ಕನ್ನಡ ಸುದ್ದಿ  /  ಕರ್ನಾಟಕ  /  Crime News: ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಬೇಟೆ, ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ, 16 ಲಕ್ಷ ರೂ ಮೌಲ್ಯದ ಸೊತ್ತುಗಳು ವಶಕ್ಕೆ

Crime News: ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಬೇಟೆ, ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ, 16 ಲಕ್ಷ ರೂ ಮೌಲ್ಯದ ಸೊತ್ತುಗಳು ವಶಕ್ಕೆ

Mangaluru Crime News: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ನಿಷೇಧಿತ ಡ್ರಗ್ಸ್ ಎಂಡಿಎಂಎ ಮಾರುತ್ತಿದ್ದ ಇಬ್ಬರನ್ನು ಪತ್ತೆಹಚ್ಚಿ, ಅವರನ್ನು ಸೆರೆಹಿಡಿದಿದ್ದು, ಆರೋಪಿಗಳಿಂದ 16 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ
ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ನಿಷೇಧಿತ ಡ್ರಗ್ಸ್ ಎಂಡಿಎಂಎ ಮಾರುತ್ತಿದ್ದ ಇಬ್ಬರನ್ನು ಪತ್ತೆಹಚ್ಚಿ, ಅವರನ್ನು ಸೆರೆಹಿಡಿದಿದ್ದು, ಆರೋಪಿಗಳಿಂದ 16 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಂಗಳೂರು ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬೃಹತ್ ಪ್ರಮಾಣದಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ. ಉಳ್ಳಾಲ ದರ್ಗಾ ರೋಡ್ ನ ಬಸ್ತಿಪಡ್ಪು ನಿವಾಸಿ ಮೊಹಮ್ಮದ್ ಇಶಾನ್ (35) ಹಾಗೂ ಉಳ್ಳಾಲ ಟಿಸಿ ರೋಡ್ ಅಕ್ಕರೆಕೆರೆ ನಿವಾಸಿ ಜಾಫರ್ ಸಾಧಿಕ್ (35) ಬಂಧಿತ ಆರೋಪಿಗಳು.

ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿತರಿಂದ 9,00,000 ರೂ ಮೌಲ್ಯದ 407 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿತರಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ವಿವರ

407 ಗ್ರಾಂ MDMA ಮಾದಕ ವಸ್ತು 9,00,000 ರೂ, ಕಪ್ಪು ಬಣ್ಣದ ಟೊಯೋಟಾ ಕಂಪೆನಿಯ ಕ್ಯಾಂಬ್ರಿ ಕಾರು 6,00,000 ರೂ, ನೀಲಿ ಬಣ್ಣದ TECNO ಕಂಪೆನಿಯ ಮೊಬೈಲ್ ಫೋನ್ 10,000 ರೂ ಮೌಲ್ಯದ್ದು, ಬಿಳಿ ಬಣ್ಣದ REALME ಕಂಪೆನಿಯ REALME 11PRO ಮೊಬೈಲ್ ಫೋನ್ 30,000 ರೂ, ನೀಲಿ ಬಣ್ಣದ I PHONE ಕಂಪೆನಿಯ I PHONE 13 pro ಮೊಬೈಲ್ ಫೋನ್ 40,000 ರೂ, ಕಡು ನೀಲಿ ಬಣ್ಣದ NOKIA ಕಂಪೆನಿಯ ಮೊಬೈಲ್ ಫೋನ್ 1,000, ಡಿಜಿಟಲ್ ತೂಕ ಮಾಪನ, ನಗದು ರೂ ಹಣ 32,800 ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 16,13,800 ರೂ ಆಗಬಹುದು ಎಂದು ಅಂದಾಜಿಸಲಾಗಿದೆ.

ಆರೋಪಿತರಲ್ಲಿ ಜಾಫರ್ ಸಾದಿಕ್ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ, ಹಲ್ಲೆ ಹಾಗೂ ಕೊಲೆಯತ್ನ ಹಾಗೂ ಕೊಡಗು ಜಿಲ್ಲೆಯ ಕುಶಾಲ ನಗರ ಠಾಣೆಯಲ್ಲಿ ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತವೆ.

ಮೊಹಮ್ಮದ್ ಇಶಾನ್ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆಯಲ್ಲಿ MDMA ಮಾರಾಟ ಪ್ರಕರಣ ದಾಖಲಾಗಿರುತ್ತದೆ. ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿ ನೇತೃತ್ವದಲ್ಲಿ ಈ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿ ಪಾಲ್ಗೋಂಡಿದ್ದರು.

ಬಿ.ಸಿ.ರೋಡ್ ಸೇತುವೆಯಲ್ಲಿ ಅಪಘಾತ, ಟಿಪ್ಪರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವು

ಮಂಗಳೂರು: ವಾಹನಗಳ ಅನಿಯಂತ್ರಿತ ವೇಗದಿಂದ ಕಳೆದ ಕೆಲ ದಿನಗಳಿಂದ ತೀರಾ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಬಿ.ಸಿ.ರೋಡಿನ ಸೇತುವೆಯಲ್ಲಿ ಗುರುವಾರ ಟಿಪ್ಪರ್ ಡಿಕ್ಕಿಯಾಗಿ ಸ್ಕೂಟರ್ ಸವಾರನೋರ್ವ ಸಾವನ್ನಪ್ಪಿದ್ದಾರೆ.

ನರಿಕೊಂಬು ಗ್ರಾಮದ ಪೊಯಿತ್ತಾಜೆ ಎಂಬಲ್ಲಿನ ನಿವಾಸಿ ನರಿಕೊಂಬು ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಸುಬ್ಬಣ್ಣ ಭಂಡಾರಿ (68) ಅವರು ಸಾವನ್ನಪ್ಪಿದವರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದರು.

ಬಿ.ಸಿ.ರೋಡ್ ಅಡ್ಡಹೊಳೆ ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದಕ್ಕಾಗಿ ವಾಹನ ಸಂಚಾರದಲ್ಲಿ ದಿಡೀರ್ ಬದಲಾವಣೆಗಳು ನಡೆಯುತ್ತಿವೆ. ಈ ಸಂದರ್ಭ ಪೈಪೋಟಿಯಲ್ಲಿ ಸಾಗುವ ವಾಹನಗಳು ಒಂದೆಡೆಯಾದರೆ, ರಸ್ತೆಯ ಏರುತಗ್ಗುಗಳು ವಾಹನಗಳನ್ನು ಅದರಲ್ಲೂ ದ್ವಿಚಕ್ರ ವಾಹನಗಳನ್ನು ದಿಕ್ಕುತಪ್ಪಿಸುತ್ತವೆ. ಸುಬ್ಬಣ್ಣ ಭಂಡಾರಿ ಅವರು ಸ್ಕೂಟಿಯಲ್ಲಿ ಸಂಚರಿಸುತ್ತಿದ್ದು, ಅವರು ಸಾಗುತ್ತಿದ್ದಾಗ ಟಿಪ್ಪರ್ ಡಿಕ್ಕಿಯಾಗಿ ಆಯತಪ್ಪಿ ಬಿದ್ದು, ಅವರ ಮೇಲೆ ವಾಹನ ಹರಿದು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ವಾಹನವೂ ನಜ್ಜುಗುಜ್ಜಾಗಿದೆ. ಅಪಘಾತ ನಡೆದ ಸಂದರ್ಭ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬಂಟ್ವಾಳ ‌ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ವರದಿ: ಹರೀಶ್‌ ಮಾಂಬಾಡಿ)

IPL_Entry_Point