Mangaluru Crime: ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ, ಪ್ರತ್ಯೇಕ ಪ್ರಕರಣದಲ್ಲಿ ಮನೆಗೆ ನುಗ್ಗಿ ನಗ, ನಗದು ಕಳವು-dakshina kannada news mangaluru city crime court pronounce judgment in pocso case theft and murder case in mangalore ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Crime: ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ, ಪ್ರತ್ಯೇಕ ಪ್ರಕರಣದಲ್ಲಿ ಮನೆಗೆ ನುಗ್ಗಿ ನಗ, ನಗದು ಕಳವು

Mangaluru Crime: ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ, ಪ್ರತ್ಯೇಕ ಪ್ರಕರಣದಲ್ಲಿ ಮನೆಗೆ ನುಗ್ಗಿ ನಗ, ನಗದು ಕಳವು

ಮನೆಯವರು ಇಲ್ಲದ ವೇಳೆ ನಗ- ನಗದು ಕಳವು ಮಾಡಿದ ಘಟನೆ ಕೊಳ್ನಾಡು ಗ್ರಾಮದ ಅಗರಿಯಲ್ಲಿ ನಡೆದಿದೆ.ಮನೆಯನ್ನು ಕಾವಲು ಕಾಯುತ್ತಿದ್ದ ಎರಡು ಶ್ವಾನಗಳಲ್ಲಿ ಒಂದು ಶ್ವಾನ ಕಾಣೆಯಾಗಿದೆ. ಕಳ್ಳರು ನಾಯಿಯನ್ನೂ ಕೊಂದಿರಬಹುದೆಂದು ಶಂಕಿಸಲಾಗಿದೆ. (ವರದಿ: ಹರೀಶ್ ಮಾಂಬಾಡಿ)

ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ, ಪ್ರತ್ಯೇಕ ಪ್ರಕರಣದಲ್ಲಿ ಮನೆಗೆ ನುಗ್ಗಿ ನಗ, ನಗದು ಕಳವು
ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ, ಪ್ರತ್ಯೇಕ ಪ್ರಕರಣದಲ್ಲಿ ಮನೆಗೆ ನುಗ್ಗಿ ನಗ, ನಗದು ಕಳವು

ಮಂಗಳೂರು: ನಗರ ಹೊರವಲಯದ ಜೋಕಟ್ಟೆ ಎಂಬಲ್ಲಿ 13 ವರ್ಷದ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ ಮಾಡಲಾಗಿದೆ. ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು ಅವರ ಮನೆಯಲ್ಲಿ ಕಳೆದ 4 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈ ನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿದುಕೊಂಡಿದ್ದಳು. ಮಂಗಳವಾರ ಮನೆಯಲ್ಲಿರುವವರೆಲ್ಲಾ ಕೆಲಸಕ್ಕೆ ಹೋದ ನಂತರ ಸಮಯ ಸುಮಾರು ಬೆಳಗ್ಗೆ 10.30 ಗಂಟೆಗೆ ಬಾಲಕಿಯ ತಾಯಿಯು ಪಕ್ಕದ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಪೋನ್ ಕೊಡಲು ತಿಳಿಸಿದಾಗ ಪಕ್ಕದ ಮನೆಯವರು ಪೋನ್ ಕೊಡಲು ಬಾಲಕಿಯು ವಾಸವಿದ್ದ ಬಾಡಿಗೆ ಮನೆಗೆ ಬಂದರು.

ಈ ಸಂದರ್ಭ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಯಾರೋ ಕೊಲೆ ಮಾಡಿದ್ದಾರೆ ಎಂದು ಪಕ್ಕದ ಮನೆಯವರು ತಾಯಿಗೆ ಪೋನಿನಲ್ಲಿ ತಿಳಿಸಿದ್ದಾರೆ. ಕೂಡಲೇ ಮೃತ ಬಾಲಕಿಯ ತಾಯಿಯು ಹನುಮಂತನಿಗೆ ಪೋನ್ ಮೂಲಕ ಬಾಡಿಗೆ ಮನೆಗೆ ಹೋಗುವಂತೆ ತಿಳಿಸಿದ ಮೇರೆಗೆ ಹನುಮಂತನು ಬಾಡಿಗೆ ಮನೆಗೆ ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಣಂಬೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ ತನಿಖೆ ಮುಂದುವರೆದಿರುತ್ತದೆ. ಸ್ಥಳಕ್ಕೆ ಸಿಟಿ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್, ಉಪಾಯುಕ್ತ ದಿನೇಶ್ ಕುಮಾರ್, ಅಪರಾಧ ಮತ್ತು ಸಂಚಾರ , ಉತ್ತರ ಉಪ ವಿಭಾಗದ ಅಧಿಕಾರಿಗಳು ಮತ್ತು ಪಣಂಬೂರು ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ನಗ- ನಗದು ಕಳವು, ನಾಯಿಯೂ ಕಾಣೆ

ಮನೆಯವರು ಇಲ್ಲದ ವೇಳೆ ನಗ- ನಗದು ಕಳವು ಮಾಡಿದ ಘಟನೆ ಕೊಳ್ನಾಡು ಗ್ರಾಮದ ಅಗರಿಯಲ್ಲಿ ನಡೆದಿದೆ.ಮನೆಯನ್ನು ಕಾವಲು ಕಾಯುತ್ತಿದ್ದ ಎರಡು ಶ್ವಾನಗಳಲ್ಲಿ ಒಂದು ಶ್ವಾನ ಕಾಣೆಯಾಗಿದೆ. ಕಳ್ಳರು ನಾಯಿಯನ್ನೂ ಕೊಂದಿರಬಹುದೆಂದು ಶಂಕಿಸಲಾಗಿದೆ. ಮನೆಯ ಯಜಮಾನ ಜಗನ್ನಾಥ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಮನೆಯಲ್ಲಿ ಅವರ ಪತ್ನಿ ವಿಜಯಕುಮಾರಿ ಎರಡು ಮಕ್ಕಳ ಜತೆ ವಾಸಿಸುತ್ತಿದ್ದಾರೆ.

ಆ.4 ರಂದು ವಿಜಯಾ ಅವರು ಮಕ್ಕಳ ಜತೆ ಈಶ್ವರಮಂಗಲದ ಪಂಚೋಡಿಯಲ್ಲಿರು ತವರುಮನೆಗೆ ಹೋಗಿದ್ದರು.ಮರಳಿ ಮನೆಗೆ ಬಂದಾಗ ಕಳ್ಳರು ಮನೆಯ ಮುಂಬಾಗಿಲು ಒಡೆದು ಕವಾಟಿನಲ್ಲಿದ್ದ 34 ಗ್ರಾಂ ಚಿನ್ನದ ಆಭರಣ ಮತ್ತು ಆರು ಸಾವಿರ ರೂ ನಗದನ್ನು ದೋಚಿದ್ದು ಬೆಳಕಿಗೆ ಬಂದಿದೆ. ಕಳವಾದ ಸೊತ್ತುಗಳ‌ಒಟ್ಟು ಮೊತ್ತ 1,42,000ರೂ ಎಂದು ಅಂದಾಜಿಸಲಾಗಿದೆ. ವಿಜಯಕುಮಾರಿ ಅವರು ಪ್ರಕರಣದ ಕುರಿತು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಡಿಗೆ ಕರೆದುಕೊಂಡು ಹೋಗಿ ಅಪ್ರಾಪ್ತೆಯ ಅತ್ಯಾಚಾರ- ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ

ಕಾಡಿಗೆ ಕರೆದುಕೊಂಡು ಹೋಗಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಬೆಳ್ತಂಗಡಿ ತಾಲೂಕು ಕೊಕ್ರಾಡಿಯ ಯೋಗೀಶ (26) ಶಿಕ್ಷೆಗೊಳಗಾದ ಅಪರಾಧಿ 2020ರಲ್ಲಿ ಆರೋಪಿ ಬಾಲಕಿಯನ್ನು ಪುಸಲಾಯಿಸಿ ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಪರಿಣಾಮ ಬಾಲಕಿ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದಳು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾ‌ರ್ ಬಿ. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೊ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತ್ತು. 13 ಸಾಕ್ಷಿದಾರರನ್ನು ವಿಚಾರಿಸಿ 29 ದಾಖಲೆಗಳನ್ನು ಗುರುತಿಸಲಾಗಿತ್ತು. ಡಿಎನ್ಎ ವರದಿಗಳು, ಸಾಕ್ಷ್ಯ, ಪೂರಕ ಸಾಕ್ಷ್ಯಪರಿಗಣಿಸಿ ಹಾಗೂ ವಾದ ವಿವಾದ ಆಲಿಸಿದ ನ್ಯಾಯಾಲಯವು ಆರೋಪಿ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದೆ.

ನ್ಯಾಯಾಧೀಶರಾದ ಮಾನು ಕೆ.ಎಸ್‌. ಅವರು ಆರೋಪಿಗೆ ಭಾರತೀಯ ದಂಡ ಸಂಹಿತೆಯ ಕಲಂ 376 (2) (ಎನ್) ಮತ್ತು ಕಲಂ 6 ಪೊಕ್ಸೊ ಕಾಯ್ದೆಯಂತೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿದ್ದಾರೆ. ದಂಡದ ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ಆದೇಶಿಸಿದ್ದಾರೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 357 (ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆಯಡಿಯಲ್ಲಿ ನೊಂದ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 1,50,000 ರೂ ಹಾಗೂ ನೊಂದ ಬಾಲಕಿಯ ಮಗುವಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ವಾದಿಸಿದ್ದರು.