ಕನ್ನಡ ಸುದ್ದಿ  /  Karnataka  /  Davanagere News District Bjp Complains Against Ex Minister Mp Renukacharya Karnataka Political News In Kannada Arc

Davanagere News: ರಾಜ್ಯ ಬಿಜೆಪಿ ಕೆಂಗಣ್ಣಿಗೆ ಗುರಿಯಾದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ; ಜಿಲ್ಲಾ ಬಿಜೆಪಿಯಿಂದ ರೇಣು ವಿರುದ್ಧ ದೂರು

ಬಿಜೆಪಿಯ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಂಡಿದ್ದು, ರಾಜ್ಯ ಬಿಜೆಪಿ ತೀರ್ಮಾನಗಳ ಬಗ್ಗೆ ಹಾದಿಬೀದಿಗಳಲ್ಲಿ ಉಸುರುತ್ತಿದ್ದಾರೆ ಎನ್ನುವ ಆರೋಪವನ್ನು ಜಿಲ್ಲಾ ಬಿಜೆಪಿ ನಾಯಕರು ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಬಿಜೆಪಿ ಕೆಂಗಣ್ಣಿಗೆ ಗುರಿಯಾದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ
ಕರ್ನಾಟಕ ರಾಜ್ಯ ಬಿಜೆಪಿ ಕೆಂಗಣ್ಣಿಗೆ ಗುರಿಯಾದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

ದಾವಣಗೆರೆ: ಕೋವಿಡ್ ಕಾಲದಲ್ಲಿ ತಮ್ಮ ಮತಕ್ಷೇತ್ರ ಹೊನ್ನಾಳಿ-ನ್ಯಾಮತಿ ಅವಳಿ ಕ್ಷೇತ್ರದ ಜನತೆಯ ನೆರವಿಗೆ ನಿಂತುದ್ದಲ್ಲದೇ, ಖುದ್ದು ತಾವೇ ಕೋವಿಡ್ ಸೆಂಟರ್‌ಗಳಲ್ಲಿ ತಂಗಿ, ಕರೋನಾ ಬಾಧಿತರಿಗೆ ಯೋಗ, ಉಪಾಹಾರ, ಊಟದ ವ್ಯವಸ್ಥೆ ಹಾಗೂ ಮನೋರಂಜನೆ ನೀಡುವ ಮೂಲಕ ಕೋವಿಡ್ ರೋಗಿಗಳಿಗೆ ಆತ್ಮವಿಶ್ವಾಸ ತುಂಬಿ ದೇಶಾದ್ಯಂತ ಹೆಸರಾಗಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಈಗ ತಾವೇ ಸ್ವಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ!

ಟ್ರೆಂಡಿಂಗ್​ ಸುದ್ದಿ

ಹೌದು, ಈಗಾಗಲೇ ಪಕ್ಷ ವಿರೋಧಿ ನಡೆ ಅನುಸರಿಸುತ್ತಿರುವ ಆರೋಪದಡಿ ರೇಣುಕಾಚಾರ್ಯಗೆ ರಾಜ್ಯ ಸಮಿತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ. ಹಾಗಿದ್ದರೂ ರೇಣುಕಾಚಾರ್ಯ ಅವರು ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಂಡಿದ್ದು, ರಾಜ್ಯ ಬಿಜೆಪಿ ತೀರ್ಮಾನಗಳ ಬಗ್ಗೆ ಹಾದಿಬೀದಿಗಳಲ್ಲಿ ಉಸುರುತ್ತಿದ್ದಾರೆ ಎನ್ನುವ ಆರೋಪವನ್ನು ಜಿಲ್ಲಾ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಪಕ್ಷ ವಿರೊಧಿ ಚಟುವಟಿಕೆ ನಡೆಸಿದ್ದಾರೆಂಬ ಆರೋಪದಡಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಮೇಲೆ ಜಿಲ್ಲಾ ಬಿಜೆಪಿಯಿಂದಲೇ ಪಕ್ಷದ ರಾಜ್ಯ ಸಮಿತಿಗೆ ದೂರು ಸಲ್ಲಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರೇಣುಕಾಚಾರ್ಯರು ಪಕ್ಷದಲ್ಲಿ ತಾವೊಬ್ಬರೇ ಪ್ರಾಮಾಣಿಕರು ಉಳಿದವರೆಲ್ಲಾ ಅಪ್ರಾಮಾಣಿಕರು ಎಂಬಂತೆ ಬಿಂಬಿಸುತ್ತಿದ್ದಾರೆ. ಪಕ್ಷದ ನಾಯಕರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಪಕ್ಷದ ವಿರುದ್ಧ ಹಾದಿಬೀದಿಗಳಲ್ಲಿ ಮಾತನಾಡಿ ಪಕ್ಷಕ್ಕೆ ಮುಜುಗರ ತಂದೊಡ್ಡುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಪಕ್ಷದ ರಾಜ್ಯ ಸಮಿತಿಗೆ ದೂರು ಸಲ್ಲಿಸಲಾಗಿದ್ದು, ಮುಂದಿನ ಕ್ರಮವನ್ನು ಪಕ್ಷದ ನಾಯಕರು ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಬ್ಬ ಸೂರ್ಯ ಇದ್ದಂತೆ, ಅವರಿಗೆ ರೇಣುಕಾಚಾರ್ಯ ಟಾರ್ಚ್ ಹಿಡಿಯಲು ಹೋಗುತ್ತಾರೆ. ಅವರ ನೆರಳಲ್ಲಿಯೇ ನಾವೆಲ್ಲಾ ಬದುಕುತ್ತಿದ್ದೇವೆ ಎನ್ನುವುದು ಪಕ್ಷಕ್ಕೆ ತಿಳಿದಿರುವ ವಿಷಯ. ಆದರೆ, ಅಂದು ಸಿಎಂ ಕುರ್ಚಿಯಿಂದ ಬಿಎಸ್‌ವೈ ಅವರು ಕೆಳಗಿಳಿದಾಗ ರೇಣುಕಾಚಾರ್ಯ ಅವರು ವಿರೋಧಿಸಲಿಲ್ಲ, ಪ್ರತಿಭಟಿಸಲಿಲ್ಲ. ಬಿಎಸ್‌ವೈ ಅವರ ಮೇಲೆ ಕಾಳಜಿ ಇರುವವರು ತಮ್ಮ ಶಾಸಕ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಡಲಿಲ್ಲ? ಇವರಿಗೆ ಗೂಟದ ಕಾರೇ ಮುಖ್ಯವಾಗಿತ್ತಾ ಎಂದು ಅವರೇ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಪಕ್ಷ ಎಲ್ಲವನ್ನು ಕೊಟ್ಟಿದೆ ಎಂದು ಇವರೇ ಹೇಳಿದ್ದರು. ಈಶ್ವರಪ್ಪ ಮೇಲೆ ಸಾಕಷ್ಟು ಬಾರಿ ಇವರೇ ವಾಗ್ದಾಳಿ ಮಾಡಿ ಈಗ ಅವರಿಬ್ಬರ ಮೇಲೆ ಇವರಿಗೆ ಸಾಫ್ಟ್ ಕಾರ್ನರ್ ಬಂದಿದೆ. ಇವರ ದ್ವಂದ್ವ ಹೇಳಿಕೆಯಿಂದ ಪಕ್ಷಕ್ಕೆ ಗೊಂದಲ ಶುರುವಾಗಿದ್ದು, ರೇಣುಕಾಚಾರ್ಯರು ತಮ್ಮ ನಿಲುವೇನು ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಎಂಪಿಆರ್ ಅವರು ಎರಡು ಬಾರಿ ಮಂತ್ರಿಯಾಗಿದ್ದಾರೆ, ನಿಗಮ ಮಂಡಳಿಗೂ ನೇಮಕ ಆಗಿದ್ದರು, ಆಗ ಪಕ್ಷದವರು ಅಪ್ರಮಾಣಿಕರಂತೆ ಕಾಣಲಿಲ್ಲ. ಆಗ ಕಾಣದ ಅಪ್ರಮಾಣಿಕತೆ ಈಗ ಇವರಿಗೆ ಕಾಣಿಸುತ್ತಿರುವ ಹಿಂದಿನ ಮರ್ಮವೇನು? ಇದೇ ಇವರ ಪಕ್ಷ ನಿಷ್ಠೇಯಾ ಎಂದು ಪ್ರಶ್ನಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಅನ್ಯ ಪಕ್ಷದವರೊಂದನ್ನು ಭೆಟಿಯಾಗಿರುವುದನ್ನು ಹಾಕಿಕೊಂಡರೆ ಪಕ್ಷದ ಬಗ್ಗೆ ಕಾರ್ಯಕರ್ತರಲ್ಲಿ, ಜನರಲ್ಲಿ ಗೊಂದಲ ಮೂಡುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಲೋಕಸಭಾ ಟಿಕೇಟ್ ಆಕಾಂಕ್ಷಿ ಎನ್ನುತ್ತೀರಿ. ಟಿಕೆಟ್ ಸಿಗದಿದ್ದರೆ ಮುಂದಿನ ತೀರ್ಮಾನ ಎನ್ನುತ್ತೀರಿ ಇದೆ ಪಕ್ಷದ ಬಗೆಗೆ ನಿಮ್ಮ ಪ್ರಾಮಾಣಿಕತೆಯಾ ಎಂದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಪಕ್ಷದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಜಗದೀಶ್, ಮಂಜಪ್ಪ, ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಶಾಂತರಾಜ್ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.