ದರ್ಶನ್, ಪವಿತ್ರಾ ಗೌಡಗೆ ಸದ್ಯಕ್ಕಿಲ್ಲ ಜಾಮೀನು; ಸೋಮವಾರ ಬೇಲ್ ಸಿಕ್ಕರೆ ಹೆಲಿಕಾಫ್ಟರ್ ಮೂಲಕ ಬೆಂಗಳೂರಿಗೆ ಆಗಮನ?
ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್, ಪವಿತ್ರಾ ಗೌಡಗೆ ಸದ್ಯಕ್ಕಿಲ್ಲ ಜಾಮೀನು; ಸೋಮವಾರ ಬೇಲ್ ಸಿಕ್ಕರೆ ಹೆಲಿಕಾಫ್ಟರ್ ಮೂಲಕ ಬೆಂಗಳೂರಿಗೆ ಆಗಮನ?

ದರ್ಶನ್, ಪವಿತ್ರಾ ಗೌಡಗೆ ಸದ್ಯಕ್ಕಿಲ್ಲ ಜಾಮೀನು; ಸೋಮವಾರ ಬೇಲ್ ಸಿಕ್ಕರೆ ಹೆಲಿಕಾಫ್ಟರ್ ಮೂಲಕ ಬೆಂಗಳೂರಿಗೆ ಆಗಮನ?

Darshan Thoogudeepa: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಮತ್ತು ಪತಿತ್ರಾ ಗೌಡ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್​ 30ಕ್ಕೆ ಮುಂದೂಡಲಾಗಿದ್ದು, ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. (ವರದಿ-ಎಚ್. ಮಾರುತಿ)

ದರ್ಶನ್, ಪವಿತ್ರಾ ಗೌಡಗೆ ಸದ್ಯಕ್ಕಿಲ್ಲ ಜಾಮೀನು
ದರ್ಶನ್, ಪವಿತ್ರಾ ಗೌಡಗೆ ಸದ್ಯಕ್ಕಿಲ್ಲ ಜಾಮೀನು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿ 100 ದಿನಗಳಿಂದ ಹೆಚ್ಚು ಕಳೆದಿದ್ದಾರೆ. ಆದರೂ ಜಾಮೀನು ಪಡೆಯುವಲ್ಲಿ ವಿಫಲವಾಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್ ತೂಗುದೀಪ ಮತ್ತು ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಜಾಮೀನು ಭಾಗ್ಯ ಇಲ್ಲವಾಗಿದೆ. ಇಬ್ಬರೂ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ಇದೇ ತಿಂಗಳ 30ಕ್ಕೆ ಮುಂದೂಡಲಾಗಿದೆ. ಬೆಂಗಳೂರಿನ 57 ನೇ ಸಿಟಿ ಸಿವಿಲ್ ನ್ಯಾಯಾಲಯ ಈ ಆದೇಶ ನೀಡಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಶುಕ್ರವಾರ ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ತಕರಾರು ಅರ್ಜಿ ಸಲ್ಲಿಸಿದರು. ದರ್ಶನ್ ಪರ ವಾದಿಸಿದ ವಕೀಲ ಸುನೀಲ್, ಜಾಮೀನು ಅರ್ಜಿಯ ವಿಚಾರಣೆ ಸಂಬಂಧ ಎಸ್‌ಪಿಪಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರ ಹಿರಿಯ ವಕೀಲರು ಬೆಂಗಳೂರಿನಲ್ಲಿ ಇಲ್ಲ. ಆದ್ದರಿಂದ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು. ಇವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

ಪವಿತ್ರ ಗೌಡರ ಪರ ವಾದ ಮಾಡಿದ್ದೇನು?

ಈ ಕೊಲೆ ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನ ಕಕ್ಷಿದಾರರ ಪಾತ್ರವಿಲ್ಲ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಹಾಗೂ ದರ್ಶನ್‌ಗೆ ವಿಷಯ ತಿಳಿಸಿದ್ದರು. ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಇನ್ನಿತರ ಆರೋಪಿಗಳು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಪವಿತ್ರಾಗೌಡ ಶೆಡ್‌ಗೆ ಹೋಗಿದ್ದಾರೆ ಎಂದು ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆಯೇ ಹೊರತು ಕೊಲೆ ಮಾಡಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ಆರೋಪ ಪಟ್ಟಿಯಲ್ಲೂ ಪೊಲೀಸರು ಪವಿತ್ರಾಗೌಡ ಕೊಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿಲ್ಲ ಎಂದು ವಾದಿಸಿದರು.

ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷ ಸಾಕ್ಷಿ ಕಿರಣ್ ಅವರು ಪವಿತ್ರಾ ಗೌಡ ಅವರು ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದರು ಎಂದು ಹೇಳಿಕೆ ನೀಡಿದ್ದಾರೆ ಅಷ್ಟೇ. ಹೊಡೆದ ಮಾತ್ರಕ್ಕೆ ಕೊಲೆ ಮಾಡಿದಂತೆ ಎಂದು ಹೇಳಲಾಗದು. ಆದ್ದರಿಂದ ನನ್ನ ಕಕ್ಷಿದಾರರರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಕರಣದ 8ನೇ ಆರೋಪಿಯಾಗಿರುವ ರವಿಶಂಕರ್ ಜಾಮೀನು ಅರ್ಜಿ ಸಂಬಂಧ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದರು. ಸೋಮವಾರ ಪ್ರತಿವಾದ ಮಾಡುವುದಾಗಿ ಪ್ರಸನ್ನಕುಮಾರ್ ತಿಳಿಸಿದರು. ದರ್ಶನ್, ಪವಿತ್ರಾ ಗೌಡ ಸೇರಿ ಮೂವರ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟಂಬರ್ 30ಕ್ಕೆ ಮುಂದೂಡಿತು.

ಐವರು ಆರೋಪಿಗಳ ಜಾಮೀನು ಅರ್ಜಿಗೆ ಅಕ್ಟೋಬರ್ 5ಕ್ಕೆ

ಇದೇ ಪ್ರಕರಣದಲ್ಲಿ ಇನ್ನಿತರ ಐವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ಅಕ್ಟೋಬರ್ 5ಕ್ಕೆ ಮುಂದೂಡಿದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ 17 ಆರೋಪಿಗಳ ಪೈಕಿ 15, 16 ಮತ್ತು 17ನೇ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಜಾಮೀನು ಲಭ್ಯವಾಗುವ ವಿಶ್ವಾಸದಲ್ಲಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಯಿಂದ ಬೆಂಗಳೂರಿಗೆ ಮರಳಲು ಹೆಲಿಕಾಫ್ಟರ್ ಕಾಯ್ದಿರಿಸಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ. ರಸ್ತೆ ಮೂಲಕ ಪ್ರಯಾಣಿಸಿದರೆ ದಾರಿಯುದ್ದಕ್ಕೂ ಅಭಿಮಾನಿಗಳು ಸೇರುತ್ತಾರೆ. ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಭದ್ರತಾ ಸಮಸ್ಯೆಯೂ ಎದುರಾಗುತ್ತದೆ ಎಂಬ ಕಾರಣದಿಂದ ಹೆಲಿಕಾಫ್ಟರ್ ಮೂಲಕ ಆಗಮಿಸಲಿದ್ದಾರೆ ಎಂದು ದರ್ಶನ್ ಅವರ ಆಪ್ತರು ಹೇಳುತ್ತಿದ್ದಾರೆ.

Whats_app_banner