ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ: ಸಾಕ್ಷಿಗಳ ಕೊರತೆ, 12 ವರ್ಷಗಳ ಬಳಿಕ ಎಲ್ಲ ಆರೋಪಿಗಳ ಖುಲಾಸೆ
2012ರ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಇಂದು ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. (ವರದಿ: ಹರೀಶ್ ಮಾಂಬಾಡಿ)
ಮಂಗಳೂರು: 2012ರಲ್ಲಿ ಭಾರೀ ಸದ್ದು ಮಾಡಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನಲ್ಲಿ ಹನ್ನೆರಡು ವರ್ಷಗಳ ಹಿಂದೆ ನಡೆದಿದ್ದ ಹೋಂ ಸ್ಟೇ ದಾಳಿ ಪ್ರಕರಣ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿತ್ತು. ಪಾರ್ಟಿ ಆಯೋಜನೆಯಾಗಿದ್ದು, ಅದಕ್ಕೆ ಭಾಗಿಯಾಗಲು ಬಂದವರ ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ 44 ಮಂದಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು.
ಇದೀಗ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. 2012ರ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಇಂದು ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ತೀರ್ಪು ನೀಡಿದರು.
ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ದೋಷಮುಕ್ತರಾಗಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. 2012ರ ಜುಲೈ 28ರಂದು ಘಟನೆ ನಡೆದಿತ್ತು. ಸಂಘಟನೆಯೊಂದರ ಕಾರ್ಯಕರ್ತರು ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದರು. ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೂ ದಾಳಿ ನಡೆಸಲಾಗಿತ್ತು ಎಂದು ಮಂಗಳೂರು ಗ್ರಾಮಾಂತರ ಪೊಲೀಸರು 44 ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಹೋಂ ಸ್ಟೇ ಮೇಲಿನ ದಾಳಿ ಪ್ರಕರಣ ವಿವರ
ಜುಲೈ 28, 2012ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿ ಯುವಕ-ಯುವತಿಯರ ತಂಡ ಬರ್ತ್‌ಡೇ ಪಾರ್ಟಿಯೊಂದನ್ನು ಆಯೋಜಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದರು. ಘಟನೆ ಬಳಿಕ ಭಾರೀ ಚರ್ಚೆ, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ದಾಳಿಕೋರರು ಐವರು ಹುಡುಗಿಯರು ಸೇರಿದಂತೆ ಪಾರ್ಟಿಯಲ್ಲಿದ್ದ 12 ಮಂದಿಗೆ ಥಳಿಸಿ ಅಸಭ್ಯವಾಗಿ ವರ್ತಿಸಿದ್ದಾಗಿ ಆರೋಪಿಸಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಗ್ರಾಮಾಂತರ ಪೊಲೀಸರು 44 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 44 ಆರೋಪಿಗಳ ಪೈಕಿ ಮೂವರು ಈಗಾಗಲೇ ಸಾವಿಗೀಡಾಗಿದ್ದರೆ, ಇನ್ನೊಬ್ಬ ಆರೋಪಿಯನ್ನು ಪ್ರಕರಣದಿಂದ ಕೈ ಬಿಡಲಾಗಿತ್ತು. ಉಳಿದ ಆರೋಪಿಗಳನ್ನು ನ್ಯಾಯಾಲಯವೇ ಖುಲಾಸೆಗೊಳಿಸಿದೆ.
ಘಟನೆಯಲ್ಲಿ ಇಬ್ಬರು ಪತ್ರಕರ್ತರ ಹೆಸರನ್ನು ಕೂಡ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಕೊನೆಗೂ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಈ ಮೂಲಕ ಭಾರೀ ಸಂಚಲನ ಮೂಡಿಸಿದ ಪ್ರಕರಣವೊಂದಕ್ಕೆ 12 ವರ್ಷಗಳ ಬಳಿಕ ತೀರ್ಪು ಬಂದಿದೆ. ವಕೀಲರಾದ ಶಂಭು ಶರ್ಮ ಮತ್ತು ಕಿಶೋರ್ ಕುಮಾರ್ ಅವರನ್ನೊಳಗೊಂಡ ತಂಡವು ಆರೋಪಿಗಳ ಪರ ವಾದ ಮಂಡಿಸಿದ್ದರು.