Puttur Jatre 2025: ಪುತ್ತೂರು ಜಾತ್ರೋತ್ಸವ ಸಡಗರ ಆರಂಭ: ಇಂದಿನಿಂದ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ವೈಭವ
Puttur Jatre 2025: ದಕ್ಷಿಣ ಕನ್ನಡದ ಪ್ರಮುಖ ದೇಗುಲಗಳಲ್ಲಿ ಸ್ಥಾನ ಪಡೆದಿರುವ ಪುತ್ತೂರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದ ಸಡಗರ ಆರಂಭಗೊಂಡಿದೆ.ವರದಿ: ಹರೀಶ ಮಾಂಬಾಡಿ.ಮಂಗಳೂರು

Puttur Jatre 2025: ಕರಾವಳಿಯ ಜಾತ್ರೋತ್ಸವಗಳಲ್ಲೇ ಅತ್ಯಂತ ವಿಶಿಷ್ಟವಾಗಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಇಂದಿನಿಂದ ಆರಂಭವಾಗಿದೆ. ಜಾತ್ರೋತ್ಸವಕ್ಕೆ ಗುರುವಾರ ಧ್ವಜಾರೋಹಣ ನಡೆದಿದ್ದು, ಸಂಜೆ ಶ್ರೀದೇವರ ಪೇಟೆ ಸವಾರಿ ಜಾತ್ರೆ ಮುಗಿಯುವವರೆಗೂ ಪ್ರತಿದಿನ ಇರಲಿದೆ. ಏಪ್ರಿಲ್ 10 ರಿಂದ 18ರವರೆಗೆ ಪ್ರತೀ ದಿನ ಸವಾರಿ ನಡೆಯಲಿದ್ದು, ದಿನಕ್ಕೊಂದು ದಿಕ್ಕುಗಳಿಗೆ ತೆರಳಿ ಮಾರ್ಗದುದ್ದಕ್ಕೂ ಕಟ್ಟೆಪೂಜೆಗಳನ್ನು ದೇವರು ಸ್ವೀಕರಿಸಲಿದ್ದಾರೆ. ಹಾದಿಯುದ್ದಕ್ಕೂ ನೂರಾರು ಕಡೆ ಹಣ್ಣುಕಾಯಿ, ಆರತಿ ಸೇವೆಗಳು ಸಲ್ಲಿಕೆಯಾಗಲಿದ್ದು, ಸಹಸ್ರಾರು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಶ್ರೀದೇವರ ಬರುವಿಕೆಗಾಗಿ ಕಾದಿರುತ್ತಾರೆ. ದೇವರ ಸವಾರಿ ನಡೆಯುವ ದಿನ ಆಯಾ ರಸ್ತೆಗಳನ್ನು ನೀರಿನಿಂದ ತೊಳೆದು, ಬಂಟಿಂಗ್, ತಳಿರು ತೋರಣ ಕಟ್ಟುವುದಲ್ಲದೆ, ಕಟ್ಟೆಗಳನ್ನು ಅಲಂಕರಿಸಲಾಗುತ್ತದೆ.
ಕಟ್ಟೆಪೂಜೆ ನಡೆಯುವಲ್ಲಿ ಸಾರ್ವಜನಿಕ ಪ್ರಸಾದ, ತಂಪುಪಾನೀಯ, ಸಿಹಿತಿಂಡಿ ವಿತರಣೆ ನಡೆಯುತ್ತದೆ. ಕೆಲವೊಂದು ಕಟ್ಟೆಗಳಲ್ಲಿ ಸಾರ್ವಜನಿಕ ನೆಲೆಯಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ವೈವಿಧ್ಯ ಏರ್ಪಡಿಸಲಾಗುತ್ತದೆ. ಶ್ರೀದೇವರ ಪೇಟೆ ಸವಾರಿಯ ಮೂಲಕ 8 ದಿನಗಳ ಕಾಲ ಇಡೀ ಪುತ್ತೂರಿನ ಕಣ ಕಣದಲ್ಲೂ ಜಾತ್ರೆಯ ಸಂಭ್ರಮ ಮುಗಿಲು ಮುಟ್ಟುತ್ತದೆ. ಏ.18ರಂದು ಶ್ರೀದೇವರ ಅವಭೃತ ಸವಾರಿ ವೀರಮಂಗಲಕ್ಕೆ ಸಾಗಲಿದ್ದು, 15 ಕಿ.ಮೀ. ಉದ್ದದ ದಾರಿಯಯುದ್ದಕ್ಕೂ 20ಕ್ಕೂ ಅಧಿಕ ಕಟ್ಟೆಪೂಜೆ ಮತ್ತು ಸಾವಿರಾರು ಹಣ್ಣುಕಾಯಿ, ಆರತಿ ಸೇವೆ ನಡೆಯುತ್ತದೆ. ಗುರುವಾರದ ವಿಶೇಷ ಪೂಜೆಗಳು, ಅಲಂಕಾರದ ನಂತರ ಭಕ್ತರು ಮಹಾಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು.
ದೇವರ ಸವಾರಿಯ ಮಾರ್ಗಸೂಚಿ
ಏ.10ರಂದು ಸಂಜೆ ಬೊಳುವಾರು, ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೆಗ, ಕರ್ಮಲ ಸವಾರಿ ನಡೆಯುತ್ತದೆ. 11ರಂದು ಶುಕ್ರವಾರ ಸಂಜೆ ನೆಲ್ಲಿಕಟ್ಟೆ, ಸಾಲ್ಮರ ಸೂತ್ರಬೆಟ್ಟು ಸವಾರಿ, 12ರಂದು ಶನಿವಾರ ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು, ಏಳ್ನಾಡುಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ, 13ರಂದು ಭಾನುವಾರ ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೋಳುವಾರು ಬೈಲ್ ಸವಾರಿ, 14ರಂದು ಸೋಮವಾರ ಕೊಂಬೆಟ್ಟು, ಬೋಳುವಾರು, ಹಾರಾಡಿ ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆ ಸವಾರಿ, 15ರಂದು ಮಂಗಳವಾರ ಬನ್ನೂರು, ಅಶೋಕನಗರ, ರೈಲ್ವೆ ಮಾರ್ಗ ಸವಾರಿ, 17ರಂದು ಗುರುವಾರ ಬಂಗಾರ್ ಕಾಯೆರ್ ಕಟ್ಟೆ ಸವಾರಿ, 18ರಂದು ಸಂಜೆ ವೀರಮಂಗಲಕ್ಕೆ ಅವಭೃತ ಸವಾರಿ ನಡೆಯಲಿದೆ.
ಪುತ್ತೂರು ಜಾತ್ರೆಗೆ ಸರಕಾರಿ ಬಸ್ ವ್ಯವಸ್ಥೆ
ಏ.10ರಿಂದ 20ರವರೆಗೆ ನಡೆಯುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ಹಾತ್ರೋತ್ಸವದ ಸಂದರ್ಭ ತಾಲೂಕಿನ ಗ್ರಾಮಾಂತರ ಭಾಗಗಳಿಂದ ವ್ಯವಸ್ಥಿತ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಕ್ರಮ ವಹಿಸಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
10 ದಿನಗಳ ಜಾತ್ರೆಗೆ ಗ್ರಾಮಾಂತರ ಭಾಗ ಮತ್ತು ಪಕ್ಕದ ತಾಲೂಕುಗಳಿಂದಲೂ ಭಕ್ತಾದಿಗಳು ಬರುತ್ತಾರೆ. ಈ ಅವಧಿಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಾರದು. ಇದಕ್ಕಾಗಿ ಈಗಾಗಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಏ.೧೭ರಂದು ನಡೆಯುವ ಬ್ರಹ್ಮರಥೋತ್ಸವ ಸಂದರ್ಭ ಸಂಜೆಯಿAದ ರಾತ್ರಿಯವರಗೂ ನಿರಂತರ ಬಸ್ ವ್ಯವಸ್ಥೆ ಬೇಕಾಗುತ್ತದೆ. ಈ ಹಿಂದಿನ ವರ್ಷಗಳಲ್ಲಿ ಮಾಡಲಾಗುತ್ತಿದ್ದ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ರಾತ್ರಿ ರಥೋತ್ಸವ ಮುಗಿದ ಬಳಿಕ ತಮ್ಮ ತಮ್ಮ ಊರುಗಳಿಗೆ ತೆರಳುವ ಭಕ್ತರ ಅನುಕೂಲಕ್ಕೆ ತಕ್ಕಂತೆ ಎಲ್ಲ ಪ್ರಮುಖ ರೂಟ್‌ಗಳಲ್ಲಿ ಬಸ್ ಓಡಿಸುವಂತೆ ತಿಳಿಸಲಾಗಿದೆ ಎಂದವರು ಹೇಳಿದ್ದಾರೆ.
ಹರೀಶ ಮಾಂಬಾಡಿ, ಮಂಗಳೂರು
--
