Channagiri police station attack:ಚನ್ನಗಿರಿ ಲಾಕಪ್‌ ಡೆತ್‌, ಠಾಣೆ ಮೇಲೆ ಕಲ್ಲೆಸೆದ 23 ಮಂದಿ ಬಂಧನ, ಪೊಲೀಸ್‌ ಅಧಿಕಾರಿಗಳ ಸಸ್ಪೆಂಡ್‌
ಕನ್ನಡ ಸುದ್ದಿ  /  ಕರ್ನಾಟಕ  /  Channagiri Police Station Attack:ಚನ್ನಗಿರಿ ಲಾಕಪ್‌ ಡೆತ್‌, ಠಾಣೆ ಮೇಲೆ ಕಲ್ಲೆಸೆದ 23 ಮಂದಿ ಬಂಧನ, ಪೊಲೀಸ್‌ ಅಧಿಕಾರಿಗಳ ಸಸ್ಪೆಂಡ್‌

Channagiri police station attack:ಚನ್ನಗಿರಿ ಲಾಕಪ್‌ ಡೆತ್‌, ಠಾಣೆ ಮೇಲೆ ಕಲ್ಲೆಸೆದ 23 ಮಂದಿ ಬಂಧನ, ಪೊಲೀಸ್‌ ಅಧಿಕಾರಿಗಳ ಸಸ್ಪೆಂಡ್‌

ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧನ ಶುರುವಾಗಿದೆ. ಅಲ್ಲದೇ ಪರಿಸ್ಥಿತಿಯೂ ಶಾಂತ ಸ್ಥಿತಿಗೆ ಮರಳುತ್ತಿದೆ.

ಚನ್ನಗಿರಿ ಹಿಂಸಾಚಾರದಲ್ಲಿ ಪೊಲೀಸ್‌ ವಾಹನ ಉರುಳಿ ಬಿದ್ದಿದೆ.
ಚನ್ನಗಿರಿ ಹಿಂಸಾಚಾರದಲ್ಲಿ ಪೊಲೀಸ್‌ ವಾಹನ ಉರುಳಿ ಬಿದ್ದಿದೆ.

ದಾವಣಗೆರೆ: ದಾವಣಗೆರೆ ಭಾಗದಲ್ಲಿ ಹೆಚ್ಚಿರುವ ಮಟ್ಕಾ ದಂದೆಯಲ್ಲಿ ತೊಡಗಿದ್ದ ಎನ್ನುವ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ವ್ಯಕ್ತಿ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ ನಡೆದ ಗದ್ದಲದಲ್ಲಿ ಭಾಗಿಯಾದ 23 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಚನ್ನಗಿರಿಯ ಆದಿಲ್ (32) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆ ತರಲಾಗಿತ್ತು. ಆಗ ಠಾಣೆಯಲ್ಲಿಯೇ ಆದಿಲ್‌ ಮೃತಪಟ್ಟಿದ್ದ. ಅಂದು ರಾತ್ರಿಯೇ ನೂರಾರು ಮಂದಿ ಸೇರಿ ಶವವನ್ನು ಇಟ್ಟು ಪ್ರತಿಭಟಿಸಿದ್ದೂ ಅಲ್ಲದೇ ಠಾಣೆ ಮೇಲೆ ಕಲ್ಲು ತೂರಿದ್ದರು. ಕೆಲವರು ಠಾಣೆಗೆ ನುಗ್ಗಿ ಧ್ವಂಸ ಮಾಡಿದ್ದರು. ನಂತರ ಬಂದ ಎಸ್ಪಿ ಕಾರಿಗೂ ಕಲ್ಲು ತೂರಿದ್ದರು. ಹಿಂಸಾಚಾರಕ್ಕೆ ತಿರುಗಿ ಪೊಲೀಸರೂ ಲಾಠಿ ಪ್ರಹಾರ ನಡೆಸಿದ್ದರು. ಗಲಾಟೆ ನಡೆಸಿ ಕಲ್ಲು ತೂರಾಟ ನಡೆಸಿದ್ದವರು ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಘಟನೆಯ ವೈಫಲ್ಯದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್‌ ಅವರನ್ನು ಅಮಾನತುಪಡಿಸಲಾಗಿದೆ. ಪೂರ್ವ ವಲಯ ಐಜಿಪಿ ತ್ಯಾಗರಾಜನ್‌ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಶುಕ್ರವಾರ ಘಟನೆ ನಡೆದ ನಂತರ ಆದಿಲ್‌ ತಂದೆ ಹಾಗೂ ಕುಟುಂಬಸ್ಥರು ಠಾಣೆಯಲ್ಲಿಯೇ ನಮ್ಮ ಮಗ ಸತ್ತಿದ್ದು, ಇದು ಲಾಕಪ್‌ ಡೆತ್‌ ಎಂದು ಆರೋಪಿಸಿದ್ದರು. ಈಗ ರಕ್ತದೊತ್ತಡದಿಂದ ಮೃತಪಟ್ಟಿದ್ಧಾನೆ ಎಂದು ಹೇಳಿಕೆ ನೀಡಿದ್ದಾನೆ. ಆದರೆ ಆದಿಲ್‌ ಮರಣೋತ್ತರ ವರದಿ ಬಂದರೆ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಹಿಂಸಾಚಾರದಲ್ಲಿ ಭಾಗಿಯಾದವರ ಪಟ್ಟಿಗಳನ್ನು ಮಾಡಲಾಗುತ್ತಿದೆ. ವಿಡಿಯೋ , ಸಿಸಿ ಕ್ಯಾಮರಾ ಮಾಹಿತಿ ಆಧರಿಸಿ ಈಗಾಗಲೇ 23 ಮಂದಿಯನ್ನು ಬಂಧಿಸಲಾಗಿದೆ. ಚನ್ನಗಿರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸ್ಥಿತಿ ತಹಬದಿಗೆ ಬರುತ್ತಿದೆ. ಹಿರಿಯ ಅಧಿಕಾರಿಗಳು ಚನ್ನಗಿರಿಯಲ್ಲೇ ಮೊಕ್ಕಾಂ ಹೂಡಿದ್ದಾರೆ.

ಗೃಹ ಸಚಿವರ ಸ್ಪಷ್ಟನೆ

ಗೃಹ ಸಚಿವ ಡಾ. ಜಿ.ಪರಮೇಶ್ವರ ಬೆಂಗಳೂರಿನಲ್ಲಿ ಮಾತನಾಡಿ, ದಾವಣಗೆರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯತೋರಿದ ಇನ್ಸ್‌ಪೆಕ್ಟರ್, ಪಿಎಸ್‌ಐನನ್ನು ಅಮಾನತುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂದರು.

ಮೃತನು ಮಟ್ಕಾ ಆಡಿಸುವುದರಲ್ಲಿ ಭಾಗಿಯಾಗಿದ್ದ ಆರೋಪದ‌ ಮೇಲೆ ಠಾಣೆಗೆ ಕರೆದುಕೊಂಡು ಬಂದಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ‌ನಂತರ ಆತನ ಸಾವಿಗೆ ನಿಖರವಾದ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದರು.

ಹಣಕ್ಕಾಗಿ ಪೀಡಿಸುತ್ತಿದ್ದರು ಎಂಬ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ. ಅಧಿಕಾರಿಗಳು ಆ ರೀತಿ ಭಾಗಿಯಾಗಿರುವುದು ಕಂಡು ಬಂದರೆ, ಅಂತವರ ವಿರುದ್ಧ ಸೇವೆಯಿಂದ ಡಿಸ್ಮಿಸ್‌ಗೊಳಿಸುವ ಕ್ರಮ ತೆಗೆದುಕೊಳ್ಳುತ್ತೇವೆ. ಅಂತವರು ಅಧಿಕಾರದಲ್ಲಿರಬಾರದು ಎಂದು ಹೇಳಿದರು.

ಕರ್ನಾಟಕ ಬಿಹಾರವಾಗುತ್ತಿದೆ ಎಂದು ವಿಜಯೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಹೇಗಿದ್ದಾವೆ ಎಂಬುದನ್ನು ನೋಡಿಕೊಳ್ಳಲಿ. ಗುಜುರಾತ್‌ನಲ್ಲಿ ಬೆಂಕಿಹೊತ್ತಿಕೊಂಡು 27 ಜನ ಸತ್ತಿದ್ದಾರೆ. ಅದಕ್ಕೆ ಯಾರು ಹೊಣೆ? ಅಲ್ಲಿನ ಮುಖ್ಯಮಂತ್ರಿ, ಗೃಹ ಸಚಿವರು ರಾಜೀನಾಮೆ ಕೊಡಬೇಕಲ್ಲ? ಹೇಳೋದು ಬಹಳ ಸುಲಭವಾಗಿರುತ್ತದೆ ಎಂದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಯನ್ನು ಹಾಳಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೂಂಡಾವರ್ತನೆ, ದಾದಾಗಿರಿ ಮಾಡಿ ಉಳಿದುಕೊಳ್ಳುತ್ತೇವೆ ಎಂದು ತಿಳಿದಿದ್ದರೆ ಅದು ಸಾಧ್ಯವಿಲ್ಲ. ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಶಾಸಕರು ಠಾಣೆಯೊಳಗೆ ಹೋಗಿ ಗಲಾಟೆ ಮಾಡುತ್ತಾರೆ. ಪೊಲೀಸರ ಮೇಲೆ ದಾಂಧಲೆ ಎಸಗಿದ್ದಾರೆ. ಈ ರೀತಿ ಆಗುವುದಾದರೆ ಸಮಾಜದಲ್ಲಿ ಶಾಂತಿ ಹೇಗಿರುತ್ತದೆ? ಯಾರು ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಪದೇಪದೆ ಹೇಳುತ್ತಿದ್ದೇನೆ. ಶಾಸಕರಾಗಿರಲಿ, ಸಂಸದರಾಗಿರಲಿ‌ ಮತ್ಯಾರಾದರು ಆಗಲಿ. ಯಾರನ್ನು ಕೂಡ ಬಿಡುವುದಿಲ್ಲ. ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner