ಕರ್ಣಾಟಕ ಬ್ಯಾಂಕ್‌ಗೆ ಕನ್ನ, ಲಾಕರ್ ಹೊತ್ತೊಯ್ದ ಪ್ರಕರಣ, ಮೂವರು ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ಣಾಟಕ ಬ್ಯಾಂಕ್‌ಗೆ ಕನ್ನ, ಲಾಕರ್ ಹೊತ್ತೊಯ್ದ ಪ್ರಕರಣ, ಮೂವರು ಆರೋಪಿಗಳ ಬಂಧನ

ಕರ್ಣಾಟಕ ಬ್ಯಾಂಕ್‌ಗೆ ಕನ್ನ, ಲಾಕರ್ ಹೊತ್ತೊಯ್ದ ಪ್ರಕರಣ, ಮೂವರು ಆರೋಪಿಗಳ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಡ್ಯನಡ್ಕದಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆಗೆ ಕನ್ನ ಹಾಕಿ, ಅಲ್ಲಿನ ಲಾಕರ್ ಅನ್ನೇ ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳ ಬಂಧನವಾಗಿದೆ. ಈ ಪ್ರಕರಣದ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಕರ್ಣಾಟಕ ಬ್ಯಾಂಕ್‌ಗೆ ಕನ್ನ, ಲಾಕರ್ ಹೊತ್ತೊಯ್ದ ಪ್ರಕರಣ, ಮೂವರು ಆರೋಪಿಗಳ ಬಂಧನ
ಕರ್ಣಾಟಕ ಬ್ಯಾಂಕ್‌ಗೆ ಕನ್ನ, ಲಾಕರ್ ಹೊತ್ತೊಯ್ದ ಪ್ರಕರಣ, ಮೂವರು ಆರೋಪಿಗಳ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗಡಿಭಾಗವಾದ ಅಡ್ಯನಡ್ಕ ಎಂಬಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆಗೆ ಕನ್ನ ಹಾಕಿ, ಅಲ್ಲಿನ ಲಾಕರ್ ಅನ್ನೇ ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ, ಕರ್ನಾಟಕ ಬ್ಯಾಂಕಿನಲ್ಲಿ ನಡೆದ ನಗದು ಹಾಗೂ ಚಿನ್ನಾಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಶೇಷ ತನಿಖಾ ತಂಡ ತನಿಖೆ ನಡೆಸಲಾಗಿ ಆರೋಪಿಗಳಾದ ಬಿ.ಸಿ.ರೋಡಿನ ಗೂಡಿನಬಳಿ ನಿವಾಸಿ ಮಹಮ್ಮದ್ ರಫೀಕ್ @ ಗೂಡಿನ ಬಳಿ ರಫೀಕ್ ( 35 ), ಕೇರಳ ಮಂಜೇಶ್ವರದ ಉಪ್ಪಳ ಮೊಗ್ರಾಳ್ ನ ಇಬ್ರಾಹಿಂ ಕಲಂದರ್ (41), ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ದಯಾನಂದ ಎಸ್. (37) ಬಂಧಿತ ಆರೋಪಿಗಳು.

ಬೆಳ್ಳಂಬೆಳಗ್ಗೆ ಬೆಚ್ಚಿಬೀಳಿಸಿದ್ದ ಪ್ರಕರಣ

ಫೆಬ್ರುವರಿ 7ರಂದು ರಾತ್ರಿ ಈ ಘಟನೆ ನಡೆದಿತ್ತು. ಕೆಲ ವರ್ಷಗಳ ಅವಧಿಯಲ್ಲಿ ನಡೆದ ವಿತ್ತೀಯ ಸಂಸ್ಥೆಯ ದೊಡ್ಡ ಪ್ರಮಾಣದ ಕಳವು ಪ್ರಕರಣವಿರಬಹುದು ಎಂದು ಶಂಕಿಸಲಾದ ಪ್ರಕರಣವಿದು. ಕಲ್ಲಡ್ಕ – ಕಾಞಂಗಾಡ್ ರಸ್ತೆಯ ಸಾರಡ್ಕ ಚೆಕ್ ಪೋಸ್ಟ್ ಸಮೀಪ ಅಡ್ಯನಡ್ಕ ಎಂಬಲ್ಲಿ ಇರುವ ಹಳೆಯ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಕರ್ಣಾಟಕ ಬ್ಯಾಂಕ್ ನ ಅಡ್ಯನಡ್ಕ ಶಾಖೆಗೆ ಫೆ.7ರಂದು ರಾತ್ರಿ ಕಳ್ಳರು ನುಗ್ಗಿದ್ದರು. ಹಿಂಬದಿ ಕಿಟಕಿ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ‌ಸುಮಾರು ಮೂರು ಕೋಟಿ ರೂ ಬೆಲೆ ಬಾಳುವ ‌ನಗ- ನಗದು ದೋಚಿದ್ದಾರೆ ಎಂದು ಅಂದಾಜಿಸಲಾಗಿತ್ತು. ಸುದ್ದಿ ತಿಳಿದಾಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಂಗ್, ವಿಟ್ಲ ಇನ್ ಸ್ಪೆಕ್ಟರ್ ನಾಗರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಿಟಕಿ ಸರಳು ಮುರಿಯಲು ಕಬ್ಬಿಣದ ರಾಡ್ ಮತ್ತು ಕಟ್ಟರ್ ಬಳಸಲಾಗಿತ್ತು.

ಜನಸಂಚಾರ ವಿರಳವಾದ ಜಾಗ

ಜನಸಂಚಾರ ವಿರಳವಾಗಿರುವ ಈ ಜಾಗವನ್ನು ಕಳ್ಳರು ಮೊದಲೇ ಗೊತ್ತುಮಾಡಿಕೊಂಡಿದ್ದರು. ಈ ಬ್ಯಾಂಕಿನ ಲೋಪದೋಷಗಳನ್ನು ಮೊದಲೇ ಅರಿತುಕೊಂಡಿದ್ದರು. ಯಾವ ಭಾಗದಲ್ಲಿ ಬಂದರೆ, ಸೇಫ್ ಲಾಕರ್ ಮುರಿಯಬಹುದು ಎಂಬುದನ್ನು ತಿಳಿದುಕೊಂಡಿದ್ದರು. ಅದರಂತೆ ಒಳನುಗ್ಗಿದ್ದಾರೆ. ಪ್ಲ್ಯಾನ್ ಸಕ್ಸಸ್ ಆಗಿತ್ತು. ಕಳ್ಳತನದ ವೇಳೆ ಬ್ಯಾಂಕಿಗೆ ಅಳವಡಿಸಲಾಗಿರುವ ಸೆಕ್ಯೂರಿಟಿ ಅಲಾರಂ ಸೈರನ್ ಮಾಡದೇ ಇರುವುದು ಕುತೂಹಲಕ್ಕೆ ಕಾರಣವಾಗಿತ್ತು. ಮರುದಿನ ಬೆಳಗ್ಗೆ 9.30ಕ್ಕೆ ಬ್ಯಾಂಕ್ ಸಿಬಂದಿ ಬ್ಯಾಂಕಿಗೆ ಬಂದ ವೇಳೆ ಕಳವು ಕೃತ್ಯ ಬೆಳಕಿಗೆ ಬಂದಿತ್ತು.ಸೇಫ್ ಲಾಕರನ್ನು ಗ್ಯಾಸ್ ಕಟ್ಟರ್ ನಿಂದ ತುಂಡರಿಸಿದ್ದರು. ಕೆಲವು ವರ್ಷಗಳಿಂದ ವೆಲ್ಡರ್ ಆಗಿದ್ದ ವ್ಯಕ್ತಿ ಸೇಪ್ ಲಾಕರ್ ಕಟ್ಟಿಂಗ್ ಗೆ ಸಹಕರಿಸಿದ್ದ. ಆರೋಪಿಗಳನ್ನು ಸ್ಥಳ‌ ಮಹಜರಿಗಾಗಿ ಸೋಮವಾರ ಅಡ್ಯನಡ್ಕಕ್ಕೆ ಕರೆದುಕೊಂಡು ಬಂದಿದ್ದರು. ಈ ಆರೋಪಿಗಳು ಕಾಸರಗೋಡು ಜಿಲ್ಲೆಯ ಹಲವೆಡೆ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕೆಲವು ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ರಿಷ್ಯಂತ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ವರದಿ: ಹರೀಶ್‌ ಮಾಂಬಾಡಿ, ಮಂಗಳೂರು

Whats_app_banner