ಕನ್ನಡ ಸುದ್ದಿ  /  Karnataka  /  Davanagere News Kichcha Sudeep Belongs To St Community But Campaigned Against Me Says Minister Kn Rajanna Mgb

Rajanna On Sudeep: ಕಿಚ್ಚ ಸುದೀಪ್ ಎಸ್ಟಿಗೆ ಸೇರಿದವರಾಗಿದ್ದು ನನ್ನ ವಿರುದ್ಧವೇ ಪ್ರಚಾರ ನಡೆಸಿದ್ರು; ಸಚಿವ ಕೆಎನ್ ರಾಜಣ್ಣ

Minister KN Rajanna on Kichcha Sudeep: ನಮ್ಮವರು ಎರಡೂ ಕಡೆ ಸ್ಪರ್ಧಿಸಿದಾಗ ಒಬ್ಬರ ಪರವಾಗಿ, ಮತ್ತೊಬ್ಬರ ವಿರುದ್ಧವಾಗಿ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದು, ನಮಗೆಲ್ಲರಿಗೂ ಬೇಸರ ತರಿಸಿತು. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ ಎಂದರು ಸಚಿವ ಕೆ.ಎನ್.ರಾಜಣ್ಣ.

ನಟ ಸುದೀಪ್​- ಸಚಿವ ಕೆ.ಎನ್.ರಾಜಣ್ಣ
ನಟ ಸುದೀಪ್​- ಸಚಿವ ಕೆ.ಎನ್.ರಾಜಣ್ಣ

ದಾವಣಗೆರೆ: ಎಸ್ಟಿ ಸಮುದಾಯಕ್ಕೆ ಸೇರಿದ ಚಿತ್ರನಟ ಸುದೀಪ್ (Kichcha Sudeep) ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನನ್ನ ವಿರುದ್ಧವೇ ಪ್ರಚಾರ ಮಾಡಿದರು. ಸಾಮಾನ್ಯ ಕ್ಷೇತ್ರಗಳಲ್ಲಿ ಬಂದು, ಹೋಗಿ ಪ್ರಚಾರ ಮಾಡಿದ್ದರೆ ಬೇಸರ ಅನ್ನಿಸುತ್ತಿರಲಿಲ್ಲ. ಆದರೆ, ಎಸ್ಟಿ ಮೀಸಲು ಕ್ಷೇತ್ರದಲ್ಲಿ ಬಂದು, ನನ್ನ ವಿರುದ್ಧವೇ ಪ್ರಚಾರ ಮಾಡಿದ್ದು ಮಾತ್ರ ನೋವೆನಿಸಿತು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ (Minister KN Rajanna) ಹೇಳಿದರು.

ಟ್ರೆಂಡಿಂಗ್​ ಸುದ್ದಿ

ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಇಂದು (ಜೂನ್​ 18, ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮವರು ಎರಡೂ ಕಡೆ ಸ್ಪರ್ಧಿಸಿದಾಗ ಒಬ್ಬರ ಪರವಾಗಿ, ಮತ್ತೊಬ್ಬರ ವಿರುದ್ಧವಾಗಿ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದು, ನಮಗೆಲ್ಲರಿಗೂ ಬೇಸರ ತರಿಸಿತು. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ ಎಂದರು.

ಸುದೀಪ್‌ಗೆ ಅನುಭವ ಕಡಿಮೆ ಇದೆ. ಅವರು ಶ್ರೇಷ್ಟ ನಟನಾಗಲು ಅವಕಾಶ ಇದೆ. ಇನ್ನಾದರೂ ಕಿಚ್ಚ ಸುದೀಪ್ ಇದನ್ನೆಲ್ಲಾ ಅರ್ಥ ಮಾಡಿಕೊಂಡು, ಮುಂದುವರಿಯಲಿ. ಸುದೀಪ್ ನಮ್ಮ ಸಮಾಜದ ಮೇರು ನಟ ಎಂಬುದರಲ್ಲಿ ಎರಡು ಮಾತಿಲ್ಲ. ವರ ನಟ ಡಾ.ರಾಜಕುಮಾರ ರಾಜಕೀಯ ಕ್ಷೇತ್ರಕ್ಕೆ ಬಂದು, ಏನು ಬೇಕಾದರೂ ಆಗಬಹುದಿತ್ತು. ಆದರೆ, ರಾಜಕೀಯದಿಂದ ದೂರ ಇದ್ದಿದ್ದಕ್ಕೆ ದೇವತಾ ಮನುಷ್ಯ ಅಂತೆಲ್ಲಾ ಅನ್ನಿಸಿಕೊಂಡರು ಎಂದು ಸೂಚ್ಯವಾಗಿ ಹೇಳಿದರು.

ಸಿನಿಮಾ ನಟರು ರಾಜಕೀಯಕ್ಕೆ ಬರುವುದರಿಂದ ಗೌರವ ಕಡಿಮೆಯಾಗುತ್ತದೆ. ಒಂದು ಸಮುದಾಯದ ಅಭ್ಯರ್ಥಿಗಳ ಪರ-ವಿರುದ್ಧವಾಗುತ್ತಾರೆ. ಅದಕ್ಕೆ ಮತ್ತೆ ಎಂದಿಗೂ ಸಹ ಅವಕಾಶ ಕೊಡಬೇಡಿ ಎಂದು ಕಿಚ್ಚ ಸುದೀಪ್‌ಗೆ ಕಿವಿಮಾತು ಹೇಳಿದ್ದೇನೆ ಎಂದರು.

ಮುಂಬರುವ ಯಾವುದೇ ಚುನಾವಣೆಯಲ್ಲೂ ನಾನು ನಿಲ್ಲುವುದಿಲ್ಲ. ನಾಳೆ ನಮ್ಮ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆಂಬುದೇ ನಮ್ಮ ಗುರಿ. ರಾಜಕೀಯ ಸಂಘರ್ಷ ಮಾಡದ ಹೊರತು, ನಾವು ಕೇಳದಿದ್ದರೆ ನಮ್ಮ ಸಮುದಾಯಕ್ಕೆ ಯಾವುದೇ ಅಧಿಕಾರ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಪರಿಶಿಷ್ಟ ಪಂಗಡದವರಿಗೂ ಮುಖ್ಯಮಂತ್ರಿಯ ಸ್ಥಾನ ಸಿಗಬೇಕು. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಇದೆ. ಅಲ್ಲದೇ ನಮ್ಮ ಸಮುದಾಯದ ಯಾರೇ ಯಾರೇ ಮುಖ್ಯಮಂತ್ರಿಯಾದರೂ ವಾಲ್ಮೀಕಿ ನಾಯಕ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿಸಿದರು.

ನಾವೂ ಸಹ ಹಿಂದೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಕೇಳಲು ಹೊರಟಿದ್ದೆವು. ಡಿಸಿಎಂ ಸ್ಥಾನದ ಬಗ್ಗೆ ಮುಂದೆಯೂ ಕೇಳುತ್ತೇವೆ. ಮಗು ಅತ್ತರೆ ತಾನೇ ತಾಯಿ ಹಾಲುಣಿಸುವುದು. ಹಾಗೆಯೇ ನ್ಯಾಯಯುತ ಬೇಡಿಕೆ ಏಕೆ ಕೇಳಬಾರದು? ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಕೇಳಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಪಡೆದುಕೊಂಡು, ಸಮಾಜ ದ ಬೆಳವಣಿಗೆಗೆ ಸಹಕಾರಿಯಾಗಬೇಕು. ಮುಂದಿನ ದಿನಮಾನಗಳಲ್ಲಿ ನಾವೂ ಸಹ ವಾಲ್ಮೀಕಿ ಸಮುದಾಯದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತೇವೆ. ಇದು ಇಡೀ ರಾಜ್ಯದ ನಾಯಕ ಸಮುದಾಯದ ಮಹದಾಸೆಯೂ ಆಗಿದೆ. ಯಾರನ್ನೋ ಬಿಟ್ಟು, ನನಗೆ ಮುಖ್ಯಮಂತ್ರಿ ಮಾಡಿ ಅಂತಾ ನಾವು ಕೇಳುತ್ತಿಲ್ಲ. ಈ ಅವಧಿಯಲ್ಲಿ ಡಿಸಿಎಂ ಸ್ಥಾನಕ್ಕೂ ಒತ್ತಾಯಿಸುತ್ತೇವೆ. ಅದಕ್ಕೆ ಸಮಯ ಬರಲಿ ಎಂದು ಅವರು ತಿಳಿಸಿದರು.

ವರದಿ: ಅದಿತಿ, ದಾವಣಗೆರೆ