Breaking News: ದರ್ಶನ್, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳಿಗೂ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ದರ್ಶನ್, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳಿಗೂ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು

Breaking News: ದರ್ಶನ್, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳಿಗೂ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು

Darshan Pavitra Gets Bail: ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್‌ ಸಹಿತ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ನಟ ದರ್ಶನ್‌ ಹಾಗೂ ನಟಿ ಪವಿತ್ರಾ ಗೌಡ ಅವರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.
ನಟ ದರ್ಶನ್‌ ಹಾಗೂ ನಟಿ ಪವಿತ್ರಾ ಗೌಡ ಅವರಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

Darshan Pavitra Gets Bail:ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಮುಖ್ಯ ಆರೋಪಿಗಳಾದ ಪವಿತ್ರಾ ಗೌಡ ಮತ್ತು ಚಿತ್ರನಟ ದರ್ಶನ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ (ಡಿ 13) ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್ ಶೆಟ್ಟಿ ರೇಣುಕಸ್ವಾಮಿ ಕೊಲೆ ಪ್ರಕರಣದ ಒಟ್ಟು 7 ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದರು. ಈಗಾಗಲೇ ಆರೋಗ್ಯದ ಕಾರಣದಿಂದ ದರ್ಶನ್‌ ಅವರು ಮಧ್ಯಂತರ ಜಾಮೀನಿನ ಮೇಲೆ ಆರು ವಾರದ ಹಿಂದೆಯೇ ಹೊರಗೆ ಬಂದಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದ ಅವರನ್ನು ಬಿಡುಗಡೆ ಮಾಡಲಾಗಿದ್ದು. ಚಿಕಿತ್ಸೆ ಮುಂದುವರಿದಿದೆ. ಇದೇ ಪ್ರಕರಣದಲ್ಲಿನ ಕೆಲವು ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದ್ದು. ಅವರು ಹೊರಗಡೆ ಇದ್ದಾರೆ.

ಕಳೆದ ಡಿಸೆಂಬರ್ 9 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ತೀರ್ಪನ್ನು ಕಾಯ್ದಿರಿಸಿದ್ದರು. 33 ವರ್ಷದ ರೇಣುಕಸ್ವಾಮಿ ಅವರ ಶವ ಜೂನ್ 9 ರಂದು ಬೆಂಗಳೂರಿನಲ್ಲಿ ಪತ್ತೆಯಾಗಿತ್ತು. ದರ್ಶನ್ ಅವರ ಸೂಚನೆ ಮೇರೆಗೆ ನಡೆದ ಹಲ್ಲೆಯಿಂದ ಆದ ಗಾಯಗಳಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಹೇಳಿದ್ದರು.̇

ಜೂನ್‌ 11ರಂದು ಬಂಧನ

ದರ್ಶನ್ ಅವರ ಪ್ರೇಯಸಿ ಪವಿತ್ರಾಗೌಡ ಬಗ್ಗೆ ಮೃತ ರೇಣುಕಸ್ವಾಮಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದರು. ಅವರಿಗೆ ಆಶ್ಲೀಲ ಸಂದೇಶಗಳನ್ನೂ ಕಳಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ದರ್ಶನ್, ಚಿತ್ರದುರ್ಗದ ರೇಣುಕಸ್ವಾಮಿ ಅವರ ಅಪಹರಣಕ್ಕೆ ಸೂಚಿಸಿದ್ದರು ಎಂದು ಪೊಲೀಸರು ಹೇಳಿದ್ದರು. ಜೂನ್ 11 ರಂದು ದರ್ಶನ್‌ ಅವರನ್ನು ಬಂಧಿಸಲಾಗಿತ್ತು.

ಜಾಮೀನಿಗಾಗಿ ವಾದ

ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್, 'ದರ್ಶನ್ ಅವರನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ಅವರ ವಿರುದ್ಧ ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ' ಎಂದು ಹೇಳಿದ್ದರು. ಪವಿತ್ರಾ ಗೌಡ ಪರ ವಾದ ಮಂಡಿಸಿದ ವಕೀಲೆ ಶಿಲ್ಪಾ, 'ತನ್ನ ಕಕ್ಷಿದಾರರಿಗೆ ಕೊಲೆ ಸಂಚಿನ ಬಗ್ಗೆ ತಿಳಿದಿರಲಿಲ್ಲ' ಎಂದು ಹೇಳಿದ್ದರು.

ಮತ್ತೊಬ್ಬ ಆರೋಪಿ ಲಕ್ಷ್ಮಣ ಎಂ ಪರ ವಾದ ಮಂಡಿಸಿದ ವಕೀಲ ಅರುಣ ಶ್ಯಾಮ್, ತನಿಖೆಯ ಲೋಪದೋಷಗಳನ್ನು ಪ್ರಬಲವಾಗಿ ಪ್ರಸ್ತಾಪಿಸಿದರು. ತನಿಖೆಯಲ್ಲಿ ಹಲವು ಲೋಪಗಳಿವೆ ಎಂದರು. ಮರಣೋತ್ತರ ಪರೀಕ್ಷೆ ಹಾಗೂ ಸಾಕ್ಷಿಗಳ ಹೇಳಿಕೆ ದಾಖಲಿಸಲು ಏಕೆ ತಡವಾಯಿತು ಎನ್ನುವ ಬಗ್ಗೆ ಪೊಲೀಸರು ಸರಿಯಾದ ವಿವರ ಕೊಟ್ಟಿಲ್ಲ ಎಂದು ಅವರು ನ್ಯಾಯಮೂರ್ತಿಗಳ ಗಮನ ಸೆಳೆದರು.

ಸೋಮವಾರ ಪವಿತ್ರಾ ಗೌಡ ಬಿಡುಗಡೆ

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪವಿತ್ರಾಗೌಡ ಪರ ವಕೀಲೆ ಶಿಲ್ಪಾ, ಜಾಮೀನು ಸಿಕ್ಕಿರುವುದು ಖುಷಿಯ ವಿಚಾರ. ಈ ಪ್ರಕರಣದಲ್ಲಿ ಪವಿತ್ರಾಗೌಡ ಪಾತ್ರವನ್ನು ಪರಾಮರ್ಶಿಸಿ ನ್ಯಾಯಮೂರ್ತಿಗಳು ಜಾಮೀನು ಕೊಟ್ಟಿದ್ದಾರೆ. ಷರತ್ತುಗಳ ಬಗ್ಗೆ ಆದೇಶದ ಪ್ರತಿ ಸಿಕ್ಕ ಮೇಲೆ ತಿಳಿಯುತ್ತದೆ. ಸೋಮವಾರ ಪವಿತ್ರಾ ಗೌಡ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದರು.

ನ್ಯಾಯಾಲಯ ದರ್ಶನ್‌ಗೆ ವಿಧಿಸಿದ ಷರತ್ತುಗಳೇನು

ದರ್ಶನ್‌ ಅವರಿಗೆ ಹೈಕೋರ್ಟ್‌ ಕೆಲ ಷರತ್ತುಗಳನ್ನು ವಿಧಿಸಿ, ಅದರ ಅನ್ವಯವೇ ಜಾಮೀನು ಕೊಟ್ಟಿದೆ. ಅದರಲ್ಲಿ ಮೂರು ಮುಖ್ಯ ಅಂಶಗಳಿವೆ.

1) ಸಾಕ್ಷಿಗಳನ್ನು ನಾಶಪಡಿಸಬಾರದು

2) ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು

3) ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಹೋಗಬಾರದು.

ಈ ಮೂರೂ ಷರತ್ತುಗಳನ್ನು ಪಾಲಿಸಬೇಕು ಎನ್ನುವ ಸೂಚನೆಯನ್ನು ಹೈಕೋರ್ಟ್‌ ನೀಡಿದೆ ಎಂದು ದರ್ಶನ್ ಪರ ವಕೀಲರಾದ ಸುನಿಲ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ದರ್ಶನ್ ಬಿಡುಗಡೆಗೆ ಇನ್ನೂ ಸಮಯಬೇಕು

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದರ್ಶನ್ ಪರ ವಕೀಲ ಸುನಿಲ್ ಕುಮಾರ್, ಸಾಕ್ಷ್ಯನಾಶದ ಕಾನೂನು (ಐಪಿಸಿ ಸೆಕ್ಷನ್ 201) ಜಾಮೀನಿಗೆ ಅರ್ಹವಾಗುತ್ತದೆ. ದರ್ಶನ್ ವಿರುದ್ಧ ಪ್ರತ್ಯಕ್ಷ ಸಾಕ್ಷ್ಯ ನೀಡಿದ್ದವರ ದಾಖಲಾತಿ ಸಹ ತಡವಾಗಿದೆ. ಇದನ್ನೇ ನಾವು ಪ್ರಮುಖವಾಗಿ ಪ್ರಸ್ತಾಪಿಸಿದೆವು. ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದೇ ನಮ್ಮ ವಕೀಲರು ವಾದಿಸಿದರು. ಶಸ್ತ್ರಚಿಕಿತ್ಸೆ ವಿಚಾರ ಮತ್ತು ಅವರ ಚಿಕಿತ್ಸೆಯ ವಿವರವನ್ನು ಮಾಧ್ಯಮಗಳಿಗೆ ಕೊಡುವಂತಿಲ್ಲ ಎಂಬ ಸೂಚನೆಯಿದೆ. ಹೀಗಾಗಿ ಚರ್ಚಿಸಲು ಸಾಧ್ಯವಿಲ್ಲ. ಹೈಕೋರ್ಟ್‌ ಆದೇಶ ಲಭ್ಯವಾದ ನಂತರ ಸೆಷನ್ ನ್ಯಾಯಾಲಯದಲ್ಲಿ ಪಾಸ್‌ಪೋರ್ಟ್‌ ಇರಿಸಬೇಕಾಗುತ್ತದೆ. ಅದಾದ ನಂತರ ದರ್ಶನ್ ಎಂದು ಬಿಡುಗಡೆಯಾಗಲಿದ್ದಾರೆ ಎನ್ನುವುದು ತಿಳಿಯಲಿದೆ. ಸದ್ಯಕ್ಕೆ ಏನೂ ಹೇಳಲು ಆಗುವುದಿಲ್ಲ ಎಂದರು.

Whats_app_banner