Davanagere News: ಅಧಿಕಾರಿಗಳಿಗೆ ಸಿದ್ಧರಾಮಯ್ಯ ಪುಲ್ ಕ್ಲಾಸ್; ಸಿದ್ದರಾಮೋತ್ಸವ ಬಳಿಕ ಮೊದಲ ಭೇಟಿ, ಸಿಎಂ ಆದ ಬಳಿಕ ಫಸ್ಟ್ ಜಿಲ್ಲಾ ಪ್ರವಾಸ
Davanagere News: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದಾವಣಗೆರೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಜಿಪಂಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಜನರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆಯನ್ನೂ ಕೊಟ್ಟರು.

ದಾವಣಗೆರೆ: ಕುಂದುಕೊರತೆ ಪರಿಹಾರಕ್ಕಾಗಿ ಜನ ಸರ್ಕಾರಿ ಕಚೇರಿಗೆ ಬಂದರೆ ಅಧಿಕಾರಿ, ಸಿಬ್ಬಂದಿ ವರ್ಗ ಸೌಜನ್ಯದಿಂದ ವರ್ತಿಸದೇ ಇದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನೌಕರರನ್ನು ಎಚ್ಚರಿಸಿದರು.
ಟ್ರೆಂಡಿಂಗ್ ಸುದ್ದಿ
ಜನರು ತಮ್ಮ ಕುಂದುಕೊರತೆಗಳ ಪರಿಹಾರಕ್ಕೆ ಸರ್ಕಾರಿ ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅವರ ಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡದಿದ್ದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.
ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದಾವಣಗೆರೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಮುಖ್ಯಮಂತ್ರಿಯಾದ ಬಳಿಕ ಇದು ಅವರ ಮೊದಲ ಜಿಲ್ಲಾ ಪ್ರವಾಸವೂ ಹೌದು. ಅದೇ ರೀತಿ, ಸಿದ್ದರಾಮೋತ್ಸವ ನಡೆಸಿದ ಬಳಿಕ ಮೊದಲ ದಾವಣೆಗೆರೆ ಭೇಟಿಯೂ ಹೌದು.
ನಮ್ಮದು ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳೇ ಮಾಲಿಕರು. ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅವರ ಸೇವೆ ಮಾಡುವವರು. ಆದ್ದರಿಂದ, ಜನರ ಕುಂದು ಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು. ಹಾಗೊಂದು ವೇಳೆ ಉಡಾಫೆ ಮಾಡಿದರೆ ಅಂತಹ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಉತ್ತಮವಾದ ಸಂಬAಧ ಇಟ್ಟುಕೊಳ್ಳಬೇಕು, ಅವರು ಜನಪ್ರತಿನಿಧಿಗಳು, ನೀವು ಜನರ ಸೇವೆ ಮಾಡಲು ನೇಮಕವಾಗಿರುವ ಅಧಿಕಾರಿಗಳು. ಹಾಗಾಗಿ, ಜನಪ್ರತಿನಿಧಿಗಳು ಮತ್ತು ನೀವು ಉತ್ತಮ ಬಾಂಧವ್ಯ ಹೊಂದಿದರೆ ಜನರ ಕುಂದುಕೊರತೆಗಳ ಪರಿಹಾರ ಸುಲಭವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಇಲಾಖೆಗಳು ಜಿಡ್ಡುಗಟ್ಟಿನಿಂತಿವೆ. ಆದ್ದರಿಂದ ಜನರ ಮನದಲ್ಲಿ ತಮ್ಮ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗುತ್ತವೆ ಎಂಬ ಮನೋಭಾವ ನೆಲೆಯೂರಿಬಿಟ್ಟಿದೆ. ಇದನ್ನು ತೊಡೆದು ಹಾಕುವ ಕೆಲಸಬಾಗಬೇಕಾದರೆ ಅಧಿಕಾರಿಗಳು ಜನರಿಗೆ ಅಲೆದಾಡಿಸುವುದನ್ನು ಬಿಡಬೇಕು. ಈಗ ಜನ ಬದಲಾವಣೆ ಬಯಸುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತದೆ ಎಂಬ ದೂರು ಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಆಗಾಗ ಅಲ್ಲಿಗೆ ಭೇಟಿ ನೀಡಿದರೆ ಪಾರದರ್ಶಕವಾಗಿ ಕೆಲಸಗಳು ನಡೆಯುತ್ತವೆ. ಸರ್ಕಾರ ಅಧಿಕಾರಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿರುವುದು ನೀವು ಕೊಠಡಿಗಳಲ್ಲಿ ಎಸಿ ಹಾಕಿಕೊಂಡು ಕೂತು ಕೆಲಸ ಮಾಡಲು ಅಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಲೆಂದು. ಆದ್ದರಿಂದ, ಕೆಳಹಂತದ ಕಚೇರಿಗಳಿಗೆ ಭೇಟಿ ನೀಡಿದರೆ ಜಿಡ್ಡುಗಟ್ಟಿದ ವ್ಯವಸ್ಥೆ ಚುರುಕುಗೊಳ್ಳಲಿದೆ. ಲಂಚಕ್ಕೆ ಕಡಿವಾಣ ಬೀಳುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ರಾಜ್ಯದ್ಯಂತ 20 ಸಾವಿರ ಹೆಕ್ಟೇರ್ ಬೆಳೆ ನಷ್ಟ ಸಂಭವಿಸಿದೆ ಎಂಬ ವರದಿ ಬಂದಿದೆ. ಕೂಡಲೇ ಸರ್ವೆ ನಡೆಸಿ, ಸರ್ಕಾರದ ನಿಯಮಾನುಸಾರ ಪರಿಹಾರ ನೀಡುತ್ತೇವೆ. ಈಗ ಮಳೆ ಆರಂಭವಾಗಲಿದ್ದು, ರೈತರಿಗೆ ಬೇಕಾದ ಕೀಟನಾಶಕ, ಗೊಬ್ಬರ, ಬೀಜಗಳನ್ನು ಅಧಿಕಾರಿಗಳು ದಾಸ್ತಾನು ಮಾಡಿಕೊಳ್ಳಬೇಕೆಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಸಭೆಯಲ್ಲಿ ಸಚಿವರುಗಳಾದ ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಸುಧಾಕರ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಮೇಯರ್ ವಿನಾಯಕ ಪೈಲ್ವಾನ್ ಉಪಸ್ಥಿತರಿದ್ದರು.