Davanagere Result: ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌ಗೆ ಗೆಲುವು, ಬಿಜೆಪಿಯ ಗಾಯತ್ರಿ ಸಿದ್ದೇಶ್ವರಗೆ ಸೋಲು
ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ತ್ರಿಕೋನ ಪೈಪೋಟಿ ಇದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸೋಲು ಕಂಡಿದ್ದಾರೆ. Davanagere Lok Sabha Elections Result
ದಾವಣಗೆರೆ: ಲೋಕಸಭೆ ಚುನಾವಣೆ 2024ರ ಮತಎಣಿಕೆ ಚುರುಕಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ (Davanagere Lok Sabha MP Election 2024 Result) ಹೊರಬಿದ್ದಿದೆ. ಈ ಬಾರಿ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಗೆಲುವಾಗಿದೆ. ಇವರು ಬಿಜೆಪಿ ಗಾಯತ್ರಿ ಸಿದ್ದೇಶ್ವರ ಎದುರು 26,094 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ದಾವಣಗೆರೆಯಲ್ಲಿ ಈ ಬಾರಿ ತ್ರಿಕೋನ ಪೈಪೋಟಿ ನಡೆದಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಕರ್ನಾಟಕ ಲೋಕಸಭೆಯಲ್ಲಿ ಜಿದ್ದಾಜಿದ್ದಿ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಒಂದಾದ ದಾವಣಗೆರೆಯಲ್ಲಿ ಈ ಬಾರಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ (Gayatri Siddheshwar) ಎದುರು ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ (Prabha Mallikarjun) ಅವರನ್ನು ನಿಲ್ಲಿಸಲಾಗಿತ್ತು. ಈ ಇಬ್ಬರಿಗೆ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ಎದುರಾಳಿಯಾಗಿದ್ದರು. ಕಾಂಗ್ರೆಸ್ ಪ್ರಬಲವಾಗಿರುವ ದಾವಣಗೆರೆಯಲ್ಲಿ ಬಿಜೆಪಿಯೂ ಸದೃಢವಾಗಿದೆ. ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರವು ಇಬ್ಬರು ಪ್ರಭಾವಿ ನಾಯಕರ ಹೆಂಡತಿಯರ ನಡುವಿನದ ಕದನಕ್ಕೆ ಸಾಕ್ಷಿಯಾಗಿತ್ತು. ಈ ನಡುವೆ ಯುವ ಜನಾಂಗ ಒಲವು ಹೊಂದಿದ್ದ ಕುರುಬ ಸಮುದಾಯದ ಜಿಬಿ ವಿನಯ್‌ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಎದುರಾಳಿಯಾಗಿದ್ದರು.
ದಾವಣಗೆರೆ ಕ್ಷೇತ್ರವು ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಜಗಳೂರು, ಹರಿಹರ, ಹರಪನಹಳ್ಳಿ ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ದಾವಣಗೆರೆ ಲೋಕಸಭೆ ಎಲೆಕ್ಷನ್ ಕ್ವಿಕ್ ಲುಕ್
ಲೋಕಸಭಾ ಕ್ಷೇತ್ರದ ಹೆಸರು: ದಾವಣಗೆರೆ
ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು
ಗಾಯತ್ರಿ ಸಿದ್ದೇಶ್ವರ (ಬಿಜೆಪಿ): 606965 ಮತಗಳು
ಪ್ರಭಾ ಮಲ್ಲಿಕಾರ್ಜುನ (ಕಾಂಗ್ರೆಸ್): 633059 ಮತಗಳು
ವಿನಯ್ ಕುಮಾರ್ (ಸ್ವತಂತ್ರ ಅಭ್ಯರ್ಥಿ): 42907 ಮತಗಳು
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಪ್ರಭಾ ಮಲ್ಲಿಕಾರ್ಜುನ ಪರಿಚಯ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರು ದಂತವೈದ್ಯೆ ಹಾಗೂ ಆರೋಗ್ಯ ಕಾರ್ಯಕರ್ತೆ. ಇವರು ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವರಾಗಿರುವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪತ್ನಿ. ಮಾಜಿ ಸಚಿವ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ವಿಧಾನಸಭಾ ಸದಸ್ಯರಾದ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ. ಹರಿಹರ ಮೂಲದ ಇವರಿಗೆ ಈಗ 48 ವರ್ಷ.
ಚುನಾವಣಾ ಕಣ: ದಾವಣಗೆರೆ ಲೋಕಸಭಾ ಕ್ಷೇತ್ರ
ದಾವಣಗೆರೆಯಲ್ಲಿ ಈ ಹಿಂದೆ ನಡೆದ 12 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಬಾರಿ ಹಾಗೂ ಕಾಂಗ್ರೆಸ್ 6 ಬಾರಿ ಗೆಲುವು ಸಾಧಿಸಿತ್ತು. 1999 ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದೆ. ಈ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಹಾಗೂ ಕುರುಬರು ಸಮಾನ ಸಂಖ್ಯೆಯಲ್ಲಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ವಿರುದ್ಧ 17,602 ಮತಗಳ ಅಂತರದಿಂದ ಜಿ.ಎಂ. ಸಿದ್ದೇಶ್ವರ ಗೆಲುವು ಸಾಧಿಸಿದ್ದರು. 2019ರಲ್ಲಿ ಮತ್ತೆ ಸಿದ್ದೇಶ್ವರ ಕಾಂಗ್ರೆಸ್‌ನ ಎಚ್‌ಬಿ ಮಂಜಪ್ಪ ವಿರುದ್ಧ 1,69,702 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.