ಕನ್ನಡ ಸುದ್ದಿ  /  Karnataka  /  Dakshina Kannada News Natural Rain Water Storage System Of Kalladka Dr Chandrashekhar In Bantwal Water Conservation Jra

Mangaluru News: ಎಲ್ಲರೂ ಮಳೆಗಾಗಿ ಕಾಯುತ್ತಾ ಕುಳಿತರೆ, ಡಾ ಚಂದ್ರಶೇಖರ್‌ ಕಳೆದ ವರ್ಷದ ಮಳೆ ನೀರನ್ನೇ ಉಪಯೋಗಿಸ್ತಾರೆ

Dr Chandrashekhar: ಬೆಂಗಳೂರಲ್ಲಿ ಮಳೆಯಾದರೂ ಮಂಗಳೂರು ಸುತ್ತಮುತ್ತ ಕುಡಿಯುವ ನೀರಿಗೆ ಅನುಕೂಲವಾಗುವಂಥ ಮಳೆಯಾಗಿಲ್ಲ. ಇಂತಹ ಸಮಯದಲ್ಲಿ ಇಲ್ಲೊಬ್ಬರು ಈ ಹಿಂದೆ ಧಾರಾಳವಾಗಿ ಮಳೆ ಬಂದಾಗ ಸಂಗ್ರಹಿಸಿಟ್ಟಿದ್ದ ನೀರನ್ನೇ ಉಪಯೋಗಿಸುತ್ತಿದ್ದು, ಮಾದರಿಯಾಗಿದ್ದಾರೆ. ಅವರ ಕುರಿತು ಎಚ್‌ಟಿ ಕನ್ನಡ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

ಡಾ.ಚಂದ್ರಶೇಖರ್
ಡಾ.ಚಂದ್ರಶೇಖರ್

ಮಂಗಳೂರು: “ನಾನು ಈ ಕುಡಿಯುವ ನೀರನ್ನು ಕಳೆದ ವರ್ಷ ಸಂಗ್ರಹಿಸಿಟ್ಟದ್ದು, ಇದು ಕೆಡುವುದಿಲ್ಲ. ಇದನ್ನು ಕುಡಿದ ಬಳಿಕ ಯಾವ ಸಮಸ್ಯೆಯೂ ಬಂದಿಲ್ಲ. ಸತತ 12 ವರ್ಷಗಳಿಂದ ಇದನ್ನು ಅನುಸರಿಸುತ್ತಿದ್ದೇನೆ. ನಮಗೆ ಲಭ್ಯವಾಗುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ, ಯಾವ ಬರಗಾಲವನ್ನೂ ನಾವು ದಿಟ್ಟವಾಗಿ ಎದುರಿಸಬಹುದು.”

ಹೀಗೆನ್ನುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ವೈದ್ಯ ವೃತ್ತಿ ಮಾಡುವ ಡಾ.ಚಂದ್ರಶೇಖರ್ ಅವರು ಜಲಸಾಕ್ಷರತೆಯ ಪಾಠ ಮಾಡಿದರು. ಅವರು ಮಾಡುತ್ತಿರುವುದು ಇಷ್ಟೇ. ಧಾರಾಕಾರವಾಗಿ ಮಳೆ ಬೀಳುವ ಸಂದರ್ಭ ಅದನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಅದನ್ನು ನೈಸರ್ಗಿಕ ವಿಧಾನದ ಮೂಲಕವೇ ಫಿಲ್ಟರ್ ಮಾಡುತ್ತಾರೆ. ಶುದ್ಧವಾದ ಬಳಿಕ ಅದನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಮಳೆಗಾಲ ಮುಗಿದ ನಂತರದ ನಾಲ್ಕೈದು ತಿಂಗಳು ಈ ಸಂಗ್ರಹಿತ ನೀರನ್ನೇ ಕುಡಿಯುತ್ತಾರೆ. ಅಡುಗೆ ಇತ್ಯಾದಿಗಳಿಗೂ ಇದೇ ನೀರು ಬಳಕೆಯಾಗುತ್ತದೆ.

ಇಂದು ಸರ್ಕಾರ ಯಾವ್ಯಾವ ಮೂಲಗಳಿಂದ ನೀರನ್ನು ಹಿಡಿದಿಟ್ಟುಕೊಳ್ಳಬಹುದು ಎಂಬ ಚಿಂತನೆಯಲ್ಲಿ ತೊಡಗಿದ್ದರೆ, ಡಾ. ಚಂದ್ರಶೇಖರ್ ಮತ್ತವರ ಪತ್ನಿ ಕಳೆದ ಹನ್ನೆರಡು ವರ್ಷಗಳಲ್ಲಿ ಮಳೆನೀರು ಸಂಗ್ರಹಿಸುವ ಮೂಲಕ ಹೀಗೂ ಜಲಾಂದೋಲನ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಜಲಸಂರಕ್ಷಣೆಯ ಈ ಮಾದರಿ ಅನುಕರಣೀಯ.

ಇನ್ನು ಘೋರ ಬರಗಾಲವಿದೆ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವುದರ ಬದಲು ಈ ರೀತಿಯ ಪ್ರಯೋಗಗಳನ್ನು ಮಾಡುವ ಮೂಲಕ ಸಾಮಾನ್ಯ ಜನರೂ ಜಲಸಾಕ್ಷರರಾಗಬಹುದು ಎಂಬುದಕ್ಕೆ ಕಲ್ಲಡ್ಕದ ಡಾ.ಚಂದ್ರಶೇಖರ್ ಮಾದರಿ. 12 ವರ್ಷಗಳಿಂದ ಈ ಪ್ರಯೋಗ ಯಶಸ್ವಿಯಾಗಿ ಮುನ್ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ.

ಕಲ್ಲಡ್ಕದಿಂದ ಉಪ್ಪಿನಂಗಡಿಗೆ ತೆರಳುವ ಮಾರ್ಗದ ಎಡಭಾಗದಲ್ಲಿ ಡಾ.ಚಂದ್ರಶೇಖರ್ ಅವರ ಮನೆ ಇದೆ. ಪತ್ನಿ ಸವಿತಾ ಜೊತೆ ವಾಸ. ಪತಿ, ಪತ್ನಿ ಇಬ್ಬರೂ ಜಲಾಂದೋಲನದಲ್ಲಿ ಆಸಕ್ತರು. ಅವರ ಮನೆಗೆ ಹೋದರೆ ಬಾಯಾರಿಕೆಗೆಂದು ಕೊಡುವ ನೀರು ಎಲ್ಲಾ ನೀರಿನಂತೆ ಸವಿಯಾಗಿರುತ್ತದೆ. ಹೊರಗೆ ನಲ್ಲಿಯಲ್ಲಿ ನೀರು ಬರುತ್ತದೋ ಎಂಬ ಆತಂಕ ಅವರಿಗಿಲ್ಲ, ಬಾವಿ ಬರಿದಾಯ್ತೋ ಎಂಬ ಚಿಂತೆಯೂ ಇಲ್ಲ.

ಹೇಗೆ ಶುರುವಾಯಿತು?

ನೇಲ್ಯಾರು ಗೋವಿಂದ ಭಟ್ಟರು ನನಗೆ ಪ್ರೇರಣೆ ಎನ್ನುತ್ತಾರೆ ಡಾ.ಚಂದ್ರಶೇಖರ್. ಅವರ ಮನೆಗೆ ಹೋಗಿದ್ದಾಗ, ಮಹಡಿಗೆ ಬೀಳುವ ನೀರನ್ನು ಸಂಗ್ರಹಿಸುವುದನ್ನು ಕಂಡಿದ್ದ ಚಂದ್ರಶೇಖರ್, ತನ್ನ ಮನೆಯಲ್ಲೂ ಯಾಕೆ ಈ ಪ್ರಯೋಗ ಮಾಡಬಾರದು ಅಂದುಕೊಂಡರು. ಹಾಗೆ ಪರಿಚಯದವರನ್ನು ಸಂಪರ್ಕಿಸಿ ಮಳೆ ನೀರು ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದರು. ಇದು ನಡೆದದ್ದು ಹನ್ನೆರಡು ವರ್ಷಗಳ ಹಿಂದೆ.

ನೈಸರ್ಗಿಕ ನೀರು ಸಂಗ್ರಹ ವ್ಯವಸ್ಥೆ
ನೈಸರ್ಗಿಕ ನೀರು ಸಂಗ್ರಹ ವ್ಯವಸ್ಥೆ

ಸಂಗ್ರಹ ಹೇಗೆ?

ಎಚ್‌ಟಿ ಕನ್ನಡ ಪ್ರತಿನಿಧಿ ಜೊತೆ ಅವರು ಜಲಸಂರಕ್ಷಣೆಯ ಕುರಿತು ಮಾತನಾಡಿ ತನ್ನ ನೀರು ಸಂಗ್ರಹದ ಕುರಿತು ಹೇಳಿದ್ದು ಹೀಗೆ. "ಮಳೆ ನೀರು ಸಂಗ್ರಹಿಸಬೇಕಾದರೆ ನೀರು ಬೀಳುವುದನ್ನು ಹಿಡಿದಿಟ್ಟುಕೊಳ್ಳಬೇಕು. ಹಾಗೆ ಮಾಡಲು ಸುಲಭ ವಿಧಾನ ಮನೆ ಮಹಡಿಯಿಂದ ಬೀಳುವ ನೀರು. ಮಳೆಗಾಲ ಆರಂಭದ ಮೊದಲ ವಾರ ಮಹಡಿಯಲ್ಲಿರುವ ಕೊಳೆಯೇ ನೀರಿನಲ್ಲಿರುತ್ತದೆ. ಅದಾದ ಬಳಿಕ ಸ್ವಚ್ಛ ನೀರು ದೊರಕಲು ಆರಂಭವಾಗುತ್ತದೆ."

"ಮಳೆ ನೀರು ಸಂಗ್ರಹಿಸುವುದು ಕಷ್ಟವೇನಲ್ಲ. ಇಲ್ಲಿರುವುದು ಮೂರೇ ಮೂರು ಸರಳ ಪ್ರಕ್ರಿಯೆಗಳು. ಮೊದಲನೆಯದ್ದು, ಮಹಡಿಯಲ್ಲಿ ಬಿದ್ದ ನೀರು ಪೈಪ್ ಮೂಲಕ ಕೆಳಗೆ ಬರುತ್ತದೆ. ಎರಡನೆಯ ಪ್ರಕ್ರಿಯೆ ನೀರು ಶುದ್ಧೀಕರಣ. ಶುದ್ಧೀಕರಣ ಹೀಗಿರುತ್ತದೆ. ಜಲ್ಲಿ, ಇದ್ದಿಲು, ಹೊಯ್ಗೆ ಮೂಲಕ ನೀರನ್ನು ಹಾಯಿಸಲಾಗುತ್ತದೆ. ಆ ನೀರಿನಲ್ಲಿ ಕಲ್ಮಶಗಳಿದ್ದರೆ ಅವೆಲ್ಲವೂ ಫಿಲ್ಟರ್ ಆಗುತ್ತದೆ. ಮೂರನೆಯದ್ದು, ಶುದ್ಧಗೊಂಡ ನೀರು ಟ್ಯಾಂಕ್‌ನೊಳಗೆ ಬಂದು ಸೇರುತ್ತದೆ."

ಡಾಕ್ಟರ್‌ ನೀರು ಸಂಗ್ರಹಿಸಲು ಕೂಡಾ ಇದೇ ವಿಧಾನ ಬಳಸಿಕೊಂಡರು. ತಮ್ಮ ಅನುಕೂಲಕ್ಕೆ ತಕ್ಕಂತೆ ಪೈಪ್ ಅಳವಡಿಸಿ, ಮಳೆ ನೀರನ್ನು ಹಾಯಿಸಿ, ಬಳಿಕ ಫಿಲ್ಟರ್ ಮಾಡುವ ವ್ಯವಸ್ಥೆ ಮಾಡಿದರು. ಅಲ್ಲಿಂದ ನೀರನ್ನು ಸಂಪ್ ಮಾದರಿಯ ಟ್ಯಾಂಕ್‌ನಲ್ಲಿ ಹಿಡಿದಿಟ್ಟರು. ಡಾ.ಚಂದ್ರಶೇಖರ್ ಮನೆಯಲ್ಲಿರುವ ನೀರು ಸಂಗ್ರಹದ ಟ್ಯಾಂಕಿ 10.5 ಅಡಿ ವ್ಯಾಸ ವಿಸ್ತೀರ್ಣದಲ್ಲಿದೆ. ನೆಲದಡಿಯಲ್ಲಿರುವ ಕಾರಣ ಜಾಗದ ಉಳಿತಾಯವೂ ಆಗುತ್ತದೆ. ಇಲ್ಲಿ ಬರೋಬ್ಬರಿ 26,000 ಲೀಟರ್ ನೀರು ಸಂಗ್ರಹವಾಗುತ್ತದೆ. ದಿನವೊಂದಕ್ಕೆ 50ರಿಂದ 60 ಲೀಟರ್ ನೀರು ನಮಗೆ ಬೇಕಾಗುತ್ತದೆ ಎನ್ನುತ್ತಾರೆ ಅವರು.

ಈ ನೀರನ್ನು ಕುಡಿಯಲು, ಅಡುಗೆ ಸಹಿತ ದಿನಬಳಕೆಗೆ ಉಪಯೋಗಿಸುತ್ತಾರೆ. ಸಿಮೆಂಟ್ ಬಳಸಿ ಮಾಡಿದ ಟ್ಯಾಂಕಿಯಾದ ಕಾರಣ, ಮೊದಲನೇ ವರ್ಷ ನೀರು ಕುಡಿಯುವಾಗ ಬದಲಾವಣೆ ಗೊತ್ತಾಗುತ್ತಿತ್ತು. ಆದರೆ ಎರಡನೇ ವರ್ಷದಿಂದ ಇದುವರೆಗೂ ನೀರಿನಿಂದಾಗಿ ನಮಗೆ ಯಾವುದೇ ತೊಂದರೆ ಆಗಲಿಲ್ಲ ಎನ್ನುತ್ತಾರೆ ವೈದ್ಯರು. ಜೂನ್ ತಿಂಗಳ ಮೊದಲ ವಾರದಿಂದ ಮಳೆನೀರು ಸಂಗ್ರಹ ಆರಂಭ. ಮೊದಲ ಕೆಲದಿನ ನೀರು ಸಂಗ್ರಹಿಸುವುದಿಲ್ಲ. ಮಳೆ ಸರಾಗವಾಗಿ ಬೀಳಲು ಆರಂಭವಾದೊಡನೆ ಸಂಗ್ರಹ ಶುರು. ಅಲ್ಲಿಂದ ಮಳೆಗಾಲ ಮುಗಿಯುವವರೆಗೆ ಅಂದರೆ ನವೆಂಬರ್‌ವರೆಗೂ ನೀರನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಶೇಖರಿಸಿದ ನೀರನ್ನು ಮುಂದಿನ ವರ್ಷ ಮೇವರೆಗೆ ಉಪಯೋಗಿಸುತ್ತೇವೆ. ಯಾವ ಸಮಸ್ಯೆಯೂ ಆಗಿಲ್ಲ ಎನ್ನುತ್ತಾರೆ ವೈದ್ಯರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point