Mangaluru news: ಮಂಗಳೂರು ಸಿಟಿ ಕಮಿಷನರ್ರಿಂದ ಫೋನ್ ಇನ್ ಆರಂಭ; ಸಾರ್ವಜನಿಕರಿಂದ ಉತ್ತಮ ರೆಸ್ಪಾನ್ಸ್
ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಸಲ್ಲಿಸಿರುವ ದೂರುಗಳ ಪೈಕಿ ಕೂಳೂರು ವಿ.ಅರ್.ಎಲ್ ಕಚೇರಿ ಎದುರುಗಡೆ ಇರುವ ವೆಲ್ಡಿಂಗ್ ಗ್ಯಾರೇಜ್ ನಲ್ಲಿ ವಾಹನಗಳನ್ನು ರಸ್ತೆ ಬದಿಯಲ್ಲಿಟ್ಟು ರಿಪೇರಿ ಮಾಡುತ್ತಿರುವ ಬಗ್ಗೆ ತಿಳಿಸಿದ್ದು ಈ ಕುರಿತು ರಸ್ತೆ ಬದಿಯಲ್ಲಿರುವ ವಾಹನಗಳನ್ನು ತೆರವುಗೊಳಿಸಿ ಗ್ಯಾರೇಜ್ ಮಾಲಿಕರಿಗೆ ರಸ್ತೆಯಲ್ಲಿ ವಾಹನಗಳನ್ನು ಇಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ.
ಮಂಗಳೂರು: ಮಂಗಳೂರು ಸಿಟಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮತ್ತೆ ಆಯುಕ್ತರ ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಪೋನ್ ಇನ್ ಕಾರ್ಯಕ್ರಮ ಆರಂಭವಾಗಿದೆ. ಶನಿವಾರ (ಜೂನ್ 3) ಅವರು ಈ ಪೋನ್ ಇನ್ ಕಾರ್ಯಕ್ರಮ ಆರಂಭಿಸಿದ್ದು, ಇನ್ನು ಮುಂದೆ ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ನಡೆಯಲಿದೆ.
ಎಷ್ಟು ಕಾಲ್ ಬಂತು?
ಶನಿವಾರ (ಜೂನ್ 3) ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 26 ಫೋನ್ ಕರೆಗಳನ್ನು ಸ್ವೀಕರಿಸಲಾಗಿದ್ದು 16 ಕರೆಗಳು ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿರುವ ಕರೆಗಳಾಗಿದ್ದವು. ತುರ್ತಾಗಿ ಕ್ರಮಕೈಗೊಳ್ಳಬೇಕಾದ ವಿಚಾರಗಳ ಕುರಿತು ಕ್ರಮಗಳನ್ನು ಕೈಗೊಳ್ಳಲಾಯಿತು.
ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಸಲ್ಲಿಸಿರುವ ದೂರುಗಳ ಪೈಕಿ ಕೂಳೂರು ವಿ.ಅರ್.ಎಲ್ ಕಚೇರಿ ಎದುರುಗಡೆ ಇರುವ ವೆಲ್ಡಿಂಗ್ ಗ್ಯಾರೇಜ್ ನಲ್ಲಿ ವಾಹನಗಳನ್ನು ರಸ್ತೆ ಬದಿಯಲ್ಲಿಟ್ಟು ರಿಪೇರಿ ಮಾಡುತ್ತಿರುವ ಬಗ್ಗೆ ತಿಳಿಸಿದ್ದು ಈ ಕುರಿತು ರಸ್ತೆ ಬದಿಯಲ್ಲಿರುವ ವಾಹನಗಳನ್ನು ತೆರವುಗೊಳಿಸಿ ಗ್ಯಾರೇಜ್ ಮಾಲಿಕರಿಗೆ ರಸ್ತೆಯಲ್ಲಿ ವಾಹನಗಳನ್ನು ಇಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ.
ಸುರತ್ಕಲ್ ಎಂ.ಆರ್.ಪಿ.ಎಲ್ ರಸ್ತೆಯಲ್ಲಿರುವ ಕಾಂಪ್ಲಕ್ಸ್ ನ ಎದುರಿನ ರಸ್ತೆಯಲ್ಲಿ, ಬಿಜೈ ಚರ್ಚ್ ಎದುರುಗಡೆಯ ರಸ್ತೆಯಲ್ಲಿ, ಮಂಗಳದೇವಿ ಎದುರುಗಡೆ ಹಾಗೂ ಡಿ-ಮಾರ್ಟ್ ಎದುರುಗಡೆಯ ರಸ್ತೆಯಲ್ಲಿರುವ ವಾಹನ ನಿಲುಗಡೆ ಮಾಡಿರುವುದನ್ನು ತೆರವುಗೊಳಿಸಲಾಗಿದೆ. ಸೆಂಟ್ರಲ್ ಮಾರ್ಕೆಟ್ ನಲ್ಲಿ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದು ಹಾಗೂ ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಇತರ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ.
ಬೆಂದೂರುವೆಲ್ ಬಳಿ ಇರುವ ಸೈಂಟ್ ಅಗ್ನೇಸ್ ಹಾಗೂ ತೆರೇಸಾ ಸ್ಕೂಲ್ ಬಳಿ ಈಗಾಗಲೇ ಸಿಬ್ಬಂದಿಗಳನ್ನು ನಿಯೋಜಿಲಾಗಿದ್ದು ಅವರುಗಳು ವಾಹನಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕ್ ಮಾಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಂಪನಕಟ್ಟೆಯ ಜಂಕ್ಷನ್ ನಲ್ಲಿ ಬಸ್ಸುಗಳಿಂದ ಇತರೆ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರಿದ್ದು ಈ ಬಗ್ಗೆ ಬಸ್ಸುಗಳ ವಿರುದ್ದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮಂಗಳೂರು ನಗರದ ಸಂಚಾರ ಸುರಕ್ಷತೆ ಹಾಗೂ ಸುಧಾರಣೆಗೆ ಹಲವಾರು ದೂರು, ಸಲಹೆ ಹಾಗೂ ಅಹವಾಲುಗಳನ್ನು ನೀಡಿದ್ದು, ಈ ಬಗ್ಗೆ ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಮಾತನಾಡಿ ಮಂಗಳೂರು ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು ರಸ್ತೆ ಅಗಲ ಕಿರಿದಾಗಿದೆ. ಪಾರ್ಕಿಂಗ್‌ಗೆ ಸ್ಥಳ ಮೀಸಲಿಡದೆ ನಿಯಮ ಉಲ್ಲಂಘನೆಯಾಗಿದೆ. ಈ ಸಮಸ್ಯೆ ಪರಿಹಾರವಾಗದ ಹೊರತು ಸಂಚಾರ ವ್ಯವಸ್ಥೆಗೆ ಶಾಶ್ವತ ಪರಿಹಾರ ಅಸಾಧ್ಯ ಎಂದು ತಿಳಿಸಿದ್ದಾರೆ. ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಮನಪಾ ಅನುಮತಿ ನೀಡುತ್ತದೆ. ಪೊಲೀಸ್ ಇಲಾಖೆಯಿಂದ ನಿರಕ್ಷೇಪಣಾ ಪತ್ರ ಪಡೆದಿರುವುದಿಲ್ಲ. ನಿಯಮ ಪಾಲನೆ ಮಾಡಿದ್ದಾರೆಯೇ ಎಂಬುದನ್ನು ಪಾಲಿಕೆ ಅಧಿಕಾರಿಗಳೇ ಗಮನಿಸಬೇಕು. ಅಡ್ಡಾದಿಡ್ಡಿ ಪಾರ್ಕಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಲಾಗುವುದು ಎಂದರು.
ಹೊರರಾಜ್ಯ, ಜಿಲ್ಲೆಯಿಂದ ಬಂದ ನಿರಾಶ್ರಿತರು ಸ್ಮಾರ್ಟ್‌ಸಿಟಿಯ ಅಂದವನ್ನು ಕೆಡಿಸುತ್ತಿದ್ದಾರೆ. ಅಪರಾಧ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸೂಕ್ತ ವ್ಯವಸ್ಥೆಯಾಗಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ದೂರು ನೀಡಿದರು. ಈ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಾಧಿಕಾರಿ ಹಾಗೂ ಮನಪಾ ಆಯುಕ್ತರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಮತ್ತೆ ಮತ್ತೆ ಗಮನಿಸಲಾಗುತ್ತದೆ. ಪೊಲೀಸ್ ಇಲಾಖೆಯಿಂದ ಗಸ್ತು ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮೂಡುಬಿದಿರೆಯಲ್ಲಿ ಆಟೋರಿಕ್ಷಾ ಚಾಲಕರು ಮೀಟರ್ ಹಾಕದೆ ನಿಗದಿತ ದರಕ್ಕಿಂತ ಅಧಿಕ ದರ ಪಡೆಯುತ್ತಿದ್ದಾರೆ ಎಂಬ ದೂರಿಗೆ ಆರ್‌ಟಿಒ ಜತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.
ಹೊಯ್ಗೆಬೈಲ್‌ನಲ್ಲಿ ನೆರೆಮನೆಯವರು ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ. ಅಲ್ಲಿಂದ ಆಯುಕ್ತರಿಗೆ ಪತ್ರ ಬಂದಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಸಮಸ್ಯೆ ಈಗಲೂ ಮುಂದುವರಿದಿದೆ ಎಂದು ಮಹಿಳೆಯೊಬ್ಬರು ಪೋನ್ ಇನ್ ಕಾರ್ಯಕ್ರಮದಲ್ಲಿ ದೂರಿದರು. ಉರ್ವ ಪೊಲೀಸ್ ಠಾಣೆಯಿಂದ ಮತ್ತೊಮ್ಮೆ ಸಂಪರ್ಕಿಸಲು ತಿಳಿಸುವುದಾಗಿ ಆಯುಕ್ತರು ಹೇಳಿದರು.
ವರದಿ: ಹರೀಶ ಮಾಂಬಾಡಿ, ಮಂಗಳೂರು