ಕನ್ನಡ ಸುದ್ದಿ  /  Karnataka  /  Dakshina Kannada News No Water In Mangalore Netravati River, Water Crisis In Mangaluru, Karavali Karnataka Pcp

Dakshina Kannada News: ಹರಿವನ್ನೇ ಮರೆತ ನೇತ್ರಾವತಿ, ಕರಾವಳಿಯಲ್ಲಿ ಸೊರಗಿದ ಜೀವನದಿ, ಎಚ್‌ಟಿ ಕನ್ನಡ ವಿಶೇಷ ವರದಿ

Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ (Netravati river), ಅದನ್ನು ಸೇರಿಕೊಳ್ಳುವ ಕುಮಾರಧಾರಾ ಹಾಗೆಯೇ ಸಣ್ಣಪುಟ್ಟ ನದಿಗಳಾದ ಫಲ್ಗುಣಿ ಸಹಿತ ಜನರಿಗೆ ಕುಡಿಯಲು ನೀರೊದಗಿಸುವ ನದಿಯ ಸೆಲೆಗಳೇ ಬತ್ತಿಹೋಗಿವೆ. ಎಲ್ಲಿ ನೋಡಿದರೂ ಮಣ್ಣೇ ಕಾಣುತ್ತದೆ. ನದಿ ಹರಿಯುವುದನ್ನೇ ಮರೆತುಹೋಗಿದೆ ಎಂಬಂತಿದೆ.

Dakshina Kannada News: ಹರಿವನ್ನೇ ಮರೆತ ನೇತ್ರಾವತಿ, ಕರಾವಳಿಯಲ್ಲಿ ಸೊರಗಿದ ಜೀವನದಿ, ಎಚ್‌ಟಿ ಕನ್ನಡ ವಿಶೇಷ ವರದಿ
Dakshina Kannada News: ಹರಿವನ್ನೇ ಮರೆತ ನೇತ್ರಾವತಿ, ಕರಾವಳಿಯಲ್ಲಿ ಸೊರಗಿದ ಜೀವನದಿ, ಎಚ್‌ಟಿ ಕನ್ನಡ ವಿಶೇಷ ವರದಿ

ಮಂಗಳೂರು: ನೇತ್ರಾವತಿ ನದಿ ಹರಿಯುತ್ತಿಲ್ಲ. ಕುಮಾರಧಾರಾದಲ್ಲಿ ನೀರಿನ ಧಾರೆಯೇ ಇಲ್ಲ. ಫಲ್ಗುಣಿ ನದಿ ಸೊರಗಿ, ಮರುಭೂಮಿಯಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಹಾನಗರವಾದ ಮಂಗಳೂರು, ಶಿಕ್ಷಣಕಾಶಿ ಮೂಡುಬಿದಿರೆ, ಗಯಾಪದ ಕ್ಷೇತ್ರ ಎಂದು ಅಪರಕ್ರಿಯೆಗಳಿಗೆ ಪ್ರಸಿದ್ಧವಾದ ಸಂಗಮಕ್ಷೇತ್ರ ಉಪ್ಪಿನಂಗಡಿ, ಪ್ರಮುಖ ತೀರ್ಥಕ್ಷೇತ್ರವಾದ ಧರ್ಮಸ್ಥಳಗಳ ಸುತ್ತಮುತ್ತಲು ಇರುವ ನದಿಗಳೆಲ್ಲವೂ ಜೀವಕಳೆ ಕಳೆದುಕೊಂಡಿದೆ.

ಪಶ್ಚಿಮ ಘಟ್ಟದಲ್ಲಿ ನೇತ್ರಾವತಿ ಉಗಮವಾಗಿ ಹರಿಯುತ್ತಾ ಉಳ್ಳಾಲದಲ್ಲಿ ಕಡಲತೀರ ಸೇರುವವರೆಗೆ ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ರೈತಾಪಿ ಜನರು, ಪಟ್ಟಣ ಪ್ರದೇಶದ ಜನರಿಗೆ ನೀರೊದಗಿಸುವ ನೇತ್ರಾವತಿಯನ್ನು ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿ ಕೂಡಿಕೊಳ್ಳುತ್ತದೆ. ಇನ್ನೊಂದು ಕಡೆ ಮೂಡುಬಿದಿರೆ ಭಾಗಕ್ಕೆ ನೀರೊದಗಿಸುವ ಫಲ್ಗುಣಿ ನದಿ ಇದೆ. ಎಲ್ಲ ನದಿಗಳಲ್ಲೂ ಈಗ ನೀರಿಲ್ಲ.

ಮೂಡುಬಿದಿರೆ ಸಮಸ್ಯೆ

ಶಿಕ್ಷಣಕಾಶಿ ಎಂದೇ ಖ್ಯಾತವಾಗಿರುವ ಮೂಡುಬಿದಿರೆಯಲ್ಲಿ ಊರವರೊಂದಿಗೆ ವಿದ್ಯಾರ್ಥಿಗಳೂ ಬೆರೆತುಹೋಗಿದ್ದಾರೆ. ಸಾವಿರಾರು ಮಂದಿ ಇಲ್ಲಿದ್ದು, ಅವರಿಗೆ ಕುಡಿಯಲು ಪುಚ್ಚೆಮೊಗರು ವೆಂಟೆಡ್ ಡ್ಯಾಂ ಆಧಾರ. ಆದರೆ ಅಲ್ಲಿ ನೀರಿಲ್ಲ. ನಾಲ್ಕೈದು ದಿನಗಳಲ್ಲಿ ಮಳೆ ಬಂದು ಪವಾಡ ನಡೆದರೆ ಬಚಾವ್!! ಇಲ್ಲದಿದ್ದರೆ ಕಷ್ಟ.

ಉಪ್ಪಿನಂಗಡಿಯಲ್ಲಿ ಜಲಚರಗಳಿಗೂ ಸಮಸ್ಯೆ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸಾನಿಧ್ಯದಲ್ಲಿ ಪ್ರತಿದಿನ ಅಪರಕ್ರಿಯೆಗಳು ನಡೆಯುತ್ತವೆ. ಮೃತರಿಗೆ ಸದ್ಗತಿ ದೊರೆಯಲು ಇಲ್ಲಿ ಕ್ರಿಯೆಗಳನ್ನು ಮಾಡಿ ನೇತ್ರಾವತಿಗೆ ಪಿಂಡ ಬಿಡುವ ಕ್ರಮವಿದೆ. ಆದರೆ ಪಿಂಡ ಬಿಡಲು ಬಿಡಿ, ಅಲ್ಲಿರುವ ಮೀನುಗಳೂ ನೀರಿಲ್ಲದೆ ಸಾಯುತ್ತಿವೆ. ಅಳಿದುಳಿದ ಮೀನುಗಳನ್ನು ಇರುವ ನೀರಿನಲ್ಲಿ ಓಡಾಡುತ್ತಿವೆ. ನೇತ್ರಾವತಿಯ ಹೊಂಡ, ಗುಂಡಿಗಳಲ್ಲಿ ನೀರು ಕಾಣುತ್ತಿದೆ. ನದಿಯ ಮೂಲವನ್ನೇ ನಂಬಿದ ಕೃಷಿಕ ಇದರಿಂದ ಕಂಗಾಲಾಗಿದ್ದಾನೆ. ಅಂತರ್ಜಲ ಗಮನಾರ್ಹವಾಗಿ ಕುಸಿದಿದೆ. ಬಾವಿಗಳು ಬತ್ತಿಹೋಗುತ್ತಿವೆ. ಕೆರೆಗಳು ಖಾಲಿಯಾಗುತ್ತಿವೆ. ಹೊಸ ಕೊಳವೆ ಬಾವಿ ಮಾಡಿಸುವುದು ಕಾಸ್ಟ್ಲಿ ಆಗುತ್ತಿದೆ.

ಸಣ್ಣ ಗುಂಡಿಗಳಲ್ಲಿರುವ ನೀರೇ ಜಲಚರಗಳಿಗೆ ಆಶ್ರಯ
ಸಣ್ಣ ಗುಂಡಿಗಳಲ್ಲಿರುವ ನೀರೇ ಜಲಚರಗಳಿಗೆ ಆಶ್ರಯ

ಹೆದ್ದಾರಿ ಕಾಮಗಾರಿಗೂ ತೊಂದರೆ

ಮಂಗಳೂರು ಬೆಂಗಳೂರು ಭಾಗದಲ್ಲಿ ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಸಂದರ್ಭ ಕೆಲಸ ಕಾರ್ಯಗಳಿಗೆ ನೀರು ಬೇಕೇ ಬೇಕು. ಇದುವರೆಗೂ ನೇತ್ರಾವತಿ ನದಿಯನ್ನು ಕಾಮಗಾರಿ ಕಂಪನಿಗಳು ಆಶ್ರಯಿಸುತ್ತಿದ್ದವು. ಆದರೆ ನದಿಯಲ್ಲಿ ನೀರಿಲ್ಲದಿರುವುದು ಕಾಮಗಾರಿಗೂ ತೊಂದರೆ ಉಂಟುಮಾಡುತ್ತಿದೆ. ಒಂದೆಡೆ ಬಿ.ಸಿ.ರೋಡ್ ಹಾಸನ ರಸ್ತೆಯುದ್ಧಕ್ಕೂ ಧೂಳು ಎದ್ದು ಸಾರ್ವಜನಿಕರ ಬೈಗುಳ, ಇನ್ನೊಂದೆಡೆ ನೀರಿಲ್ಲದೆ ಕೆಲಸವಾಗದೆ ಪರದಾಟ. ಇಂಥ ಸನ್ನಿವೇಶದಲ್ಲಿ ಗುತ್ತಿಗೆ ವಹಿಸಿಕೊಂಡ ಕಂಪನಿ ಹೈರಾಣಾಗಿದೆ.

ಕೈಗಾರಿಕೆ, ಕೃಷಿಗೆ ಸಂಕಷ್ಟ

ಮಂಗಳೂರಿನ ಹಲವು ಕಂಪನಿಗಳಿಗೆ ನದಿ ನೀರೂ ಮೂಲಾಧಾರವಾಗಿದೆ. ನೀರನ್ನೇ ಆಶ್ರಯಿಸಿ ಕೆಲಸ ಮಾಡುವ ಕಂಪನಿಗಳು ಈಗ ತೊಂದರೆ ಅನುಭವಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬೆಳೆಯಾದ ಅಡಕೆ, ತೆಂಗು ಬೆಳೆಗಾರರು ನೀರಿನ ಆಶ್ರಯವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ.

ಈ ನೀರೇ ಪಕ್ಕದ ಗ್ರಾಮಗಳಿಗೆ ಕುಡಿಯಲು ಉಪಯೋಗಿ.
ಈ ನೀರೇ ಪಕ್ಕದ ಗ್ರಾಮಗಳಿಗೆ ಕುಡಿಯಲು ಉಪಯೋಗಿ.

ನೀರಿಂಗಿಸುವಿಕೆ ಪಾಠಕ್ಕೆ ಮಾತ್ರ

ಕುಡಿಯುವ ನೀರಿನ ಕೊರತೆ ಉಂಟಾದಾಗ ನೀರಿಂಗಿಸುವಿಕೆಯ ಪಾಠ ನೆನಪಾಗುತ್ತದೆ. ಧಾರಾಕಾರ ಮಳೆ ಬಂದು ಪ್ರವಾಹ ಉಂಟಾದಾಗ ಅದೆಲ್ಲಾ ಮರೆತುಹೋಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯನ್ನು ನೋಡಿದ ಜಿ.ಶಂ.ಪರಮಶಿವಯ್ಯ ಎಂಬವರು ಇಲ್ಲಿ ಮಳೆ ರಾಶಿಯಾಗಿ ಬಿದ್ದು ನದಿ, ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತದೆ, ಹೀಗಾಗಿ ಅದೆಷ್ಟೋ ಟಿಎಂಸಿ ನೀರು ವೇಸ್ಟ್ ಆಗಿ ಸಮುದ್ರ ಸೇರುತ್ತದೆ. ಅದರ ಬದಲಿ ನದಿಯ ಪಾತ್ರವನ್ನೇ ಬದಲಾಯಿಸಿದರೆ ಒಳ್ಳೆಯದು ಎಂದು ಎತ್ತಿನಹೊಳೆ ಯೋಜನೆಯನ್ನು ಶಿಫಾರಸು ಮಾಡಿದ್ದರು. ಅತ್ತ ಎತ್ತಿನಹೊಳೆ ಯೋಜನೆಯೂ ಸರಿಯಾಗಲಿಲ್ಲ, ಇತ್ತ ನದಿಯಲ್ಲೂ ನೀರಿಲ್ಲ.

ಮಂಗಳೂರಲ್ಲಿ ಹಾಹಾಕಾರ

ಕುಡಿಯುವ ನೀರಿನ ಜೊತೆಗೆ ಕಾಮಗಾರಿಯ ನೆಪವೊಡ್ಡಿ ಮಂಗಳೂರಿನಲ್ಲಿ ನೀರಿನ ಸರಬರಾಜಿನಲ್ಲಿ ಈಗ ವ್ಯತ್ಯಯವಾಗಿದೆ. ಇನ್ನು ಹತ್ತು ದಿನಗಳಲ್ಲಿ ಚುನಾವಣೆ. ಅದು ಮುಗಿದ ಬಳಿಕ ಆ ಸಮಯದಲ್ಲೂ ಮಳೆ ಬಾರದಿದ್ದರೆ, ರೇಷನಿಂಗ್ ಅನಿವಾರ್ಯವಾಗಲಿದೆ. ಸನ್ನಿವೇಶವೂ ಬಿಗಡಾಯಿಸಲಿದೆ.

ವರದಿ: ಹರೀಶ ಮಾಂಬಾಡಿ