ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್ ತೂಗುದೀಪ ಕೇಸ್; ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಯಾರು, ಕಿರುಪರಿಚಯ ಹೀಗಿದೆ

ದರ್ಶನ್ ತೂಗುದೀಪ ಕೇಸ್; ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಯಾರು, ಕಿರುಪರಿಚಯ ಹೀಗಿದೆ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ ಹೈ ಪ್ರೊಫೈಲ್ ಕೇಸ್ ಆಗಿದ್ದು, ನಟ ದರ್ಶನ್ ತೂಗುದೀಪ ಆರೋಪಿಯಾಗಿರುವ ಕಾರಣ ಹೆಚ್ಚಿನ ಗಮನಸೆಳೆದಿದೆ. ದರ್ಶನ್ ತೂಗುದೀಪ ಕೇಸ್‌ನಲ್ಲಿ ಎಸ್‌ಪಿಪಿ ಬದಲಾವಣೆ ವಿಚಾರ ಹೆಚ್ಚು ಚರ್ಚೆಯಲ್ಲಿದೆ. ಹೀಗಾಗಿ, ಈ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಯಾರು, ಅವರ ಕಿರುಪರಿಚಯ ಇಲ್ಲಿದೆ.

ದರ್ಶನ್ ತೂಗುದೀಪ ಕೇಸ್; ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಯಾರು, ಕಿರುಪರಿಚಯ
ದರ್ಶನ್ ತೂಗುದೀಪ ಕೇಸ್; ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಯಾರು, ಕಿರುಪರಿಚಯ (P Prasanna Kumar)

ಬೆಂಗಳೂರು: ನಟ ದರ್ಶನ್ ತೂಗುದೀಪ ಮತ್ತು ಅವರ ಗೆಳತಿ ಪವಿತ್ರಾ ಗೌಡ ಅವರು ಪ್ರಮುಖ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ(ಎಸ್‌ಪಿಪಿ) ರನ್ನು ಬದಲಾಯಿಸಬೇಕೆಂಬ ಒತ್ತಡ ಹೆಚ್ಚಾಗಿದೆ ಎಂಬ ವರದಿ ಪದೇಪದೆ ಬಿತ್ತರವಾಗುತ್ತಿದೆ. ಇದೇ ಕಾರಣಕ್ಕೆ ಈಗ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಸ್‌ಪಿಪಿ ಯಾರೆಂಬ ಕುತೂಹಲ ಹೆಚ್ಚಾಗಿದೆ. ಈ ಕೇಸ್‌ನಲ್ಲಿ ಸರ್ಕಾರದ ಪರ ವಾದ ಮಂಡಿಸುವುದಕ್ಕೆ ನಿಯೋಜಿಸಲ್ಪಟ್ಟ ಎಸ್‌ಪಿಪಿ ಬೇರಾರೂ ಅಲ್ಲ ಖ್ಯಾತ ವಕೀಲ ಪಿ. ಪ್ರಸನ್ನ ಕುಮಾರ್.

ಕೋರ್ಟ್‌ ಮತ್ತು ವಕೀಲರ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುವ ಪ್ರತಿಭಾವಂತ ವಕೀಲ ಪ್ರಸನ್ನ ಕುಮಾರ್. ಅವರು ಸಾಂವಿಧಾನಿಕ, ಕ್ರಿಮಿನಲ್, ಸಿವಿಲ್ ಮತ್ತು ಸರ್ವೀಸ್ ಪ್ರಕರಣಗಳನ್ನು ತೆಗೆದುಕೊಂಡು ವಾದ ಮಂಡಿಸುವುದರಲ್ಲಿ ನೈಪುಣ್ಯ ಹೊಂದಿದವರು.

ವಿಶೇಷ ಸರ್ಕಾರಿ ಅಭಿಯೋಜಕರಾಗಿ ಹಲವು ವರ್ಷಗಳ ಅನುಭವ ಹೊಂದಿದ ಪಿ ಪ್ರಸನ್ನ ಕುಮಾರ್ ಯಾರು

ವಕೀಲ ಪಿ ಪ್ರಸನ್ನಕುಮಾರ್‌ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೇಸ್‌ಗಳಲ್ಲೂ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೆಲಸ ಮಾಡಿದ ಅನುಭವಿ. ಹಲವು ವರ್ಷಗಳಿಂದ ವಿಶೇಷ ಅಭಿಯೋಜಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ ಪ್ರಸನ್ನ ಕುಮಾರ್‌, ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೇಸ್‌, ಕರೀಂ ಲಾಲ್‌ ತೆಲಗಿ ಆರೋಪಿಯಾಗಿದ್ದ ಛಾಪಾ ಕಾಗದ ಹಗರಣದ ಕೇಸ್‌, ನೋಟು ಅಮಾನ್ಯೀಕರಣ ಕೇಸ್‌, ಐಎಂಎ ಹಗರಣ, ಮೈಸೂರು ಮಹಾರಾಜರ ಆಸ್ತಿ ಅಕ್ರಮ ಮಾರಾಟ ಪ್ರಕರಣಗಳಲ್ಲಿ ಕೂಡ ವಿಶೇಷ ಅಭಿಯೋಜಕರಾಗಿ ಕೆಲಸ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ, ಮೈಸೂರು ಕೋರ್ಟ್‌ನ ಬಾಂಬ್‌ ಸ್ಫೋಟ, ಚರ್ಚ್‌ ಸ್ಟ್ರೀಟ್‌ ಸ್ಫೋಟ, ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌, ಪ್ರವೀಣ್ ನೆಟ್ಟಾರು ಹತ್ಯೆ ಕೇಸ್‌ಗಳಲ್ಲೂ ಪ್ರಸನ್ನ ಕುಮಾರ್ ವಾದ ಮಂಡಿಸುತ್ತಿದ್ದಾರೆ. ಇದೇ ರೀತಿ, ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಹಗರಣ, ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣಗಳಲ್ಲೂ ವಿಶೇಷ ಅಭಿಯೋಜಕಕರಾಗಿದ್ದಾರೆ.

ವಕೀಲಿಕೆಯಲ್ಲಿ ಎರಡು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಪಿ ಪ್ರಸನ್ನ ಕುಮಾರ್‌, ವಾದಿಸಿರುವ 480ಕ್ಕೂ ಹೆಚ್ಚು ಪ್ರಕರಣಗಳ ತೀರ್ಪುಗಳು ಇಂಡಿಯನ್ ಲಾ ರಿಪೋರ್ಟರ್, ಕರ್ನಾಟಕ ಲಾ ಜರ್ನಲ್, ಸುಪ್ರೀಂ ಕೋರ್ಟ್ ಕೇಸ್ ಆನ್​ಲೈನ್​-ಕರ್ನಾಟಕ, ಕರ್ನಾಟಕ ಸಿವಿಲ್ ಮತ್ತು ಕ್ರಿಮಿನಲ್ ರಿಪೋರ್ಟರ್ ಸೇರಿ ಹಲವು ಜರ್ನಲ್​ಗಳಲ್ಲಿ ಪ್ರಕಟವಾಗಿವೆ.

ಬೆಂಗಳೂರು ವಿವಿಯ ಕಾನೂನು ಕಾಲೇಜುನಲ್ಲಿ ಬಿಎ ಎಲ್ಎಲ್‌ಬಿ ಪದವಿ ಪಡೆದ ಪ್ರಸನ್ನ ಕುಮಾರ್‌, ಹೈದರಾಬಾದ್​ನ ಎನ್‌ಎಎಲ್‌ಎಸ್‌ಎಆರ್ ವಿಶ್ವವಿದ್ಯಾಲಯದ ಪಿಜಿಡಿ-ಎಡಿಆರ್ ಪದವಿ ಪಡೆದು. 2001ರ ಆಗಸ್ಟ್ 25ರಂದು ವಕೀಲರಾಗಿ ನೋಂದಾಯಿಸಿಕೊಂಡು ವಕೀಲಿಕೆ ಶುರುಮಾಡಿದರು.

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಬದಲಾವಣೆ ಇಲ್ಲ; ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ

“ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಅವರನ್ನು ಬದಲಾವಣೆ ಮಾಡಲು ನನ್ನ ಮೇಲೆ ಯಾವ ಸಚಿವರಿಂದ, ಶಾಸಕರಿಂದ ಒತ್ತಡವಿಲ್ಲ. ನನ್ನ ಮೇಲೆ ಒತ್ತಡ ಹಾಕಿದರೆ ಅವೆಲ್ಲವನ್ನೂ ನಾನು ಕೇಳುವುದೂ ಇಲ್ಲ. ಈ ನೆಲದ ಕಾನೂನು ಏನು ಹೇಳುತ್ತದೆಯೋ ಅದರಂತೆ ತನಿಖೆಯಾಗುತ್ತದೆ. ಇದರಲ್ಲಿ ಒತ್ತಡವೋ ಇನ್ನೊಂದೋ ಈ ಯಾವುದಕ್ಕೂ ನಾನು ಗಮನ ಕೊಡುವವನಲ್ಲ. ಪೊಲೀಸರಿಗೆ ಪ್ರಕರಣದ ತನಿಖೆಯಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಎಸ್.‌ಪಿ.ಪಿ ಬದಲಾವಣೆಯ ಪ್ರಸ್ತಾವನೆ ನನ್ನ ಮುಂದೆ ಈ ವರೆಗೂ ಬಂದೇ ಇಲ್ಲ. ಇದಕ್ಕೆ ಸಂಬಂಧಪಟ್ಟಂತೆ ಈಗ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಕಲ್ಪಿತ ವರದಿಗಳು. ಇದರಲ್ಲಿ ಯಾವುದೇ ಹುರುಳಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.