Dakshina Kannada Rain: ಕರಾವಳಿಯಲ್ಲಿ ಮಳೆ ಅಬ್ಬರ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಶಾಲಾ ಕಾಲೇಜಿಗೆ ರಜೆ, ರೆಡ್ ಅಲರ್ಟ್ ಘೋಷಣೆ
Karnataka Rain News: ನೆರೆಯ ಕಾಸರಗೋಡು ಮಾತ್ರವಲ್ಲದೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಬಿರುಸು ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರವೂ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಂಗಳೂರು: ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಷ್ಟೇ ಅಲ್ಲ, ಉತ್ತರ ಕನ್ನಡವೂ ಸೇರಿದಂತೆ ಸಂಪೂರ್ಣ ಕರ್ನಾಟಕ ಕರಾವಳಿಯಲ್ಲಿ ಮಳೆ ಬಿರುಸು ಪಡೆದಿದೆ. ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರವೂ (ಜುಲೈ 05) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆ ವ್ಯಾಪಕ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜುಲೈ 5ರಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ರಜೆ ಘೋಷಿಸಿದ್ದಾರೆ.
ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ ರಜೆ ನೀಡುವ ಬಗ್ಗೆ ಆಯಾ ತಾಲೂಕುಗಳ ತಹಶೀಲ್ದಾರ್ ಅವರ ನಿರ್ಧಾರಕ್ಕೆ ಬಿಡಲಾಗಿದೆ.
ಅಲರ್ಟ್ ಆಗಿರಿ, ನೀರಿನ ಬಳಿ ಹೋಗಬೇಡಿ
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸುವುದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇದ್ದು ವಿಪತ್ತು ನಿರ್ವಹಣೆಯನ್ನು ಮಾಡತಕ್ಕದ್ದು ಎಂದು ಸೂಚನೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ತೀರ ಹಾಗೂ ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.
ತುರ್ತು ಸೇವೆಗೆ ಕಂಟ್ರೋಲ್ ರೂಮ್ ತೆರೆಯಲಾಗಿದ್ದು 1077, 0824-2442590ಕ್ಕೆ ಯಾವುದೇ ಸಂದರ್ಭ ಕರೆ ಮಾಡಬಹುದು ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಗಡಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಮೀಪವೇ ಇರುವ ವಿದ್ಯುತ್ ಪೂರೈಕೆ ಮಾಡುವ ಹೈ ಟೆನ್ಷನ್ ವಯರನ್ನೊಳಗೊಂಡ ಟವರ್ ಬೀಳುವ ಸಾಧ್ಯತೆ ಇತ್ತು. ಅಪಾಯಕಾರಿ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಮಳೆಗೆ ಮಣ್ಣು ಜರಿದು ಬಿದ್ದು ಶಾಲೆ ಅಪಾಯವಾಗುವ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಬಿಇಒ ಸೂಚನೆಯಂತೆ ಶಾಲೆಗೆ ಸೋಮವಾರ ರಜೆ ನೀಡಲಾಗಿತ್ತು. ಬಳಿಕ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಯಿತು. ದೂರಿಗೆ ಸ್ಪಂದಿಸಿದ ಅಧಿಕಾರಿಗಳು,ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆ ವಹಿಸಿಕೊಂಡ ಕಂಪನಿಯವರನ್ನು ಕರೆಸಿ ಅವರ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಕಂಪನಿಯವರು ತಡೆಗೋಡೆ ಕಟ್ಟಿಕೊಡುವ ಭರವಸೆ ನೀಡಿದ್ದಲ್ಲದೆ ಕೂಡಲೇ ಕಾಮಗಾರಿ ಆರಂಭಿಸುವ ಬಗ್ಗೆ ತಿಳಿಸಿದ್ದರು. ಇದೀಗ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ.