Mangaluru Crime: ಮಹಿಳೆಯ ಅತ್ಯಾಚಾರ ಮಾಡಿ ಹತ್ಯೆಗೈದ ಅಪರಾಧಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಮಂಗಳೂರು ನ್ಯಾಯಾಲಯ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Crime: ಮಹಿಳೆಯ ಅತ್ಯಾಚಾರ ಮಾಡಿ ಹತ್ಯೆಗೈದ ಅಪರಾಧಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಮಂಗಳೂರು ನ್ಯಾಯಾಲಯ

Mangaluru Crime: ಮಹಿಳೆಯ ಅತ್ಯಾಚಾರ ಮಾಡಿ ಹತ್ಯೆಗೈದ ಅಪರಾಧಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಮಂಗಳೂರು ನ್ಯಾಯಾಲಯ

ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಳಿಕ ಮಹಿಳೆಯ ಕಿವಿಯೋಲೆ, ಮನೆಯಲ್ಲಿದ್ದ 18 ಸಾವಿರ ರೂಪಾಯಿಯನ್ನೂ ಆರೋಪಿಯು ದೋಚಿದ್ದ ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದರು.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಂಗಳೂರು: ಮನೆಗೆ ನುಗ್ಗಿ ಒಂಟಿ ಮಹಿಳೆಯನ್ನು ಅತ್ಯಾಚಾರ ಮಾಡಿ, ಹತ್ಯೆ ನಡೆಸಿರುವ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ. ಮಂಜೇಶ್ವರ ನಿವಾಸಿ ಮೊಹಮ್ಮದ್‌ ಅಶ್ರಫ್‌ (33) ಶಿಕ್ಷೆಗೊಳಗಾದ ಆಪರಾಧಿ. 2020ರ ಸೆ 24ರಂದು ಬೆಳಗ್ಗೆ 10 ಗಂಟೆಗೆ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಚಿಲಕ ಹಾಕಿ ಬಾತ್‌ರೂಮ್‌ನಲ್ಲಿ ಕ್ಲೀನ್‌ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ, ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಗಿ ಆರೋಪಿಸಲಾಗಿತ್ತು.

ಮೊಹಮ್ಮದ್‌ ಅಶ್ರಫ್‌ ಕೂಲಿ ಕೆಲಸ ಮಾಡಿಕೊಂಡಿದ್ದು, ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಈತ ಬಾಳೆಪುಣಿ ಗ್ರಾಮದ ಬೆಳ್ಕೆರಿಯಲ್ಲಿರುವ ಮಹಿಳೆ ಸಹೋದರನ ಮನೆಗೆ ತೋಟದ ಕೆಲಸಕ್ಕೆ ಹೋಗಿದ್ದ ಸಂದರ್ಭ ಮಹಿಳೆ ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ್ದನು. ಒಂದು ದಿನ ಬಾವಿಗೆ ಹೆಬ್ಬಾವು ಬಿದ್ದಿರುವುದನ್ನು ತೆಗೆಯಲು ಹೋದಾಗ ಆಕೆಯನ್ನು ಪರಿಚಯ ಮಾಡಿಕೊಂಡಿದ್ದನು. ಬಳಿಕ ಮಹಿಳೆಯನ್ನು ಅತ್ಯಾಚಾರಗೈಯುವ ಉದ್ದೇಶದಿಂದಲೇ 2020ರ ಸೆ 24ರಂದು ಬೆಳಗ್ಗೆ 10ಗಂಟೆಗೆ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಚಿಲಕ ಹಾಕಿದ್ದಾನೆ. ಈ ವೇಳೆ ಬಾತ್‌ರೂಮ್‌ನಲ್ಲಿ ಕ್ಲೀನ್‌ ಮಾಡುತ್ತಿದ್ದ ಮಹಿಳೆಯನ್ನು ಹಿಂದಿನಿಂದ ಬಿಗಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದ್ದಾನೆ. ಈ ವೇಳೆ ಆಕೆ ಪ್ರಜ್ಞಾಹೀನವಾಗಿ ಬಿದ್ದಿದಾಗ ಅತ್ಯಾಚಾರವೆಸಗಿದ್ದಾನೆ. ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.

ಆ ಬಳಿಕ ಮಹಿಳೆಯ ಕಿವಿಯೋಲೆ, ಮನೆಯಲ್ಲಿದ್ದ 18 ಸಾವಿರ ರೂ. ದೋಚಿದ್ದಾನೆ. ಅಲ್ಲದೆ ಮಹಿಳೆಯ ಮೈಮೇಲೆ ಬಟ್ಟೆಗಳನ್ನು ರಾಶಿ ಹಾಕಿ ಬೆಂಕಿ ಕೊಟ್ಟು ಸಾಕ್ಷ್ಯ ನಾಶ ಮಾಡಿದ್ದಾನೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಕೊಣಾಜೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು 2021ರ ಜುಲೈ 13ರಂದು ಬಂಧಿಸಿದ್ದರು.

ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್‌ ಆಯುಕ್ತ ರಂಜಿತ್‌ ಕುಮಾರ್‌ ಬಂಡಾರು ವಿಶೇಷ ತನಿಖಾಧಿಕಾರಿಯಾಗಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್‌.ವಿ. ವಿಚಾರಣೆ ನಡೆಸಿ ವಿವಿಧ ಐಪಿಸಿ ಸೆಕ್ಷನ್ ನಡಿಯಲ್ಲಿ ಕಠಿಣ ಕಾರಾಗೃಹ ಶಿಕ್ಷೆ, 3,01,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ನ್ಯಾಯಾಧೀಶರು ಅಪರಾಧಿಗೆ ಐಪಿಸಿ ಕಲಂ 302ರಡಿ ಕಠಿಣ ಜೀವಾವಧಿ ಶಿಕ್ಷೆ ಮತ್ತು 1 ಲ.ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ವರ್ಷ ಸಜೆ, ಕಲಂ 448ರಡಿ 1 ವರ್ಷ ಕಠಿಣ ಸಜೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಜೆ, ಕಲಂ 376ರಡಿ 10 ವರ್ಷ ಕಠಿಣ ಸಜೆ, 1 ಲ.ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ವರ್ಷ ಕಠಿಣ ಸಜೆ, ಕಲಂ 392ರಡಿ 10 ವರ್ಷ ಕಠಿಣ ಸಜೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಕಠಿಣ ಸಜೆ, ಕಲಂ 201ರಡಿ 7 ವರ್ಷ ಕಠಿನ ಸಜೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷ ದಂಡ ವಿಧಿಸಿದ್ದಾರೆ.

ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ವಿಶೇಷ ತನಿಖಾಧಿಕಾರಿಯಾಗಿದ್ದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಮತ್ತು ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner