Dakshina Kannada News: ದಕ್ಷಿಣ ಕನ್ನಡ ಬಿಸಿರೋಡ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ; ಸವಾಲ್ ಜವಾಬ್, ಕಾವೇರಿದ ಪ್ರತಿಭಟನೆ, ಪೊಲೀಸ್ ಬಂದೋಬಸ್ತ್
Dakshin Kannada News ದಕ್ಷಿಣ ಕನ್ನಡ ಜಿಲ್ಲೆಯ ಬಿಸಿ ರೋಡ್ ನಲ್ಲಿ ಸೋಮವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಭಾರೀ ಪೊಲೀಸ್ ಭದ್ರತೆ ಹಾಕಲಾಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು
ಮಂಗಳೂರು: ನಾಗಮಂಗಲದಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭ ನಡೆದ ಅಹಿತಕರ ಘಟನೆ ಬೆನ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉಭಯ ಕೋಮುಗಳ ನಡುವೆ ಸೌಹಾರ್ದತೆಗೆ ಕಂದಕ ಮೂಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಖಂಡನಾ ಸಭೆಯೊಂದರಲ್ಲಿ ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ ವೆಲ್ ಆಡಿದ್ದರೆನ್ನಲಾದ ಮಾತಿಗೆ ಉತ್ತರವಾಗಿ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಹಮ್ಮದ್ ಶರೀಫ್ ಹಾಗೂ ಸದಸ್ಯ ಹಸೈನಾರ್, ತಾಕತ್ತಿದ್ದರೆ ಈದ್ ಮೆರವಣಿಗೆ ವೇಳೆ ಬಂಟ್ವಾಳಕ್ಕೆ ಬನ್ನಿ ಎಂಬ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದು ಉದ್ವಿಗ್ನತೆಗೆ ಕಾರಣವಾಯಿತು. ಅದಾದ ಬಳಿಕ ಹಿಂದು ಸಂಘಟನೆಗಳು ಸವಾಲನ್ನು ಸ್ವೀಕರಿಸಿ ಸೋಮವಾರ ಬಿ.ಸಿ.ರೋಡ್ ಚಲೋ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಲ್ಲಿಗೆ ಶರಣ್ ಪಂಪ್ ವೆಲ್ ಆಗಮಿಸಿ ಸವಾಲು ಸ್ವೀಕರಿಸಿದರು. ಇದಾದ ನಂತರ ಮಧ್ಯಾಹ್ನದವರೆಗೂ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಆಡಿಯೋ ಮೆಸೇಜ್ ತಂದ ಪರಿಣಾಮ
ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರಿಗೆ ಬಿ.ಸಿ.ರೋಡಿಗೆ ಬನ್ನಿ ಎಂದು ಆಡಿಯೋ ಸಂದೇಶ ಹಾಕಿದ ವಿಚಾರದ ನಂತರ ನಡೆದ ಬೆಳವಣಿಗೆಯಲ್ಲಿ ಸೋಮವಾರ ಬೆಳಗ್ಗೆ ಹಿಂದು ಸಂಘಟನೆಗಳು ಬಿ.ಸಿ.ರೋಡ್ ಚಲೋ ಹಮ್ಮಿಕೊಂಡಿದ್ದರು., ಸ್ವತಃ ಶರಣ್ ಪಂಪ್ ವೆಲ್ ಅವರೇ ಬಿ.ಸಿ.ರೋಡಿಗೆ ಆಗಮಿಸಿದರು.
ಸವಾಲು ಸ್ವೀಕರಿಸಿ ಬಂದಿದ್ದೇನೆ ಎಂದ ಶರಣ್
ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್ ವೆಲ್, ಇವರ ಸವಾಲು ನಮಗೆ ಹೊಸದಲ್ಲ. ಆದರೆ ಮೊನ್ನೆ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಹೋಗುವ ಸಂದರ್ಭ ಅಲ್ಲಿ ಕಲ್ಲು ತೂರಾಟ ಮಾಡಿದ್ರು, ಪೆಟ್ರೋಲ್ ಬಾಂಬ್ ಎಸೆದಿದ್ದರು. ಚಪ್ಪಲಿ ಮಾಲೆ ಹಾಕಿದ್ದರು. ಅಷ್ಟು ಮಾತ್ರವಲ್ಲ, ಅಲ್ಲಿದ್ದ ಗಣೇಶನ ಭಕ್ತರ ಮೇಲೆ ಹಲ್ಲೆ ನಡೆಸಿದ್ದರು. ನೂರಾರು ಹಿಂದುಗಳ ಅಂಗಡಿಗಳಿಗೆ ಬೆಂಕಿ ಕೊಟ್ಟರು, ವಾಹನಗಳನ್ನು ಪುಡಿಗಟ್ಟಿದ್ದರು. ಅದನ್ನು ವಿರೋಧಿಸಿ, ನಾವು ಪ್ರತಿಭಟನೆ ಮಾಡಿದ್ದ ಸಂದರ್ಭ, ನಾನು ಒಂದು ಮಾತನ್ನು ಹೇಳಿದ್ದೆ. ಗಣೇಶೋತ್ಸವವನ್ನು ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬದುಕಲಿ ಎಂಬುದು ಕಲ್ಪನೆ. ನಾವು ಯಾವತ್ತೂ ಗಣೇಶೋತ್ಸವ ಮುಖಾಂತರ ಇನ್ನೊಬ್ಬರಿಗೆ ತೊಂದರೆ ಕೊಟ್ಟವರಲ್ಲ. ಆದರೆ ನಾವು ಮಾಡುವ ಗಣೇಶೋತ್ಸವಕ್ಕೆ ನೀವು ತೊಂದರೆ ಕೊಟ್ಟಿದ್ದೀರಿ. ಒಂದು ವೇಳೆ ನಿಮ್ಮದೇ ಕಾರ್ಯಕ್ರಮ ರಸ್ತೆಯಲ್ಲಿ ಹೋಗುವಾಗ ಹಿಂದು ಸಮಾಜ ನಿಲ್ಲಿಸಿದರೆ ಏನಾಗಬಹುದು ಎಂದು ಪ್ರಶ್ನೆ ಮಾಡಿದ್ದೆ. ಆ ಪ್ರಶ್ನೆ ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದರು.
ಆದರೆ ಇವತ್ತು ತಾಕತ್ತಿದ್ದರೆ, ಬಿ.ಸಿ.ರೋಡಿಗೆ ಬನ್ನಿ, ನಮ್ಮ ಮೆರವಣಿಗೆ ಹೋಗುತ್ತದೆ. ತಾಕತ್ತಿದ್ದರೆ ಅದನ್ನು ತಡೆಯಿರಿ ಎಂಬ ಸವಾಲನ್ನು ಹಾಕಿದ್ದಾರೆ. ಇದು ನನಗೆ ಹಾಕಿದ ಸವಾಲಲ್ಲ. ಇಡೀ ನಮ್ಮ ಕರಾವಳಿಯ ಹಿಂದು ಸಂಘಟನೆಗಳಿಗೆ ಹಾಕಿದ ಸವಾಲು ಇದು. ಹಾಗಾಗಿ ಆ ಸವಾಲಿಗೆ ಉತ್ತರ ಕೊಡಲು ಸಾವಿರಾರು ಸಂಖ್ಯೆಯಲ್ಲಿ ನಾವು ಸೇರಿದ್ದೇವೆ. ಸವಾಲಿಗೆ ಉತ್ತರ ಕೊಟ್ಟಿದ್ದೇವೆ. ನಮ್ಮನ್ನು ಇವತ್ತು ಕೆಣಕಿದ್ದಾರೆ. ನಾವು ಯಾರ ತಂಟೆಗೂ ಹೋಗುವವರಲ್ಲ. ಎಲ್ಲರೂ ಚೆನ್ನಾಗಿರಬೇಕು ಎಂದು ಹೇಳುವ ಸಮಾಜ ಹಿಂದು ಸಮಾಜ. ನಮಗೆ ಸವಾಲು ಹಾಕಿ, ನಮ್ಮನ್ನು ಕೆಣಕಿ, ನಮ್ಮನ್ನು ಬರುವ ರೀತಿಯಲ್ಲಿ ಮಾಡಿದ್ದಾರೆ. ಇದೇ ರೀತಿಯ ಸವಾಲುಗಳನ್ನು ಮುಂದಿನ ದಿನಗಳಲ್ಲೂ ಹಾಕಿದರೂ ಯಾವುದೇ ಉತ್ತರವನ್ನು ಕೊಡಲು ನಾವೆಲ್ಲರೂ ತಯಾರಾಗಿರಬೇಕು ಎಂದರು.
ಅಹಿತಕರ ಘಟನೆ ನಡೆಯದಂತೆ ಕ್ರಮ: ಎಸ್ಪಿ
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವತಿಯಿಂದ ಕಾನೂನು ಕ್ರಮ ಕೈಗೊಂಡಿದ್ದೇವೆ. ಪ್ರತಿಭಟನೆಗೆ ಕರೆ ಕೊಟ್ಟವರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದರು. ಎಲ್ಲ ಕಡೆಯು ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದೆ. ಹೆಚ್ಚಿನ ತೊಂದರೆ ಜನರಿಗೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಪರಿಸ್ಥಿತಿಗೆ ಅನುಗುಣವಾಗಿ ಪೊಲೀಸ್ ಪಡೆಗಳನ್ನು ಕರೆಸಲಾಗಿದೆ ಎಂದು ಎಸ್ಪಿ ಯತೀಶ್ ತಿಳಿಸಿದ್ದಾರೆ.
ಜೈ ಕಾರ ಘೋಷಣೆ ಕೂಗಿದ ಕಾರ್ಯಕರ್ತರು ಪೋಲೀಸರ ತಡೆಯನ್ನು ಲೆಕ್ಕಿಸದೆಮುಂದೆ ಸಾಗಿದರು. ಈ ವೇಳೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಮೀರಿಹೋಗುವ ಹಂತಕ್ಕೆ ತಲುಪಿದಾಗ ಪೋಲೀಸರು ಬಸ್ ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು.
ರಕ್ತೇಶ್ವರಿ ದೇವಸ್ಥಾನ ಮುಂದೆ ಜಮಾಯಿಸಿದ ಕಾರ್ಯಕರ್ತರು
ಬೆಳಗ್ಗಿನಿಂದಲೇ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗ ಹಿಂದು ಸಂಘಟನೆಯ ಕಾರ್ಯಕರ್ತರ ಜಮಾವಣೆ ಆಗುತ್ತಿತ್ತು. ಅದೇ ವೇಳೆ ಬ್ಯಾರಿಕೇಟ್ ಹಾಕುವ ಮೂಲಕ ಪೊಲೀಸರು ಬಂದೋಬಸ್ತ್ ಕೈಗೊಂಡರು. ಪ್ರಮುಖರಾದ ಪುನೀತ್ ಅತ್ತಾವರ, ಪ್ರಸಾದ್ ಕುಮಾರ್ ರೈ, ವಿಕಾಸ್ ಪುತ್ತೂರು, ಸಂದೇಶ್ ಶೆಟ್ಟಿ, ಭಾಸ್ಕರ ಧರ್ಮಸ್ಥಳ, ನವೀನ್ ನೆರಿಯ, ನರಸಿಂಹ ಮಾಣಿ, ಮಹೇಶ್ ಬೈಲೂರು, ಪ್ರಶಾಂತ್ ಕೆಂಪುಗುಡ್ಡೆ, ಸಮೀತ್ ರಾಜ್ ಧರೆಗುಡ್ಡೆ, ತಿರುಲೇಶ್ ಬೆಳ್ಳೂರು, ಗುರುರಾಜ ಬಂಟ್ವಾಳ, ಆರ್. ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಗೋವಿಂದ ಪ್ರಭು, ಪುರುಷೋತ್ತಮ ಶೆಟ್ಟಿ, ಪುರುಷೋತ್ತಮ ಸಾಲಿಯಾನ್ ಸಹಿತ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಸ್.ಪಿ.ಯತೀಶ್ ಎನ್, ಅಡಿಶನಲ್ ಎಸ್ಪಿ ರಾಜೇಂದ್ರ, ಡಿ.ಎಸ್, ಡಿವೈಎಸ್ಪಿ ವಿಜಯ ಪ್ರಸಾದ್,.ಸಹಾಯಕ ಕಮೀಷನರ್ ಹರ್ಷವರ್ಧನ್,ತಹಸೀಲ್ದಾರ್ ಅರ್ಚನಾ ಭಟ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಈ ಮಧ್ಯೆ ಆಡಿಯೋ ಹರಿಯಬಿಟ್ಟ ಬಂಟ್ವಾಳ ಮಾಜಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮತ್ತು ಹಸೈನಾರ್ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು