ತೆಕ್ಕಾರು ಬ್ರಹ್ಮಕಲಶ: ಕನಸಲ್ಲಿ ಕಂಡ ಕೃಷ್ಣನ ಗುಡಿಯಲ್ಲಿ ನೋಡಲು ಗ್ರಾಮಸ್ಥರ ಕಾತರ, 9 ದಿನ ವಿವಿಧ ಕಾರ್ಯಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ತೆಕ್ಕಾರು ಬ್ರಹ್ಮಕಲಶ: ಕನಸಲ್ಲಿ ಕಂಡ ಕೃಷ್ಣನ ಗುಡಿಯಲ್ಲಿ ನೋಡಲು ಗ್ರಾಮಸ್ಥರ ಕಾತರ, 9 ದಿನ ವಿವಿಧ ಕಾರ್ಯಕ್ರಮ

ತೆಕ್ಕಾರು ಬ್ರಹ್ಮಕಲಶ: ಕನಸಲ್ಲಿ ಕಂಡ ಕೃಷ್ಣನ ಗುಡಿಯಲ್ಲಿ ನೋಡಲು ಗ್ರಾಮಸ್ಥರ ಕಾತರ, 9 ದಿನ ವಿವಿಧ ಕಾರ್ಯಕ್ರಮ

Thekkaru Brahmakalasha: ತೆಕ್ಕಾರು ಗ್ರಾಮದ ಜನರಲ್ಲಿ ಈಗ ಕೃಷ್ಣನಾಮಜಪವೊಂದೇ. ಗೋಪಾಲಕೃಷ್ಣನ ಐದೂವರೆ ಅಡಿ ಎತ್ತರದ ಪ್ರತಿಮೆಯು, ದೇವರಗುಡ್ಡದಲ್ಲಿ ನಿರ್ಮಾಣವಾಗಿರುವ ಸುಂದರ ದೇಗುಲದಲ್ಲಿ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ತೆಕ್ಕಾರು ಬ್ರಹ್ಮಕಲಶದ ವಿವಿಧ ದಿನಗಳ ಕಾರ್ಯಕ್ರಮಗಳ ವಿವರ ಇಲ್ಲಿದೆ.

ತೆಕ್ಕಾರು ಬ್ರಹ್ಮಕಲಶ: ಕೃಷ್ಣನ ನೋಡಲು ಗ್ರಾಮಸ್ಥರ ಕಾತರ, 9 ದಿನ ವಿವಿಧ ಕಾರ್ಯಕ್ರಮ
ತೆಕ್ಕಾರು ಬ್ರಹ್ಮಕಲಶ: ಕೃಷ್ಣನ ನೋಡಲು ಗ್ರಾಮಸ್ಥರ ಕಾತರ, 9 ದಿನ ವಿವಿಧ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶಕ್ಕೆ ದಿನಗಣನೆ ಶುರುವಾಗಿದೆ. ದೇವರಗುಡ್ಡೆಯಲ್ಲಿ ದೇವಾಲಯವಿದೆ. ಈಗಾಗಲೇ ಶ್ರೀಕೃಷ್ಣನ ಅದ್ಧೂರಿ ಪುರಪ್ರವೇಶ ನಡೆದಿದ್ದು, ಗ್ರಾಮ ಮಾತ್ರವಲ್ಲದೆ ಬೆಳ್ತಂಗಡಿ ತಾಲೂಕಿನ ಜನರು ಗೋವರ್ಧನಗಿರಿಧಾರಿಯನ್ನು ಕಣ್ತುಂಬಿಕೊಂಡಿದ್ದಾರೆ. ತಾಲೂಕಿನ ಪ್ರಮುಖ ಮಾರ್ಗಗಳಲ್ಲಿ ವೈಭಯುತ ಮೆರವಣಿಗೆಯ ಮೂಲಕ ಗೋಪಾಲಕೃಷ್ಣನನ್ನು ದೇವರಗುಡ್ಡೆಗೆ ಬರಮಾಡಿಕೊಳ್ಳಲಾಗಿದೆ. ಅತ್ತ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿ ಕೂಡಾ ಅಂತಿಮ ಹಂತದಲ್ಲಿದ್ದು, ನೂತನ ಪ್ರಾಸಾದದಲ್ಲಿ ಗೋಪಾಲಕೃಷ್ಣನ ನೂತನ ಬಿಂಬ ಪ್ರತಿಷ್ಠೆ ಪ್ರಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ.

ಏಪ್ರಿಲ್‌ 25ರ ಶುಕ್ರವಾರದಿಂದ ಮೇ 03ರ ಶನಿವಾರದವರೆಗೆ ಒಟ್ಟು 9 ದಿನಗಳ ಕಾಲ ತೆಕ್ಕಾರಿನಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ, ನೂತನ ಪ್ರಾಸಾದದಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವರ ನೂತನ ಬಿಂಬ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಹೀಗಾಗಿ ಗ್ರಾಮಕ್ಕೆ ಗ್ರಾಮವೇ ಸಂಭ್ರಮದಲ್ಲಿ ಮುಳುಗಿದೆ. ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿದ್ದು, ದೇಗುಲ ಕಾಮಗಾರಿ ಬೇಗನೆ ಮುಗಿಸಲು ನಿತ್ಯ ಕರೆಸೇವೆಯೂ ನಡೆಯುತ್ತಿದೆ.

ಬ್ರಹ್ಮಕಲಶ ಆರಂಭದಿಂದ ಕೊನೆಯ ದಿನದವರೆಗೂ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನವೂ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ಭೋಜನ ಇರಲಿದೆ. ಪ್ರತಿದಿನದ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಏಪ್ರಿಲ್ 25ರ ಶುಕ್ರವಾರ: ಉಗ್ರಾಣ ಮುಹೂರ್ತ, ಕೊಪ್ಪರಿಗೆ ಮುಹೂರ್ತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಏಪ್ರಿಲ್ 26, ಶನಿವಾರ: ಗಣಪತಿ ಪೂಜೆ, ಅಂಕುರ ಪೂಜೆ, ಬಿಂಬ ಪರಿಗ್ರಹ, ಬಿಂಬಕ್ಕೆ ಸಾಮೂಹಿಕ ಅರ್ಚನೆ, ಪಲ್ಲಪೂಜೆ. ಸಂಜೆ ವಿವಿಧಾ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ.

ಏಪ್ರಿಲ್‌ 27, ಭಾನುವಾರ: ತ್ರಿಕಾಲ ಪೂಜೆ, ಪಲ್ಲಪೂಜೆ, ಭಜನಾ ಸೇವೆ ಹಾಗೂ ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಸುಸ್ವರ ಮೆಲೋಡೀಸ್‌, ಉಪ್ಪಿನಂಗಡಿ ತಂಡದಿಂದ ಭಕ್ತಿ ಭಾವ ಗಾನಸುಧೆ ನಡೆಯಲಿದೆ.

ಏಪ್ರಿಲ್‌ 28, ಸೋಮವಾರ: ಬೆಳಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಂಜೆ ಭಜನಾ ಸೇವೆ, ರಾತ್ರಿ 7 ಗಂಟೆಗೆ ಬ್ರಹ್ಮಕಲಶ ಪ್ರತಿಷ್ಠಾರ್ಥಂ ಅಂಕುರಾರ್ಪಣೆ. ಸಂಜೆ 6 ಗಂಟೆಯಿಂದ ಪುತ್ತೂರು ಶಾಸಕ ಅಶೋಕ್‌ ರೈ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಾಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಯಿಂದ ದೇವದಾಸ್‌ ಕಾಪಿಕಾಡ್‌ ನೇತೃತ್ವದ ಚಾಪರ್ಕ ಕಲಾವಿದರಿಂದ ‘ಏರ್ಲಾ ಗ್ಯಾರಂಟಿ ಅತ್ತ್’ ನಾಟಕ ಪ್ರದರ್ಶನ ಇರಲಿದೆ.

ಏಪ್ರಿಲ್‌ 29, ಮಂಗಳವಾರ: ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ. ರಾತ್ರಿ 8 ಗಂಟೆಗೆ ವಿಠಲ್‌ ನಾಯಕ್‌ ಕಲ್ಲಡ್ಕ ನೇತೃತ್ವದಲ್ಲಿ ‘ಗೀತಾ ಸಾಹಿತ್ಯ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.

ಏಪ್ರಿಲ್‌ 30, ಬುಧವಾರ: ಬೆಳಗ್ಗೆ 8 ಗಂಟೆಯಿಂದ ಗೋಪಾಲಕೃಷ್ಣ ದೇವರ ಬಿಂಬಪ್ರಾಣ ಪ್ರತಿಷ್ಠೆ, ಗಣಪತಿ ಮತ್ತು ದುರ್ಗೆ ನೂತನ ಬಿಂಬ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಬಲಿ, ಮಧ್ಯಾಹ್ನ ಪೂಜೆ, ನಿತ್ಯ ನಿಮಿತ್ತಿಕೆಗಳ ನಿಶ್ಚಯ, ಮತ್ತು ಅನುಷ್ಠಾನ ಸಂಕಲ್ಪ ಪ್ರಾರ್ಥನೆ. ಮಧ್ಯಾಹ್ನ ವಿಷ್ಣುಸಹಸ್ರನಾಮ ಮತ್ತು ನಾರಾಯಣೀಯಂ ಪಾರಾಯಣ, ಸಂಜೆ 4:30ರಿಂದ ಡಾ| ವಿದ್ಯಾಭೂಷಣ ಇವರಿಂದ ಭಕ್ತಿಗಾನಸುಧೆ. ಸಂಜೆ 6ರಿಂದ ಧಾರ್ಮಿಕ ಸಭಾಕಾರ್ಯಕ್ರಮ, ರಾತ್ರಿ 8 ಗಂಟೆಯಿಂದ ಸಾಯಿಶಕ್ತಿ ಕಲಾಬಳಗ ಮಂಗಳೂರು ಇವರಿಂದ 'ಜೋಡುಜೀಟಿಗೆ' ನಾಟಕ ಪ್ರದರ್ಶನ ಇರಲಿದೆ.

ಮೇ 1, ಗುರುವಾರ: ವೈದಿಕ ಕಾರ್ಯಕ್ರಮಗಳು, ಭಜನಾ ಸೇವೆ, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭೆ, ರಾತ್ರಿ 8 ಗಂಟೆಯಿಂದ ಇಂಚರಾ ಮ್ಯೂಸಿಕ್ ತಂಡದಿಂದ ಭಕ್ತಿ ರಸಮಂಜರಿ, ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ, ಕಾಟಿಪಳ್ಳ ತಂಡದಿಂದ 'ಕೃಷ್ಣಲೀಲೆ ಕಂಸವಧೆ' ಯಕ್ಷಗಾನ‌ ನಡೆಯಲಿದೆ.

ಮೇ 2, ಶುಕ್ರವಾರ: ವಿವಿಧ ವೈದಿಕ ಕಾರ್ಯಕ್ರಮಗಳು, ಭಜನಾ ಸೇವೆ, ರಾತ್ರಿ ಕಲಶ ಪೂಜೆ, ಬ್ರಹ್ಮಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ ಇರಲಿದೆ. ಸಂಜೆ 6 ಗಂಟೆಯಿಂದ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ. ರಾತ್ರಿ 8 ಗಂಟೆಯಿಂದ ಅಮ್ಮ ಕಲಾವಿದೆರ್‌ ಮಂಗಳೂರು ಇವರಿಂದ ತುಳು ಹಾಸ್ಯಮಯ ನಾಟಕ 'ಜಗತ್ತೇ ಶೂನ್ಯ ಸ್ವಾಮಿ' ಪ್ರದರ್ಶನ ಇರಲಿದೆ.

ಮೇ 3, ಶನಿವಾರ: ಕವಾಟೋದ್ಘಾಟನೆ, ತೈಲಾಂಭ್ಯಂಗನ, ಉಷಃ ಪೂಜೆ, ಪರಿಕಲಶಾಭಿಷೇಕ, ಭಜನಾ ಸೇವೆ, ಧಾರ್ಮಿಕ ಸಭಾ ಕಾರ್ಯಕ್ರಮ. ರಾತ್ರಿ 8 ಗಂಟೆಯಿಂದ 'ಗೆಜ್ಜೆಗಿರಿ ಕ್ಷೇತ್ರಮಹಾತ್ಮೆ' ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಭಕ್ತರಿಗೆ ಅರ್ಚನೆಗೆ ಅವಕಾಶ

ಗೋಪಾಲಕೃಷ್ಣನ ಮೂರ್ತಿಗೆ ಭಕ್ತಾದಿಗಳು ಸ್ವತಃ ಅರ್ಚನೆ ಮಾಡಲು ಅವಕಾಶವಿದೆ. ಏಪ್ರಿಲ್‌ 26ರ ಬೆಳಗ್ಗೆ 10 ಗಂಟೆಯಿಂದ 28ರ ಸಂಜೆ 5 ಗಂಟೆಯವರೆಗೆ ಅರ್ಚನೆ ಮಾಡಿ ಆರತಿ ಬೆಳಗಬಹುದು.

ಅದ್ಧೂರಿ ಪುರಪ್ರವೇಶ

ಏಪ್ರಿಲ್‌ 5ರಂದು ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹದ ಪುರಪ್ರವೇಶ ಅದ್ಧೂರಿಯಾಗಿ ನಡೆದಿದೆ. ಗುರುವಾಯನಕೆರೆ ಶಶಿಧರ ಶೆಟ್ಟಿ ಅವರ ನಿವಾಸದಿಂದ ವಾಹನ ಜಾಥಾ ಮೂಲಕ ಕಲ್ಲೇರಿ, ಉಪ್ಪಿನಂಗಡಿ, ಹೊಸಮೊಗ್ರು ಮಾರ್ಗವಾಗಿ ತೆಕ್ಕಾರು ಗ್ರಾಮದ ದೇವಸ್ಥಾನಕ್ಕೆ ಮೆರವಣಿಗೆ ತಲುಪಿದೆ.

ಏಪ್ರಿಲ್‌ 24ರಂದು ಆಭರಣ ಆಗಮನ

ಏಪ್ರಿಲ್‌ 24ರಂದು ಗೋಪಾಲಕೃಷ್ಣ ದೇವರಿಗೆ ಭಾರತದ ವಿವಿಧ ಕೃಷ್ಣನ ಪುಣ್ಯಕ್ಷೇತ್ರಗಳಲ್ಲಿ ಪೂಜೆ ನಡೆದು ಆಭರಣಗಳು ಬರಲಿದೆ. ಮಥುರಾ, ದ್ವಾರಕಾ, ಗುರುವಾಯೂರು, ಉಡುಪಿ ಮೊದಲಾದ ಪುಣ್ಯಕ್ಷೇತ್ರಗಳಲ್ಲಿ ಪೂಜಿಸಲ್ಪಟ್ಟ ಆಭರಣಗಳು ಬಂಟ್ವಾಳದ ಮಣಿಹಳ್ಳದಿಂದ ಮೆರವಣಿಗೆ ಮೂಲಕ ತೆಕ್ಕಾರು ತಲುಪಲಿದೆ.

ಶ್ರೀಕೃಷ್ಣ ವಿಗ್ರಹದ ವಿಶೇಷ

ತೆಕ್ಕಾರಿನ ದೇವರಗುಡ್ಡೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀಕೃಷ್ಣನ ವಿಗ್ರಹ ಐದುವರೆ ಅಡಿ ಎತ್ತರವಿದೆ. ಇಷ್ಟು ಎತ್ತರದ ದೇವರ ವಿಗ್ರಹ ದೇಗುಲದ ಗರ್ಭಗುಡಿಯಲ್ಲಿರುವುದು ಭಾರಿ ಅಪರೂಪ. ಹೊಯ್ಸಳ ಶೈಲಿಯಲ್ಲಿ ಗೋಪಾಲಕೃಷ್ಣ ಕೊಳಲು ಊದುವ ಭಂಗಿಯಲ್ಲಿ ನಿಂತಿರುವ ವಿಗ್ರಹ ಇದಾಗಿದೆ. ಶ್ರೀಕೃಷ್ಣನ ವಿಗ್ರಹ ಕೆತ್ತನೆಗೆ ಆಗಿರುವ ಸಂಪೂರ್ಣ ವೆಚ್ಚವನ್ನು ಸಂಪೂರ್ಣವಾಗಿ ಗ್ರಾಮದ ಮಹಿಳೆಯರು ಭರಿಸಿರುವುದು ಮತ್ತೊಂದು ವಿಶೇಷ. ಕೃಷ್ಣನ ವಿಗ್ರಹದಲ್ಲಿ ಬಹುತೇಕ ಪ್ರತಿಮನೆಯ ನಾರಿಯರ ಭಕ್ತಿ-ಭಾವದ ಶ್ರಮವಿದೆ.

ಕನಸು ನನಸಾಯ್ತು

ತೆಕ್ಕಾರಿನಲ್ಲಿ 300 ವರ್ಷಗಳ ಹಿಂದೆಯೇ ದೇಗುಲ ಇದ್ದ ಬಗ್ಗೆ, ಇಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿದ್ದ ಬಗ್ಗೆ ಪುರಾವೆಗಳಿವೆ. ಆದರೆ ದೇವಸ್ಥಾನ ನಿರ್ಮಾಣ ಕಾರ್ಯ ಮುನ್ನೆಲೆಗೆ ಬರಲು ಕಾರಣವಾಗಿದ್ದು 'ಕನಸು'. ಲಕ್ಷ್ಮಣ ಎಂಬ ಹೆಸರಿನ ಬೆಂಗಳೂರಿನ ಉದ್ಯಮಿಯೊಬ್ಬರು, ನೂರಾರು ವರ್ಷಗಳ ಹಿಂದೆ ದೇವರಗುಡ್ಡೆಯಲ್ಲಿ ದೇವಸ್ಥಾನ ಇದ್ದ ಸ್ಥಳದ ಪಕ್ಕದ ಜಮೀನು ಖರೀದಿಸಿದ್ದರು. ಒಂದು ದಿನ ತಮ್ಮ ಮನೆಯಲ್ಲಿ ಮಲಗಿದ್ದಾಗ ಜಮೀನಿನಲ್ಲಿ ಇರುವ ಕೆರೆಯಲ್ಲಿ ಶ್ರೀಮನ್ನಾರಾಯಣ ಮಲಗಿದ ಭಂಗಿಯಲ್ಲಿ ಇರುವಂತೆ ಕನಸು ಕಂಡರು. ಆ ಬಳಿಕ ಗ್ರಾಮಸ್ಥರೆಲ್ಲಾ ಸೇರಿ ಪ್ರಶ್ನಾಚಿಂತನೆ ನಡೆಸಿ ಸ್ಥಳದಲ್ಲಿ ಉತ್ಖನನ ಮಾಡಿದಾಗ ಗೋಪಾಲಕೃಷ್ಣನ ಭಗ್ನವಾದ ಮೂರ್ತಿ ಹಾಗೂ ಇತರ ದೇವಸ್ಥಾನದ ಅವಶೇಷಗಳು ಸಿಕ್ಕವು. ಕಂಡ ಕನಸು ನಿಜವಾಗಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಯ್ತು. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾಯ್ತು. ಆ ಬಳಿಕ ಊರ ಪರವೂರ ಜನರ ನೆರವಿನಲ್ಲಿ ಸಮಿತಿಗಳು ರಚನೆಯಾಗಿ ದೇಗುಲ ನಿರ್ಮಾಣ ಕಾರ್ಯ ನಡೆಯಿತು. (ಈ ಕುರಿತ ವಿವರವಾದ ಸುದ್ದಿಯ ಲಿಂಕ್‌ ಈ ಸುದ್ದಿಯ ಕೊನೆಯಲ್ಲಿ)

ಒಂದು ವರ್ಷದಲ್ಲಿ ದೇಗುಲ ನಿರ್ಮಾಣ ಕಾರ್ಯ ಪೂರ್ಣ

ತೆಕ್ಕಾರು ಗ್ರಾಮದಲ್ಲಿ ದೇಗುಲ ನಿರ್ಮಾಣವು ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಈ ಗ್ರಾಮದಲ್ಲಿ ನಿತ್ಯ ಆರಾಧನೆಯಾಗುವ ದೇವಸ್ಥಾನಗಳೇ ಇರಲಿಲ್ಲ. 300 ವರ್ಷಗಳ ಹಿಂದೆ ಇಲ್ಲಿ ದೇಗುಲವಿದ್ದು ನಿತ್ಯಪೂಜೆಗಳು ನಡೆಯುತ್ತಿದ್ದವು. ಆದರೆ ಕ್ರಮೇಣ ಅದು ಕಾಲಗರ್ಭದಲ್ಲಿ ಸೇರಿಹೋಯ್ತು. ಕಳೆದ ಕೆಲವು ವರ್ಷಗಳಿಂದ ಹಲವು ಮಹತ್ವದ ಬೆಳವಣಿಗೆಗೆಳ ನಡೆದು, ಕಳೆದ ವರ್ಷವಷ್ಟೇ ದೇಗುಲ ನಿರ್ಮಾಣ, ಜೀರ್ಣೋದ್ಧಾರ ಕಾರ್ಯಗಳು ಆರಂಭಗೊಂಡಿತು. ಇದೀಗ ಒಂದು ವರ್ಷದೊಳಗೆ ದೇಗುಲ ನಿರ್ಮಾಣವಾಗಿ, ಬ್ರಹ್ಮಕಲಶಕ್ಕೆ ದಿನಾಂಕ ನಿಗದಿಯಾಗಿದೆ. ಮನಸ್ಸಿದ್ದರೆ ಏನಾದರೂ ಮಾಡಬಹುದು ಎಂಬುದಕ್ಕೆ ತೆಕ್ಕಾರು ಗ್ರಾಮ ಸಾಕ್ಷಿಯಾಗಿದೆ.

ದೇಗುಲ ವೈಶಿಷ್ಟ್ಯ

ದೇವರಗುಡ್ಡೆಯಲ್ಲಿ ಗೋಪಾಲಕೃಷ್ಣ ದೇವಸ್ಥಾನವು ಅಂದಾಜು 2.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ದೇಗುಲದ ಗರ್ಭಗುಡಿಯನ್ನು, ಚಾವಣಿ ಸಹಿತ ಸಂಪೂರ್ಣ ಶಿಲೆಯಿಂದ ನಿರ್ಮಿಸಲಾಗಿದ್ದು, ಗಜಪೃಷ್ಠಾಕೃತಿಯಲ್ಲಿ ರಚಿಸಲಾಗಿದೆ. ದೇಗುಲದ ಸುತ್ತುಪೌಳಿಯೂ ಶಿಲೆ ಹಾಗೂ ಕೆಂಪುಕಲ್ಲು ಬಳಸಿ ಆಕರ್ಷಕವಾಗಿ ನಿರ್ಮಿಸಲಾಗಿದೆ. ಸುತ್ತುಪೌಳಿಯ ಚಾವಣಿಯನ್ನು ಗುಣಮಟ್ಟದ ಮರ ಹಾಗೂ ಹೆಂಚಿನಿಂದ ನಿರ್ಮಿಸಲಾಗುತ್ತಿದೆ. ತೆಕ್ಕಾರು ಗ್ರಾಮದ ಭಟ್ರಬೈಲು ಎಂಬ ಹಳ್ಳಿ ಭಾಗದಲ್ಲಿ, ಸುತ್ತಲೂ ಹಸಿರು ಪರಿಸರದ ನಡುವೆ ದೇವಾಲಯ ನಿರ್ಮಾಣವಾಗಿದೆ. ಈ ಪರಿಸರದಲ್ಲಿ, ಗರ್ಭಗುಡಿಯೊಳಗೆ ಐದೂವರೆ ಅಡಿಯ ಕೃಷ್ಣನನ್ನು ಕಣ್ತುಂಬಿಕೊಳ್ಳಲು ಊರಿಗೆ ಊರೇ ಕಾಯುತ್ತಿದೆ. ಬ್ರಹ್ಮಕಲಶ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಜನರು ಬರುವ ನಿರೀಕ್ಷೆ ಇದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner