Mangalore Rain: ಭಾರಿ ಮಳೆ, ರಸ್ತೆಯೇ ಹೊಳೆ, ವಾಹನ ಸವಾರರ ಪರದಾಟ ನೋಡಿ ರಸ್ತೆಯಲ್ಲೇ ಕುಳಿತ ಹೋಟೆಲ್ ಮಾಲೀಕ
Mangalore Rain News: ರಾಷ್ಟ್ರೀಯ ಹೆದ್ದಾರಿ 73 ರ ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಗಲೀಕರಣ ಕಾಮಗಾರಿ ಜನರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ ಎಂಬುದು ಸಾರ್ವಜನಿಕರ ದೂರು. ವಾಹನ ಸವಾರರು ರಸ್ತೆಯಲ್ಲಿ ಬೀಳುತ್ತಿರುವುದನ್ನು ಗಮನಿಸಿ ಉಜಿರೆಯ ಹೋಟೆಲ್ ಮಾಲಕರೋರ್ವರು ಏಕಾಂಗಿಯಾಗಿ ರಸ್ತೆ ಮಧ್ಯೆ ಕುಳಿತು ಹೋರಾಟ ನಡೆಸಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಅಲ್ಲಲ್ಲಿ ರಸ್ತೆ, ಹೆದ್ದಾರಿ ಕಾಮಗಾರಿಯೂ ನಡೆಯುತ್ತಿದ್ದು, ಅದೂ ಅಪೂರ್ಣವಾಗಿದೆ. ಹೀಗಾಗಿ ಮಳೆ ಬಂದರೆ, ರಸ್ತೆಯಿಡೀ ಹೊಳೆಯಂತಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 73 ರ ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಗಲೀಕರಣ ಕಾಮಗಾರಿ ಜನರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ ಎಂಬುದು ಸಾರ್ವಜನಿಕರ ದೂರು. ವಾಹನ ಸವಾರರು ರಸ್ತೆಯಲ್ಲಿ ಬೀಳುತ್ತಿರುವುದನ್ನು ಗಮನಿಸಿ ಉಜಿರೆಯ ಹೋಟೆಲ್ ಮಾಲಕರೋರ್ವರು ಏಕಾಂಗಿಯಾಗಿ ರಸ್ತೆ ಮಧ್ಯೆ ಕುಳಿತು ಹೋರಾಟ ನಡೆಸಿದ್ದಾರೆ.
ಮಂಗಳೂರು - ಚಾರ್ಮಾಡಿ ಘಾಟ್ ರಸ್ತೆ
ಇದು ಉಜಿರೆಯಿಂದ ಮುಂಡಾಜೆ ಸಾಗುವ ರಸ್ತೆ, ಬೆಳ್ತಂಗಡಿಯಿಂದ ಮುಂದಕ್ಕೆ ಕಾಶಿಬೆಟ್ಟು ಸಮೀಪ, ಮಡಂತ್ಯಾರಿಂದ ಮುಂದಕ್ಕೆ ಬರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಏರುಪೇರಾದರು ಬಿದ್ದು ಅನಾಹುತ ಸಂಭವಿಸುತ್ತಿದೆ. ಉಳಿದಂತೆ ಇತರ ವಾಹನ ಸವಾರರು ಈ ರಸ್ತೆಯ ಸಹವಾಸ ಬೇಡ ಎನ್ನುವಂತಾಗಿದೆ. ಉಜಿರೆಯಲ್ಲಿ ಹೆದ್ದಾರಿ ಕೆಸರುಮಯವಾದ ಪರಿಣಾಮ ಎರಡು ಮೂರು ದ್ವಿಚಕ್ರ ಸವಾರರು ಅಪಾಘಾತಕ್ಕೀಡಾಗಿದ್ದಾರೆ. ಚಾರ್ಮಾಡಿ ಮುಂಡಾಜೆಯಲ್ಲಂತೂ ಹೆದ್ದಾರಿ ರಸ್ತೆ ತೀವ್ರ ಹದಗೆಟ್ಟು ಸ್ಥಳೀಯ ಪ್ರವಾಸಿ ವಾಹನಗಳು ಪ್ರತಿನಿತ್ಯ ಪರದಾಡುವುದು ಮುಂದುವರಿದಿದೆ. ಮಳೆ ಬೀಳುತ್ತಿದ್ದಂತೆ ಅಗೆದು ಹಾಕಲಾದ ರಸ್ತೆಯಲ್ಲಿ ಹೊಂಡಗಳು ಕೆಸರು ನಿರ್ಮಾಣವಾಗುತ್ತಿದ್ದು, ಕೆಲವು ಕಡೆ ವಾಹನಗಳು ಕೂತು ಹೋಗಿ ಸಂಚಾರ ವ್ಯತ್ಯಯವು ಉಂಟಾಗುತ್ತಿದೆ. ಈ ಪರಿಸ್ಥಿತಿಯನ್ನು ನೋಡಿಯು ಕೈ ಕುಟ್ಟಿ ಕುಳಿತಿರುವ ಗುತ್ತಿಗೆದಾರ ಕಂಪೆನಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ
ಡಿಸಿ ಸೂಚನೆ ಕೊಟ್ಟರೂ ಪ್ರಯೋಜನವಿಲ್ಲ
ಕಳೆದ ವಾರ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಿಸಿರೋಡ್ ಬಿಂದ ಚಾರ್ಮಾಡಿವರೆಗೆ ರಸ್ತೆ ಸಮಸ್ಯೆ ಕುರಿತು ಪರಿಶೀಲಿಸಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ವಾರದೊಳಗೆ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ. ಆದರೆ ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಳ್ಳದೆ ರಸ್ತೆಯ ಕೆಸರನ್ನು ಒಂದಿಬ್ಬರು ಕಾರ್ಮಿಕರಿಂದ ಆಗಾಗ ತೆರವುಗೊಳಿಸುವುದು ಬಿಟ್ಟರೆ ಬೇರೆ ಏನನ್ನು ಮಾಡುತ್ತಿಲ್ಲವೆಂಬಂತೆ ಭಾಸವಾಗುತ್ತಿದೆ. ಇದರಿಂದ ರಸ್ತೆಯಲ್ಲಿ ಆಳವಾದ ಗುಂಡಿಗಳೇ ನಿರ್ಮಾಣವಾಗುತ್ತಿದ್ದು ವಾಹನ ಸವಾರರು ಮತ್ತಷ್ಟು ಪರದಾಟ ನಡೆಸುವುದು ಮುಂದುವರಿದಿದೆ. ಒಂದು ವಾರದೊಳಗೆ ರಸ್ತೆಯನ್ನು ಸಂಚಾರ ಯೋಗ್ಯ ಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿ ವಾರ ಎರಡು ಕಳೆದರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲ.
ಟ್ರಾಫಿಕ್ ಜಾಮ್
ಚಾರ್ಮಾಡಿ, ಮುಂಡಾಜೆ, ಉಜಿರೆ, ಕಾಶಿಬೆಟ್ಟು ಹಾಗೂ ಇತರೆಡೆ ಕೆಸರುಮಯ ರಸ್ತೆಯಿಂದ ನೀರು ನಿಂತು ರಸ್ತೆಯಲ್ಲಿ ಎಲ್ಲಿ ಸಂಚರಿಸಬೇಕೆಂಬ ಗೊಂದಲದಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಪರಿಣಾಮ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಬೇಸಿಗೆಯಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದು ಹಾಕಿದ್ದ ಬಳಿಕ ಮಳೆಗಾಲದ ಮುನ್ನ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಇಲ್ಲವೇ ತಾತ್ಕಾಲಿಕ ಡಾಮರೀಕರಣವಾದರೂ ಮಾಡಬೇಕಿತ್ತು. ಇದು ಯಾವುದೂ ಇಲ್ಲದೆ, ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯಲ್ಲೀ ನಿಲ್ಲುವುದರಿಂದ ದ್ವಿಚಕ್ರ ಸಹಿತ ತ್ರಿಚಕ್ರ, ಕಾರು ಚಾಲಕರಿಗೆ ಆಪತ್ತು ಎದುರಾಗಿದೆ.
ತಕ್ಷಣ ಸೂಕ್ತ ಕ್ರಮ ವಹಿಸಬೇಕು. ಇಲ್ಲವೇ ನಿರಂತರ ಹೋರಾಟ ನಡೆಸುವುದಾಗಿ ಉಜಿರೆ ಹೋಟೆಲ್ ಮಾಲೀಕ, ಪ್ರವೀಣ್ ಹಳ್ಳಿಮನೆ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
- ವರದಿ: ಹರೀಶ್ ಮಾಂಬಾಡಿ, ಮಂಗಳೂರು
