ಕನ್ನಡ ಸುದ್ದಿ  /  Karnataka  /  Dakshina Kannada News Yeyyadi Anklet Sound Of Daiva Demi God, Tulunadu Rakteshwari Daiva Pcp

ಮಂಗಳೂರಿನಲ್ಲಿ ಮಧ್ಯರಾತ್ರಿ ನಿಗೂಢ ಗೆಜ್ಜೆಯ ಸದ್ದು, ದೀವಟಿಗೆ ಬೆಳಕು; ರಕ್ತೇಶ್ವರಿ ದೈವ ಸಂಚಾರವೆಂಬ ನಂಬಿಕೆಯಲ್ಲಿ ಸ್ಥಳೀಯರು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಮಧ್ಯೆ ಇರುವ ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ಹೊತ್ತು ಗೆಜ್ಜೆಯ ಸದ್ದು ಕೇಳಿಸುತ್ತಿದೆ. ಭೂತಾರಾಧನೆಯ ಸಂಸ್ಕೃತಿಯಿಂದ ಖ್ಯಾತಿ ಪಡೆದಿರುವ ಕರಾವಳಿ ಜಿಲ್ಲೆಯಲ್ಲಿ ಈ ನಿಗೂಢ ಸದ್ದಿನ ಕುರಿತು ಜನರ ಕೌತುಕ ಹೆಚ್ಚಾಗಿದೆ. (ವರದಿ: ಹರೀಶ್‌ ಮಾಂಬಾಡಿ)

ಮಂಗಳೂರಿನಲ್ಲಿ ಮಧ್ಯರಾತ್ರಿ ನಿಗೂಢ ಗೆಜ್ಜೆಯ ಸದ್ದು, ದೀವಟಿಗೆ ಬೆಳಕು
ಮಂಗಳೂರಿನಲ್ಲಿ ಮಧ್ಯರಾತ್ರಿ ನಿಗೂಢ ಗೆಜ್ಜೆಯ ಸದ್ದು, ದೀವಟಿಗೆ ಬೆಳಕು

ಮಂಗಳೂರು: ಇದು ಮಂಗಳೂರಿನ ನಗರದ ಮಧ್ಯೆಯಿರುವ ಪ್ರದೇಶ. ಇಲ್ಲಿ ನಡುರಾತ್ರಿ 12.50ಗಂಟೆಯಾದರೆ ಸಾಕು ಇಲ್ಲಿ ಘಲ್... ಘಲ್... ಎಂದು ಗೆಜ್ಜೆ ಸದ್ದು ಕೇಳಿಸುತ್ತದೆ‌. ಯಾರೋ ನಡೆದು ಹೋದಂತಹ ಅನುಭವವಾಗುತ್ತದೆ. ಅದೇ ಹೊತ್ತಿಗೆ ನಾಯಿಯೊಂದು ದೂರದಲ್ಲೆಲ್ಲೋ ಬೊಗಳುತ್ತದೆ. ಆದರೆ ಕಣ್ಣಿಗೆ ಯಾರೂ ಗೋಚರವಾಗೋಲ್ಲ. ಇದೇನು ಕೌತುಕ?.

ಈ ರೀತಿಯ ಅನುಭವವಾಗುತ್ತಿರುವುದು ಮಂಗಳೂರಿನ ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ.‌ ಸುತ್ತಮುತ್ತಲಿನ ಸುಮಾರು 60ಮನೆಯವರಿಗೂ ಇಂತಹ ಅನುಭವವಾಗುತ್ತಿದೆ‌. ಆ ಪ್ರದೇಶವೆಲ್ಲಾ ಸುತ್ತಾಡುತ್ತಾ ಗೆಜ್ಜೆಯ ಸದ್ದು ಮತ್ತೆ ಅಲ್ಲಿಯೇ ಇರುವ ರೆಂಜೆಯ ಮರದಡಿಗೆ ಬಂದು ನಿಲ್ಲುತ್ತದೆ.

ಸ್ಥಳೀಯ ನಿವಾಸಿ ದೀಪು ಶೆಟ್ಟಿಗಾರ್ ತಮ್ಮ ಮೊಬೈಲ್ ನಲ್ಲಿ ಈ ಕೌತುಕವನ್ನು ಸೆರೆಹಿಡಿದಿದ್ದಾರೆ. ಅವರ ಮೊಬೈಲ್ ನಲ್ಲಿ ಬೆಂಕಿಯ ಉಂಡೆಯೊಂದಿಗೆ ಗೆಜ್ಜೆಯ ಶಬ್ದ ಸೆರೆಯಾಗಿದೆ. ಊರಿನವರು ಇದು ರಕ್ತೇಶ್ವರಿ ದೈವದ ಸಂಚಾರ ಎಂದು ಹೇಳುತ್ತಿದ್ದಾರೆ. ತಾಂಬೂಲ ಪ್ರಶ್ನಾಚಿಂತನೆಯಲ್ಲಿ ಇಲ್ಲಿ ಆ ದೈವದ ಸಂಚಾರವಿದೆ ಎಂದು ಹೇಳಿದ್ದಾರಂತೆ. ಅಲ್ಲದೆ ಇದೇ ಜಾಗದಲ್ಲಿ ನಾಗಹುತ್ತವೂ ಇದೆ.

ಸದ್ಯ ಊರಿನವರು ನಾಗಹುತ್ತ ಹಾಗೂ ರಕ್ತೇಶ್ವರಿ ಸಾನಿಧ್ಯವಿರುವ ಜಾಗವನ್ನು ಖರೀದಿಸಿದ್ದಾರೆ. ಕಾಡುಪೊದೆಯಿದ್ದ ಜಾಗವನ್ನು ಶುಚಿ ಮಾಡಿ, ಸಮತಟ್ಟು ಮಾಡಿದ್ದಾರೆ. ಜೊತೆಗೆ ನಿತ್ಯವೂ ಬೆಳಗ್ಗೆ ಐದು ಗಂಟೆಗೆ ನಾಗಹುತ್ತವಿರುವ ಸ್ಥಳ ಹಾಗೂ ರಕ್ತೇಶ್ವರಿ ಸಾನಿಧ್ಯವಿರುವ ರೆಂಜೆ ಮರದಡಿ ಹೂನೀರು ಇಟ್ಟು, ದೀಪ ಬೆಳಗಿಸಿ ಪ್ರಾರ್ಥಿಸುತ್ತಿದ್ದಾರೆ.

ದೀಪವಿಡದ ದಿನ ಎಚ್ಚರಿಸುವ ಅನುಭವವನ್ನು ಮಾಡುತ್ತದೆಯಂತೆ‌ ಈ ದೈವಶಕ್ತಿ. ಈ ಮಾರ್ಚ್ ಅಂತ್ಯಕ್ಕೆ ದೈವದರ್ಶನ ಇರಿಸಿ ದೈವ ಸಾನಿಧ್ಯವನ್ನು ಅಭಿವೃದ್ಧಿ ಮಾಡುವ ಚಿಂತನೆಯಲ್ಲಿದ್ದಾರೆ ಈ ಊರ ನಾಗರಿಕರು. ಒಟ್ಟಿನಲ್ಲಿ ಆಧುನಿಕ ಕಾಲಘಟ್ಟದಲ್ಲೂ ಇಂತಹ ಅನೂಹ್ಯ ಅನುಭವ ವಿಜ್ಞಾನಕ್ಕೇ ಸವಾಲು ಎಸೆಯುವಂತಿರುವುದಂಥೂ ಸತ್ಯ.

ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ಭೂತಾರಾಧನೆ ವಿಶೇಷ ಆರಾಧನೆ. ಗುಳಿಗ, ಪಂಜುರ್ಲಿಯಂತೆ ರಕ್ತೇಶ್ವರಿ, ಕರ್ಲುರ್ಟಿಯಂತಹ ದೈವಗಳ ಆರಾಧನೆಯನ್ನು ತುಳುನಾಡಿನಲ್ಲಿ ಮಾಡಲಾಗುತ್ತದೆ. ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಬಂದ ಬಳಿಕ ಭೂತಾರಾಧನೆಯ ಕುರಿತು ತುಳುನಾಡಿನ ಸಂಸ್ಕೃತಿ ಅರಿವಿರದ ಜನರಿಗೆ ಕುತೂಹಲ ಹೆಚ್ಚಾಗಿದೆ.

ವರದಿ: ಹರೀಶ್‌ ಮಾಂಬಾಡಿ

IPL_Entry_Point