ರೇಣುಕಾಸ್ವಾಮಿ ಕೊಲೆ ಪ್ರಕರಣ; ಹಾಸ್ಯನಟ ಚಿಕ್ಕಣ್ಣ ವಿಚಾರಣೆ, ದರ್ಶನ್ ತೂಗುದೀಪ ಜತೆ ಶೆಡ್‌ಗೆ ಹೋಗಿದ್ದರೆ ಹಾಸ್ಯನಟನಿಗೆ ಇದೆ ಸಂಕಷ್ಟ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಾಸ್ಯನಟ ಚಿಕ್ಕಣ್ಣ ವಿಚಾರಣೆ ನಡೆದಿದ್ದು, ಸ್ಥಳ ಮಹಜರು ನಡೆಸಲು ಪೊಲೀಸರು ಕರೆದೊಯ್ದಿದ್ದಾರೆ. ಒಂದು ವೇಳೆ ದರ್ಶನ್ ಜತೆ ಶೆಡ್‌ಗೆ ಹೋಗಿದ್ದರೆ ಹಾಸ್ಯನಟನಿಗೂ ಸಂಕಷ್ಟ ತಪ್ಪಿದ್ದಲ್ಲ. ಈಗಾಗಲೇ ಬಂಧಿಸಲ್ಪಟ್ಟಿರುವ 17 ಮಂದಿಯಲ್ಲಿ 7 ಆರೋಪಿಗಳಿಗೆ ದರ್ಶನ್ ಪರಿಚಯವೇ ಇಲ್ಲ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಚಿತ್ರನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಜೂನ್ 8ರಂದು ದರ್ಶನ್ ಶೆಡ್ ಗೂ ಹೋಗುವುದಕ್ಕೂ ಮುನ್ನ ರಾಜರಾಜೇಶ್ವರಿ ನಗರದ ಉತ್ತರಹಳ್ಳಿ ರಸ್ತೆಯಲ್ಲಿರುವ ಸ್ಟೋನಿ ಬ್ರೂಕ್ ಪಬ್ ನಲ್ಲಿ ಪಾರ್ಟಿ ನಡೆಸಿದ್ದರು. ಈ ಪಾರ್ಟಿಯಲ್ಲಿ ದರ್ಶನ್ ಆಪ್ತ ಚಿಕ್ಕಣ್ಣ ಅವರೂ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಅವರ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸುವ ಸಾಧ್ಯತೆಗಳಿವೆ.
ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚಿಕ್ಕಣ್ಣ ಅವರಿಗೆ ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ಅದರಂತೆ ಚಿಕ್ಕಣ್ಣ ಸೋಮವಾರ ಸಂಜೆ ವಿಚಾರಣೆಗೆ ಹಾಜರಾಗಿದ್ದರು. ಠಾಣೆಗೆ ಆಗಮಿಸುತ್ತಿದ್ದಂತೆ ಚಿಕ್ಕಣ್ಣ ಅವರನ್ನು ಮಹಜರು ನಡೆಸಲು ಸ್ಟೋನಿ ಬ್ರೂಕ್ ಹೋಟೆಲ್ ಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ದರ್ಶನ್ ಮತ್ತು ಹೋಟೆಲ್ ಮಾಲೀಕ ವಿನಯ್ ಅವರನ್ನೂ ಕರೆತರಲಾಗಿತ್ತು. ನಂತರವೂ ಚಿಕ್ಕಣ್ಣ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮತ್ತಷ್ಟು ವಿಚಾರಣೆ ನಡೆಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಜೂನ್ 8 ರಂದು ಶೆಡ್ ಗೂ ತೆರಳುವುದಕ್ಕೂ ಮುನ್ನ ದರ್ಶನ್ ಮತ್ತು ಸ್ನೇಹಿತರು ಈ ಹೋಟೆಲ್ ನಲ್ಲಿ ಪಾರ್ಟಿ ನಡೆಸಿರುವುದು ಖಚಿತವಾಗಿದ್ದು, ಈ ಸಂದರ್ಭದಲ್ಲಿ ರೇಣುಕಾಸ್ವಾಮಿ ವಿಷಯ ಚರ್ಚೆಗೆ ಬಂದಿತ್ತೇ ಎಂಬ ಬಗ್ಗೆ ಚಿಕ್ಕಣ್ಣ ಅವರನ್ನು ವಿಚಾರಣೆ ನಡೆಸಲಾಗಿದೆ. ಈ ಪಾರ್ಟಿಯಲ್ಲಿ ಯಾರು ಯಾರು ಭಾಗಿಯಾಗಿದ್ದರು ಎಂಬ ಬಗ್ಗೆಯೂ ಪ್ರಶ್ನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆ ಪ್ರಕರಣ ಕುರಿತು ನನಗೇನೂ ತಿಳಿದಿಲ್ಲ. ಆದರೆ ಕೆಲಸವಿದೆ ಎಂದು ದರ್ಶನ್ ಹೊರಟು ಹೋದರು ಎಂದು ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಮಾತನಾಡಿರುವ ಚಿಕ್ಕಣ್ಣ ನಾನು ಮತ್ತು ದರ್ಶನ್ ಸ್ನೇಹಿತರು. ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಜೂನ್ 8 ರದು ಊಟಕ್ಕೆ ಕರೆದಿದ್ದರು. ಅಂದೂ ಹೋಗಿದ್ದೆ. ಆ ಬಗ್ಗೆ ವಿಚಾರಿಸಲು ಪೊಲೀಸರು ಕರೆದಿದ್ದರು ಎಂದರು. ಆದರೆ ಈ ಪಾರ್ಟಿಯಲ್ಲಿ ಯಾರು ಯಾರು ಇದ್ದರು ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಚಿಕ್ಕಣ್ಣ ಉತ್ತರ ನೀಡಲಿಲ್ಲ. ಕೊಲೆ ಪ್ರಕರಣ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡದೆ ಚಿಕ್ಕಣ್ಣ ನುಣುಚಿಕೊಂಡಿದ್ದಾರೆ.
ದರ್ಶನ್ ಚಿಕ್ಕಣ್ಣ ಅವರೆಲ್ಲರೂ ಪಾರ್ಟಿ ನಡೆಸಿರುವುದು ತಪ್ಪಲ್ಲ. ಒಂದು ವೇಳೆ ಪಾರ್ಟಿಯಲ್ಲಿ ಈ ವಿಷಯ ಕುರಿತು ಚರ್ಚೆ ನಡೆದಿದ್ದರೆ ಅಥವಾ ಚಿಕ್ಕಣ್ಣ ಶೆಡ್‌ಗೆ ತೆರಳಿದ್ದರೆ ಅವರಿಗೆ ಕಷ್ಡವಾಗಬಹುದು ಎಂದು ಪೊಲೀಸರು ಹೇಳುತ್ತಾರೆ. ಆದರೆ ಹೋಟೆಲ್‌ಗೆ ಬಂದಿರುವುದಕ್ಕೆ ಸಿಸಿಟಿವಿ ಸಾಕ್ಷ್ಯಾಧಾರಗಳು ಸಿಕ್ಕಿವೆ.
7 ಆರೋಪಿಗಳಿಗೆ ದರ್ಶನ್ ಪರಿಚಯವೇ ಇಲ್ಲ
ಈ ಕೊಲೆ ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ಧನರಾಜ್ ಆಲಿಯಾಸ್ ರಾಜು ಸೇರಿದಂತೆ 7 ಮಂದಿಯ ಪರಿಚಯ ದರ್ಶನ್‌ಗೆ ಇಲ್ಲವೇ ಇಲ್ಲ. ಈ ಅಪರಾಧ ನಡೆದ ನಂತರವೇ ಒಬ್ಬರಿಗೊಬ್ಬರ ಪರಿಚಯವಾಗಿದೆ. ದರ್ಶನ್‌ಗೆ ಕೆಲವರ ಪರಿಚಯ ಮೈಸೂರಿನಲ್ಲಿ ಆಗಿದ್ದರೆ ಇನ್ನೂ ಕೆಲವರ ಪರಿಚಯ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಾಗಿದೆ. ಕ್ಯಾಬ್ ಚಾಲಕ ರವಿ, ಅನುಕುಮಾರ್ ಧನರಾಜ್ ಮತ್ತು ಜಗದೀಶ್ ಇವರಿಗೆ ಯಾರಿಗೂ ನೇರವಾಗಿ ದರ್ಶನ್ ಪರಿಚಯವೇ ಇರಲಿಲ್ಲ.
ಜೂನ್ 10ರಂದು ಕೊಲೆ ಪ್ರಕರಣದಲ್ಲಿ ತಾವೇ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಶರಣಾಗಿದ್ದ ಕೇಶವಮೂರ್ತಿ, ಕಾರ್ತೀಕ್ ಮತ್ತು ನಿಖಿಲ್ ಅವರ ಪರಿಚಯವೂ ದರ್ಶನ್‌ಗೆ ಇರಲಿಲ್ಲ. ಆದರೆ ಶರಣಾಗುವುದಕ್ಕೂ ಮುನ್ನಾದಿನ ಜೂನ್ 9ರಂದು ಮೈಸೂರಿನ ಹೋಟೆಲ್‌ನಲ್ಲಿ ಮೊದಲಬಾರಿಗೆ ಬೇಟಿ ಮಾಡಿದ್ದರು. ಅಲ್ಲಿ ಹಣ ಪಡೆದು ಶರಣಾಗಲು ಒಪ್ಪಿಕೊಂಡಿದ್ದರು.
ಇವರನ್ನು ದರ್ಶನ್ ಅವರ ಸ್ನೇಹಿತರು ಕರೆದೊಯ್ದಿದ್ದರು. ಈ ಪ್ರಕರಣ ಮುಂದೆ ಯಾವ ಯಾವ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂದು ಸತ್ಯ ದರ್ಶನವಾದಾಗ ಮಾತ್ರ ಹೇಳಲು ಸಾಧ್ಯ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
