ಕನ್ನಡ ಸುದ್ದಿ  /  ಕರ್ನಾಟಕ  /  Davangere News: ಬಿಲ್‌ ಬಾಕಿ ಬಾರದೇ ದಾವಣಗೆರೆ ಜಿಲ್ಲೆ ಗುತ್ತಿಗೆದಾರ ಆತ್ಮಹತ್ಯೆ, ಇಲಾಖಾ ವಿಚಾರಣೆಗೆ ಆದೇಶಿಸಿದ ಸಚಿವ

Davangere News: ಬಿಲ್‌ ಬಾಕಿ ಬಾರದೇ ದಾವಣಗೆರೆ ಜಿಲ್ಲೆ ಗುತ್ತಿಗೆದಾರ ಆತ್ಮಹತ್ಯೆ, ಇಲಾಖಾ ವಿಚಾರಣೆಗೆ ಆದೇಶಿಸಿದ ಸಚಿವ

ದಾವಣಗೆರೆ ಜಿಲ್ಲೆಯಲ್ಲಿ ಗುತ್ತಿಗೆದಾರರೊಬ್ಬರು ಬಾಕಿ ಬಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಗೌಡರ್‌ ಹಾಗೂ ಅವರು ಬರೆದಿಟ್ಟ ಡೆತ್‌ ನೋಟ್‌
ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಗೌಡರ್‌ ಹಾಗೂ ಅವರು ಬರೆದಿಟ್ಟ ಡೆತ್‌ ನೋಟ್‌

ದಾವಣಗೆರೆ: ಎರಡು ವರ್ಷದ ಹಿಂದೆ ಕೈಗೊಂಡ ಸರ್ಕಾರಿ ಕಾಮಗಾರಿಗಳ ಬಿಲ್‌ಗಳು ಬಾರದೇ ಇದ್ದುದರಿಂದ ಬೇಸರಗೊಂಡ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ ಸಹ ಬರೆದಿಟ್ಟಿದ್ದು, ಅದರಲ್ಲಿ ಬಿಲ್‌ ಪಾವತಿಗೆ ಆಗುತ್ತಿರುವ ಅನಗತ್ಯ ವಿಳಂಬದ ಕುರಿತು ಎಲ್ಲವನ್ನೂ ವಿವರವಾಗಿ ನಮೂದಿಸಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನಲ್ಲಿ ಈ ಘಟನೆ ನಡೆದಿದೆ. ಎರಡು ದಶಕದಿಂದಲೂ ಗುತ್ತಿಗೆದಾರರರಾಗಿ ಕೆಲಸ ಮಾಡುತ್ತಿದ್ದ ಸಂತೇಬೆನ್ನೂರು ಪಟ್ಟಣದ ನಿವಾಸಿ ಪಿ.ಎಸ್‌.ಗೌಡರ್‌(48) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಆತ್ಮಹತ್ಯೆ ಪ್ರಕರಣದ ಕುರಿತು ಇಲಾಖಾ ವಿಚಾರಣೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ದಿ ಇಲಾಖೆಯಡಿ ಇರುವ ಪ್ರಮುಖ ನಿಗಮಗಳಲ್ಲಿ ಒಂದಾದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ(KRIDL)ಅಡಿ ಹಲವಾರು ಕಾಮಗಾರಿಗಳನ್ನು ಎರಡು ವರ್ಷ ಹಿಂದೆ ಗೌಡರ್‌ ತೆಗೆದುಕೊಂಡು ಮುಗಿಸಿದ್ದರು. ಅಲ್ಲದೇ ಕಳೆದ ವರ್ಷ, ಈ ವರ್ಷವೂ ಕೆಲಸ ಮಾಡಿದ್ದರು. ಆದರೆ ಎರಡು ವರ್ಷದಿಂದಲೂ ಅವರಿಗೆ ಬಾಕಿ ಬಂದಿರಲಿಲ್ಲ. ಸುಮಾರು 80 ಲಕ್ಷ ರೂ. ಬಾಕಿ ಇತ್ತು. ಈ ಸಂಬಂಧ ಚನ್ನಗಿರಿ, ದಾವಣಗೆರೆ ಅಲ್ಲದೇ ಬೆಂಗಳೂರಿಗೂ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಾಕಿ ಬಿಡುಗಡೆಗೆ ಕೋರಿದ್ದರು. ಆದರೆ ಈವರೆಗೂ ಬಾಕಿ ಬಿಡುಗಡೆಯಾಗಿರಲಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರು ನಿರಂತರವಾಗಿ ಅಧಿಕಾರಿಗಳನ್ನು ಭೇಟಿ ಕೂಡ ಮಾಡುತ್ತಿದ್ದರು. ಅಧಿಕಾರಿಗಳ ನಿಧಾನ ಧೋರಣೆಯಿಂದ ಬೇಸರಗೊಂಡಿರುವುದಾಗಿ ಅವರು ಆಪ್ತರಲ್ಲಿ ಹೇಳಿಕೊಂಡಿದ್ದರು.

ಇದಲ್ಲದೇ ಗೌಡರ್‌ ಅವರ ಇಬ್ಬರು ಸಹೋದರರು ಕೂಡ ಹಣದ ವಿಚಾರದಲ್ಲಿ ತೊಂದರೆ ನೀಡಿದ್ದರು. ಅವರಿಗೆ ಸಹೋದರಿಂದಲೇ ಮೋಸ ಆಗಿತ್ತು ಎನ್ನುವ ಆರೋಪಗಳೂ ಕೇಳಿ ಬಂದಿದ್ದವು. ಇದರಿಂದ ರೋಸಿ ಹೋದ ಗೌಡರ್‌ ಸಂತೆಬೆನ್ನೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡೆತ್‌ ನೋಟ್‌ ಕೂಡ ಬರೆದಿಟ್ಟಿದ್ದು, ಇದರಲ್ಲಿ ಅಧಿಕಾರಿಗಳಿಂದ ಆದ ಅನುಭವ, ಸಹೋದರಿಂದ ಉಂಟಾದ ಮೋಸದ ಅಂಶವನ್ನೂ ಉಲ್ಲೇಖಿಸಿದ್ದಾರೆ ಎಂದು ಮೊಕದ್ದಮೆ ದಾಖಲಿಸಿಕೊಂಡಿರುವ ಸಂತೇಬೆನ್ನೂರು ಪೊಲೀಸರು ತಿಳಿಸಿದ್ದಾರೆ.

ಗುತ್ತಿಗೆದಾರ ಗೌಡರ್‌ ಅವರ ಆತ್ಮಹತ್ಯೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಡೆತ್‌ ನೋಟ್‌ ಸಹಾ ದೊರೆತಿದೆ. ಸಾಲ, ಗುತ್ತಿಗೆ ಕೆಲಸದ ಬಾಕಿ ಸಹಿತ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದು. ಈ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ಗೌಡರ್‌ ಅವರ ಆತ್ಮಹತ್ಯೆ ಪ್ರಕರಣ ದುಃಖ ತಂದಿದೆ. ಅವರಿಗೆ ಬರಬೇಕಾಗಿರುವ ಬಾಕಿ ಕುರಿತು ಪರಿಶೀಲಿಸಲಾಗುವುದು. ಇಲಾಖೆ ವಿಚಾರಣೆಯನ್ನೂ ನಡೆಸಲಾಗುವುದು. ಅಧಿಕಾರಿಗಳ ವಿಳಂಬವಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

( ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024