ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ; ಹೊಸಕಟ್ಟೆ ಉತ್ಸವ ಸಂಪನ್ನ, ಇಂದು ಕೆರೆಕಟ್ಟೆ ಉತ್ಸವ
ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವದ ನಿಮಿತ್ತ ಹೊಸಕಟ್ಟೆ ಉತ್ಸವ ಸಂಪನ್ನಗೊಂಡಿತು. ದೇವಾಲಯದ ಹೊರಾಂಗಣದಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ದೇವರನ್ನು ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬರಲಾಯಿತು. ನೆರೆದಿದ್ದ ಭಕ್ತರು ರಥ ಎಳೆದು ಮಂಜುನಾಥ ಸ್ವಾಮಿಯ ದರ್ಶನ ಪಡೆದರು. (ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವದ ಪ್ರಥಮ ದಿನವಾದ ಮಂಗಳವಾರ (ನವೆಂಬರ್ 26) ರಾತ್ರಿ ಹೊಸಕಟ್ಟೆ ಉತ್ಸವ ವೈಭವದಿಂದ ಜರುಗಿತು. ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಲಕ್ಷದೀಪೋತ್ಸವದ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಿದರು. ಗರ್ಭಗುಡಿಯೊಳಗೆ ಶ್ರೀಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ನಡೆಸಿ, ದೇವಾಲಯದ ಒಳಾಂಗಣದಲ್ಲಿ ಉತ್ಸವಮೂರ್ತಿಯೊಂದಿಗೆ 16 ಸುತ್ತು ಬರಲಾಯಿತು.
ಚೆಂಡೆ, ನಾದಸ್ವರ, ಸಂಗೀತ, ಶಂಖ ಸೇರಿದಂತೆ ಸರ್ವವಾದ್ಯಗಳೊಂದಿಗೆ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಯಿತು. ಹೊರಾಂಗಣದಲ್ಲಿ ಭಕ್ತರು ಶ್ರೀ ಮಂಜುನಾಥ ಸ್ವಾಮಿಗೆ ನಮಿಸಿ ದೀಪಗಳನ್ನು ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದಿಂದ ಉತ್ಸವಮೂರ್ತಿಯನ್ನು ಜಾಗಟೆ, ತಮಟೆ ವಾದ್ಯಗಳ ಜತೆ ಸಾವಿರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ವಸಂತ ಮಹಲಿನ ಹೊಸಕಟ್ಟೆಗೆ ತರಲಾಯಿತು. ಅಲ್ಲಿ ದೇವರಿಗೆ ಚತುರ್ವೇದಗಳ ಪಠಣ, ಸಂಗೀತ ಸೇರಿದಂತೆ ಅಷ್ಟಸೇವೆಗಳ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ದೇವಾಲಯದ ಆನೆಗಳಾದ ಲಕ್ಷ್ಮೀ ಮತ್ತು ಶಿವಾನಿ ಹೆಜ್ಜೆ ಹಾಕಿದವು. ದೇವಾಲಯದ ಬಸವನ ಉಪಸ್ಥಿತಿ ಉತ್ಸವಕ್ಕೆ ಕಳೆ ನೀಡಿತು.
ವಸಂತ ಮಹಲಿನಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಹೊರಾಂಗಣದಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ದೇವರನ್ನು ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬರಲಾಯಿತು. ನೆರೆದಿದ್ದ ಭಕ್ತರು ಭಕ್ತಿ-ಭಾವದಿಂದ ರಥ ಎಳೆದು ಮಂಜುನಾಥ ಸ್ವಾಮಿಯ ಅನುಗ್ರಹ ಪಡೆದರು. ಉತ್ಸವ ಮೂರ್ತಿಯನ್ನು ದೇವಾಲಯದ ಒಳಗೆ ಕೊಂಡೊಯ್ಯುವಲ್ಲಿಗೆ ಹೊಸಕಟ್ಟೆ ಉತ್ಸವ ಸಂಪನ್ನವಾಯಿತು.
ಇಂದು ಕೆರೆಕಟ್ಟೆ ಉತ್ಸವ
ಧರ್ಮಸ್ಥಳ ಲಕ್ಷದೀಪೋತ್ಸವ 2024 ಹಿನ್ನೆಲೆ ರಾಜ್ಯಮಟ್ಟದ 45ನೇ ವರ್ಷದ ವಸ್ತುಪ್ರದರ್ಶನ ಮಂಗಳವಾರ ಧರ್ಮಸ್ಥಳದಲ್ಲಿ ಆರಂಭಗೊಂಡಿದೆ. ಸುಮಾರು 318 ವೈವಿಧ್ಯಮಯ ಮಳಿಗೆಗಳು ಈ ವಾರಾಂತ್ಯದವರೆಗೆ ಇಲ್ಲಿದೆ. ಮಂಗಳವಾರ ಉಜಿರೆಯಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ನಡೆದಿದ್ದು, ಪ್ರಾರ್ಥನೆ, ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಭಕ್ತರು ಬಂದು ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನವೆಂಬರ್ 27ರಂದು ಕೆರೆಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿ ಮಾರುಕಟ್ಟೆ ಉತ್ಸವ, 30ರಂದು ಗೌರಿ ಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ) ನಡೆಯಲಿದೆ.
ನವೆಂಬರ್ 28 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5:30 ರಿಂದ ನಾಗಸ್ವರ ವಾದನ, 7 ಗಂಟೆಯಿಂದ ಸಾತ್ವಿಕ ಸಂಗೀತ, ನೃತ್ಯಾರ್ಚನೆ, ನೃತ್ಯ ರೂಪಕ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ. ಡಿ.1ರಂದು ಸಂಜೆ 6.30ಕ್ಕೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣಪೂಜೆ ನಡೆಯಲಿದೆ.
ನವೆಂಬರ್ 29ರಂದು ಸರ್ವಧರ್ಮ ಸಮ್ಮೇಳನ
ಅಮೃತವರ್ಷಿಣಿ ಸಭಾಭವನದಲ್ಲಿ ನ. 29ರಂದು ಸರ್ವ ಧರ್ಮ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದೆ. ಸಂಜೆ 5ಗಂಟೆಯಿಂದ ಆರಂಭವಾಗುವ ಸಮ್ಮೇಳನವನ್ನು ರಾಜ್ಯ ಗೃಹಸಚಿವ ಡಾ.ಜಿ ಪರಮೇಶ್ವರ್ ಉದ್ಘಾಟಿಸುವರು. ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮ ಮಹಾ ಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ನ. 30ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ.ರಾ. ಗಣೇಶ ಉದ್ಘಾಟಿಸುವರು. ಲೇಖಕ ಸಂಶೋಧಕ ಡಾ. ಪಾದೆಕಲ್ಲು ವಿಷ್ಣುಭಟ್ಟ ಅಧ್ಯಕ್ಷತೆ ವಹಿಸುವರು.