Mangaluru News: ಮುಂದುವರಿದ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ; ಎಂಡಿಎಂಎ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ ಮಂಗಳೂರು ಸಿಸಿಬಿ
ಮಂಗಳೂರಿನಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ಮುಂದುವರಿದಿದ್ದು ಎಂಡಿಎಂಎ ಮಾರಾಟಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮಂಗಳೂರು ಪೊಲೀಸರು ಟೆಂಪೊ ಟ್ರಾವೆಲರ್ ಕದ್ದೊಯ್ದ ಆರೋಪಿಗಳನ್ನು ಬೆಳಗಾವಿಯಲ್ಲಿ ಪತ್ತೆಹಚ್ಚಿದ್ದಾರೆ.

ಮಂಗಳೂರು: “ಡ್ರಗ್ಸ್ ಫ್ರಿ ಮಂಗಳೂರು”ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ (Methylene dioxy methamphetamine) MDMA ಎಂ.ಡಿ.ಎಂ.ಎ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮಂಗಳೂರು ನಗರದ ಉಳ್ಳಾಲಬೈಲ್ ಪರಿಸರದಲ್ಲಿ ವ್ಯಕ್ತಿಗಳಿಬ್ಬರು MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
ಟ್ರೆಂಡಿಂಗ್ ಸುದ್ದಿ
ಈ ಸಂದರ್ಭ ಉಳ್ಳಾಲ ಸುಭಾಷ್ ನಗರದ ಜಾಕೀರ್ (29) ಮತ್ತು ಫರಂಗಿಪೇಟೆ ವಳಚ್ಚಿಲ್ ಪದವು ನಿವಾಸಿ ಕಾರ್ತಿಕ್ ಸುವರ್ಣ (27) ಎಂಬಿಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಒಟ್ಟು 20 ಗ್ರಾಂ ತೂಕದ ರೂ. 1,00,000 -ಮೌಲ್ಯದ ಎಂಡಿಎಂಎ ಮಾದಕ ವಸ್ತು, ಹೊಂಡಾ ಅಕ್ಟಿವಾ ಸ್ಕೂಟರ್, ಮೊಬೈಲ್ ಫೋನ್ ಗಳು-2, ನಗದು ರೂ. 3300, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 2,15,000-ಆಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿಗಳ ಪೈಕಿ ಜಾಕೀರ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಾಗಿರುತ್ತದೆ. ಹಾಗೂ ಇನ್ನೋರ್ವ ಆರೋಪಿ ಕಾರ್ತಿಕ್ ಎಂಬಾತನ ವಿರುದ್ದ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ ದಾಖಲಾಗಿರುತ್ತದೆ.ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರವರಾದ ಅನುಪಮ್ ಅಗರ್ ವಾಲ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ನಡೆಸಿದ್ದರು.
ಟೆಂಪೊ ಟ್ರಾವೆಲರ್ ಕದ್ದೊಯ್ದ ಆರೋಪಿಗಳು ಬೆಳಗಾವಿಯಲ್ಲಿ ಸಿಕ್ಕಿಬಿದ್ದರು
ಮಂಗಳೂರಿನ ಊರ್ವ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಂಟಿಕಾನ ಫ್ಲೈಓವರ್ ಬಳಿಕ ಟೆಂಪೊ ಟ್ರಾವೆಲರ್ ಕಳವು ಮಾಡಿದ ಆರೋಪಿಗಳನ್ನು ಬೆಳಗಾವಿಯಲ್ಲಿ ಮಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳಾದ ಅರೀಫ್ ಉಲ್ಲಾಖಾನ್, ಅಮಿತ್ ಬಾಹುಬಲಿ ಪಂಚೋಡಿ ಮತ್ತು ಸುರೇಂದ್ರ ಕುಮಾರ್ ಎಂಬ ಮೂವರನ್ನು ವಶಕ್ಕೆ ಪಡೆದು ಕಳುವಾದ ಸುಮಾರು 15 ಲಕ್ಷ ರೂ ಮೌಲ್ಯದ ಟೆಂಪೋ ಟ್ರಾವೆಲ್ಲೆರ್ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸೆ.14ರಂದು ರಾತ್ರಿ ವಾಹನ ಪರ್ಕ್ ಮಾಡಿದ್ದು, ಸೆ.15ರ ಮಧ್ಯಾಹ್ನ ಕಾಣಸಿಗದಾಗ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆರೋಪಿಗಳ ಮತ್ತು ವಾಹನದ ಪತ್ತೆಗಾಗಿ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಆದೇಶದಂತೆ ಹಾಗೂ ಡಿಸಿಪಿ ಸಿದ್ದಾರ್ಥ್ ಗೋಯಲ್ ಮತ್ತು ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗದ ದಿನೇಶ್ ಕುಮಾರ್ ಮಾರ್ಗದರ್ಶನದಂತೆ ಹಾಗೂ ಎಸಿಪಿ ಕೇಂದ್ರ ಉಪ ವಿಭಾಗದ ಮಹೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಠಾಣಾ ನಿರೀಕ್ಷಕರಾದ ಭಾರತಿ ಜಿ ಸಾರಥ್ಯದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಉಪ ನಿರೀಕ್ಷಕರವಾದ ಹರೀಶ್ ಎಚ್ ವಿ, ಎಎಸ್ಐ ವಿನಯ್ ಕುಮಾರ್, ಎ ಎಸ್ ಐ ಉಲ್ಲಾಸ್ ಮಹಾಲೆ, ಪೊಲೀಸ್ ಸಿಬ್ಬಂದಿಗಳಾದ ಗಿರೀಶ್ ,ಭಾಸ್ಕರ್ ,ಅಭಿಷೇಕ್ , ಪ್ರಜ್ವಲ್ ಅವರು ಬೆಳಗಾವಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ವಿಟ್ಲದಲ್ಲಿ ಮಹಿಳೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಅರಬ್ ರಾಷ್ಟ್ರದಲ್ಲಿ
ವಿಟ್ಲದ ಪ್ರಕರಣವೊಂದರಲ್ಲಿ ಬೇಕಾಗಿದ್ದ ಆರೋಪಿ ಅರಬ್ ರಾಷ್ಟ್ರದಲ್ಲಿ ಕಂಡುಬಂದಿದ್ದಾನೆ. ಅಲ್ಲಿ ಹಣ ಕದ್ದ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಟ್ಲದ ಅಡ್ಡದಬೀದಿಯ ಮನೆಯಲ್ಲಿ ಸುಲೈಮಾನ್ ಅವರ ಪತ್ನಿ ಭಿಫಾತುಮಾ ಒಂಟಿಯಾಗಿದ್ದ ಸಂದರ್ಭ ವಿದ್ಯುತ್ ಬಿಲ್ ನೀಡುವ ನೆಪದಲ್ಲಿ ಮನೆಗೆ ನುಗ್ಗಿದ ಮೊಹಮ್ಮದ್ ಆಶ್ರಫ್ ಯಾನೆ ಸೆಂಟ್ ಆಶ್ರಫ್ ಇನ್ನೋರ್ವನ ಜತೆ ಸೇರಿ ಹಲ್ಲೆ ಮಾಡಿ ಪರಾರಿಯಾಗಿದ್ದ ಭೀಫಾತುಮ್ಮ ಗಂಭೀರ ಗಾಯಗೊಂಡಿದ್ದರು. ವಿಟ್ಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಇದೀಗ ಆತ ವಿದೇಶದಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಕೊಚ್ಚಿ ಮೂಲಕ ಅರಬ್ ರಾಷ್ಟ್ರಕ್ಕೆ ಪರಾರಿ
ಮೊಹಮ್ಮದ್ ಅಶ್ರಫ್ ಯಾನೆ ಸೆಂಟ್ ಅಶ್ರಫ್ ಹಲವಾರು ಕ್ರಿಮಿನಲ್ ಕೇಸ್‌ನಲ್ಲಿ, ಹಾಗೂ ಹಣ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಮಹಿಳೆಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಙತೆ ಎರಡು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಮೊಹಮ್ಮದ್ ಅಶ್ರಫ್ ಯಾನೆ ಸೆಂಟ್ ಅಶ್ರಫ್ ಕೊಚ್ಚಿ ಮೂಲಕ ಅರಬ್ ರಾಷ್ಟ್ರಕ್ಕೆ ಪರಾರಿಯಾಗಿದ್ದ.
ಚಾಳಿ ಬಿಟ್ಟಿರಲಿಲ್ಲ
ಅರಬ್ ರಾಷ್ಟ್ರದಲ್ಲೂ ಈತನ ಚಾಳಿ ಮುಂದುವರಿದಿತ್ತು. ವಿದೇಶಕ್ಕೆ ತೆರಳಿದ ಈತ ಅಲ್ಲೊಂದು ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಅಲ್ಲಿ ಕೇರಳ ಮೂಲದ ಯುವಕನ ಜೊತೆ ನಂಟು ಬೆಳೆಸಿಕೊಂಡ ಈತ ಸ್ಪಲ್ಪ ದಿನದ ಮಟ್ಟಿಗೆ ಉಳಿದುಕೊಳ್ಳಲು ಆತನಕೊಠಡಿಯಲ್ಲಿ ಅವಕಾಶ ಕೇಳಿದ್ದ. ತನ್ನವರು ಎನ್ನುವ ಅಭಿಮಾನ, ನಂಬಿಕೆಯ ಮೇಲೆ ಆತ ಅವಕಾಶ ನೀಡಿದ. ಆದರೆ ರೂಂಮೇಟ್ ಕೇರಳದ ಯುವಕನಿಗೆ ಈತ ನಂಬಿಕೆ ದ್ರೋಹ ಮಾಡಿದ ಕೇರಳದ ಯುವಕ ತನ್ನ ತಾಯ್ನಾಡಿಗೆ ಹಿಂದಿರುಗಲು ಸಿದ್ದವಾಗುತ್ತಿದ್ದ ವೇಳೆ ಸ್ನಾನಕ್ಕೆಂದು ತೆರಳಿದ್ದು, ಈ ವಿಷಯ ತಿಳಿದ ಅಶ್ರಫ್ ರೂಂ ಮೇಟ್ ಹುಡುಗ ಊರಿಗೆ ಕೊಂಡೊಯ್ಯಲು ಸೂಟ್ಕೇಸ್ ನಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿ ಅಲ್ಲಿಂದಲೂ ಪರಾರಿಯಾಗಿದ್ದ. ಊರಿನಿಂದ ಬಂದವ ಎಂದು ಆಸರೆ ಕೊಟ್ಟಿದ್ದ ಕೇರಳ ಮೂಲದ ಬಡಪಾಯಿ ಹುಡುಗ ತನ್ನ ನೋವನ್ನು ಹಂಚಿಕೊಂಡ ಆಡಿಯೋ ಮತ್ತು ಸೆಂಟ್ ಅಶ್ರಫ್ ನ ಐಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.