ಈತನೇ ಕಾರ್ಕಳದ ಸಂತೋಷ್. ಇವನೇ ಆರೋಪಿ ಎಂದು ಪೊಲೀಸರು ನಿರ್ಧರಿಸಿ ತನಿಖೆ ಆರಂಭಿಸಿದ್ದರು. ತನಿಖೆ ಪೊಲೀಸರ ಕೈಯಿಂದ ಸಿಐಡಿ, ಸಿಐಡಿ ಕೈಯಿಂದ ಸಿಬಿಐವರೆಗೆ ಹೋಯಿತು. ಇದೀಗ ಸಂತೋಷ್ ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ.
ಕೊಲೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಲು ಸಾಲು ಪ್ರತಿಭಟನೆಗಳು ನಡೆದವು. ಕಾಲೇಜು ಸಮವಸ್ತ್ರದಲ್ಲಿಯೇ ಈಕೆಯನ್ನು ಕರೆದೊಯ್ದು ಬಲವಂತ ಮಾಡಿ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿತ್ತು. ಮೃತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಲು ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಭಟನೆ ನಡೆದರೆ, ಇನ್ನೊಂದೆಡೆ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆದವು.
ಪ್ರಕರಣ ನಡೆದುಬಂದ ಹಾದಿ:
2012ರ ಅಕ್ಟೋಬರ್ 9ರಂದು ಬಾಲಕಿ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಿಂದ ಮನೆಗೆ ಬರುವ ವೇಳೆ ನಾಪತ್ತೆಯಾಗಿದ್ದಳು. ಅದೇ ದಿನ ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಯಿತು. ಸತತ ಹುಡುಕಾಟದ ಬಳಿಕ ಮರುದಿನ ಮಧ್ಯಾಹ್ನ 12.30ರ ವೇಳೆ ಮಣ್ಣಸಂಕ ಎಂಬಲ್ಲಿ (ಧರ್ಮಸ್ಥಳ) ಆಕೆ ಶವ ಪತ್ತೆಯಾಗಿತ್ತು. ಅಕ್ಟೋಬರ್ 11ರಂದು ಸಂಜೆ ಸುಮಾರು 7 ಗಂಟೆ ವೇಳೆ ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹೌಸಿಂಗ್ ಕಾಲೊನಿ ನಿವಾಸಿ ಸಂತೋಷ್ ರಾವ್ (38)ನನ್ನು ಬಾಹುಬಲಿ ಬೆಟ್ಟದ ಗುಡ್ಡದಲ್ಲಿ ಸಾರ್ವಜನಿಕರು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಆತನನ್ನು ಮಂಗಳೂರು ಸಬ್ ಜೈಲಿಗೆ ಹಾಕಲಾಯಿತು. ಸತತ ಒತ್ತಡದ ಬಳಿಕ ತನಿಖೆ ಸಿಐಡಿಗೆ ಹಸ್ತಾಂತರಗೊಂಡಿತು. ನವೆಂಬರ್ 22ರಂದು ಸಿಐಡಿ ತನಿಖೆ ಆರಂಭಗೊಂಡಿತು.
2013ರ ನವೆಂಬರ್ ನಲ್ಲಿ ಸಿಐಡಿಯಿಂದ ತನಿಖೆ ಸಿಬಿಐಗೆ ವರ್ಗಾವಣೆಗೊಂಡಿತು. ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ, ಆರೋಪಿ ಸಂತೋಷ್ ರಾವ್ ವಿರುದ್ಧ 2017ಕ್ಕೆ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದರು. ಮಂಗಳೂರು ಸೆಷನ್ ಕೋರ್ಟ್ ನಲ್ಲಿ ಎರಡು ವರ್ಷ ವಿಚಾರಣೆ ಬಳಿಕ ಬೆಂಗಳೂರು 50ನೇ ಅಡಿಷನಲ್ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶರ ಕೋರ್ಟಿನಲ್ಲಿ ವಿಚಾರಣೆ ನಡೆಯಿತು. ಇದೇ ವೇಳೆ ಮೂವರು ಸಿಬಿಐ ಕೋರ್ಟ್ ಗೆ ವಕೀಲರ ಮೂಲಕ ಆರೋಪಮುಕ್ತಿಗೆ ಅರ್ಜಿ ಸಲ್ಲಿಸಿದರು. ಬಾಲಕಿಯ ತಂದೆ ಈ ಮೂವರ ವಿರುದ್ಧ ಪ್ರಕರಣ ದಾಖಲಿಸಲು ಕೋರಿದರೂ ಅರ್ಜಿ ವಜಾಗೊಂಡಿತು. ಇದೀಗ ಸಂತೋಷ್ ದೋಷಮುಕ್ತಗೊಂಡಿದ್ದಾನೆ. ಹಾಗಾದರೆ ಆಕೆಯನ್ನು ಹತ್ಯೆ ಮಾಡಿದವರು ಯಾರು ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು