Dakshina Kannada Home Stay: ದಕ್ಷಿಣ ಕನ್ನಡ, ಉಡುಪಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿಗಾ, ಕಡಲತೀರದ ಹೋಂ ಸ್ಟೇಗಳಿಗೆ ಬೇಡಿಕೆ
Dakshina Kannada Home Stay: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಗಟ್ಟಿಯಾಗಿ ನೆಲೆಯೂರಿದ್ದು, ಹೋಂಸ್ಟೇಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

Dakshina Kannada Home Stay: ಕಳೆದ ವರ್ಷ ನವೆಂಬರ್ ನಲ್ಲಿ ಮಂಗಳೂರು ಹೊರವಲಯದ ಹೋಂ ಸ್ಟೇ ಒಂದರಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣದ ಬಳಿಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹೋಂ ಸ್ಟೇಗಳ ಮೇಲೆ ಕಟ್ಟುನಿಟ್ಟಿನ ನಿಗಾವನ್ನು ಪ್ರವಾಸೋದ್ಯಮ ಇಲಾಖೆ ಇರಿಸಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ತಪಾಸಣೆ ನಡೆಸಿ, ಅನಧಿಕೃತ ಹೋಂ ಸ್ಟೇಗಳಿಗೆ ನೋಟೀಸ್ ಜಾರಿ ಮಾಡಲಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲಾಖೆ ಪ್ರಕಾರ, ಅನಧಿಕೃತ ರೆಸಾರ್ಟ್ ಗಳು ಇಲ್ಲ. ಆದರೆ ಇರುವ ರೆಸಾರ್ಟ್ ಗಳು ಮಾನದಂಡ ಪ್ರಕಾರ ಕಾರ್ಯಾಚರಣೆ ನಡೆಸುತ್ತಿದೆಯೇ ಎಂಬುದನ್ನು ತಪಾಸಣೆ ಮಾಡಬೇಕಾಗಿರುವುದು ಇಲಾಖೆ ಮುಂದಿರುವ ದೊಡ್ಡ ಸವಾಲು. ಬೇಸಿಗೆ ಸಂದರ್ಭ ಕಡಲತೀರದ ಹೋಂ ಸ್ಟೇಗಳಿಗೆ ಈಗ ಭಾರೀ ಬೇಡಿಕೆ ಇದೆ. ಈ ವೇಳೆಯೇ ತಪಾಸಣೆ ಚಟುವಟಿಕೆಯೂ ಚುರುಕಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಕಣ್ಗಾವಲು ಇರಿಸಿದೆ.
ಕರಾವಳಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ, ಕಾಡುಗಳ ಜತೆಗೆ ದೇಗುಲ ದರ್ಶನವು ಪ್ರಸಿದ್ದಿ.ಕರ್ನಾಟಕದ ನಾನಾ ಭಾಗಗಳಿಂದ ಮಾತ್ರವಲ್ಲದೇ ಹೊರ ರಾಜ್ಯ, ದೇಶಗಳಿಂದಲೂ ಪ್ರವಾಸಿಗರು ಕರಾವಳಿ ಭಾಗಕ್ಕೆ ಬರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಗಟ್ಟಿಯಾಗಿ ನೆಲೆಯೂರಿದೆ. ಉಡುಪಿ ಜಿಲ್ಲೆಯೂ ಹಿಂದೆ ಬಿದ್ದಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಹೊಟೇಲ್, ಲಾಡ್ಜ್‌ಗಳ ಜತೆಯಲ್ಲಿ ಹೋಂಸ್ಟೇಗಳಲ್ಲಿ ತಂಗಲು ಇಷ್ಟಪಡುತ್ತಾರೆ. ಕರಾವಳಿಯಲ್ಲೂ ಹಲವು ವರ್ಷಗಳಿಂದ ಹೋಂಸ್ಟೇ ವಹಿವಾಟು ಜೋರಾಗಿದೆಯೇ ಇದೆ. ಇದನ್ನು ವಿಸ್ತರಣೆ ಮಾಡುವ ಚಟುವಟಿಕೆ ಕೂಡ ಅಲ್ಲಲ್ಲಿ ನಡೆದೇ ಇದೆ.
ಇದರೊಟ್ಟಿಗೆ ಇತ್ತೀಚಿನ ಪ್ರವಾಸಿಗರ ಮೇಲಿನ ದಾಳಿ, ಕೊಲೆಯಂತಹ ಪ್ರಕರಣಗಳ ನಂತರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖೆ ಕಟ್ಟೆಚ್ಚರ ವಹಿಸುತ್ತಿದೆ.
ಉಡುಪಿ ಜಿಲ್ಲೆಯಲ್ಲಿ 187 ನೋಂದಾಯಿತ
ಉಡುಪಿ ಜಿಲ್ಲೆಯಲ್ಲಿ 187 ಹೋಂ ಸ್ಟೇಗಳು ನೋಂದಣಿಯಾಗಿವೆ. ಅಕ್ರಮವಾಗಿ ಸುಮಾರು 130ಕ್ಕೂ ಅಧಿಕ ಹೋಂ ಸ್ಟೇಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಇವುಗಳಿಗೆ ಪ್ರವಾಸೋದ್ಯಮ ಇಲಾಖೆ ನೋಟಿಸ್ ಜಾರಿ ಮಾಡಿದೆ. ಪತ್ತೆ ಹಚ್ಚಲು ಕಷ್ಟವೆನಿಸುವ ಹೋಂ ಸ್ಟೇಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ.
ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆ ಕೆಲ ಹೋಂ ಸ್ಟೇಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ. ಅರಣ್ಯದ ಒಳಗೆ ಮನೆಯನ್ನೇ ಹೋಂ ಸ್ಟೇಯನ್ನಾಗಿಸಿದವರಿದ್ದರೆ ಸಮಸ್ಯೆ ಇಲ್ಲ, ಆದರೆ ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಿ, ಹೋಂ ಸ್ಟೇ ನಡೆಸಿಕೊಂಡಿರುವವರಿಗೆ ಇಲಾಖೆಯೂ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡದಲ್ಲಿವೆ 139 ಹೋಂ ಸ್ಟೇ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 139 ಹೋಂ ಸ್ಟೇಗಳನ್ನು ನೋಂದಾಯಿಸಲಾಗಿದೆ. ಇವುಗಳಲ್ಲಿ 120ಕ್ಕೂ ಅಧಿಕ ಹೋಂ ಸ್ಟೇಗಳು ನಿಯಮಾಸುಸಾರ ಕಾರ್ಯಾಚರಿಸುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಇದುವರೆಗೂ ದೊಡ್ಡ ಪ್ರಮಾಣದ ದೂರುಗಳು ಬಂದಿಲ್ಲ.
ಅಕ್ರಮ ಪತ್ತೆ ಹೇಗೆ ಮಾಡೋದು
ಹೋಂ ಸ್ಟೇಗಳನ್ನು ಹುಡುಕಿದಾಗ ಅವು ಅಕ್ರಮವೇ ಅಥವಾ ಸಕ್ರಮವೇ ಎಂಬುದನ್ನು ಇಲಾಖೆಯೇ ಖಚಿತಪಡಿಸಕೊಳ್ಳಬೇಕು. ಸಾರ್ವಜನಿಕರಿತಂಗೂ ಇದನ್ನು ಪತ್ತೆ ಮಾಡುವುದು ಕಷ್ಟ. ಸ್ಥಳೀಯರಿಂದ ದೂರು ಬಂದರೆ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಪರಿಶೀಲನೆ ನಡೆಸುತ್ತಾರೆ. ಕಟ್ಟಡ, ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ಹೋಂ ಸ್ಟೇ ಮಾಲೀಕನ ಹೆಸರಲ್ಲಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ದಾಖಲೆ ದೊರಕದಿದ್ದರಷ್ಟೇ ನೋಟಿಸ್ ಜಾರಿ ಮಾಡಲಾಗುತ್ತದೆ. ಸ್ತಳೀಯರು ತಮ್ಮ ಸುತ್ತಮುತ್ತಲಿರುವ ಹೋಂ ಸ್ಟೇಗಳ ಚಟುವಟಿಕೆಗಳನ್ನು ಗಮನಿಸಿ ಅನುಮಾನಪಟ್ಟರೆ, ದೂರುಗಳು ಬರುತ್ತವೆ. ಇಲ್ಲವಾದರೆ ಅವುಗಳನ್ನು ಹುಡುಕುವುದು ಸುಲಭವೇನಲ್ಲ ಎನ್ನುತ್ತಾರೆ ಅಧಿಕಾರಿಗಳು.
ವರದಿ: ಹರೀಶ ಮಾಂಬಾಡಿ. ಮಂಗಳೂರು
