ಚನ್ನಗಿರಿ ಪೊಲೀಸ್ ವಶದಲ್ಲಿ ಅದಿಲ್ ಸಾವು; ಠಾಣೆಗೆ ನುಗ್ಗಿದ ಸಂಬಂಧಿಕರು, ಉದ್ವಿಗ್ನ ಪರಿಸ್ಥಿತಿ, 5 ಪ್ರಮುಖ ವಿದ್ಯಮಾನಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಚನ್ನಗಿರಿ ಪೊಲೀಸ್ ವಶದಲ್ಲಿ ಅದಿಲ್ ಸಾವು; ಠಾಣೆಗೆ ನುಗ್ಗಿದ ಸಂಬಂಧಿಕರು, ಉದ್ವಿಗ್ನ ಪರಿಸ್ಥಿತಿ, 5 ಪ್ರಮುಖ ವಿದ್ಯಮಾನಗಳು

ಚನ್ನಗಿರಿ ಪೊಲೀಸ್ ವಶದಲ್ಲಿ ಅದಿಲ್ ಸಾವು; ಠಾಣೆಗೆ ನುಗ್ಗಿದ ಸಂಬಂಧಿಕರು, ಉದ್ವಿಗ್ನ ಪರಿಸ್ಥಿತಿ, 5 ಪ್ರಮುಖ ವಿದ್ಯಮಾನಗಳು

ಚನ್ನಗಿರಿ ಪೊಲೀಸ್ ವಶದಲ್ಲಿ ಅದಿಲ್ ಸಾವು ಸಂಭವಿಸಿದ್ದು ಅನಾರೋಗ್ಯದಿಂದ ಎಂದು ಪೊಲೀಸರು ಹೇಳುತ್ತಿದ್ದಾರೆ. ಇನ್ನೊಂದೆಡೆ, ಇದು ಲಾಕಪ್‌ ಡೆತ್‌ ಎಂದು ಆರೋಪಿಸಿ ಠಾಣೆಗೆ ನುಗ್ಗಿದ ಸಂಬಂಧಿಕರು ಹಾನಿ ಎಸಗಿದ್ದಾರೆ. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯ 5 ಪ್ರಮುಖ ವಿದ್ಯಮಾನಗಳ ವಿವರ ಇಲ್ಲಿದೆ.

ಚನ್ನಗಿರಿ ಪೊಲೀಸ್ ವಶದಲ್ಲಿ ಆರೋಪಿ ಅದಿಲ್ ಸಾವು ಸಂಭವಿಸಿದ್ದು, ಇದನ್ನು ಖಂಡಿಸಿ ಠಾಣೆಗೆ ನುಗ್ಗಿದ ಸಂಬಂಧಿಕರು ಅಲ್ಲಿ ಆಸ್ತಿಪಾಸ್ತಿ ಹಾನಿ ಎಸಗಿದ್ದಾರೆ. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. (ವಿಡಿಯೋ ಚಿತ್ರ)
ಚನ್ನಗಿರಿ ಪೊಲೀಸ್ ವಶದಲ್ಲಿ ಆರೋಪಿ ಅದಿಲ್ ಸಾವು ಸಂಭವಿಸಿದ್ದು, ಇದನ್ನು ಖಂಡಿಸಿ ಠಾಣೆಗೆ ನುಗ್ಗಿದ ಸಂಬಂಧಿಕರು ಅಲ್ಲಿ ಆಸ್ತಿಪಾಸ್ತಿ ಹಾನಿ ಎಸಗಿದ್ದಾರೆ. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. (ವಿಡಿಯೋ ಚಿತ್ರ) (YST DVG)

ದಾವಣಗೆರೆ: ಚನ್ನಗಿರಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಿನ್ನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಮೃತ ಆರೋಪಿಯ ಸಂಬಂಧಿಕರು ಇದು ಲಾಕಪ್ ಡೆತ್ ಎಂದು ಆರೋಪಿಸಿ ನಿನ್ನೆ ರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಆಸ್ತಿಪಾಸ್ತಿಗಳಿಗೆ ಹಾನಿ ಎಸಗಿದ ಘಟನೆ ವರದಿಯಾಗಿದೆ.

ಮೃತ ಆರೋಪಿಯನ್ನು ಚನ್ನಗಿರಿಯ ಟಿಪ್ಪು ನಗರದ ನಿವಾಸಿ ಆದಿಲ್ (30) ಎಂದು ಗುರುತಿಸಲಾಗಿದೆ. ಅದಿಲ್ ಸಂಬಂಧಿಕರು ಮತ್ತು ಹಿತೈಷಿಗಳು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೆ, ಆಸ್ತಿಪಾಸ್ತಿ ಹಾನಿಮಾಡಿದರು. ಪೊಲೀಸ್ ಜೀಪ್ ಅನ್ನು ಮಗುಚಿ ಹಾಕಿದ ಘಟನೆಯೂ ನಡೆಯಿತು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸ್ ವಶದಲ್ಲಿ ಅದಿಲ್ ಸಾವು; ಪ್ರಮುಖ 5 ವಿದ್ಯಮಾನಗಳು

1) ಒಸಿ(ಮಟ್ಕಾ) ಆಡಿಸುತ್ತಿದ್ದ ಕಾರಣ, ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿ ಅದಿಲ್ (30) ನನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಪೊಲೀಸ್ ಠಾಣೆಗೆ ಕರೆತಂದಿದ್ದ‌ರು.

2) ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲಿದ್ದ ಅದಿಲ್‌ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

3) ಪೊಲೀಸರ ವಶದಲ್ಲಿರುವಾಗ ಅದಿಲ್ ಮೃತಪಟ್ಟಿದ್ದು, ಇದು ಲಾಕಪ್ ಡೆತ್ ಎಂಬುದು ಅದಿಲ್ ಕುಟುಂಬಸ್ಥರು, ಸಮುದಾಯದವರ ಆರೋಪ. ಆರೋಪಿಯ ಸಾವಿನ ಸುದ್ದಿ ಬಹಿರಂಗವಾಗುತ್ತಲೇ ಚನ್ನಗಿರಿ ಪೊಲೀಸ್ ಠಾಣೆ ಎದುರು ತಡರಾತ್ರಿ ಜಮಾಯಿಸಿದ್ದ ಅದಿಲ್‌ ಸಂಬಂಧಿಕರು ಠಾಣೆಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದರಲ್ಲದೆ, ಜೀಪ್‌ಗಳನ್ನು ಹಾನಿಗೊಳಿಸಿದರು.

4) ಚನ್ನಗಿರಿ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದ ಅದಿಲ್ ಸಂಬಂಧಿಕರು ಮತ್ತು ಸಮುದಾಯದವರ ಮನವೊಲಿಸುವ, ಸಮಾಧಾನ ಮಾಡುವ ಪ್ರಯತ್ನವನ್ನು ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮಾಡಿದ್ದರು. ಆದರೆ ಅದು ಫಲ ಕೊಟ್ಟಿರಲಿಲ್ಲ.

5) ನಿನ್ನೆ (ಮೇ 24) ರಾತ್ರಿ ಇಡೀ ಪೊಲೀಸ್ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹೆಚ್ಚಿನ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದಿಲ್ ಸಾವಿನ ಪ್ರಕರಣ; ಸಂಬಂಧಿಕರ ಮನವೊಲಿಸುವ ಪ್ರಯತ್ನ

ಒಸಿ ಮಟ್ಕಾ ಕೇಸ್‌ನಲ್ಲಿ ಪೊಲೀಸ್ ವಶದಲ್ಲಿದ್ದ ಅದಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಇದೇ ವಿಚಾರವನ್ನು ಅದಿಲ್ ಕುಟುಂಬಸ್ಥರಿಗೆ, ಸಮುದಾಯದ ಪ್ರಮುಖರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಪೊಲೀಸರು ಮುಂದುವರಿಸಿದ್ದಾರೆ. ಸ್ಥಳದಲ್ಲಿ ನಿರ್ಮಾಣವಾಗಿರುವ ಬಿಗುವಿನ ವಾತಾವರಣ ತಿಳಿಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಚನ್ನಗಿರಿ ಘಟನೆ ಕುರಿತು ಎಸ್ಪಿ ಉಮಾ ಪ್ರಶಾಂತ ‌ಹೇಳಿಕೆ ನೀಡಿದ್ದು, “ಪೊಲೀಸರು ನಿನ್ನೆ ಅದಿಲ್ ಎಂಬ ವ್ಯಕ್ತಿಯನ್ನು ಠಾಣೆಗೆ ಕರೆತಂದಿದ್ದರು. ಆತ ಠಾಣೆಯಲ್ಲಿ ಆರರಿಂದ ಏಳು ನಿಮಿಷ ಕೂಡ ಇರಲಿಲ್ಲ. ಠಾಣೆಯಲ್ಲಿ ಕುಸಿದು ಬಿದ್ದ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಇವೆಲ್ಲವೂ ಠಾಣೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೃತ ವ್ಯಕ್ತಿಯ ತಂದೆ ಕೂಡ ದೂರು ನೀಡಿದ್ದು, ಲಾಕಪ್ ಡೆತ್ ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೂಡ ಪ್ರಾಮಾಣಿಕ ತನಿಖೆ ನಡೆಸಲಾಗುತ್ತಿದೆ. ಶವಪರೀಕ್ಷೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಲಿದ್ದು, ನ್ಯಾಯಾಧೀಶರು ಕೂಡ ಹಾಜರು ಇರಲಿದ್ದಾರೆ. ಈ ವಿದ್ಯಮಾನದಲ್ಲಿ ಒಟ್ಟು 4 ಕೇಸ್ ದಾಖಲಾಗಿದೆ. ಏಳು ಪೊಲೀಸ್ ವಾಹನ ಹಾಗೂ ಹನ್ನೊಂದು ಜನ‌ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

Whats_app_banner