ಧ್ವಜ ಕೆಳಗಿಳಿಸುವಾಗ ವಿದ್ಯುತ್ ಶಾಕ್, ಕಾಸರಗೋಡಿನಲ್ಲಿ ಧರ್ಮಗುರು ಸಾವು; ಉಡುಪಿಯಲ್ಲಿ ಮತ್ತೊಂದು ಆನ್‌ಲೈನ್ ಮೋಸ
Udupi Crime: ವಾಟ್ಸಾಪ್‌ಗೆ ಅಪರಿಚಿತ ನಂಬರ್ ಒಂದರಿಂದ ಆನ್‌ಲೈನ್ ಮಾರ್ಕೆಟಿಂಗ್ ಲಿಂಕ್ ಬಂದಿತ್ತು. ಅದನ್ನು ಕ್ಲಿಕ್ ಮಾಡಿದ ಅವರು ವಾಟ್ಸಾಪ್ ಗ್ರೂಪ್‌ಗೆ ಸೇರಿಕೊಂಡರು. ಅನಂತರ ಆ ಲಿಂಕ್ ಪ್ಲೇಸ್ಟೋರ್‌ಗೆ ರಿಡೈರೆಕ್ಟ್ ಮಾಡಿತ್ತು.
ಮಂಗಳೂರು: ರಾಷ್ಟ್ರಧ್ವಜವನ್ನು ಸ್ವಾತಂತ್ರ್ಯ ದಿನಾಚರಣೆಯ ಸಂಜೆ ಕೆಳಗಿಳಿಸುವ ಸಂದರ್ಭ ವಿದ್ಯುತ್ ಶಾಕ್‌ನಿಂದ ಇಗರ್ಜಿಯ ಧರ್ಮಗುರುವೊಬ್ಬರು ಸಾವನ್ನಪ್ಪಿದ್ದು, ಪಕ್ಕದಲ್ಲಿದ್ದ ಮತ್ತೋರ್ವರು ಗಂಭೀರ ಗಾಯಗೊಂಡ ಘಟನೆ ಆಗಸ್ಟ್ 15ರಂದು ಸಂಜೆ ನಡೆದಿದೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಇನ್ ಫೆಂಟ್ ಸೈಂಟ್ಸ್ ಜೀಸಸ್ ಇಗರ್ಜಿಯ ಫಾದರ್ ಶಿನ್ಸ್ (30) ಸಾವನ್ನಪ್ಪಿದವರು. ಆ.15ರಂದು ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಆರೋಹಣ ಮಾಡಿದ್ದ ರಾಷ್ಟ್ರಧ್ವಜವನ್ನು ಸಂಜೆ 6 ಗಂಟೆಗೆ ಕೆಳಗಿಳಿಸುವಾಗ ಘಟನೆ ನಡೆದಿದೆ.
ಗುರುವಾರ ಸಂಜೆ 6 ಗಂಟೆಗೆ ಮುಳ್ಳೇರಿಯಾದ ಇಗರ್ಜಿಗೆ ತಲುಪಿ, ರಾಷ್ಟ್ರಧ್ವಜವನ್ನು ಕೆಳಗೆ ಇಳಿಸುತ್ತಿದ್ದಾಗ, ರಾಷ್ಟ್ರಧ್ವಜಾರೋಹಣ ಮಾಡಿದ್ದ ಕಬ್ಬಿಣದ ದಂಡಕ್ಕೆ ಸಿಲುಕಿಕೊಂಡ ಧ್ವಜವನ್ನು ತೆಗೆಯಲು ಕಂಬವನ್ನು ಮೇಲಕ್ಕೆತ್ತಲಾಯಿತು. ಈ ಸಂದರ್ಭದಲ್ಲಿ ಕಬ್ಬಿಣದ ಪೈಪ್ ಹೈಟೆನ್ಶನ್ ತಂತಿಗೆ ಸ್ಪರ್ಶಿಸಿ, ವಿದ್ಯುತ್ ಪ್ರವಹಿಸಿತು. ಸಮೀಪದಲ್ಲಿದ್ದ ಮತ್ತೋರ್ವ ಫಾದರ್ ಸೈಬಿನ್ ಜೋಸೆಫ್ ಅವರಿಗೂ ವಿದ್ಯುತ್ ಶಾಕ್ ತಗಲಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಫಾ.ಶಿನ್ಸ್ ಸಾವನ್ನಪ್ಪಿದರು.
ಉಡುಪಿಯಲ್ಲಿ ಮತ್ತೊಂದು ಆನ್‌ಲೈನ್ ವಂಚನೆ ಪ್ರಕರಣ
ಉಡುಪಿಯಲ್ಲಿ ವೈದ್ಯರೊಬ್ಬರನ್ನು ವರ್ಚುವಲ್ ಬಂಧನ ಮಾಡಿ ಕೋಟಿಗಟ್ಟಲೆ ಹಣ ಸುಲಿಗೆ ಮಾಡಿದ ಆನ್‌ಲೈನ್ ದರೋಡೆ ಇನ್ನೂ ಹಸಿರಾಗಿರುವಾಗಲೇ, ಅಧಿಕ ಲಾಭಾಂಶದ ಆಸೆಯಿಂದ ಹಿರಿಯ ನಾಗರಿಕರೊಬ್ಬರು ಆನ್‌ಲೈನ್ ಮಾರ್ಕೆಟಿಂಗ್ ಲಿಂಕ್ ಮೂಲಕ ಲಕ್ಷಾಂತರ ರೂಪಾಯಿ ಕಳೆದುಕೊಂಡದ್ದು ಬೆಳಕಿಗೆ ಬಂದಿದೆ.
ಉಡುಪಿಯ ಟೆರೆನ್ಸ್ (60) ಅವರ ವಾಟ್ಸಾಪ್‌ಗೆ ಅಪರಿಚಿತ ನಂಬರ್ ಒಂದರಿಂದ ಆನ್‌ಲೈನ್ ಮಾರ್ಕೆಟಿಂಗ್ ಲಿಂಕ್ ಬಂದಿತ್ತು. ಅದನ್ನು ಕ್ಲಿಕ್ ಮಾಡಿದ ಅವರು ವಾಟ್ಸಾಪ್ ಗ್ರೂಪ್‌ಗೆ ಸೇರಿಕೊಂಡರು. ಅನಂತರ ಆ ಲಿಂಕ್ ಪ್ಲೇಸ್ಟೋರ್‌ಗೆ ರಿಡೈರೆಕ್ಟ್ ಮಾಡಿತ್ತು. ಅದರಲ್ಲಿ ಷೇರು ಖರೀದಿ ಮಾಡಿದರೆ, ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ. ಅದರಂತೆ ಟೆರೆನ್ಸ್ ಅವರು ಸುಮಾರು 1.5 ಲಕ್ಷ ರೂಗಳನ್ನು ಜುಲೈ 3ರಂದು ಹಾಗೂ ನಂತರದ ದಿನಗಳಲ್ಲಿ 24 ಸಾವಿರ ಸೇರಿ ಒಟ್ಟು 1.74 ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಆದರೆ ಇವರಿಗೆ 20 ಸಾವಿರ ರೂ ಮಾತ್ರ ಲಾಭಾಂಶ ಬಂದಿದೆ. ಉಳಿದ ಹಣ ಪಡೆಯಲು ಪ್ರಯತ್ನಿಸಿದಾಗ, ಮತ್ತೆ 1.5 ಲಕ್ಷ ಹಣ ಹಾಕಬೇಕು ಎಂದ ಸೂಚನೆ ಬಂದಿದ್ದು, ತನಗೆ ಮೋಸವಾಗಿದೆ ಎಂದು ಸೆನ್ ಠಾಣೆಗೆ ದೂರು ನೀಡಿದ್ದಾರೆ.
ಕಡಬ ರಕ್ಷಿತಾರಣ್ಯದಲ್ಲಿ ಅಸ್ಥಿಪಂಜರ ಪತ್ತೆ
ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಕೊಂಬಾರು ಗ್ರಾಮದ ಬೊಟ್ಯಡ್ಕ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಯಾರೋ ಕೊಲೆ ಮಾಡಿ ಎಸೆದಿರಬಹುದು ಅಥವಾ ಆತ್ಮಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಸುಮಾರು 4ರಿಂದ 6 ತಿಂಗಳ ಹಿಂದೆ ಈ ವ್ಯಕ್ತಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇದು ಪುರುಷನದ್ದೋ ಅಥವಾ ಮಹಿಳೆಯದ್ದೋ ಹಾಗೂ ಇತ್ಯಾದಿ ವಿವರಗಳು ಇನ್ನಷ್ಟೇ ತನಿಖೆಯಿಂದ ಬಯಲಾಗಬೇಕಿದೆ.
ಐಟಿ ಉದ್ಯೋಗದ ಆಮಿಷ ಬೆಳಕಿಗೆ, ದ.ಕ.ಜಿಲ್ಲೆಯ ಮೂವರ ರಕ್ಷಣೆ
ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗಕ್ಕೆಂದು ಕಾಂಬೋಡಿಯಾ ದೇಶಕ್ಕೆ ತೆರಳಿ, ಅಲ್ಲಿ ಸೈಬರ್ ವಂಚಕರ ಜಾಲದಲ್ಲಿ ಸಿಲುಕಿದ್ದ ಭಾರತದ 250 ಮಂದಿಯನ್ನು ವಿದೇಶಾಂಗ ಇಲಾಖೆ ಪತ್ತೆಹಚ್ಚಿ ರಕ್ಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಇದರಲ್ಲಿದ್ದಾರೆ. ಕೆಲ ತಿಂಗಳ ಹಿಂದೆ ಆಂದ್ರದ ಏಜಂಟ್ ಒಬ್ಬರ ಮೂಲಕ ಕಾಂಬೋಡಿಯಾಕ್ಕೆ ತೆರಳಿದ್ದರು. ಅಲ್ಲಿ ಐಟಿ ಉದ್ಯೋಗದ ನೆಪದಲ್ಲಿ ಸೈಬರ್ ವಂಚಕರ ಬಳಿ ಉದ್ಯೋಗಕ್ಕೆ ಇವರನ್ನು ಬಳಸಲಾಗುತ್ತಿತ್ತು. ನಕಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಗಳನ್ನು ಸೃಷ್ಟಿಸುವುದು, ಷೇರು ಮಾರುಕಟ್ಟೆಯಲ್ಲಿ ಕ್ರಿಪ್ಟೋದಲ್ಲಿ ಹೂಡಿಕೆ ನೆಪದಲ್ಲಿ ಭಾರತೀಯರಿಗೆ ಕರೆ ಮಾಡಿ ವಂಚಿಸುವ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಅಧಿಕಾರಿಯೋರ್ವರು ವಾಟ್ಸಪ್ ಸಂದೇಶ ನಂಬಿ 67 ಲಕ್ಷ ರೂ ಕಳಕೊಂಡಿದ್ದರು. ಆ ಕುರಿತು ಒಡಿಸಾದಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಪೊಲೀಸರು ವಂಚನಾಜಾಲದ ಬೆನ್ನು ಹತ್ತಿದಾಗ ಇಡೀ ಜಾಲದ ವಿವರ ದೊರಕಿತು. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 250 ಮಂದಿಯನ್ನು ರಕ್ಷಿಸಿದ್ದಾರೆ.