Karnataka Budget 2023: ಕಾಂಗ್ರೆಸ್ ಅಧಿಕಾರಕ್ಕೇರಲು ವೇದಿಕೆ ಕಲ್ಪಿಸಿದ ದಾವಣಗೆರೆಗಿಲ್ಲ ಬಜೆಟ್‌ನಲ್ಲಿ ಮಹತ್ವದ ಸೌಲಭ್ಯ
Karnataka Budget Analysis: ಸಿದ್ದರಾಮೋತ್ಸವ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅವರಿಗೆ ಮರುಹುಟ್ಟು ನೀಡಿದ್ದ ದಾವಣಗೆರೆ ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಿ ಮಹತ್ವದ ಕೊಡುಗೆ ಸಿಗಬಹುದೆಂಬ ನಿರೀಕ್ಷೆಯಿತ್ತು. ಈಗ ಅದು ಹುಸಿಯಾಗಿದೆ.
ದಾವಣಗೆರೆ: ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು ಸಿದ್ಧರಾಮೋತ್ಸವದ ಮೂಲಕ ಮತ್ತೆ ವೇದಿಕೆ ಕಲ್ಪಿಸಿಕೊಟ್ಟ ಮಧ್ಯ ಕರ್ನಾಟದ ಕೇಂದ್ರ ಬಿಂದು ದೇವನಗರಿ ಅರ್ಥಾತ್ ದಾವಣಗೆರೆ ಜಿಲ್ಲೆಗೆ ಮಹತ್ವ ಕೊಡುವುದನ್ನು ಸಿದ್ಧರಾಮಯ್ಯ ಸರ್ಕಾರ ಮರೆತಿರುವುದು ಇಂದಿನ ಬಜೆಟ್‌ನಲ್ಲಿ ಸಾಬೀತಾಗಿದೆ. ಕಳೆದ ಆಗಸ್ಟ್‌ನಲ್ಲಿ ನಡೆದ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬ ಸಿದ್ಧರಾಮೋತ್ಸವದಲ್ಲಿ ರಾಜ್ಯದ ಜನರನ್ನು ಸೆಳೆಯುವ ಮೂಲಕ ಕಾಂಗ್ರೆಸ್ ಮತ್ತೆ ಅಧಿಕಾರದ ಗದ್ದುಗೆ ಏರಲು ದಾವಣಗೆರೆ ಕೊಡುಗೆ ನೀಡಿದೆ.
ಈ ಬಜೆಟ್‌ನಲ್ಲಿ ಸಿದ್ಧರಾಮಯ್ಯ ಸಾಕಷ್ಟು ಅನುದಾನ ನೀಡುವ ಮೂಲಕ ಬೆಣ್ಣೆನಗರಿ ಜಿಲ್ಲೆಗೆ ಮಹತ್ವ ನೀಡುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಸಿದ್ಧರಾಮಯ್ಯ ಹತ್ತರಲ್ಲಿ ಹನ್ನೊಂದನೇ ಜಿಲ್ಲೆಯಂತೆ ಪರಿಗಣಿಸಿರುವುದು ಬಜೆಟ್‌ನಲ್ಲಿ ದಾವಣಗೆರೆಗೆ ಕೊಟ್ಟ ಕಲಸುಮೇಲೊಗರದಂಥ ಸೌಲಭ್ಯಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಸ್ಪಷ್ಟವಾಗಲಿದೆ.
ದಾವಣಗೆರೆ ಜನರ ಬಹುದಿನಗಳ ಕನಸಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು, ವಿಮಾನ ನಿಲ್ದಾಣಕ್ಕೆ ಸ್ಥಳ, ಜವಳಿ ಪಾರ್ಕ್, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆಗಳಿಗೆ ಉತ್ತೇಜನ, ರೈತರ ಅನುಕೂಲಕ್ಕೆ ಮೆಕ್ಕೆಜೋಳ ಸಂಸ್ಕರಣಾ ಘಟಕ ಸೇರಿದಂತೆ ಹತ್ತು ಹಲವು ನಿರೀಕ್ಷೆಗಳನ್ನು ದೇವನಗರಿಯ ಜನರು ಹೊಂದಿದ್ದರು. ಆದರೆ, ಇದರಲ್ಲಿ ಯಾವೊಂದು ನಿರೀಕ್ಷೆಗಳನ್ನು ಈಡೇರಿಸುವ ಭರವಸೆಯನ್ನು ಸಿದ್ಧರಾಮಯ್ಯ ಅವರು ನೀಡಿಲ್ಲ. ಇದರ ಜತೆಗೆ ಕಳೆದ 2016ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ದಾವಣಗೆರೆ ಜಿಲ್ಲೆಯಲ್ಲಿ ಮೂರನೇ ವಿಶ್ವಕನ್ನಡ ಸಮ್ಮೇಳನ ಆಯೋಜಿಸುವುದಾಗಿ ನೀಡಿದ್ದ ಭರವಸೆಯನ್ನು ಅವರು ಇಂದು ಬಜೆಟ್‌ನಲ್ಲಿ ಉಲ್ಲೇಖಿಸದೇ ಇರುವುದು ಕನ್ನಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಇತರೆಡೆ ವಲಸೆ ಹೋಗುವ ವಿದ್ಯಾವಂತ ಯುವಕರಿಗೆ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ನೀಡುವ ಯಾವ ಯೋಜನೆಗಳನ್ನು ತರದೇ ಇರುವುದು ಯುವಜನರಿಗೆ ಬೇಸರ ಮೂಡಿಸಿದೆ. ಇನ್ನು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ, ಒಳಾಂಗಣ ಕ್ರೀಡಾ ಸೌಲಭ್ಯ ಕಲ್ಪಿಸುವ ಭರವಸೆ ಸಿಕ್ಕಿದೆ. ಆದರೆ, ಇದರ ಬಗ್ಗೆ ಸ್ಪಷ್ಟವಾಗಿ ಘೋಷಣೆ ಇಲ್ಲ. ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ ಎಲ್ಲಿ ಸ್ಥಾಪಿಸುತ್ತಾರೆಂಬ ಸ್ಪಷ್ಟ ವಿವರಣೆ ಇಲ್ಲ. ರಾಜ್ಯದ ಎಲ್ಲಾ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ ಆಯುರ್ವೇದ, ಹೋಮಿಯೋಪತಿ, ಯೋಗ ಕೇಂದ್ರಗಳನ್ನು ಒಳಗೊಂಡ ಆಯುಷ್ ವಿಭಾಗವನ್ನು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ. ರಾಜ್ಯಾದ್ಯಂತ ಇರುವ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಗಳ ಪೈಕಿ ದಾವಣಗೆರೆಯದ್ದೂ ಒಂದಾಗಿದೆ. ಅದರ ಹೊರತಾಗಿ ಮಹತ್ವದ ಕೊಡುಗೆಗಳಿಲ್ಲ.