ರೇಣುಕಾಸ್ವಾಮಿ ಹತ್ಯೆ ಪ್ರಕರಣ; ದರ್ಶನ್ ಆರೋಪಿಯಷ್ಟೆ, ಅಪರಾಧಿ ಅಲ್ಲ ನೆನಪಿಡಿ, ನಟ ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತ ಸಂಜನಾ ಗಲ್ರಾನಿ
ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾಸ್ವಾಮಿ ಹತ್ಯೆ ಪ್ರಕರಣ; ದರ್ಶನ್ ಆರೋಪಿಯಷ್ಟೆ, ಅಪರಾಧಿ ಅಲ್ಲ ನೆನಪಿಡಿ, ನಟ ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತ ಸಂಜನಾ ಗಲ್ರಾನಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣ; ದರ್ಶನ್ ಆರೋಪಿಯಷ್ಟೆ, ಅಪರಾಧಿ ಅಲ್ಲ ನೆನಪಿಡಿ, ನಟ ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತ ಸಂಜನಾ ಗಲ್ರಾನಿ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಷ್ಟೆ, ಅಪರಾಧಿ ಅಲ್ಲ ನೆನಪಿಡಿ ಎಂದು ನಟಿ ಸಂಜನಾ ಗಲ್ರಾನಿ ಅವರು ನಟ ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತಿದ್ದಾರೆ. ಕೇಸ್ ತನಿಖೆಯಲ್ಲಿದ್ದು ಅಧಿಕೃತವಾಗಿ ಯಾವ ಹೇಳಿಕೆಯೂ ಇಲ್ಲದೇ ಇರುವಾಗ ದರ್ಶನ್ ಅವರನ್ನು ಅಪರಾಧಿ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ದರ್ಶನ್ ಆರೋಪಿಯಷ್ಟೆ, ಅಪರಾಧಿ ಅಲ್ಲ ನೆನಪಿಡಿ, ನಟ ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತ ಸಂಜನಾ ಗಲ್ರಾನಿ (ಕಡತ ಚಿತ್ರ)
ದರ್ಶನ್ ಆರೋಪಿಯಷ್ಟೆ, ಅಪರಾಧಿ ಅಲ್ಲ ನೆನಪಿಡಿ, ನಟ ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತ ಸಂಜನಾ ಗಲ್ರಾನಿ (ಕಡತ ಚಿತ್ರ)

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್ ತೂಗುದೀಪ ಅವರ ಅಭಿಮಾನಿ ರೇಣುಕಾಸ್ವಾಮಿ ಅವರ ಹತ್ಯೆ ಪ್ರಕರಣ ದೇಶದ ಗಮನಸೆಳೆದಿದೆ. ಚಿತ್ರರಂಗ ಮೌನಕ್ಕೆ ಜಾರಿದ್ದು, ಕೆಲವೇ ಕೆಲವರು ಅಳೆದೂ ತೂಗಿ ಮಾತನಾಡಿದ್ದಾರೆ. ಈ ನಡುವೆ, ನಟಿ ಸಂಜನಾ ಗಲ್ರಾನಿ ಅವರು ಸ್ಪಷ್ಟ ಅಭಿಪ್ರಾಯ ನೀಡಿದ್ದು ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತಿದ್ದಾರೆ.

ದರ್ಶನ್ ತೂಗುದೀಪ ಕೇಸ್ ವಿಚಾರವಾಗಿ ಸೆಲೆಬ್ರಿಟಿಗಳಿಂದ ಜನಪ್ರತಿನಿಧಿಗಳ ತನಕ ಅನೇಕರು ಮಾತನಾಡುತ್ತ ಈ ಕೇಸ್‌ನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ. ಯಾರೂ ನಟ ದರ್ಶನ ಪರ ನಿಲುವು ವ್ಯಕ್ತಪಡಿಸಿದ್ದಿಲ್ಲ. ಆದರೆ ಈ ವಿಚಾರದಲ್ಲಿ ಸಂಜನಾ ಗುಲ್ರಾನಿ ಅವರು ದರ್ಶನ ಪರ ನಿಲುವಿನೊಂದಿಗೆ ಬಹಳ ಸ್ಪಷ್ಟ ಮಾತುಗಳ ಮೂಲಕ ಗಮನಸೆಳೆದಿದ್ದಾರೆ.

ನಟ ದರ್ಶನ್ ತೂಗುದೀಪ ಆರೋಪಿಯೇ ಹೊರತು ಅಪರಾಧಿ ಅಲ್ಲ. ಅವರ ವಿರುದ್ಧ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳೆಲ್ಲವೂ ಅಧಿಕೃತ ಅಲ್ಲ. ತನಿಖೆ ನಡೆಸುತ್ತಿರುವ ಅಧಿಕಾರಿಗಳು ಇದುವರೆಗೂ ಕೊಲೆ ಪ್ರಕರಣ ಸಂಬಂಧ ಅಧಿಕೃತ ಹೇಳಿಕೆ ನೀಡಿದಾಗ ಅವರು ಎಲ್ಲಿಯೂ ದರ್ಶನ್ ಪಾತ್ರದ ವಿವರಣೆ ನೀಡಿಲ್ಲ ಎಂದು ಸಂಜನಾ ಗುಲ್ರಾನಿ ಹೇಳಿದ್ದಾರೆ.

ದರ್ಶನ್ ಅವರನ್ನು ಅಪರಾಧಿ ಎಂದು ಹೇಳಬೇಡಿ- ಸಂಜನಾ ಗಲ್ರಾನಿ

ದರ್ಶನ್ ಅವರನ್ನು ಅಪರಾಧಿ ಎಂದು ಕೋರ್ಟ್‌ ಘೋ‍ಷಿಸುವ ಮೊದಲೇ ತೀರ್ಮಾನಿಸಬೇಡಿ ಎಂದು ನಟಿ ಸಂಜನಾ ಗಲ್ರಾನಿ ಎಚ್ಚರಿಕೆಯ ನುಡಿಗಳೊಂದಿಗೆ ಒತ್ತಾಯಿಸಿದ್ದಾರೆ.

ತಮ್ಮ ಮಾತಿನ ನಡುವೆ ತಾವು 2020ರಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಬಂಧಿಸಲ್ಪಟ್ಟು ಮೂರು ತಿಂಗಳು ಜೈಲಿನಲ್ಲಿದ್ದ ಅವಧಿಯನ್ನು ನೆನಪಿಸಿಕೊಂಡಿದ್ದಾರೆ ಸಂಜನಾ. "ಅಪರಾಧಿಗಳ ಸಂಪರ್ಕದ ಕಾರಣಕ್ಕೆ ನನ್ನ ಇಡೀ ಮನೆಯನ್ನು ಶೋಧ ನಡೆಸಿದರೂ ಏನೂ ಸಿಕ್ಕಿರಲಿಲ್ಲ. ಸೆಲೆಬ್ರಿಟಿಯಾಗಿ ನಾನು ತುಂಬಾ ನೋವನ್ನು ಅನುಭವಿಸಿದ್ದೇನೆ" ಎಂದು ಇದೇ ವೇಳೆ ಅವರು ಹೇಳಿಕೊಂಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಸಿಟಿ ಜೊತೆಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯನ್ನು ನಿರ್ಣಯಿಸಲು ಮತ್ತು ಅವನನ್ನು ಅಪರಾಧಿ ಎಂದು ತೀರ್ಮಾನಿಸುವುದಕ್ಕೆ ಇದು ಸಕಾಲವಲ್ಲ. ಒಂದೆರಡು ಘಟನೆಗಳು ಅವರ ಕೈ ಮೀರಿ ಹೋಗಿರಬಹುದು. ಅಂತಹ ನಿದರ್ಶನಗಳು ಪ್ರತಿ ವ್ಯಕ್ತಿಯ ಬದುಕಿನಲ್ಲೂ ಇರುತ್ತದೆ. ಹೀಗಾಗಿ ಈಗಲೇ ಅಪರಾಧಿ ಎನ್ನಬೇಡಿ. ಆರೋಪಿ ಎಂದೇ ಸಂಬೋಧಿಸಬೇಕು ಎಂದು ಸಂಜನಾ ಗಲ್ರಾನಿ ಹೇಳಿದರು.

ದರ್ಶನ್ ಅವರು ಸಿನಿಮಾದ ಸುಲ್ತಾನ್‌

ಸಂಜನಾ ಗಲ್ರಾನಿ ಅವರ ಹೇಳಿಕೆಯ ವಿಡಿಯೋವನ್ನೂ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ದರ್ಶನ್ ಅವರ ಇಮೇಜ್‌ ತನಗೆ ತಿಳಿದಿರುವ ವ್ಯಕ್ತಿಯೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಒತ್ತಿಹೇಳುವ ಗಲ್ರಾನಿ, "ಸೆಲೆಬ್ರಿಟಿಗಳ ವಿಷಯಕ್ಕೆ ಬಂದಾಗ, ಎಲ್ಲವೂ ಉತ್ಪ್ರೇಕ್ಷಿತವಾಗಿದೆ. ಖಂಡಿತ, ಕಥೆಗೆ ಆಧಾರವಿದೆ, ನಾವು ನೋಡಬಹುದು. ಒಂದು ಕೊಲೆಯಾಗಿದೆ ಮತ್ತು ನಾವು ಸಾವಿಗೆ ಶೋಕಿಸುತ್ತಿದ್ದೇವೆ. ಆದರೆ, ಆರಂಭಿಕ ಮಾಹಿತಿಗಳನ್ನು ಆಧರಿಸಿ ಯಾರನ್ನಾದರೂ ಅಪರಾಧಿ ಎಂದು ಕರೆಯುವುದು ಸರಿಯಲ್ಲ. ನಾವು ಅವರನ್ನು (ದರ್ಶನ್) ಬಿಡುಗಡೆಯಾಗಲಿ ಎಂದು ಬಯಸುತ್ತಿರುವುದಾಗಿ ಹೇಳಿದ್ದಾರೆ.

ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಯ ಸುಲ್ತಾನ್. ಅವರನ್ನು ನಂಬಿಕೊಂಡು ಅನೇಕರು ದುಡ್ಡು ಹೂಡಿಕೆ ಮಾಡಿದ್ದಾರೆ. ಅವರನ್ನೇ ನಂಬಿಕೊಂಡು ಚಿತ್ರ ನಿರ್ಮಾಣಕ್ಕೆ, ಅವರೊಂದಿಗೆ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಲು ಬಯಸುತ್ತಿರುವ ಜನರಿದ್ದಾರೆ. ಅವರನ್ನೆಲ್ಲ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇದೇ ವೇಳೆ, ರೇಣುಕಾಸ್ವಾಮಿ ಹತ್ಯೆ ಸರಿಯಲ್ಲ. ಅವರನ್ನು ನಂಬಿಕೊಂಡ ಗರ್ಭಿಣಿ ಪತ್ನಿ, ಮನೆಯವರು ಎಲ್ಲರೂ ಇದ್ದಾರೆ. ಯಾವ ಶತ್ರುವಿಗೂ ಇಂತಹ ಸ್ಥಿತಿ ಬರಬಾರದು. ಆದಾಗ್ಯೂ ದರ್ಶನ್ ಅವರೇ ಅಪರಾಧಿ ಎಂದು ಬಿಂಬಿಸುವ ಕೆಲಸ ಈಗಲೇ ಆಗಬಾರದು ಎಂದು ಸಂಜನಾ ಹೇಳಿದ್ದಾರೆ.

Whats_app_banner