ದಕ್ಷಿಣ ಕನ್ನಡ: ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡ: ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ

ದಕ್ಷಿಣ ಕನ್ನಡ: ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದರ ಅಂಗವಾಗಿ ಶುಕ್ರವಾರ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿದೆ. ಈ ದಿನ ದೇವಾಲಯದಲ್ಲಿ ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ

ಮಂಗಳೂರು: ದಕ್ಷಿಣ ಕನ್ನಡ ಪ್ರಸಿದ್ಧ ತೀರ್ಥಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ದ ಪಂಚಮಿಯ ದಿನವಾದ ಶುಕ್ರವಾರ ಪಂಚಮಿ ರಥೋತ್ಸವ ನೆರವೇರಲಿದೆ. ಕಾರ್ಯಕ್ರಮದ ಅಂಗವಾಗಿ ಇಂದು (ಡಿ.6) ಬೆಳಗ್ಗೆ ತೈಲಾಭ್ಯಂಜನ ನೆರವೇರಿತು.

ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ

ಇಂದು ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ಜರುಗಲಿದೆ. ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ ಕುಕ್ಕೆಬೆಡಿ ಪ್ರದರ್ಶಿತವಾಗಲಿದೆ.ಈ ದಿನ ಸಂಜೆ ಶ್ರೀ ದೇವಳದಿಂದ ನಡೆಯುವ ಕೃಷಿ ಮೇಳವು ಉದ್ಘಾಟನೆಗೊಳ್ಳಲಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆಯಾದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪಂಚಮಿ ಹಾಗೂ ಷಷ್ಠಿಯಂದು ಶ್ರೀ ದೇವಳದಲ್ಲಿ ರಾತ್ರಿ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಅಲ್ಲದೆ ಪಂಚಾಮೃತ ಮಹಾಭಿಷೇಕ ಸೇವೆಯು ಕೂಡಾ ಈ ದಿನಗಳಲ್ಲಿ ನಡೆಯುವುದಿಲ್ಲ.ಅಲ್ಲದೆ ಷಷ್ಠಿಯಂದು ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.
 

ಜಾತ್ರೆ ಯಶಸ್ವಿಗೆ ಎಲ್ಲ ಸಿದ್ಧತೆಗಳು ನಡೆದಿವೆ. ವಾಹನ ಪಾಕಿಂಗ್, ಭದ್ರತೆ, ಭಕ್ತರ ಪ್ರಯಾಣಕ್ಕೆ ಸಿದ್ಧತೆಗಳು ನಡೆದಿವೆ. ಕ್ಷೇತ್ರದಲ್ಲಿ ಬೀದಿ ಉರುಳು ಸೇವೆ , ಎಡೆಸ್ನಾನ ಸೇವೆಗಳು ನಡೆಯುತಿದ್ದು ಸೇವೆ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರು, ಶೌಚಾಲಯ,ವಿದ್ಯುತ್‌ ದೀಪಗಳು, ದೀಪಾಲಂಕಾರ, ವಿಶೇಷ ಮಾಹಿತಿ ಕೇಂದ್ರ, ವಿಶೇಷ ಆರೋಗ್ಯ ಉಪಕೇಂದ್ರವನ್ನು ವ್ಯವಸ್ಥೆಗೊಳಿಸಲಾಗಿದೆ. ಜತೆಗೆ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಭಕ್ತರಲ್ಲಿ ಸ್ವಚ್ಚತಾ ಜಾಗೃತಿ ಮೂಡಿಸಲು ಕ್ಷೇತ್ರದ ಅಲ್ಲಲ್ಲಿ ಜಾಗೃತಿ ಫಲಕ ಅಳವಡಿಸಲಾಗಿದೆ.

ಜಾತ್ರೆ ವೇಳೆ ಸಂತೆ ವ್ಯಾಪಾರ ಅಂಗಡಿಗಳು ತೆರೆದಿವೆ. ಅಲ್ಲದೆ ಮನೋರಂಜನಾ ಸಾಧನಗಳು ಆಗಮಿಸಿದ್ದು ಜಾತ್ರೋತ್ಸವಕ್ಕೆ ವಿಶೇಷ ಕಳೆ ನೀಡುತ್ತಲಿದೆ. ಭದ್ರತಾ ದೃಷ್ಠಿಯಿಂದ ಹೆಚ್ಚುವರಿ ಪೋಲೀಸರನ್ನು ಹಾಗೂ ಗೃಹ ರಕ್ಷಕ ದಳವನ್ನು ನಿಯೋಜನೆ ಮಾಡಲಾಗಿದೆ. ಬೋಜನ ಪ್ರಸಾದ ವಿತರಣೆಗೆ, ಲಗೇಜ್ ಕೊಠಡಿಗೆ, ಗೋಪುರದ ಬಳಿ ಒತ್ತಡ ನಿವಾರಣೆಗೆ, ಮಾಹಿತಿ ಒದಗಿಸಲು, ಬಲಿವಾಡ ಸೇವೆ ಸ್ವೀಕರಿಸಲು ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿದೆ.

ಬ್ರಹ್ಮರಥಕ್ಕೆ ಶಿಖರ ಮುಹೂರ್ತ: ರಥಗಳಿಗೆ ಶಿಖರ ಅಳವಡಿಕೆ

ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಚೌತಿಯ ದಿನವಾದ ಗುರುವಾರ ಪಂಚಮಿ ರಥ ಮತ್ತು ಬ್ರಹ್ಮರಥಕ್ಕೆ ಶಿಖರ ಮುಹೂರ್ತ ನಡೆಯಿತು. ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ವೈದಿಕ ವಿದಿವಿಧಾನಗಳ ಮೂಲಕ ಶಿಖರ ಮುಹೂರ್ತ ನೆರವೇರಿಸಿದರು.ಅಲ್ಲದೆ ಶಿಖರಗಳಿಗೆ ಪೂಜೆ ಸಮರ್ಪಿಸಿ ಪ್ರಸಾದ ವಿತರಿಸಿದರು. ಬಳಿಕ ಮೂಲನಿವಾಸಿ ಮಲೆಕುಡಿಯ ಜನಾಂಗದವರು ನೂತನ ಶಿಖರವನ್ನು ಬ್ರಹ್ಮರಥಕ್ಕೆ ಅಳವಡಿಸಿದರು. ಬಳಿಕ ಪಂಚಮಿ ರಥಕ್ಕೆ ಶಿಖರ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್, ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ ಕೋಡಿಕಜೆ ಸೇರಿದಂತೆ, ಶ್ರೀ ದೇವಳದ ಸಿಬ್ಬಂದಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.

ವರದಿ: ಹರೀಶ್‌ ಮಾಂಬಾಡಿ, ಮಂಗಳೂರು