ನನ್ನೂರಿನ ಶಾಪಗ್ರಸ್ತ ರಸ್ತೆಗೆ ವಿಮೋಚನೆ ಕೊಡಿಸಿ; ಮಾನವ ಹಕ್ಕು ಆಯೋಗದ ಮೊರೆ ಹೋದ ಯಕ್ಷಗಾನ ಕಲಾವಿದ-dakshina kannada news yakshagana artiste approached the human rights commission to fix the karopady road hmd ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನನ್ನೂರಿನ ಶಾಪಗ್ರಸ್ತ ರಸ್ತೆಗೆ ವಿಮೋಚನೆ ಕೊಡಿಸಿ; ಮಾನವ ಹಕ್ಕು ಆಯೋಗದ ಮೊರೆ ಹೋದ ಯಕ್ಷಗಾನ ಕಲಾವಿದ

ನನ್ನೂರಿನ ಶಾಪಗ್ರಸ್ತ ರಸ್ತೆಗೆ ವಿಮೋಚನೆ ಕೊಡಿಸಿ; ಮಾನವ ಹಕ್ಕು ಆಯೋಗದ ಮೊರೆ ಹೋದ ಯಕ್ಷಗಾನ ಕಲಾವಿದ

ವಿಟ್ಲ ಹೋಬಳಿ ಕರೋಪಾಡಿ ಗ್ರಾಮದ 1.5 ಕಿಮೀ ದೂರದಲ್ಲಿರುವ ಮುಗುಳಿ - ಪದ್ಯಾಣ (ರೆಂಜೆಡಿ) ರಸ್ತೆ ಈ ಹಿಂದೆ 1999ರಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡಿತ್ತು. ಆದರೆ ಬಳಿಕದ ವರ್ಷಗಳಲ್ಲಿ ಹಂತ ಹಂತವಾಗಿ ಇದ್ದ ಡಾಂಬರು‌ ಕಿತ್ತುಹೋಯಿತೇ, ವಿನಃ ಅದರ ಜೀರ್ಣೋದ್ಧಾರದ ಕೆಲಸ ನಡೆಯಲೇ ಇಲ್ಲ. ಪ್ರಸ್ತುತ ಈ ರಸ್ತೆಯ ಸ್ಥಿತಿ ತೀವ್ರ ಶೋಚನೀಯವಾಗಿದೆ.

ತನ್ನೂರಿನ ಶಾಪಗ್ರಸ್ಥ ರಸ್ತೆಗೆ ಮುಕ್ತಿ ಕೊಡಿಸಿ ಎಂದು ಯಕ್ಷಗಾನ ಹಿಮ್ಮೇಳ ಕಲಾವಿದರೊಬ್ಬರು ಮಾನವಹಕ್ಕು ಆಯೋಗಕ್ಕೆ ಮೊರೆ ಹೋಗಿದ್ದಾರೆ.
ತನ್ನೂರಿನ ಶಾಪಗ್ರಸ್ಥ ರಸ್ತೆಗೆ ಮುಕ್ತಿ ಕೊಡಿಸಿ ಎಂದು ಯಕ್ಷಗಾನ ಹಿಮ್ಮೇಳ ಕಲಾವಿದರೊಬ್ಬರು ಮಾನವಹಕ್ಕು ಆಯೋಗಕ್ಕೆ ಮೊರೆ ಹೋಗಿದ್ದಾರೆ.

ಮಂಗಳೂರು: ಕಳೆದ 25 ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿರುವ ತನ್ನೂರಿನ ಶಾಪಗ್ರಸ್ಥ ರಸ್ತೆಗೆ ಮುಕ್ತಿ ಕೊಡಿಸಿ ಎಂದು ಯಕ್ಷಗಾನ ಹಿಮ್ಮೇಳ ಕಲಾವಿದರೊಬ್ಬರು ಮಾನವಹಕ್ಕು ಆಯೋಗಕ್ಕೆ ಮೊರೆ ಹೋಗಿದ್ದಾರೆ. ಕರ್ನಾಟಕ ಕೇರಳ ಗಡಿಗ್ರಾಮವಾದ ಕರೋಪಾಡಿ ಇವರ ಊರು. ಯಕ್ಷಗಾನದ ಹಿಮ್ಮೇಳದಲ್ಲಿ ಸಕ್ರೀಯವಾಗಿರುವ ಚೈತನ್ಯ ಕೃಷ್ಣ ಪದ್ಯಾಣ ದೂರು ನೀಡಿದವರು. ಹಲವು ವರ್ಷಗಳಿಂದ ಶಾಸಕರಾದಿಯಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಬೇಸತ್ತಿರುವ ಇವರು, ಇದು ತನ್ನ ಕೊನೇ ಪ್ರಯತ್ನ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.

ಯಾಕೆ ಈ ರಸ್ತೆ ಶಾಪಗ್ರಸ್ತ

ವಿಟ್ಲ ಹೋಬಳಿ ಕರೋಪಾಡಿ ಗ್ರಾಮದ ಸುಮಾರು 1.5 ಕಿಮೀ ದೂರದಲ್ಲಿರುವ ಮುಗುಳಿ - ಪದ್ಯಾಣ (ರೆಂಜೆಡಿ) ರಸ್ತೆ ಈ ಹಿಂದೆ 1999ರಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡಿತ್ತು. ಆದರೆ ಬಳಿಕದ ವರ್ಷಗಳಲ್ಲಿ ಹಂತ ಹಂತವಾಗಿ ಇದ್ದ ಡಾಂಬರು‌ ಕಿತ್ತುಹೋಯಿತೇ, ವಿನಃ ಅದರ ಜೀರ್ಣೋದ್ಧಾರದ ಕೆಲಸ ನಡೆಯಲೇ ಇಲ್ಲ. ಹೀಗಾಗಿ ಪ್ರಸ್ತುತ ಈ ರಸ್ತೆಯ ಸ್ಥಿತಿ ತೀವ್ರ ಶೋಚನೀಯವಾಗಿದೆ.

ರಸ್ತೆಯ ವಾಸ್ತವ ಸ್ಥಿತಿಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಒಮ್ಮೆ ನಿರ್ಮಾಣಗೊಂಡ ಬಳಿಕ ಯಾವುದೇ ನಿರ್ವಹಣೆಯನ್ನೂ ಕಾಣದ ಹಿನ್ನೆಲೆಯಲ್ಲಿ ಈ ರಸ್ತೆಯ ಪ್ರಯಾಣ ಅಪಾಯಕಾರಿ ಎಂಬಂತಿದೆ. 25 ವರ್ಷಗಳ ಹಿಂದೆ ರಸ್ತೆ ನಿರ್ಮಿಸಿದ್ದರಿಂದ ಚರಂಡಿಗಳನ್ನು ಮಾಡಿಲ್ಲ, ಮಳೆ ನೀರು ರಸ್ತೆಯಲ್ಲಿದ್ದರೂ ನೀರು ಹರಿಯುತ್ತಿದೆ. ಇದರಿಂದ ರಸ್ತೆ ದಿನದಿಂದ ದಿನಕ್ಕೆ ಹದಗೆಟ್ಟಿದೆ. ಇದರಿಂದ ಈ ರಸ್ತೆಯ ಮುಖೇನ ಸಂಪರ್ಕ‌ ಕಲ್ಪಿಸುವ ಸುಮಾರು 25ಕ್ಕೂ ಅಧಿಕ ಮನೆಗಳ ನಿವಾಸಿಗಳು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

ಇದೇ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾಮಕ್ಕಳು ಸಂಚರಿಸುತ್ತಿದ್ದು, ದ್ವಿಚಕ್ರವಾಹನಗಳು ಇಲ್ಲಿ ಅವಘಡಕ್ಕೆ ಒಳಗಾದ ಘಟನೆಯೂ‌ ನಡೆದಿದೆ. ಈ ರಸ್ತೆಯಿಂದಾಗಿ ದುರದೃಷ್ಟವಶಾತ್ ಸುಮಾರು 10-15 ಮನೆಗಳ ಜನರು ತಮ್ಮ ಮನೆಗಳಿಗೆ ರಸ್ತೆ ಸಂಪರ್ಕವಿಲ್ಲದೇ ತಮ್ಮ ಜೀವವನ್ನು ಪಣಕ್ಕಿಟ್ಟು ಎಲ್ಲಾ ಕೆಲಸಗಳಿಗೆ ಈ ರಸ್ತೆಯ ಮೂಲಕ ಪ್ರತಿದಿನ ಸಂಚರಿಸಬೇಕಾಗಿದೆ. ಈಗಾಗಲೇ. ಹಲವು ದ್ವಿಚಕ್ರ ವಾಹನಗಳು ಮುಗ್ಗರಿಸಿ ಕೆಳಗೆ ಬಿದ್ದಿದ್ದು, ಸವಾರರು ಮತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಲ್ಲಿನ ಮನೆಗಳಿಗೆ ಮೂಲಭೂತ ಅಗತ್ಯಗಳನ್ನು ತಂದುಕೊಡುವುದಕ್ಕೂ ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದನ್ನು ಪತ್ರದಲ್ಲಿ ತಿಳಿಸಲಾಗಿದೆ.

ಇದು ಕೊನೆಯ ಪ್ರಯತ್ನ..!

ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯುತ್ತಿರುವುದು ಸಾಮಾನ್ಯ ವ್ಯಕ್ತಿಗಳ ಕೊನೆಯ ಪ್ರಯತ್ನವಾಗಿದ್ದು, ಅದರಂತೆ ಪತ್ರ ಬರೆದಿದ್ದೇನೆ, ರಸ್ತೆಯ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ‌ಪಡೆದುಕೊಂಡು ರಸ್ತೆ ಸುರಕ್ಷತೆಯ ಹಕ್ಕು ನಮ್ಮ ಗ್ರಾಮದ ನಿವಾಸಿಗಳಿಗೆ ದೊರಕುವಂತೆ ಮಾಡುವಿರಿ ಎಂಬ ನಂಬಿಕೆಯಲ್ಲಿ ನಾವಿದ್ದೇವೆ ಎಂದವರು ಪತ್ರದಲ್ಲಿ ಭಾವನಾತ್ಮಕವಾಗಿ ಉಲ್ಲೇಖಿಸಿದ್ದಾರೆ.

ರಸ್ತೆಯನ್ನು ಸರಿ ಮಾಡಿಕೊಡಿ ಎಂದು ಬಂಟ್ವಾಳ ಶಾಸಕರಿಗೆ ಮತ್ತು ಗ್ರಾಮ ಪಂಚಾಯತ್‌ಗೆ ಅಧಿಕೃತವಾಗಿ ಅರ್ಜಿ ಪತ್ರಗಳನ್ನು ನೀಡಲಾಗಿದೆ, ಹಲವು ಬಾರಿ ಮೌಖಿಕವಾಗಿ ತಿಳಿಸಲಾಗಿದೆ‌ ಆದರೆ ಶಾಸಕರಿಂದ ಉತ್ತರ ಬಂದಿಲ್ಲ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ ಈ ಪತ್ರವನ್ನು ಅವರು ಬರೆದಿದ್ದಾರೆ.

ಆಯೋಗದಿಂದ ಸಕಾರಾತ್ಮಕ ಪ್ರತಿಕ್ರಿಯೆ

ಆಯೋಗಕ್ಕೆ ಚೈತನ್ಯಕೃಷ್ಣ ಪದ್ಯಾಣ ಅವರು, ಜೂ.11ರಂದು ಪತ್ರ ಬರೆದಿದ್ದು ಸಕಾರಾತ್ಮಕ‌ ಪ್ರತಿಕ್ರಿಯೆ ಬಂದಿದೆ. ಶೋಚನೀಯ ಸ್ಥಿತಿಯಲ್ಲಿರುವ ಮುಗುಳಿ-ಪದ್ಯಾಣ ರಸ್ತೆಯ ಬಗ್ಗೆ ಜೂ.21 ಆಯೋಗದ ಸಭೆಯಲ್ಲಿ ಮಂಡಿಸಲಾಗಿದೆ, ದೂರು ಅರ್ಜಿಯ ಕುರಿತು ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊ‌ಡು ಸೆ.10 ರ ಒಳಗೆ ವರದಿ ಒಪ್ಪಿಸಲು ಆದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಪತ್ರದಲ್ಲಿ ಹೇಳಲಾಗಿದೆ. ಮನವಿಗೆ ಜನಪ್ರತಿನಿಧಿಗಳು ಸ್ಪಂದಿಸದ ಕಾರಣ ನೇರವಾಗಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ. ದೂರು ನೀಡಿದ ಯಕ್ಷಗಾನ ಕಲಾವಿದರ ಹಾಗೂ ಗ್ರಾಮಸ್ಥರು ರಸ್ತೆಯ ಮುಕ್ತಿಗೆ ಕಾಯುತ್ತಿದ್ದಾರೆ.

ವರದಿ: ಹರೀಶ್‌ ಮಾಂಬಾಡಿ, ಮಂಗಳೂರು