ಸದ್ದಿಲ್ಲದೆ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ; ಕಾಂಗ್ರೆಸ್ ಟಿಕೆಟ್ ಗೆ ಶುರುವಾಗಿದೆ ಲಾಬಿ
ಗಣಿ ಮತ್ತು ಭೂ ವಿಜ್ಞಾನ ಖಾತೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕೂಡ ಈ ಭಾರಿ ಲೋಕಸಭೆ ಚುನಾವಣೆ ಸ್ಪರ್ಧೆಗೆ ಮನಸ್ಸು ಮಾಡಿದ್ದಾರೆ.
ದಾವಣಗೆರೆ: 2024ರ ಲೋಕಸಭೆ ಚುನಾವಣೆ ಇನ್ನೇನು ಏಳೆಂಟು ತಿಂಗಳಷ್ಟೇ ಬಾಕಿಯಿದ್ದು, ಆಕಾಂಕ್ಷಿಗಳು ಸದ್ದಿಲ್ಲದೇ ಟಿಕೆಟ್ ಗಾಗಿ ಕಸರತ್ತನ್ನ ಶುರು ಮಾಡಿದ್ದಾರೆ. ಪ್ರಮುಖವಾಗಿ ಗಣಿ ಮತ್ತು ಭೂ ವಿಜ್ಞಾನ ಖಾತೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕೂಡ ಈ ಭಾರಿ ಲೋಕಸಭೆ ಚುನಾವಣೆ ಸ್ಪರ್ಧೆಗೆ ಮನಸ್ಸು ಮಾಡಿದ್ದಾರೆ. ಇನ್ನು, ಡಾ.ಪ್ರಭಾ ಮಾತ್ರವಲ್ಲದೇ, ಮಾಜಿ ಸಂಸದ ದಿ.ಚನ್ನಯ್ಯ ಒಡೆಯರ ಪುತ್ರ ಶಿವಕುಮಾರ್ ಒಡೆಯರ್, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಬಿ ಮಂಜಪ್ಪ ಸ್ಪರ್ಧೆಗೆ ಮುಂದಾಗಿದ್ದು, ಇನ್ ಸೈಟ್ ಐಎಎಸ್ ತರಬೇತಿ ಸಂಸ್ಥೆಯ ಮುಖ್ಯಸ್ಥ ವಿನಯ ಕುಮಾರ್ ಕೂಡ ಕಾಂಗ್ರೆಸ್ ಟಿಕೆಟ್ ಗೆ ಹೋರಾಟ ನಡೆಸಿದ್ದು, ಕ್ಷೇತ್ರದಲ್ಲಿ ಭರ್ಜರಿ ಓಡಾಟವನ್ನ ನಡೆಸಿದ್ದಾರೆ.
ಚುನಾವಣೆ ಇನ್ನು ಏಳೆಂಟು ತಿಂಗಳಿರುವಾಗಲೇ ನಾಲ್ಕೈದು ಜನರು ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದು, ಚುನಾವಣೆ ಹತ್ತಿರ ಬಂದಂತೆ ಆಕಾಂಕ್ಷಿಗಳ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆ ಕೂಡ ತಳ್ಳಿ ಹಾಕುವಂತಿಲ್ಲ.
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಎಚ್.ಬಿ ಮಂಜಪ್ಪ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿಯ ಜಿ.ಎಂ ಸಿದ್ದೇಶ್ವರ್ ವಿರುದ್ಧ ಗೆಲುವಿನ ಸಿಹಿ ಉಣ್ಣದೇ ಸೋಲಿನ ಕಹಿ ಅನುಭವಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿಯೂ ಮಂಜಪ್ಪ ಸ್ಪರ್ಧೆಗೆ ಮುಂದಾಗಿ ಹೊನ್ನಾಳಿ ಟಿಕೆಟ್ ಗೆ ಪ್ರಯತ್ನಿಸಿದ್ದರು. ಆದರೆ, ಡಿ. ಜಿ ಶಾಂತನಗೌಡರು ಇದು ನನ್ನ ಕೊನೆ ಚುನಾವಣೆ ಎಂದು ಹೇಳಿದ್ದರು. ಹೀಗಾಗಿ, ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಮುಂದಾಗಿದ್ದು, ಒಳಗೊಳಗೆ ಲಾಬಿಯನ್ನ ನಡೆಸಿದ್ದಾರೆ.
ಪಕ್ಷದ ವೇದಿಕೆಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಎಲ್ಲು ಕಾಣಿಸಿಕೊಳ್ಳದ ಮಾಜಿ ಸಂಸದ ದಿ.ಚನ್ನಯ್ಯ ಒಡೆಯರ್ ಅವರ ಪುತ್ರ ಶಿವಕುಮಾರ್ ಒಡೆಯರ್ ಕೂಡ ಈ ಬಾರಿ ನನಗೂ ಟಿಕೆಟ್ ಬೇಕು ಎಂಬ ಒತ್ತಾಯವನ್ನ ಮುಂದಿಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಶಿವಕುಮಾರ್ ಒಡೆಯರ್ ತಮ್ಮ ಬೆಂಬಲಿಗರನ್ನ ಕಟ್ಟಿಕೊಂಡು ದಾವಣಗೆರೆ ಜಿಲ್ಲಾದ್ಯಂತ ಕುರುಬ ಸಮುದಾಯ ಮುಖಂಡರು ಹಾಗೂ ಕಾಂಗ್ರೆಸ್ ನಲ್ಲಿನ ತಮ್ಮ ಆಪ್ತರನ್ನ ಭೇಟಿಯಾಗುತ್ತಿದ್ದು, ಸಂಘಟನೆಗೆ ಇಳಿದಿದ್ದಾರೆ.
ಡಾ. ಪ್ರಭಾ ಮಲ್ಲಿಕಾರ್ಜುನ್ ಕೂಡ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷದ ಕಾರ್ಯಕ್ರಮಗಳು ಹಾಗೂ ಆರೋಗ್ಯ ಶಿಬಿರ ಮತ್ತು ಸಾರ್ವಜನಿಕ ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜನರನ್ನ ಸೆಳೆಯುತ್ತಿದ್ದಾರೆ. ಅಲ್ಲದೇ, ಪ್ರಭಾ ಅವರೆ ಸ್ಪರ್ಧೆ ಮಾಡಬೇಕು ಎಂದು ಕ್ಷೇತ್ರದಲ್ಲಿ ಕಾರ್ಯಕರ್ತರು ಬಯಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ, ಈಗಾಗಲೇ ಶಾಮನೂರು ಕುಟುಂಬದಲ್ಲಿಯೇ ಶಾಮನೂರು ಶಿವಶಂಕರಪ್ಪ ಶಾಸಕರಾಗಿದ್ದು, ಶಾಮನೂರು ಶಿವಶಂಕರಪ್ಪ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಮಿನಿಸ್ಟರ್ ಆಗಿದ್ದಾರೆ. ಹೀಗಾಗಿ, ಒಂದೇ ಕುಟುಂಬಕ್ಕೆ ಎಲ್ಲ ಅಧಿಕಾರ ಎಂಬ ವಿರೋಧದ ಮಾತುಗಳು ಕೇಳಿ ಬರುತ್ತಿವೆ.
ಇನ್ನು, ಇನ್ ಸೈಟ್ ಐಎಎಸ್ ತರಬೇತಿ ಸಂಸ್ಥೆಯ ಮುಖ್ಯಸ್ಥ ವಿನಯಕುಮಾರ್ ತಮಗೆ ಟಿಕೆಟ್ ಸಿಕ್ಕೆ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದು, ಭರ್ಜರಿ ಓಡಾಟವನ್ನ ನಡೆಸಿದ್ದಾರೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು, ಲೋಕಸಭೆಗೆ ದಾವಣಗೆರೆ ಕ್ಷೇತ್ರದಿಂದ ತಾನು ಕಾಂಗ್ರೆಸ್ ಟಿಕೆಟ್ ಗೆ ಪ್ರಬಲ ಆಕಾಂಕ್ಷಿ ಎಂದು ಬ್ಯಾನರ್ ಗಳನ್ನ ಹಾಕಿಸುವ ಮೂಲಕ ಹವಾ ಕ್ರಿಯೆಟ್ ಮಾಡುತ್ತಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ವಿಜಯ ಸಾಧಿಸಿದ ಬಳಿಕ ಲೋಕಸಭೆ ಚುನಾವಣೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಟಿಕೆಟ್ ಆಕಾಂಕ್ಷಿಗಳು ಹೆಚ್ಚುತ್ತಿದ್ದು, ಕೊನೆಗೆ ಪಕ್ಷ ಯಾರಿಗೆ ಮಣೆ ಹಾಕತ್ತೋ, ಯಾರಿಗೆ ಕೈ ಕೊಡತ್ತೋ ಸದ್ಯದ ಕುತೂಹಲ.