ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್ ತೂಗುದೀಪ ಕೇಸ್; ಸೆಲೆಬ್ರಿಟಿಗಳಿಂದ ಜನಪ್ರತಿನಿಧಿಗಳ ತನಕ ಯಾರು ಏನು ಹೇಳಿದರು- ಇಲ್ಲಿವೆ ಆಯ್ದ ಹೇಳಿಕೆಗಳು

ದರ್ಶನ್ ತೂಗುದೀಪ ಕೇಸ್; ಸೆಲೆಬ್ರಿಟಿಗಳಿಂದ ಜನಪ್ರತಿನಿಧಿಗಳ ತನಕ ಯಾರು ಏನು ಹೇಳಿದರು- ಇಲ್ಲಿವೆ ಆಯ್ದ ಹೇಳಿಕೆಗಳು

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಜೈಲು ಸೇರಿದ್ದಾರೆ. ಈ ಪ್ರಕರಣ ದೇಶದ ಗಮನಸೆಳೆದಿದ್ದು, ಖ್ಯಾತ ನಟನೊಬ್ಬನ ಬದುಕಿನ ಈ ಘಟನಾವಳಿ ಸದ್ಯ ಚರ್ಚೆಯ ವಿಚಾರ. ದರ್ಶನ್ ತೂಗುದೀಪ ಕೇಸ್‌ ವಿಚಾರವಾಗಿ ಸೆಲೆಬ್ರಿಟಿಗಳಿಂದ ಜನಪ್ರತಿನಿಧಿಗಳ ತನಕ ಯಾರು ಏನು ಹೇಳಿದರು- ಇಲ್ಲಿವೆ ಆಯ್ದ ಹೇಳಿಕೆಗಳು.

ದರ್ಶನ್ ತೂಗುದೀಪ ಕೇಸ್; ಚಿತ್ರದುರ್ಗದ ರೇಣುಕಾ ಸ್ವಾಮಿ (ಎಡ ಚಿತ್ರ) ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದರ್ಶನ್ ತೂಗುದೀಪ ಅವರ ಬದುಕು ಈಗ ಚರ್ಚೆಗೆ ಒಳಗಾಗಿದೆ. ಈ ಘಟನೆಗಳ ಬಗ್ಗೆ ಸೆಲೆಬ್ರಿಟಿಗಳಿಂದ ಜನಪ್ರತಿನಿಧಿಗಳ ತನಕ ಯಾರು ಏನು ಹೇಳಿದರು- ಇಲ್ಲಿವೆ ಆಯ್ದ ಹೇಳಿಕೆಗಳು
ದರ್ಶನ್ ತೂಗುದೀಪ ಕೇಸ್; ಚಿತ್ರದುರ್ಗದ ರೇಣುಕಾ ಸ್ವಾಮಿ (ಎಡ ಚಿತ್ರ) ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದರ್ಶನ್ ತೂಗುದೀಪ ಅವರ ಬದುಕು ಈಗ ಚರ್ಚೆಗೆ ಒಳಗಾಗಿದೆ. ಈ ಘಟನೆಗಳ ಬಗ್ಗೆ ಸೆಲೆಬ್ರಿಟಿಗಳಿಂದ ಜನಪ್ರತಿನಿಧಿಗಳ ತನಕ ಯಾರು ಏನು ಹೇಳಿದರು- ಇಲ್ಲಿವೆ ಆಯ್ದ ಹೇಳಿಕೆಗಳು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಕೇಸ್‌ (Renukaswamy Murder Case) ನಲ್ಲಿ ಎರಡನೆ ಆರೋಪಿಯಾಗಿ ನಟ ದರ್ಶನ್ ತೂಗುದೀಪ (Darshan Thoogudeepa) ಜೈಲು ಸೇರಿದ್ದಾರೆ. ಹೈ ಪ್ರೊಫೈಲ್ ಕೇಸ್ ಆದ ಕಾರಣ, ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡ ಬಳಿಕ ಗಣ್ಯರು ಒಬ್ಬೊಬ್ಬರೇ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸತೊಡಗಿದ್ದಾರೆ.

ಇಂದು ದರ್ಶನ್ ಅವರನ್ನು ಪೊಲೀಸರು ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದು, ಅಲ್ಲಿ ಸ್ಥಳ ಮಹಜರು ಮಾಡಲಿದ್ದಾರೆ. ಈ ನಡುವೆ, ರೇಣುಕಾಸ್ವಾಮಿಯ ಹತ್ಯೆಗೆ ಮೊದಲು ದರ್ಶನ್ ನಡೆಸಿದ ಪಾರ್ಟಿಯಲ್ಲಿ ಭಾಗವಹಿಸಿದವರನ್ನು ಕೂಡ ಪೊಲೀಸರು ವಿಚಾರಣೆಗೆ ಕರೆಸಿದ್ದು, ಹಾಸ್ಯ ನಟ ಚಿಕ್ಕಣ್ಣ ಕೂಡ ಈ ಪಟ್ಟಿಯಲ್ಲಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಕೇಸ್‌ನಲ್ಲಿ ಇದುವರೆಗೆ ಯಾರು ಏನು ಹೇಳಿದರು ಎಂಬುದನ್ನು ಅವಲೋಕಿಸುವುದಕ್ಕೆ ಇದು ಈ ಹೊತ್ತು ಒಂದು ನಿಮಿತ್ತ.

ಟ್ರೆಂಡಿಂಗ್​ ಸುದ್ದಿ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ - ಮನೆಯವರು ಏನಂದ್ರು

1) "ನನ್ನ ಮಗನಂತೆ ದರ್ಶನ್ ಸಹ ಸಾಯಲಿ’ ಎಂದು ರೇಣುಕಾ ಸ್ವಾಮಿ ತಾಯಿ ರತ್ನಪ್ರಭಾ ನೊಂದು ನುಡಿದಿದ್ದಾರೆ.

2) “ನಾನು ಪ್ರೆಗ್ನೆಂಟ್​ ಅದೀನಿ. ನ್ಯಾಯ ಕೊಡಿಸಿ. ಮದುವೆ ಆಗಿ ಒಂದು ವರ್ಷ ಆಗಿದೆಯಷ್ಟೆ. ಮುಂದೆ ಜೀವನ ಮಾಡೋದು ಹೇಗೆ? ಯಾರಿಗೂ ಈ ರೀತಿ ಆಗಬಾರದು. ದರ್ಶನ್​ ಸ್ಟಾರ್​ ಆಗಿರಬಹುದು. ಇನ್ನು ಮಗು ಬೇರೆ ಬರ್ತಾಇದೆ. ಅಪ್ಪ ಎಲ್ಲಿ ಅಂದರೆ ಏನು ಮಾಡಬೇಕು. ಜೀವಕ್ಕೆ ಯಾಕೆ ತೊಂದರೆ ಮಾಡಬೇಕಿತ್ತು. ನನಗೆ ನ್ಯಾಯ ಕೊಡಿಸಿ" ಎಂದು ರೇಣುಕಾಸ್ವಾಮಿ ಪತ್ನಿ ಸಹನಾ ಮೊದಲ ಪ್ರತಿಕ್ರಿಯೆ ನೀಡಿದ್ದರು.

3) ಕೇಸ್‌ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನನ್ನೇನೂ ಕೇಳಬೇಡಿ ಎಂದು ನಟ ದರ್ಶನ್ ತೂಗುದೀಪ ಅವರ ಸಹೋದರ ದಿನಕರ್ ತೂಗುದೀಪ ಹೇಳಿದ್ದಾರೆ. ದರ್ಶನ್ ತಾಯಿ ಮೀನಾ ತೂಗುದೀಪ ಇದುವರೆಗೆ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ.

4) ‘ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ಆಗಿರುವುದು ಬೇಸರ ಉಂಟುಮಾಡಿದೆ. ಸಂಪಾದನೆಯ ಮುಕ್ಕಾಲು ಭಾಗವನ್ನು ಸಮಾಜ ಸೇವೆಗೆ ಬಳಸುವ ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡಿ ಆತ ಕೋಪಗೊಳ್ಳುವಂಥೆ ಮಾಡಲಾಗಿದೆ. ಕೊಲೆ ಪ್ರಕರಣಕ್ಕೆ ಪವಿತ್ರಾ ಗೌಡ ಕಾರಣ ಎಂದು ಹೇಳಲ್ಲ. ದರ್ಶನ್ ಆದಷ್ಟು ಬೇಗ ದೋಷಮುಕ್ತರಾಗಿ ಹೊರಬರಲಿ ಎಂದು ದರ್ಶನ್ ಭಾವ ಮಂಜುನಾಥ್ ಉತ್ತರಕನ್ನಡದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತ ತಿಳಿಸಿದ್ದಾರೆ.

ದರ್ಶನ್ ತೂಗುದೀಪ ಕೇಸ್‌; ಜನಪ್ರತಿನಿಧಿಗಳು, ಸೆಲೆಬ್ರಿಟಿಗಳು ಏನು ಹೇಳಿದ್ರು

1) ನಟ ದರ್ಶನ್ ವಿಚಾರದಲ್ಲಿ ಯಾರೂ ನನ್ನ ಹತ್ತಿರ ಬಂದಿಲ್ಲ. ಬಿಜೆಪಿಗರು ಸುಮ್ಮನೇ ಹೇಳುತ್ತಾರೆ. ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತೇವೆ. ಕಾನೂನು ಬಿಟ್ಟು ನಾವು ಏನೂ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

2) ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಯಾರ ಪ್ರಭಾವವೂ ನಡೆದಿಲ್ಲ. ನಡೆಯುವುದೂ ಇಲ್ಲ. ಪೊಲೀಸರು ಅವರ ಕೆಲಸ ಅವರು ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

3) ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಎಲ್ಲ ಆಯಾಮದಲ್ಲೂ ತನಿಖೆ ನಡೆಯಲಿದೆ. ಯಾರು ಎಷ್ಟೇ ಪ್ರಭಾವಿಗಳಾದರೂ ಅವರ ಪ್ರಭಾವ, ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕೇ ಸಿಗುತ್ತೆ. ಸರ್ಕಾರ ಯಾರ ಒತ್ತಡಕ್ಕೂ ಮಣಿಯಲ್ಲ. ತಪ್ಪಿತಸ್ಥರಿಗೆ ಖಂಡಿತವಾಗಿ ಶಿಕ್ಷೆಯಾಗುತ್ತೆ. ಸಂತ್ರಸ್ತ ಕುಟುಂಬದ ಜತೆಗೆ ಸರ್ಕಾರ ಬೆಂಬಲವಾಗಿ ನಿಲ್ಲುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

4) "ಎಲ್ಲರಲ್ಲೂ ಒಂದು ನಂಬಿಕೆ ಅನ್ನೋದು ಇರುತ್ತೆ. ಅಂತೆಯೇ, ನಾವು ಆರಾಧಿಸುವ, ಪೂಜಿಸುವ ವ್ಯಕ್ತಿಗಳ ಬಗ್ಗೆ ನಂಬಿಕೆ ಕೂಡ. ಜೊತೆಯಲ್ಲಿ ಕೆಲಸ ಮಾಡಿದ ನಮಗೂ ಹಾಗೆ ಅನಿಸುತ್ತದೆ. ನಾನು ಕೂಡ ಈಗ ಹಾಗೇ ಹೇಳಿದೆ. ತುಂಬ ಒಳ್ಳೆಯ ಹುಡುಗ, ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ ಅಂತ. ಆ ನಂಬಿಕೆಯಿಂದಲೇ ಎಲ್ಲರೂ ಆ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ಅಭಿಮಾನಿಗಳ ವರ್ತನೆ ತಪ್ಪು ಅಂತ ನಾವಾಗಲೀ, ನೀವಾಗಲೀ ಹೇಳೋಕೆ ಆಗಲ್ಲ. ಈ ಕೇಸ್‌ನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ಮಾಜಿ ಸಚಿವೆ, ನಟಿ ಉಮಾಶ್ರೀ ಹೇಳಿದ್ದಾರೆ.

5) ಸರ್ವಆತ್ಮಾನೇನಬ್ರಹ್ಮ, ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!. ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ!. ಕಲಿಯುಗದಲ್ಲಿ ದೇವರು ಕಲ್ಲಲ್ಲಾ. ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ ಉಂಟು!. ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ!. ಮದಕ್ಕೆ ಕಾರುಣ್ಯದ ಅರಿವಿಲ್ಲಾ! ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಹೇಳಿದ್ದಾರೆ.

6) ನಾಗರಿಕ ಸಮಾಜದಲ್ಲಿ ಈ ರೀತಿ ಅಹಿತಕರ ಘಟನೆ ಆಗಬಾರದಿತ್ತು. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ರೇಣುಕಾ ಸ್ವಾಮಿಯಿಂದ ನೋವಾಗಿದ್ದರೆ ದೂರು ನೀಡಬಹುದಿತ್ತು. ಸರ್ಕಾರ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಿ, ಮೃತನ ಪತ್ನಿಗೆ ಕೆಲಸ ಕೊಟ್ಟು ಕುಟುಂಬ ಕಾಪಾಡುವ ಕೆಲಸ ಮಾಡಲಿ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

7) ‘ರೇಣುಕಾ ಸ್ವಾಮಿ ಹತ್ಯೆ ದುರದೃಷ್ಟಕರ. ಯಾರೂ ಕ್ಷಮಿಸದ ಹೇಯ ಕೃತ್ಯ. ರೇಣುಕಾಸ್ವಾಮಿ ಜೀವ ವಾಪಸ್​ ಬರಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಕೇಸ್​ನಲ್ಲಿ ಯಾರೇ ತಪ್ಪಿತಸ್ಥರಾಗಿರಲಿ, ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕು. ಸದ್ಯಕ್ಕೆ ದರ್ಶನ್​ ಆರೋಪಿಯೇ ಹೊರತು ಅಪರಾಧಿ ಅಲ್ಲ. ಅಪರಾಧ ಸಾಬೀತಾದ ಬಳಿಕ ಚಿತ್ರರಂಗ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಬಿ.ಸಿ. ಪಾಟೀಲ್​ ಹೇಳಿದ್ದಾರೆ.

8) ದರ್ಶನ್ ತುಂಬಾ ಆತ್ಮೀಯರು. ಹಲವು ವರ್ಷಗಳಿಂದ ಉತ್ತಮ ಸಂಬಂಧವಿದೆ. ದರ್ಶನ್ ಬಂಧನವಾಗಿದೆ ಎಂಬ ವಿಚಾರ ತಿಳಿದು ಶಾಕ್ ಆಯ್ತು. ಮುಂದೆ ಏನಾಗಲಿದೆ ಎಂಬುದು ತನಿಖೆ ನಂತರ ಗೊತ್ತಾಗುತ್ತದೆ. ದರ್ಶನ್​ ಜತೆ ಸ್ನೇಹ ಈಗಲೂ ಇರುತ್ತೆ, ಮುಂದೆಯೂ ಇರುತ್ತೆ ಎಂದು ಶಾಸಕ ದರ್ಶನ್ ಪುಟ್ಟಣಯ್ಯ ಹೇಳಿದ್ದಾರೆ.

9) ದರ್ಶನ ಒಬ್ಬ ಶ್ರೇಷ್ಠ ನಟ, ಅವರ ನಟನೆಯನ್ನು ಮೆಚ್ಚುತ್ತೇನೆ. ಆದರೆ ಈಗ ನಡೆದುದು ನಟನೆ ಅಲ್ಲ. ಅಮಾನುಷ ಕೃತ್ಯ. ನಿಜಜೀವನದ ವರ್ತನೆ ಕೀಳುಮಟ್ಟದ್ದು. ಕರ್ನಾಟಕ ಪೊಲೀಸರು ಕೂಡಲೇ ಕ್ರಮ‌ ತೆಗೆದುಕೊಂಡಿದ್ದಾರೆ. ನಟನ ಅಮಾನುಷ ವರ್ತನೆಯನ್ನು ಅಭಿಮಾನಿಗಳು ಬೆಂಬಲಿಸಬಾರದು. ಅಭಿಮಾನಿಗಳ ಅಭಿಮಾನ ಏನಿದ್ದರೂ ನಟರ ಅಭಿನಯಕ್ಕೆ ಸೀಮಿತವಾಗಿರಬೇಕು ಎಂದು ರಾಜಕಾರಣಿ, ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

10) ಯಾವುದೇ ವ್ಯಕ್ತಿಯನ್ನು ಬ್ಲಾಕ್ ಮಾಡುವ ಆಯ್ಕೆ ಸೋಷಿಯಲ್ ಮೀಡಿಯಾದಲ್ಲಿ ಇದೆ. ಒಂದೊಮ್ಮೆ ಟ್ರೋಲ್ ಕಾಟ ಅತಿಯಾದರೆ ದೂರು ಕೂಡ ಕೊಡಬಹುದು. ನನ್ನನ್ನು ಮಾತ್ರವಲ್ಲದೇ ಅನೇಕರನ್ನು ಟ್ರೋಲ್​ ಮಾಡಿದ್ದಾರೆ. ಅನ್ಯರ ಹೆಂಡತಿ, ಮಕ್ಕಳನ್ನೂ ಬಿಡದೇ ಟ್ರೋಲ್ ಮಾಡುವವರೂ ಇದ್ದಾರೆ. ಎಂಥಾ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಕಾನೂನು ಪಾಲಿಸುವ ಪ್ರಜೆಯ ರೀತಿ ನಾನು ಕೂಡ ದೂರು ನೀಡಿದ್ದೇನೆ. ಪೊಲೀಸರು ಅಂಥವರಿಗೆ ಎಚ್ಚರಿಕೆ ನೀಡಿದ ಬಳಿಕ ಪಾಪ ಅಂತ ಕೇಸ್​ ವಾಪಸ್​ ತೆಗೆದುಕೊಂಡದ್ದೂ ಇದೆ. ಟ್ರೋಲ್​ ಮಾಡಿದವರು ಚಿಕ್ಕವರು. ಅವರಿಗೆ ಭವಿಷ್ಯ ಇದೆ. ಅನಾಮಧೇಯ ಖಾತೆಗಳ ಮೂಲಕ ಟ್ರೋಲ್ ಮಾಡ್ತಾ ಜೀವನ ಹಾಳು ಮಾಡ್ತಾ ಇದ್ದಾರೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನನ್ನು ಯಾರೂ ತಮ್ಮ ಕೈಗೆತ್ತಿಕೊಳ್ಳಬಾರದು. ಏನಾದರೂ ಆದರೆ ಹೋಗಿ ಹೊಡೆದು ಕೊಲ್ಲುವುದಲ್ಲ. ಸಿಂಪಲ್ ಆಗಿ ದೂರು ಕೊಡಿ. ಅಷ್ಟೇ ಸಾಕು. ಈಗ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್​ ಅಧಿಕಾರಿಗಳ ವಿಷಯದಲ್ಲಿ ನನಗೆ ಮೆಚ್ಚುಗೆ ಮತ್ತು ಗೌರವ ಇದೆ. ಅವರದ್ದು ಕೃತಜ್ಞತೆ ಇಲ್ಲದ ಕೆಲಸ. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಒತ್ತಡಕ್ಕೆ ಅವರು ಮಣಿಯುವುದಿಲ್ಲ ಹಾಗೂ ಕಾನೂನಿನ ಮೇಲೆ ಜನರ ಭರವಸೆಯನ್ನು ಉಳಿಸುತ್ತಾರೆ ಅಂತ ನಾನು ನಂಬಿದ್ದೇನೆ’ ಎಂದು ನಟಿ ರಮ್ಯಾ (ದಿವ್ಯ ಸ್ಪಂದನ) ಹೇಳಿದ್ದಾರೆ.

11) ‘ನನಗೆ ಗೊತ್ತಿರೋದು ಇಷ್ಟೇ.. ನೀವು ಮಾಧ್ಯಮದವರು ಏನು ತೋರಿಸುತ್ತಿದ್ದೀರೋ ಅದನ್ನೇ ನೋಡಿ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರಲ್ಲಿ ಅರ್ಥ ಆಗಿರೋದು ಏನೆಂದರೆ, ಮಾಧ್ಯಮ ಮತ್ತು ಪೊಲೀಸ್​ ಸಿಬ್ಬಂದಿ ಬಹಳ ಪ್ರಯತ್ನ ಹಾಕಿ ಸತ್ಯಾಂಶ ಹೊರತರುವುದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದೀರಿ. ಅದರಲ್ಲಿ ಎರಡನೇ ಮಾತೇ ಇಲ್ಲ. ಇತ್ತೀಚಿಗೆ ನಾನು ನಿಮ್ಮ ನ್ಯೂಸ್​ನಲ್ಲಿ ನೋಡಿದ್ದು, ಸಿಎಂ ಅವರೇ ಈ ಪ್ರಕರಣದ ಬಗ್ಗೆ ಹಠ ಹಿಡಿದು ಕೂತಿದ್ದಾರೆ. ಕರ್ನಾಟಕದ ದೊಡ್ಡ ಸ್ಥಾನದಲ್ಲಿ ಇರುವ ಅವರು, ಮಾಧ್ಯಮದವರು ಹಾಗೂ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಾಗ, ಕಾಮನ್​ ಮ್ಯಾನ್​ ಆಗಿ ನನ್ನ ಪ್ರಕಾರ ಕಲಾವಿದರ ಹೆಸರು ಬರಲ್ಲ. ನಾನು ಅವರ ಪರ, ಇವರ ಪರ ಅಂತ ಮಾತಾಡುವುದು ಕೂಡ ತಪ್ಪಾಗುತ್ತದೆ. ವಿರುದ್ಧವಾಗಿ ಮಾತನಾಡಿದರೂ ತಪ್ಪಾಗುತ್ತೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆ ಹೆಣ್ಮಗುಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಾ ಸ್ವಾಮಿ ಅವರು ಎಲ್ಲೋ ರಸ್ತೆಯಲ್ಲಿ ಆ ರೀತಿ ಬಿದ್ದಿದ್ದರಲ್ಲ, ಅವರಿಗೆ ನ್ಯಾಯ ಸಿಗಬೇಕು. ಹುಟ್ಟಬೇಕಾಗಿರುವ ಆ ಮಗುಗೆ ನ್ಯಾಯ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯದ ಮೇಲೆ ಎಲ್ಲರಿಗೂ ನಂಬಿಕೆ ಹುಟ್ಟುಬೇಕು ಎಂದರೆ ಈ ಕೇಸ್​ನಲ್ಲಿ ಒಳ್ಳೆಯ ನ್ಯಾಯ ಆಗಬೇಕು. ನಾನು ಇಷ್ಟು ಹೇಳಬಲ್ಲೆ, ಮಾಧ್ಯಮದವರು ತೋರಿಸಿದ್ದು ನಮಗೆ ಗೊತ್ತೇ ಹೊರತು ನಾನು ಸ್ಟೇಷನ್​ ಒಳಗೆ ಇಲ್ಲ. ಯಾವ ಸ್ಥಳದಲ್ಲೂ ನಾವು ಇಲ್ಲ. ಆ ಕುಟುಂಬಕ್ಕಾಗಿ ಎಲ್ಲರ ಹೃದಯ ಮಿಡಿಯುತ್ತಿದೆ. ವಾತಾವರಣ ಏನೋ ಸರಿ ಕಾಣಿಸುತ್ತಿಲ್ಲ. ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಎಲ್ಲ ಕಾರಣಕ್ಕೂ ಚಿತ್ರರಂಗದ ಮೇಲೆ ಆರೋಪ ಬರುತ್ತದೆ. ಚಿತ್ರರಂಗಕ್ಕೆ ಒಂದು ಕ್ಲೀನ್​ಚಿಟ್​ ಬೇಕಾಗಿದೆ. ಕಲಾವಿದರು ತುಂಬ ಜನ ಇದ್ದಾರೆ. ಚಿತ್ರರಂಗ ಎಂದರೆ ಒಬ್ಬರು-ಇಬ್ಬರು ಅಲ್ಲ. ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ ಎಂದು ನಟ ಕಿಚ್ಚ ಸುದೀಪ್ ಹೆಳಿದ್ದಾರೆ.

12) " ದರ್ಶನ್ - ರೇಣುಕಾ ಸ್ವಾಮಿ - ಪಾರದರ್ಶಕ ವಿಚಾರಣೆ …..

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಭೆರಗಾಗಿ ನೋಡುತ್ತಿದೆ. ಈ ಹೈ ಪ್ರೊಫೈಲ್ ಕೇಸ್ ನ ವಿಚಾರಣೆಯಲ್ಲಿ ನಿಶ್ಪಕ್ಷಪಾತವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟೀವಿ ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ,

ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಏಕೆಂದರೆ……

ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವೀಡಿಯೋ ಧಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂದ ಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು. ( ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು )( ಕಾನೂನು ಸುಧಾರಣೆಗಳು #CriminalJustice Reforms )

ಅದೇ ರೀತಿ, ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸ್ ನ ವಿಚಾರಣೆಯ ವೀಡಿಯೋ ಧಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು. ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು, ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ.

ಆಗ ರೇಣುಕಾ ಸ್ವಾಮಿ ಕುಟುಂಬಕ್ಕೆ, ಜನರಿಗೆ, ಟೀವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೆೇ ಪೋಲೀಸ್ ಮತ್ತು ಟೀವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ ಎಂದು ನಟ, ಪ್ರಜಾಕೀಯದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

13) ಈ ಕೇಸ್ ಬಗ್ಗೆ ಈಗ ಏನನ್ನೂ ಹೇಳುವುದಿಲ್ಲ. ತನಿಖೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ನಾನು ಏನೂ ಮಾತಾಡಿಲ್ಲ. ನನ್ನ ತಂದೆಯವರ ಹುಟ್ಟೂರು ಅದು. ನಟ ದರ್ಶನ್ ಅವರಿಗೆ ನಾನು ಯಾಕೆ ಟಾಂಗ್ ನೀಡಲಿ? ಮಾರ್ಮಿಕವಾಗಿ ಒಂದು ಬಸವಣ್ಣನ ವಚನ ಹೇಳಿದ್ದೇನೆ ಅಷ್ಟೇ. ಅದೂ ಪೂರ್ತಿ ಮಾಡುವುದಕ್ಕೆ ಅವಕಾಶ ಸಿಗಲಿಲ್ಲ. ಮಧ್ಯದಲ್ಲಿ ಪ್ರಶ್ನೆ ಕೇಳಿ ಅದನ್ನು ತಡೆಯಲಾಗಿದೆ. ದರ್ಶನ್​ ಜೊತೆ ನಾನು ಸಿನಿಮಾ ಮಾಡಿದ್ದೇನೆ. ನಮ್ಮ ನಡುವೆ ಅದರಲ್ಲೂ ನನಗೆ ದರ್ಶನ್ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಪತ್ರಕರ್ತನಾಗಿ ನಾನು ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೇನೆ ಅಷ್ಟೆ. ಅದನ್ನು ಹೊರತುಪಡಿಸಿ ನಮ್ಮ ನಡುವೆ ಏನೂ ಇಲ್ಲ. ಅನ್ಯಾಯ ಆದಾಗ ಧ್ವನಿ ಎತ್ತುವುದನ್ನು ನಾನು ನನ್ನ ತಂದೆ ಲಂಕೇಶ್ ಅವರಿಂದ ಕಲಿತ್ತದ್ದು. ಕೊಲೆಯಾದ ರೇಣುಕಾ ಸ್ವಾಮಿ ಕುಟುಂಬದವರಿಗೆ ನ್ಯಾಯ ಸಿಗಬೇಕು. ವಿಜಯಲಕ್ಷ್ಮಿ ಮತ್ತು ಅವರ ಮಗನಿಗೆ ದೇವರು ಶಕ್ತಿ ಕೊಡಲಿ’ ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್​ ಲಂಕೇಶ್​ ಹೇಳಿದ್ದಾರೆ.

14) "ಚಿತ್ರ ನಿರ್ಮಾಪಕರು ಚಿತ್ರಕಥೆಯನ್ನು ಅಂತಿಮಗೊಳಿಸಿದ ನಂತರವೇ ಚಿತ್ರೀಕರಣವನ್ನು ಪ್ರಾರಂಭಿಸಬೇಕು. ಆದರೆ, ಇನ್ನೂ ಸಾಕಷ್ಟು ಬಾರಿ ಚಿತ್ರೀಕರಣ ನಡೆಯುತ್ತಿರುವಾಗ ನಿರ್ಮಾಪಕರು ಬರೆಯುತ್ತಿರುತ್ತಾರೆ. ಹಾಗೆಯೇ, ದರ್ಶನ್ ಅವರ ಕೊಲೆ ಪ್ರಕರಣದಲ್ಲಿ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರಕಥೆ ಬರವಣಿಗೆ ಈಗ ಶುರುವಾಗಿದೆ. ಒಬ್ಬ ಸ್ಟಾರ್ ತನ್ನ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಒಬ್ಬ ಕಟ್ಟಾ ಅಭಿಮಾನಿಯನ್ನು ಕೊಲ್ಲಲು ಇನ್ನೊಬ್ಬ ಕಟ್ಟಾ ಅಭಿಮಾನಿಯನ್ನು ಬಳಸಿದ ಈ ಘಟನೆ ತಾರಾ ಆರಾಧನಾ ಲಕ್ಷಣದ ಅದೇ ವಿಲಕ್ಷಣ ಉದಾಹರಣೆ ಎಂದು ಬಾಲಿವುಡ್‌ನ ಸಿನಿಮಾ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

15) ‘ನಟ ದರ್ಶನ್​ಗೆ ಶಿಕ್ಷಣದ ಕೊರತೆ ಇದೆ. ಆತನ ಸುತ್ತ ಇರುವ ಗೆಳೆಯರ ಬಳಗ ಸರಿ ಇಲ್ಲ. ಎಲ್ಲರೂ ಕೆಟ್ಟವರು. ಹೆಣ್ಣು, ಹೆಂಡ ದರ್ಶನ್ ಹಾಳಾಗೋದಕ್ಕೆ ಕಾರಣ. ವರನಟ ರಾಜ್‌ಕುಮಾರ್ ಅವರಿಂದ ದರ್ಶನ್ ಕಲಿಯಲೇ ಇಲ್ಲ. ತನ್ನಲ್ಲಿರುವ ಒಳ್ಳೆಯ ಗುಣಗಳನ್ನು ದರ್ಶನ್ ಉಪಯೋಗಿಸಲೇ ಇಲ್ಲ. ಆತ ತಪ್ಪು ಮಾಡಿದ. ಆತನಿಗೆ ಪವಿತ್ರಾ ಶನಿ ರೂಪದಲ್ಲಿ ಜೊತೆಯಾದಳು. ಅತ್ತ ರೇಣುಕಾ ಸ್ವಾಮಿಯ ಪತ್ನಿ ಒಂಟಿಯಾಗಿದ್ದಾಳೆ. ಅಭಿಮಾನಿಗಳು ಅವರ ಸಹಾಯಕ್ಕೆ ನಿಲ್ಲಿ’ ಎಂದು ಒಂದು ಕಾಲದಲ್ಲಿ ನಟ ದರ್ಶನ್‌ಗೆ ನಟನೆಯ ಪಾಠ ಕಲಿಸಿದ್ದ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.